ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸ್ವಪಕ್ಷದ ಶಾಸಕನಿಂದಲೇ ಸಿಎಂ, ಡಿಸಿಎಂಗೆ ಪತ್ರ
ಬೆಳಗಾವಿ (ಸುವರ್ಣ ವಿಧಾನಸೌಧ), ಡಿ. 19: ಪ್ರತಿಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆಯಿಂದ ಪಕ್ಷಕ್ಕೆ ತೀವ್ರ ಮುಜುಗರ ಹಾಗೂ ಮುಂಬರಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಿನ್ನಡೆ ಸಂಭವವಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು ಎಂದು ಕೋರಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಗುರುವಾರ ಉಭಯ ನಾಯಕರಿಗೆ ಪ್ರತ್ಯೇಕ ಪತ್ರ ಬರೆದಿರುವ ಶಾಸಕ ಬಸವರಾಜ ಶಿವಗಂಗಾ, ಸಚಿವರ ವಿರುದ್ಧವೇ ಆರೋಪಗಳನ್ನು ಮಾಡಿದ್ದು, ‘ದಾವಣಗೆರೆಯಿಂದ ವರ್ಗಾಯಿಸಲ್ಪಟ್ಟಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕ ಐ.ಎಸ್.ಓಡೆನಪುರ್, ರಾಜ್ಯ ಸರಕಾರಿ ನೌಕರರ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಆಗಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಹೆಚ್ಚು ಹಣ ಖರ್ಚು ಮಾಡಿ ಆಯ್ಕೆಗೊಂಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕರುಗಳ ಬೆಂಬಲಿತ ಅಭ್ಯರ್ಥಿಯು ಸೋತಿದ್ದಾರೆ. ಓಡೆನಪುರ್ ಶಾಸಕರ ಬಗ್ಗೆ ಆಗೌರವದಿಂದ ಮಾತಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ನಮ್ಮ ಅಭ್ಯರ್ಥಿಯ ಸೋಲಿಗೆ ಕಾರಣರಾದವರ ಬೆಂಬಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನಿಲ್ಲುತ್ತಿರುವುದು ಸರಿಯೇ?’ ಎಂದು ಪ್ರಶ್ನಿಸಿದ್ದಾರೆ.
‘ಸಚಿವರು ಈ ಹಿಂದೆ ನಡೆದ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಚನ್ನಗಿರಿ ತಾಲೂಕಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಲಿಲ್ಲ. ಈ ಹಿಂದಿನ ಬಿಜೆಪಿ ಬೆಂಬಲಿತ, ಮಾಜಿ ಶಾಸಕರ ಬೆಂಬಲಿಗನ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿರುತ್ತಾರೆ. ಹೊನ್ನಾಳಿ ಶಾಸಕರ ಪುತ್ರ ಸುರೇಂದ್ರ ಈ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾಗಿದ್ದಾರೆ. ಅಪೆಕ್ಸ್ ಬ್ಯಾಂಕಿಗೆ ಜಿಲ್ಲೆಯಿಂದ ನಿರ್ದೇಶಕರಾಗಿ ನಾಮನಿರ್ದೇಶಿಸಲು ಸಹಕರಿಸುವಂತೆ ಕೋರಿದ್ದಾಗ ಸಚಿವರು ಬೆಂಬಲಿಸಲಿಲ್ಲ’ ಎಂದು ಅವರು ದೂರಿದ್ದಾರೆ.
ಸಚಿವರ ಈ ದ್ವಿಮುಖ ನೀತಿ, ಸ್ಥಳೀಯ ಶಾಸಕರುಗಳೊಂದಿಗೆ ಯಾವುದೇ ಗೌರವ ಮತ್ತು ವಿಶ್ವಾಸ ಇಲ್ಲದಂತಾಗಿದೆ. ಆಡಳಿತಾತ್ಮಕ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಏಕಪಕ್ಷೀಯವಾಗಿ ನಡವಳಿಕೆಯಿಂದ ನೊಂದಿರುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಬಿಜೆಪಿ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಹಿನ್ನಡೆಯಾಗಿರುತ್ತದೆ. ಚನ್ನಗಿರಿ ಕ್ಷೇತ್ರದಲ್ಲಿ 10 ಸಾವಿರ ಬಹುಮತ ನೀಡಿದ್ದೇನೆ. ಇದು ಕ್ಷೇತ್ರದ ಗೆಲುವಿಗೆ ಕಾರಣವಾಗಿದ್ದು ಪಕ್ಷ ಸಂಘಟನೆ ಕಾರ್ಯಕರ್ತರೊಂದಿಗೆ ವಿಶ್ವಾಸದ ಪ್ರತಿಫಲವೆಂದೆ ಭಾವಿಸಿದ್ದೇನೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.