ಕಾವೇರಿದ ಕಾವೇರಿ ಹೋರಾಟ | ಮಂಡ್ಯ, ಮದ್ದೂರು ಬಂದ್ ಗೆ ವ್ಯಾಪಕ ಬೆಂಬಲ
ಮಂಡ್ಯ, ಸೆ.23: ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಪ್ರಾಧಿಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ನಿಂದ ತಡೆಯಾಜ್ಞೆ ಸಿಗದ್ದರಿಂದ ಆಕ್ರೋಶಿತ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಇಂದಿನ ಮಂಡ್ಯ, ಮದ್ದೂರು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಮಂಡ್ಯ ನಗರ ಹಾಗೂ ಮದ್ದೂರು ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಸ್ವಯಂಪ್ರೇರಿತವಾಗಿ ಬಂದ್ ನಡೆಸುತ್ತಿದ್ದಾರೆ. ಆಟೊ ರಿಕ್ಷಾ, ಖಾಸಗಿ, ಸಾರಿಗೆ ಸಂಸ್ಥೆ ಬಸ್ ಗಳು ಬೆಳಗ್ಗೆಯಿಂದಲೇ ರಸ್ತೆಗೆ ಇಳಿದಿಲ್ಲ. ಶಿಕ್ಷಣ ಸಂಸ್ಥೆಗಳು ಬಂದ್ ಆಗಿವೆ. ಪ್ರತಿಭಟನೆ ಕಾರಣ ನಗರದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿದೆ.
ಜೆ.ಸಿ. ವೃತ್ತದಲ್ಲಿ ರೈತ ಮುಖಂಡರು ರಸ್ತೆಯಲ್ಲೇ ಮಲಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತಮಿಳುನಾಡಿನ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮದ್ದೂರಿನಲ್ಲೂ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿದ್ದಾರೆ. ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.