ಎಚ್.ಡಿ. ಕುಮಾರಸ್ವಾಮಿ ಅವರು ಮುಡಾದಿಂದ ದುಡ್ಡು ಕೊಟ್ಟು ನ್ಯಾಯಯುತವಾಗಿ ನಿವೇಶನ ಪಡೆದಿದ್ದಾರೆ: ನಿಖಿಲ್ ಕುಮಾರಸ್ವಾಮಿ
ಬೇಕಿದ್ದರೆ ಸಾರ್ವಜನಿಕರಿಗೆ ಬರೆದುಕೊಟ್ಟುಬಿಡುತ್ತೇವೆ ಎಂದ ಜೆಡಿಎಸ್ ಯುವ ನಾಯಕ
ಮಂಡ್ಯ: ಮೈಸೂರಿನ ಮುಡಾದಿಂದ ಎಚ್.ಡಿ.ಕುಮಾರಸ್ವಾಮಿ ಅವರು ದುಡ್ಡು ಕೊಟ್ಟು ನ್ಯಾಯಯುತವಾಗಿ ನಿವೇಶನ ಪಡೆದಿದ್ದಾರೆ. ಬೇಕಿದ್ದರೆ ಸಾರ್ವಜನಿಕರಿಗೆ ಬರೆದುಕೊಟ್ಟುಬಿಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ಸಂಬಂಧ ಶನಿವಾರ ನಗರದಲ್ಲಿ ಪಕ್ಷದ ಮುಖಂಡರ ಜತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ತನ್ನ ತಂದೆ ನಿವೇಶನ ಪಡೆದುಕೊಂಡಿರುವುದನ್ನು ಸಮರ್ಥಿಸಿಕೊಂಡರು.
ಮೈಸೂರಿನ ಸಿಐಟಿಬಿಯಲ್ಲಿ 1984ರಲ್ಲಿ ಇಂಡಸ್ಟ್ರಿಯಲ್ ಸೈಟ್ ಅಲಾಟ್‍ಮೆಂಟ್ ಆಗಿದ್ದಾಗ ಕುಮಾರಸ್ವಾಮಿ ಅವರು ರಾಜಕಾರಣದಲ್ಲಿ ಇರಲಿಲ್ಲ. ಸಿನಿಮಾ ಹಂಚಿಕೆದಾರರಾಗಿದ್ದರು. ಆಗ ಅರ್ಜಿ ಹಾಕಿಕೊಂಡಿದ್ದರು. ಸೈಟ್ ಮಂಜೂರು ಆಗಿತ್ತು. ಅದಕ್ಕೂ ಮುಡಾಗೂ ಸಂಬಂಧ ಇಲ್ಲ ಎಂದು ಅವರು ಹೇಳಿದರು.
ಮೈಸೂರಿನ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣನ್ನು ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿನವರಗೆ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ಬಾಬು, ಮಾಜಿ ಶಾಸಕರಾದ ಕೆ.ಸುರೇಶ್‍ಗೌಡ, ಡಾ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಬಿ.ಆರ್.ರಾಮಚಂದ್ರ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಇತರ ಮುಖಂಡರು ಉಪಸ್ಥಿತರಿದ್ದರು.