ಕುಟುಂಬದಲ್ಲಿ ಯಾವುದೇ ಸಮಸ್ಯೆಯಿಲ್ಲ : ಅಜಿತ್ ಪವಾರ್ ಬಂಡಾಯದ ಕುರಿತು ಶರದ್ ಪವಾರ್ ಪ್ರತಿಕ್ರಿಯೆ
ಶರದ್ ಪವಾರ್, ಫೋಟೋ: PTI
ಮುಂಬೈ: ಎಂಟು ಇತರ ಪಕ್ಷ ನಾಯಕರೊಂದಿಗೆ ಎನ್ಸಿಪಿಯಿಂದ ಬಂಡಾಯವೆದ್ದು ರಾಜ್ಯದ ಏಕನಾಥ್ ಶಿಂಧೆ ಸರ್ಕಾರವನ್ನು ನೇರಿಕೊಂಡ ತಮ್ಮ ಸೋದರಳಿಯ ಅಜಿತ್ ಪವಾರ್ ಕುರಿತು ಪ್ರತಿಕ್ರಿಯಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ “ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ,” ಎಂದು ಹೇಳಿದ್ದಾರೆ.
“ನಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆಯಿಲ್ಲ. ಕುಟುಂಬದಲ್ಲಿ ನಾವು ರಾಜಕೀಯ ಚರ್ಚಿಸುವುದಿಲ್ಲ. ಎಲ್ಲರೂ ಅವರ ಸ್ವಂತ ನಿರ್ಧಾರ ಕೈಗೊಳ್ಳುತ್ತಾರೆ,” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶರದ್ ಪವಾರ್ ಹೇಳಿದ್ದಾರೆ.
“ನಾನು ಯಾರನ್ನೂ ಸಂಪರ್ಕಿಸಿಲ್ಲ,” ಎಂದೂ ಅವರು ಹೇಳಿದ್ದಾರೆ. ಅಜಿತ್ ಪವಾರ್ ಬಂಡಾಯದ ನಂತರ ಪಕ್ಷ ಎದುರಿಸುತ್ತಿರುವ ಕಾನೂನಾತ್ಮಕ ತೊಡಕುಗಳ ಕುರಿತು ಮಾತನಾಡಿದ ಅವರು “ಆ ವಿಚಾರ ನನಗೆ ತಿಳಿದಿಲ್ಲ, ನಮ್ಮ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಈ ಕುರಿತು ಪರಿಶೀಲಿಸುತ್ತಿದ್ದಾರೆ. ಸದ್ಯ ಆ ಮಾಹಿತಿ ಅವರ ಬಳಿ ಮಾತ್ರ ಇದೆ,” ಎಂದು ಹೇಳಿದರು.
ತಮ್ಮ ಪಕ್ಷದಲ್ಲಿನ ಬಂಡಾಯ ವಿಪಕ್ಷಗಳ ಏಕತೆ ಯೋಜನೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.
“ವಿಪಕ್ಷಗಳ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ನಿನ್ನೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ದಿಲ್ಲಿ ಸೀಎಂ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನನ್ನನ್ನು ಸಂಪರ್ಕಿಸಿದ್ದಾರೆ. ಜುಲೈ 16-18ರ ನಡುವೆ ಸಭೆ ಸೇರುವ ಕುರಿತು ಚರ್ಚಿಸಿದ್ದೇವೆ. ಮುಂದಿನ ಕಾರ್ಯಯೋಜನೆಯನ್ನು ಸಭೆ ನಿರ್ಧರಿಸಲಿದೆ,” ಎಂದು ಅವರು ಹೇಳಿದರು.