ನೆತನ್ಯಾಹು, ಗ್ಯಾಲಂಟ್, ಹಮಾಸ್ ನಾಯಕ ಅಲ್-ಮಸ್ರಿ ವಿರುದ್ಧ ಐಸಿಸಿ ಬಂಧನ ವಾರಂಟ್ ಜಾರಿ
ಬೆಂಜಮಿನ್ ನೆತನ್ಯಾಹು | PC : PTI
ಹೇಗ್ : ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಆರೋಪದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮಾಜಿ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಮತ್ತು ಹಮಾಸ್ ನಾಯಕ ಮುಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ) ಗುರುವಾರ ಬಂಧನ ವಾರಂಟ್ ಜಾರಿಗೊಳಿಸಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಗಾಝಾದಲ್ಲಿ ಇಸ್ರೇಲ್ನ ಮಿಲಿಟರಿ ದಾಳಿಗಳಿಗೆ ಸಂಬಂಧಿಸಿದ ಆರೋಪಿತ ಅಪರಾಧಗಳ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿಗೆ ಕೋರುವುದಾಗಿ ಐಸಿಸಿ ಪ್ರಾಸಿಕ್ಯೂಟರ್ ಕರೀಮ್ ಖಾನ್ ಮೇ 20ರಂದು ಘೋಷಿಸಿದ್ದರು.
`ಆಹಾರ, ನೀರು, ಔಷಧ ಮತ್ತು ವೈದ್ಯಕೀಯ ಸರಬರಾಜುಗಳು, ಇಂಧನ ಮತ್ತು ವಿದ್ಯುತ್ ಸೇರಿದಂತೆ ಗಾಜಾದಲ್ಲಿನ ನಾಗರಿಕರನ್ನು ಅವರ ಉಳಿವಿಗೆ ಅನಿವಾರ್ಯವಾದ ವಸ್ತುಗಳಿಂದ ಉದ್ದೇಶಪೂರ್ವಕವಾಗಿ ಈ ಇಬ್ಬರು ವಂಚಿಸಿದ್ದಾರೆ ಎಂದು ನಂಬಲು ವಿಶ್ವಾಸಾರ್ಹವಾದ ಆಧಾರಗಳಿವೆ' ಎಂದು ಮೂವರು ಸದಸ್ಯರ ನ್ಯಾಯಪೀಠ ಪರಿಗಣಿಸಿರುವುದಾಗಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಅಲ್-ಮಸ್ರಿಯನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಪ್ರತಿಪಾದಿಸಿದೆ. ಆದರೆ ಹಮಾಸ್ ಇದನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.
ಇಸ್ರೇಲ್ ಐಸಿಸಿಯ ಸದಸ್ಯ ರಾಷ್ಟ್ರವಲ್ಲ ಮತ್ತು ಐಸಿಸಿಯ ಅಧಿಕಾರ ವ್ಯಾಪ್ತಿಯನ್ನು ತಿರಸ್ಕರಿಸಿದೆ. ಅಲ್ಲದೆ ಗಾಝಾದಲ್ಲಿ ಯುದ್ಧಾಪರಾಧ ಎಸಗಿಲ್ಲ ಎಂದು ಹೇಳುತ್ತಿದೆ. ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಇಸ್ರೇಲ್ ಒಪ್ಪಿಕೊಳ್ಳುವ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.