ಚಿಕ್ಕಬಳ್ಳಾಪುರ | ಬಾಲ ಮಂದಿರದಲ್ಲಿ ಬಾಲಕಿಯರಿಗೆ ದೈಹಿಕ ಹಿಂಸೆ, ವೇಶ್ಯಾವಾಟಿಕೆಗೆ ಒತ್ತಾಯ ಆರೋಪ: ಅಧೀಕ್ಷಕಿ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ : ನೊಂದ, ಸಂತ್ರಸ್ತ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಬಾಲಕಿಯರಿಗೆ ಅತ್ಯಸ್ಮರ್ಯ, ಧೈರ್ಯ ತುಂಬಬೇಕಿದ್ದ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲೇ ಸಂತ್ರಸ್ತೆಯರ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯಗಳು ನಡೆದಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ನಡೆದಿರುವುದು ವರದಿಯಾಗಿದೆ. ಈ ಸಂಬಂಧ ಬಾಲಮಂದಿರದ ಅಧೀಕ್ಷಕಿ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಬಿ.ಬಿ. ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿರುವ ನೊಂದ ಬಾಲಕಿಯರಿಗೆ ಅನ್ನ, ಆಹಾರ ನೀಡದೆ ದೈಹಿಕ, ಮಾನಸಿಕ ಕಿರುಕುಳ ನೀಡುವುದಲ್ಲದೆ, ವೇಶ್ಯಾವಾಟಿಕೆಗೆ ಒತ್ತಾಯಿಸುವ ಆರೋಪಗಳು ಕೇಳಿಬಂದಿವೆ.
ಈ ಬಾಲ ಮಂದಿರದ ಅಧೀಕ್ಷಕಿ ಮಮತಾ, ಕ್ಷುಲ್ಲಕ ಕಾರಣಕ್ಕೆ ಇಲ್ಲಿರುವ ನೊಂದ ಬಾಲಕಿಯರಿಗೆ ಸಕಾಲಕ್ಕೆ ಆಹಾರ ನೀಡುತ್ತಿಲ್ಲ. ಬಾಲಕಿಯರನ್ನು ಕಿಟಕಿಗಳ ಸರಳುಗಳು, ಕಂಬಗಳಿಗೆ ಕಟ್ಟಿ ಹಾಕುವುದು, ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಾರೆ ಎಂದು ಸಂತ್ರಸ್ತ ಬಾಲಕಿಯರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ಅರಿತ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿದ್ದು, ಸಂತ್ರಸ್ತ ಬಾಲಕಿಯರ ಅಹವಾಲು ಆಲಿಸಿದ್ದಾರೆ. ದೌರ್ಜನ್ಯದ ಬಗ್ಗೆ ದೂರು ಆಲಿಸಿ ತನಿಖೆಗೆ ಸೂಚಿಸಿದ್ದಾರೆ.
ಬಾಲ ಮಂದಿರದ ಅಧೀಕ್ಷಕಿ ವಿರುದ್ಧ ಪ್ರಕರಣ ದಾಖಲು
ಚಿಕ್ಕಬಳ್ಳಾಪುರ ಸರಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮಮತಾ ಹಾಗೂ ಬಾಲಮಂದಿರದ ಸಹಾಯಕಿ ಸರಸ್ವತಿಯಮ್ಮ ಬಾಲಕಿಯರಿಗೆ ಚಿತ್ರಹಿಂಸೆ ನೀಡಿ, ದೈಹಿಕ ಹಲ್ಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗ ಹಾಗೂ ಮಕ್ಕಳ ರಕ್ಷಣಾ ಘಟಕ ಸಂಘದ ಅಧ್ಯಕ್ಷ ಪಿ.ಎನ್.ರವೀಂದ್ರರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವತಾಜ್ ಬಿ, ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನನ್ವಯ ಮಮತಾ ಹಾಗೂ ಸರಸ್ವತಿಯಮ್ಮ ವಿರುದ್ದ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಾಯ್ದೆ, ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.