ಮಧ್ಯಪ್ರದೇಶ: ಕಾಂಗ್ರೆಸ್ ಮುಖಂಡನ ಹತ್ಯೆ, ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು
Photo: twitter
ಭೋಪಾಲ್ : ಮಧ್ಯಪ್ರದೇಶದಲ್ಲಿ ಮತದಾನದ ದಿನವಾದ ಶುಕ್ರವಾರ ಬೆಳಿಗ್ಗೆ ಕಾಂಗ್ರೆಸ್ ಕಾರ್ಪೊರೇಟರ್ ನ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಹಿಂಸಾಚಾರ ವರದಿಯಾಗಿದೆ. ಹಿಂಸಾಚಾರದ ನಡುವೆಯೂ ದಾಖಲೆಯ ಮತದಾನವಾಗಿದ್ದು, ರಾತ್ರಿ 11 ಗಂಟೆಯ ವೇಳೆಗೆ ಮತದಾನ ಪ್ರಮಾಣ ಸುಮಾರು 76.1% ಎಂದು ಅಂದಾಜಿಸಲಾಗಿದೆ.
ಅಂತಿಮವಾಗಿ ಶೇಕಡ 80ರಷ್ಟು ಮತದಾನದ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಲ್ಲಿ ಶೇಕಡ 75.6ರಷ್ಟು ಮತದಾರರು ಮತ ಚಲಾಯಿಸಿದ್ದರು.
ಮಧ್ಯಪ್ರದೇಶದ ಸುಮಾರು 5.6 ಕೋಟಿ ಮತದಾರರ ಪೈಕಿ ಶೇಕಡ 48.5ರಷ್ಟಿರುವ ಮಹಿಳೆಯರು, ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವ ಅಂಕಿ ಅಂಶ ಲಭ್ಯವಾಗಿದ್ದು, ನಿಖರ ಅಂಕಿ ಅಂಶಗಳು ಇನ್ನೂ ಲಭ್ಯವಾಗಿಲ್ಲ.
ಮತದಾನ ಆರಂಭಕ್ಕೆ ಮುನ್ನ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮ್ ಸಿಂಗ್ ನಟರಾಜ ಅವರ ಜತೆ ಇದ್ದ ಖಜುರಾಹೊ ಕಾರ್ಪೊರೇಟರ್ ಸಲ್ಮಾನ್ ಖಾನ್ ಎಂಬುವವರನ್ನು ಬಿಜೆಪಿಯ ಅಭ್ಯರ್ಥಿ ಅರವಿಂದ್ ಕಟೇರಿಯಾ ಅವರ ಬೆಂಗಾವಲು ವಾಹನಗಳನ್ನು ಹರಿಸಿ ಹತ್ಯೆ ಮಾಡಲಾಗಿದೆ ಎಂದು ಆಪಾದಿಸಲಾಗಿದೆ. ಛತ್ರಾಪುರ ಗ್ರಾಮಕ್ಕೆ ತೆರಳುವ ದಾರಿಯ ಬಗ್ಗೆ ನಡೆದ ಜಗಳದಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಪಟಾರಿಯಾ ಹಾಗೂ ಇತರ 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯದ 23 ಕಡೆಗಳಲ್ಲಿ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಜಬಲ್ಪುರದಲ್ಲಿ ಕಾಂಗ್ರೆಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಇಲ್ಲಿ ಗುಂಡಿನ ದಾಳಿ ನಡೆದ ಬಗ್ಗೆಯೂ ವರದಿಯಾಗಿದೆ. ಇಡೀ ದಿನ ವಿವಿಧ ಕಡೆಗಳಲ್ಲಿ ಹಿಂಸಾಕೃತ್ಯಗಳು ನಡೆದಿದ್ದು, ದಿಮಾನಿ, ಅಟೇರ್, ಮಹೌ, ಇಂದೋರ್-1 ಮತ್ತು ಇಂದೋರ್-2 ಕ್ಷೇತ್ರಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ 200ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಸಚಿವ ನರೋತ್ತಮ್ ಸಿಂಗ್ ಥೋಮರ್ ಕಣದಲ್ಲಿರುವ ದಿಮಾನಿಯ ಎರಡು ಮತಗಟ್ಟೆಗಳಲ್ಲಿ ಕಲ್ಲುತೂರಾಟ ಮತ್ತು ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಪ್ರಿನ್ಸ್ ಥೋಮರ್ ಎಂಬವರ ಸ್ಥಿತಿ ಗಂಭೀರವಾಗಿದೆ.