ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಬೆಳಗಾವಿಯ ಕುಡಚಿ ಬಳಿ ಆರೋಪಿ ಪ್ರವೀಣ್ ಬಂಧನ
ತನಿಖೆಗೆ ನೆರವಾದ ಆರೋಪಿಯ ನಡಿಗೆಯ ಶೈಲಿ ; ಆರೋಪಿಯನ್ನು ಉಡುಪಿಗೆ ಕರೆತರುತ್ತಿರುವ ಪೊಲೀಸರು
ಆರೋಪಿ ಪ್ರವೀಣ್ ಚೌಗಲೆ
ಉಡುಪಿ: ನೇಜಾರು ಸಮೀಪ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ಬೆಳಗಾವಿಯಲ್ಲಿ ಪೊಲೀಸರು ಮಂಗಳವಾರ ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಚೌಗಲೆ (35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವನು ಎಂದು ತಿಳಿದುಬಂದಿದೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎಂದು ಮೂಲಗಳು ತಿಳಿಸಿವೆ.
ಪ್ರವೀಣ್ ಅರುಣ್ ಚೌಗಲೆ ರಾಯಭಾಗದ ಕುಡಚಿಗೆ ಬಂದು ಮೊಬೈಲ್ ಆನ್ ಮಾಡಿದಾಗ ಕಾರ್ಯಾಚರಣೆ ನಡೆಸಿದ ಉಡುಪಿಯ ಪೊಲೀಸರ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಯನ್ನು ಉಡುಪಿಗೆ ಕರೆ ತರಲಾಗುತ್ತಿದೆ.
ಆರೋಪಿ ಈ ಹಿಂದೆ CISF ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದ ಎಂದು ಹೇಳಲಾಗಿದೆ. ಬಳಿಕ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ತನಿಖೆಗೆ ನೆರವಾದ ಆರೋಪಿಯ ನಡಿಗೆಯ ಶೈಲಿ : ಮಾಹಿತಿಗಳ ಪ್ರಕಾರ, ಘಟನೆಯ ಬಳಿಕ ಲಭ್ಯವಿದ್ದ ಸಿಸಿಟಿವಿ ಸಾಕ್ಷ್ಯಗಳನ್ನು ಪರಿಶೀಲಿಸಿದ್ದ ಪೊಲೀಸರು ಆರೋಪಿಯ ನಡಿಗೆ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಎನ್ನಲಾಗಿದೆ. ಇದು ಆರೋಪಿಯು ರಕ್ಷಣಾ ಇಲಾಖೆಗಳಿಗೆ ಸಂಬಂಧಿಸಿದ ವ್ಯಕ್ತಿ ಎಂಬ ಸುಳಿವು ನೀಡಿತ್ತು. ಬಳಿಕ ಆರೋಪಿ, ಅರುಣ್ ಚೌಗಲೆ ಬೆನ್ನುಬಿದ್ದ ಪೊಲೀಸರು, ಆತನನ್ನು ಬೆಳಗಾವಿಯ ಕುಡಚಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.