ಸಿ.ಟಿ ರವಿ ಹೇಳಿಕೆ ವಿರುದ್ಧ ಶಾಸಕ ನರೇಂದ್ರಸ್ವಾಮಿಯಿಂದ ಎಸ್ಪಿಗೆ ದೂರು
ರಾಷ್ಟ್ರ ಧ್ವಜವನ್ನು ‘ತಾಲಿಬಾನ್ ಧ್ವಜ’ ಕ್ಕೆ ಹೋಲಿಸಿದ್ದ ಬಿಜೆಪಿ ಮುಖಂಡ
ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜಿಲ್ಲಾಡಳಿತ ಹಾರಿಸಿರುವ ರಾಷ್ಟ್ರಧ್ವಜವನ್ನು ‘ತಾಲಿಬಾನ್‌ಧ್ವಜ’ ಎಂದು ಅವಮಾನಿಸಿರುವ ಬಿಜೆಪಿ ಮುಖಂಡ ಸಿ.ಟಿ.ರವಿ ವಿರುದ್ಧ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಜಿಲ್ಲಾಡಳಿತ ಹಾರಿಸಿರುವ ರಾಷ್ಟ್ರ ಧ್ವಜವನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ತಾಲಿಬಾನ್ ಧ್ವಜ ಎಂದು ನಿಂದನೆ ಮಾಡಿ ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 51ಎ(ಎ) ಅನ್ವಯ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದರಿಂದ ಭಾರತದ ಪ್ರಜೆಯಾಗಿ ದೂರು ಸಲ್ಲಿಸಿದ್ದೇನೆ. ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು. ಬಿಜೆಪಿ ಪಕ್ಷದ ಸಿ.ಟಿ.ರವಿಗೆ ಬುದ್ಧಿಭ್ರಮಣೆಯಾಗಿದೆ. ಸಂವಿಧಾನಬದ್ಧವಾಗಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆಂದು ಪ್ರಮಾಣವಚನ ಸ್ವೀಕರಿಸಿ ಸಚಿವರಾಗಿದ್ದ ಇವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದೆ. ಹಲವು ನಾಯಕರು ಗುಂಡಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಯಾವ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ?. ಹೋರಾಟದಲ್ಲಿ ಎಂದಿಗೂ ಭಾಗಿಯಾಗದ ಇವರು ಬ್ರಿಟೀಷರಿಗೆ ಹೆದರಿ ವೇತನ ಪಡೆದಿದ್ದಾರೆ. ಸುಮ್ಮನೆ ದೇಶಭಕ್ತರು ಎಂದು ಬೊಬ್ಬೆ ಹಾಕುತ್ತಾರೆ ಎಂದು ಅವರು ಆರೋಪಿಸಿದರು.
ಸಚಿವ ಸ್ಥಾನಕ್ಕಾಗಿ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ ಕೊಡುತ್ತಿದ್ದಾರೆ ಎನ್ನುವ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ನರೇಂದ್ರಸ್ವಾಮಿ, ಅದು ನಮ್ಮ ಪಕ್ಷದ ವಿಷಯ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಬಳಿ ಗುದ್ದಾಡುತ್ತೇನೆ ನಿಮಗ್ಯಾಕೆ? ಸಚಿವನಾಗಲು ನಿಮ್ಮನ್ನು ಟೀಕಿಸುವ ಅಗತ್ಯವಿಲ್ಲ ಎಂದು ಅವರು ತಿರುಗೇಟು ನೀಡಿದರು.