ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಿಗೆ; ಯಾವುದೇ ಪ್ರಸ್ತಾವ ಸಲ್ಲಿಕೆಯಾಗಿಲ್ಲ: ಅಬಕಾರಿ ಇಲಾಖೆ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಸಂಬಂಧ ಅಬಕಾರಿ ಇಲಾಖೆಯ ಶಾಖೆಯಲ್ಲಿ ಇದುವರೆಗೂ ಯಾವುದೇ ಪ್ರಸ್ತಾವನೆಗಳೂ ಸಲ್ಲಿಕೆಯಾಗಿಲ್ಲ ಮತ್ತು ಈ ಕುರಿತಾಗಿ ಸರಕಾರದಲ್ಲಿಯೂ ಯಾವುದೇ ಸಭೆಗಳೂ ನಡೆದಿಲ್ಲ ಎಂದು ಅಬಕಾರಿ ಇಲಾಖೆಯು ಹಿಂಬರಹ ನೀಡಿದೆ.
ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚಿಂತಿಸಲಾಗಿದೆ ಮತ್ತು ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿರುವ ಬೆನ್ನಲ್ಲೇ ಅಬಕಾರಿ ಇಲಾಖೆಯು ‘ದಿ ಫೈಲ್’ಗೆ ನೀಡಿರುವ ಹಿಂಬರಹವು ಮುನ್ನೆಲೆಗೆ ಬಂದಿದೆ.
ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಹೊಸದಾಗಿ ಮದ್ಯದ ಅಂಗಡಿಗಳನ್ನು ತೆರೆಯಲು ಪರವಾನಿಗೆ ನೀಡುವ ಸಂಬಂಧ ಸರಕಾರದಲ್ಲಿ ನಡೆದಿರುವ ಸಭೆಗಳು, ನಡಾವಳಿಗಳು ಮತ್ತು ಪ್ರಸ್ತಾವನೆಗಳನ್ನು ಒದಗಿಸಬೇಕು ಎಂದು ‘the-file.in’ 2023ರ ಸೆ.25ರಂದು ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಐದೇ ಐದು ದಿನದಲ್ಲಿ ಅಬಕಾರಿ ಇಲಾಖೆಯು ಹಿಂಬರಹ ನೀಡಿದೆ.
ಹಿಂಬರಹದಲ್ಲೇನಿದೆ?
ತಾವು ಕೋರಿರುವ ಮಾಹಿತಿಗೆ ಸಂಬಂಧಿಸಿದಂತೆ ಸರಕಾರದಲ್ಲಿ ಯಾವುದೇ ಸಭೆಗಳು ನಡೆದಿರುವುದಿಲ್ಲ. ಅದರಂತೆ ಹೊಸ ಪರವಾನಿಗೆ ನೀಡುವ ಸಂಬಂಧ ಅಬಕಾರಿ ಶಾಖೆಯಲ್ಲಿ ಯಾವುದೇ ಪ್ರಸ್ತಾವನೆಗಳು ಸ್ವೀಕೃತವಾಗಿರುವುದಿಲ್ಲ ಎಂದು 2023ರ ಸೆ.30ರಂದು ಹಿಂಬರಹ ನೀಡಿದೆ.
ಅಬಕಾರಿ ಇಲಾಖೆಯ ಆಯುಕ್ತರ ಕಚೇರಿಯಲ್ಲಿಯೂ ಇದುವರೆಗೂ ಯಾವುದೇ ಸಭೆಗಳು ನಡೆದಿಲ್ಲ ಮತ್ತು ಅಲ್ಲಿಯೂ ಯಾವ ಪ್ರಸ್ತಾವನೆಗಳೂ ಸಲ್ಲಿಕೆಯಾಗಿಲ್ಲ. ಒಂದೊಮ್ಮೆ ಪ್ರಸ್ತಾವಗಳಿದ್ದರೆ ಸರಕಾರಕ್ಕೆ ಸಲ್ಲಿಕೆಯಾಗಬೇಕು. ಅನುಮೋದನೆ ಕುರಿತಂತೆ ಸರಕಾರದ ಮಟ್ಟದಲ್ಲಿ ಸಭೆ ನಡೆಯಬೇಕು. ಆದರೆ ಈ ಯಾವ ಪ್ರಕ್ರಿಯೆಯೂ ಸರಕಾರದ ಹಂತದಲ್ಲಿ ನಡೆದಿಲ್ಲ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಪರವಾನಿಗೆ ಹಾಗೂ ಸೂಪರ್ ಮಾರ್ಕೆಟ್ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಬಕಾರಿ ಇಲಾಖೆಯು ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದರಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಲೈಸೆನ್ಸ್ ವಿತರಣೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ ಎಂದು ಕೆಲ ಮಾಧ್ಯಮಗಳು ಪ್ರಕಟಿಸಿದ್ದ ವರದಿಗಳು ರಾಜಕೀಕರಣಗೊಂಡಿದ್ದವು. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪತ್ರಿಕಾ ವರದಿಗಳನ್ನಾಧರಿಸಿ ‘ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಕುಡುಕರ ತೋಟ’ ಮಾಡಲಿದೆ ಎಂದು ಟೀಕಿಸಿದ್ದರು.
ಇನ್ನು ದಶಕಕ್ಕೂ ಹಿಂದೆ ಸ್ಥಗಿತಗೊಂಡಿರುವ ಆರ್. ವಿ.ಬಿ. (ಸ್ವತಂತ್ರ ಬಿಯರ್ ಮಾರಾಟ ಮಳಿಗೆ) ಪರವಾನಿಗೆಗಳನ್ನು ಪುನರ್ ವಿತರಣೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಒಟ್ಟು 12,593 ವಿವಿಧ ಪರವಾನಿಗೆಗಳ ಮದ್ಯ ಮಾರಾಟ ಮಳಿಗೆಗಳಿವೆ. ಇದೀಗ ಹೊಸದಾಗಿ 389 ಎಂಎಸ್ಐಎಲ್ (ಸಿಎಲ್-11ಸಿ) ಶಾಪ್ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ 91, ಬೆಳಗಾವಿ 20, ಕಲಬುರಗಿ 20, ಹೊಸಪೇಟೆ 22, ಮಂಗಳೂರು 51, ಮೈಸೂರು ನಗರದಲ್ಲಿ 43 ಪರವಾನಿಗೆ ನೀಡಬಹುದು ಎಂದು ಅಬಕಾರಿ ಇಲಾಖೆ ಪ್ರಸ್ತಾವನೆಯಲ್ಲಿದೆ ಎಂದು ಕೆಲ ಪತ್ರಿಕೆಗಳು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ರಾಜ್ಯದಲ್ಲಿ ಹೊಸದಾಗಿ ವೈನ್ಶಾಪ್ (ಸಿಎಲ್2), ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9) ಹಾಗೂ ಇಂಡಿಪೆಂಡೆಂಟ್ ರಿಟೇಲ್ ವೆಂಡರ್ ಬಿಯರ್(ಆರ್ವಿಬಿ) ಪಬ್ ತೆರೆಯುವುದಕ್ಕೆ ಪರವಾನಿಗೆ ನೀಡಲು ಸದ್ದಿಲ್ಲದೇ ತಯಾರಿ ನಡೆಸುತ್ತಿರುವ ರಾಜ್ಯ ಸರಕಾರವು ಹೊಸ ಪರವಾನಿಗೆ ನೀಡುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರಕಾರವೂ ‘ಅಬಕಾರಿ ನೀತಿ’ಗೆ ತಿದ್ದುಪಡಿ ತರಲು ಮುಂದಾಗಿತ್ತು.
ಹೊಸದಾಗಿ ವೈನ್ಶಾಪ್ಗಳಿಗೆ ಪರವಾನಿಗೆ ನೀಡುವ ಉದ್ದೇಶದಿಂದಲೇ ಅಬಕಾರಿ ನೀತಿಗೆ ತಿದ್ದುಪಡಿ ತರಲು ನಿವೃತ್ತ ಐಎಎಸ್ ಅಧಿಕಾರಿ ಯಶವಂತಕುಮಾರ್ ಎಂಬವರ ನೇತೃತ್ತದಲ್ಲಿ ಸಮಿತಿ ರಚನೆಯಾಗಿದೆ. ಈಗಾಗಲೇ ಸಮಿತಿಯು ಕರಡು ನಿಯಮಾವಳಿಗಳನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದೆ. ಇದಿನ್ನೂ ಅಂತಿಮಗೊಂಡಿಲ್ಲ. ಈ ನಡುವೆಯೇ ಸಮಿತಿಯಲ್ಲಿ ಇರುವ ಕೆಲ ಅಧಿಕಾರಿಗಳು ತಮಗೆ ಬೇಕಾದ ತಿದ್ದುಪಡಿ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು. ರಾಜ್ಯದಲ್ಲಿ ಒಟ್ಟು 3,618 ಬಾರ್ ಆ್ಯಂಡ್ ರೆಸ್ಟೋರೆಂಟ್ ಮದ್ಯದಂಗಡಿಗಳಿವೆ. ಇದರಲ್ಲಿಯೂ ಕೋಟಾ ಉಲ್ಲಂಘನೆಯಾಗಿದೆ ಎಂಬ ದೂರುಗಳನ್ನೇ ನೆಪಮಾಡಿಕೊಂಡು ಹೊಸದಾಗಿ ಸಿಎಲ್9 ತೆರೆಯಲು ಪರವಾನಿಗೆ ನೀಡಲು ಸರಕಾರ ಗಂಭೀರವಾಗಿ ಚಿಂತಿಸಿತ್ತು. ಕೋಟಾದಡಿ ಬಾಕಿ ಉಳಿದಿರುವ ಲೈಸೆನ್ಸ್ ನೀಡಲು ಏನು ಮಾಡಬೇಕು? ಯಾವೆಲ್ಲ ಕ್ರಮ ಕೈಗೊಳ್ಳಬೇಕು, ಏನೇನು ತಿದ್ದುಪಡಿ ಮಾಡಬೇಕು, ಎದುರಾಗುವ ಸಮಸ್ಯೆಗಳ ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು ಎಂಬ ಮಾತುಗಳು ಕೇಳಿ ಬಂದಿದ್ದವು.
ಹೊಸ ಸಿಎಲ್ 2 ಲೈಸೆನ್ಸ್ ನೀಡಿಕೆ
ರಾಜ್ಯದಲ್ಲಿ 3,974 ವೈನ್ಶಾಪ್ಗಳಿವೆ. ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತೀ ತಾಲೂಕು ಹಾಗೂ ನಗರ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್2 ಹಾಗೂ 3,500 ಜನಕ್ಕೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಮಂದಿಗೆ ಒಂದು ಸಿಎಲ್2 ಹಾಗೂ 7,500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 1987ರಲ್ಲಿ ನಿಯಮ 12ರಂತೆ ಅಂದಿನ ಸರಕಾರವು, ಎಲ್ಲ ತಾಲೂಕುಗಳಲ್ಲಿ ಕೋಟಾ ನಿಗದಿಪಡಿಸಿತ್ತು.
ನಿಯಮ 12ರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಿಎಲ್2 ಹೆಚ್ಚುವರಿ ಸನ್ನದು ನಿಗದಿಯಂತೆ ಒಟ್ಟು 385 ಸಿಎಲ್ ಶಾಪ್ ಮಂಜೂರು ಮಾಡಲಾಗಿತ್ತು. ಆದರೆ, 1994ರಲ್ಲಿ ಹೆಚ್ಚುವರಿ ನೀಡಲಾಗಿದ್ದ ವೈನ್ ಶಾಪ್ಗಳನ್ನು ರದ್ದುಪಡಿಸುವಂತೆ ರಾಜ್ಯ ಸರಕಾರ ಮತ್ತು ಹೈಕೋರ್ಟ್ ಆದೇಶಿತ್ತು. ಆದರೆ, ಸರಕಾರ ಹಾಗೂ ಹೈಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಅಬಕಾರಿ ಇಲಾಖೆಯು ಕಸದ ಬುಟ್ಟಿಗೆ ಎಸೆದಿದೆ.
ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್2 ವೈನ್ ಶಾಪ್ ಕೋಟಾ ಉಲ್ಲಂಘಿಸಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಸಕ್ರಮಗೊಳಿಸಲು ಅಥವಾ ಹೆಚ್ಚುವರಿಯಾಗಿ ನಗರ ಪ್ರದೇಶದಲ್ಲಿ ನೀಡಲಾಗಿದ್ದ ಸಿಎಲ್2 ಶಾಪ್ಗಳನ್ನು ರದ್ದುಪಡಿಸಿ ಕೋಟಾದಂತೆ ಬಾಕಿ ಉಳಿದ 258 ಸಿಎಲ್2 ಶಾಪ್ಗಳ ಭರ್ತಿ ಮಾಡುವುದಕ್ಕೆ ಲೈಸೆನ್ಸ್ ನೀಡುವಂತೆ ಕೆಲವರು ಭಾರೀ ಲಾಬಿ ನಡೆಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಇಲಾಖೆಯಲ್ಲಿ ಶುರುವಾಗಿದೆ.