ಚೆನ್ನೈನಲ್ಲಿ ತಮಿಳುನಾಡು ಬಿಎಸ್ಪಿ ಮುಖ್ಯಸ್ಥನ ಹತ್ಯೆ
Photo | x
ಚೆನ್ನೈ : ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ ಆರ್ಮ್ಸ್ಟ್ರಾಂಗ್ ಅವರನ್ನು ನಗರದ ಪೆರಂಬೂರ್ ಬಳಿ ಶುಕ್ರವಾರ ಸಂಜೆ ಆರು ಮಂದಿಯ ತಂಡವು ಕಡಿದು ಹತ್ಯೆ ಮಾಡಿದೆ. 47 ವರ್ಷದ ಆರ್ಮ್ಸ್ಟ್ರಾಂಗ್ ತನ್ನ ಮನೆಯ ಸಮೀಪ ಸ್ನೇಹಿತರು ಮತ್ತು ಬೆಂಬಲಿಗರೊಂದಿಗೆ ಹರಟೆ ಹೊಡೆಯುತ್ತಿದ್ದಾಗ ದುಷ್ಕರ್ಮಿಗಳ ತಂಡವು ಮಾರಕಾಯುಧಗಳಿಂದ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಆರು ಮಂದಿಯ ತಂಡವು ಮಚ್ಚು ಮತ್ತು ಕುಡುಗೋಲುಗಳನ್ನು ಬಳಸಿ ಹತ್ಯೆ ಮಾಡಿದೆ ಎನ್ನಲಾಗಿದೆ.
ಆರ್ಮ್ಸ್ಟ್ರಾಂಗ್ ಅವರ ಸ್ನೇಹಿತರು ತಡೆಯಲು ಬಂದಾಗ, ದುಷ್ಕರ್ಮಿಗಳ ತಂಡವು ಮಾರಕಾಯುಧಗಳನ್ನು ತೋರಿಸಿ ಬೆದರಿಸಿದ್ದರಿಂದ ಅಲ್ಲೇ ಇದ್ದ ಅವರ ರಕ್ಷಣೆಗೆ ಬರಲಾಗಲಿಲ್ಲ ಎಂದು ತಿಳಿದು ಬಂದಿದೆ.
ಆರ್ಮ್ಸ್ಟ್ರಾಂಗ್ ಅವರ ಕೂಗು ಕೇಳಿ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ತಲೆ ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಸಂಜೆ 7 ಗಂಟೆ ಸುಮಾರಿಗೆ ಮೂರು ಬೈಕ್ಗಳಲ್ಲಿ ಬಂದ ತಂಡ ಆರ್ಮ್ಸ್ಟ್ರಾಂಗ್ ಮೇಲೆ ಹಲ್ಲೆ ನಡೆಸಿ, ಬೆಂಬಲಿಗರು ರಕ್ಷಣೆಗೆ ಧಾವಿಸುವ ಮೊದಲೇ ಕೃತ್ಯ ಮುಗಿಸಿ ಪರಾರಿಯಾಗಿದ್ದಾರೆ ಎಂದು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ ಐ ಈಶ್ವರನ್ ಮತ್ತು ಸಹಾಯಕ ಪೊಲೀಸ್ ಆಯುಕ್ತ ಪ್ರವೀಣ್ ಕುಮಾರ್ ಅಪರಾಧ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಶಂಕಿತರ ಪತ್ತೆಗೆ ಸೆಂಬಿಯಂ ಪೊಲೀಸ್ ಇನ್ಸ್ಪೆಕ್ಟರ್ ಚಿರಂಜೀವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಸಂಭಾವ್ಯ ಪ್ರತೀಕಾರದ ದಾಳಿಗಳು ಅಥವಾ ಗಲಭೆಗಳನ್ನು ತಡೆಗಟ್ಟಲು ಈ ಪ್ರದೇಶವನ್ನು ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.
ವೃತ್ತಿಯಲ್ಲಿ ವಕೀಲರಾದ ಆರ್ಮ್ಸ್ಟ್ರಾಂಗ್ ಕಾನೂನು ಪದವಿಯೊಂದಿಗೆ ತಮ್ಮ ಸಕ್ರಿಯ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ದಲಿತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರ ಮೇಲೆ ಈ ಹಿಂದೆ ಎಂಟು ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.