ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶೇ.40ರಷ್ಟು ಬಡ್ಡಿ ವಸೂಲಿ ಮೂಲಕ ಮಹಿಳೆಯರ ಶೋಷಣೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪ
ಮಳವಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳಾ ಸಂಘಗಳಿಗೆ ಸಾಲ ನೀಡಿ ಶೇ.40ರಷ್ಟು ಬಡ್ಡಿ ವಸೂಲಿ ಮಾಡುತ್ತಾ ಗ್ರಾಮೀಣ ಮಹಿಳೆಯರ ಶೋಷಣೆ ಮಾಡಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪ ಮಾಡಿದ್ದಾರೆ.
ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಲು ಹೊರಟಿದೆ. ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವನ್ನು ಬಿಟ್ಟು, ಸರಕಾರದ ಸಂಜೀವಿನಿ ಯೋಜನೆಯ ಮೂಲಕ ಸ್ವಗ್ರಾಮದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿ ಎಂದು ಅವರು ಹೇಳಿದರು.
ಇಂತಹ ಮೈಕ್ರೊ ಫೈನಾನ್ಸ್‌ಗಳ ಪಿಡುಗಿನಿಂದ ಹಳ್ಳಿಗಾಡಿನ ಮಹಿಳೆಯರನ್ನು ಹೊರತರಬೇಕೆಂಬ ಉದ್ದೇಶದಿಂದ ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ವಿ.ಚಲುವರಾಜು(ಮಂಜು), ಉಪಾಧ್ಯಕ್ಷೆ ಅಶ್ವಿನಿ, ಸದಸ್ಯರಾದ ಚಿಕ್ಕಣ್ಣ, ಮಂಜು ಭೈರೇಶ್, ಶಿವಲಿಂಗೇಗೌಡ, ಲಲಿತಮ್ಮ, ಲಿಂಗರಾಜು, ಲೋಕೇಶ್, ತಾಪಂ ಸಹಾಯಕ ನಿರ್ದೇಶಕ ಎಚ್.ಜಿ.ಪಾರ್ಥಸಾರಥಿ, ಪಿಡಿಒ ಲಿಂಗರಾಜು, ಮುಖಂಡರಾದ ಚಂದ್ರಕುಮಾರ್, ದ್ಯಾಪೇಗೌಡ, ಶಿವಮಾದೇಗೌಡ, ಪ್ರಭುಲಿಂಗು, ಮತ್ತಿತರರು ಭಾಗವಹಿಸಿದ್ದರು.