ಚಿಕ್ಕಬಳ್ಳಾಪುರ : ಪೌರಾಯುಕ್ತರ ವರ್ಗಾವಣೆಗೆ ಹೈಕೋರ್ಟ್ ಆದೇಶ
ಚಿಕ್ಕಬಳ್ಳಾಪುರ: ಇಲ್ಲಿನ ನಗರಸಭೆಯ ಪೌರಾಯುಕ್ತ ಮಂಜುನಾಥ್ ಎಂಬವರ ನೇಮಕವನ್ನು ರದ್ದು ಮಾಡಿ 4 ವಾರಗಳ ಒಳಗಾಗಿ ಅರ್ಹರನ್ನು ನೇಮಿಸಬೇಕೆಂದು ಹೈಕೋರ್ಟ್ ಆದೇಶಿಸಿ, ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ
ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಕೇವಲ ಮುಖ್ಯಾಧಿಕಾರಿ ಅಷ್ಟೇ. ಅವರು ಪೌರಾಯುಕ್ತರಾಗಿ ಕೆಲಸ ಮಾಡಲು ಮುನಿಸಿಪಾಲ್ ಕಾಯ್ದೆ ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿಲ್ಲ. ಅವರನ್ನು ಕೂಡಲೇ ಬದಲಾವಣೆ ಮಾಡಬೇಕು ಎಂದು ನಗರಸಭೆ ಸದಸ್ಯ ಎಸ್.ಎಂ.ರಫೀಕ್ ಹೈಕೋರ್ಟ್ ಮೊರೆ ಹೋಗಿದ್ದರು. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ನಾಲ್ಕು ವಾರದ ಒಳಗೆ ಅರ್ಹರನ್ನು ನೇಮಿಸುವಂತೆ ಆದೇಶಿಸಿದೆ.
ಜಿಲ್ಲೆಯ ಬಹುತೇಕ ನಗರಸಭೆಗಳು ಸೇರಿದಂತೆ ರಾಜ್ಯದ ಬಹಳಷ್ಟು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಎಎಂಎಸ್ ಗ್ರೇಡ್ 1 ಶ್ರೇಣಿಯ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಈ ಹಿಂದೆ ಕೆಲಸ ಮಾಡಿದ ಬಹುತೇಕ ಅಧಿಕಾರಿಗಳು ಸಹ ಮಂಜುನಾಥ್ ಅವರ ದರ್ಜೆಯ ಅಧಿಕಾರಿಗಳೇ ಆಗಿದ್ದರು. ಆದರೆ ಆಗ ಮಾತ್ರ ಈ ಬಗ್ಗೆ ಯಾರೂ ಪ್ರಶ್ನೆ ಮಾಡಲಿಲ್ಲ. ಈಗ ಮಳಿಗೆಗಳ ಹರಾಜು ಮತ್ತಿತರ ವಿಚಾರವಾಗಿ ಮಂಜುನಾಥ್ ಅವರು ತೆಗೆದುಕೊಂಡ ಬಿಗಿಯಾದ ನಿಯಮಗಳ ಕಾರಣ ಅವರ ವಿರುದ್ಧ ಮಾತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗಿದೆ.