20ನೇ ಪ್ರಿಮಿಯರ್ ಲೀಗ್ ಕಿರೀಟ ಗೆದ್ದು ಗರಿಷ್ಠ ಪ್ರಶಸ್ತಿ ದಾಖಲೆ ಸರಿಗಟ್ಟಿದ ಲಿವರ್ ಪೂಲ್

PC: x.com/BwessWarrior
ಇಂಗ್ಲೆಂಡ್: ರವಿವಾರ 20ನೇ ಇಂಗ್ಲಿಷ್ ಫುಟ್ಬಾಲ್ ಲೀಗ್ ಗೆಲ್ಲುವ ಮೂಲಕ ಲಿವರ್ಪೂಲ್ ಕ್ಲಬ್ ತಂಡ ಇಂಗ್ಲಿಷ್ ಫುಟ್ಬಾಲ್ ಲೀಗ್ ನಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಸರಿಗಟ್ಟಿದೆ. ತೊಟೆನ್ ಹ್ಯಾಮ್ ಹಾಟ್ ಸ್ಪರ್ ಕ್ಲಬ್ ತಂಡವನ್ನು 5-1 ಗೋಲುಗಳ ಅಂತರದಿಂದ ಸೋಲಿಸಿ ಲಿವರ್ ಪೂಲ್ ಈ ಸಾಧನೆ ಮಾಡಿದೆ. ಎರಡನೇ ಸ್ಥಾನದಲ್ಲಿರುವ ಅರ್ಸೆನಲ್ ತಂಡಕ್ಕಿಂತ 15 ಹೆಚ್ಚುವರಿ ಅಂಕವನ್ನು ಪಡೆಯುವ ಮೂಲಕ ಲೀಗ್ಮಟ್ಟದಲ್ಲಿ ಪ್ರಾಬಲ್ಯ ಮೆರೆದಿದೆ. ಟೂರ್ನಿಯಲ್ಲಿ ಇನ್ನು ಕೇವಲ ನಾಲ್ಕು ಪಂದ್ಯಗಳು ಮಾತ್ರ ಬಾಕಿ ಇದ್ದು, ಯಾವುದೇ ತಂಡ ಲಿವರ್ಪೂಲ್ ತಂಡವನ್ನು ಹಿಂದಿಕ್ಕುವುದು ಅಸಾಧ್ಯ ಎನಿಸಿದೆ.
ಲಿವರ್ ಪೂಲ್ ಗೆಲುವನ್ನು ನಿರೀಕ್ಷಿಸಿದ್ದ ಅಭಿಮಾನಿಗಳು "ಯು ವಿಲ್ ನೆವರ್ ವಾಕ್ ಅಲೋನ್" ಎಂದು ಹುರಿದುಂಬಿಸಿದರು. ಇದಕ್ಕೆ ಸ್ಪಂದನೆಯಾಗಿ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿತು. 12ನೇ ನಿಮಿಷದಲ್ಲಿ ಜೇಂಸ್ ಮ್ಯಾಡಿಸನ್ ಒಂದು ಗೋಲು ಹೊಡೆದು ಒಂದು ಕ್ಷಣ ಆತಂಕ ಸೃಷ್ಟಿಸಿದ್ದು ಹೊರತುಪಡಿಸಿದರೆ ಇಡೀ ಪಂದ್ಯದಲ್ಲಿ ಲಿವರ್ ಪೂಲ್ ಪ್ರಾಬಲ್ಯ ಮೆರೆಯಿತು.
ಮೊದಲು ಚೆಂಡು ಆಫ್ಸೈಡ್ ಗೆ ಹೋದಂತೆ ಕಂಡುಬಂದರೂ ವಿಎಎಆರ್ ಹಸ್ತಕ್ಷೇಪದ ಬಳಿಕ ಅದನ್ನು ಗೋಲು ಎಂದು ಘೋಷಿಸಲಾಯಿತು.
ಕೆಲವೇ ನಿಮಿಷಗಳಲ್ಲಿ ಲೂಯಿಸ್ ಡಿಯಾಝ್ ಲಿವರ್ ಪೂಲ್ ಪರ ಗೋಲು ಹೊಡೆದು ಸಮಬಲಕ್ಕೆ ಕಾರಣರಾದರು. ಆ ಬಳಿಕ ನಿರಂತರ ನಾಲ್ಕು ಗೋಲುಗಳನ್ನು ಹೊಡೆದು ಗೆಲುವಿನ ಕೇಕೆ ಹಾಕಿತು.