ಸಾಹಿತ್ಯ ಸೋಮಾರಿಗಳ ಬಡಿದೆಬ್ಬಿಸುತ್ತದೆ : ಡಾ.ನಿರ್ಮಲಾನಂದನಾಥ ಸ್ವಾಮೀಜಿ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ, ಎಚ್.ಡಿ.ಕುಮಾರಸ್ವಾಮಿ ಗೈರು!
ಮಂಡ್ಯ : ಸಾಹಿತ್ಯ ಸೋಮಾರಿಗಳನ್ನು ಬಡಿದು ಹೆಬ್ಬಿಸುತ್ತದೆ. ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸಿದ ಕವಿಗಳ, ಲೇಖಕರ, ಸಾಹಿತಿಗಳ ಮೂಲಕ ಸಮಾಜದಲ್ಲಿ ಪ್ರಗತಿಯಾಗಬೇಕು ಎಂದು ಎಂದು ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದಿದ್ದಾರೆ.
ಶುಕ್ರವಾರ ಮಂಡ್ಯ ನಗರದಲ್ಲಿ ಚಾಲನೆಗೊಂಡ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕನ್ನಡದ ಜಾತ್ರೆ ಕನ್ನಡ ನುಡಿಯ ಯಾತ್ರೆ, ಇದು ಕನ್ನಡಿಗರ ಮನದಲ್ಲಿ ಹರಿವನ್ನು ಮೂಡಿಸುವ ಮಹಾ ದೊಡ್ಡ ಯಾತ್ರೆ ಎಂದರು.
ಇದು ಕನ್ನಡದ ಜಾತ್ರೆ, ಕನ್ನಡದ ನುಡಿಯ ಯಾತ್ರೆ. ಮನೆಗೊಂದು ಹಬ್ಬ, ಊರಿಗೊಂದು ಹಬ್ಬ, ನಾಡಿಗೊಂದು ಹಬ್ಬ. ಇದು ಕೊಳೆಯನ್ನು ತೊಳೆಯಲು, ಅರಿವನ್ನು ಮೂಡಿಸಲು. ಬಾರಿಸು ಕನ್ನಡ ಡಿಂಡಿಮವ. ನಮ್ಮಲ್ಲಿ ಹಲವು ನ್ಯೂನತೆಗಳಿವೆ. ಕ್ಲೇಷಗಳು, ದ್ವೇಷಗಳಿವೆ. ಎಲ್ಲವನ್ನು ಹೋಗಲಾಡಿಸಲು ಇಂಥ ಹಬ್ಬಗಳು ಆವಾಗಾವಗ ಬರುತ್ತಿರಬೇಕು ಎಂದು ಸ್ವಾಮೀಜಿ ಅವರು ಕುವೆಂಪು ವಾಣಿಯನ್ನು ಸ್ಮರಿಸಿದರು.
ಮಂಗಳಕರವಾದದ್ದನ್ನು ಪುನರುಜ್ಜೀವಗೊಳಸಿಬೇಕು, ಕೆಟ್ಟದ್ದನ್ನು ಅಳಿಸಬೇಕು. ಕವಿಗಳ, ಸಂತರ ಆದರ್ಶದಿಂದ ನಾಡಿನಲ್ಲಿ ಸರ್ವೋದಯವಾಗಲಿ. ನಮ್ಮ ಕವಿಗಳನ್ನು ನೆನಪಿಸುವ ಕಾರ್ಯಕ್ರಮವಿದು. ಇಂದಿನ ಸಾಹಿತ್ಯ ಭಾಷೆ ಮೂಲಕ ಗಟ್ಟಿ ಮಾಡಿಕೊಳ್ಳುವ, ಭವಿಷ್ಯಕ್ಕೆ ಸೋಪಾನ ರೂಪಿಸಿಕೊಳ್ಳುವ, ಹಿಂದಿನ ಕವಿಗಳನ್ನು ನೆನಪು ಮಾಡಿಕೊಳ್ಳುವ ತ್ರಿವೇಣಿ ಸಂಗಮ ಕಾರ್ಯಕ್ರಮವಿದು ಎಂದು ಸ್ವಾಮೀಜಿ ತಿಳಿಸಿದರು.
ಜಗತ್ತಿನ ಶ್ರೇಷ್ಠ ಸಾಹಿತ್ಯವೆಲ್ಲ ನಮ್ಮ ಭಾಷೆಗೆ ಬರಲಿ. ನಮ್ಮ ಭಾಷೆಯ ಶ್ರೇಷ್ಠ ಸಾಹಿತ್ಯವೆಲ್ಲ ಇತರ ಭಾಷೆಗಳಿಗೂ ಹೋಗಲಿ. ಆಗ ನಾವು ಜಗತ್ತಿನ ಎಲ್ಲವನ್ನು ತಿಳಿಯಲು ಸಾಧ್ಯ ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಎಂದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಮಾತನಾಡಿ, ಈ ಸಮ್ಮೇಳನ ಯಶಸ್ವಿಯಾಗಲು ಮೂಲ ಕಾರಣ ಸಿದ್ದರಾಮಯ್ಯನವರು. ಅವರ ಅಭೂತಪೂರ್ವ ಕೊಡುಗೆ ಮಂಡ್ಯ ಜಿಲ್ಲೆ ಇಷ್ಟೊಂದು ಮುಂದುವರಿಯಲು ಸಾಧ್ಯವಾಗಿದೆ ಎಂದರು.
ಮಂಡ್ಯ ನಗರದಲ್ಲಿ ಕಾಲೇಜು ಸೇರಿದಂತೆ, ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳನ್ನು ನೀಡಿದ್ದಾರೆ. ಎಸ್.ಎಂ. ಕೃಷ್ಣ ಮಂಡ್ಯ ಜಿಲ್ಲೆಯ ಉತ್ತಮ ನಾಯಕ. ಅಂತಹ ನಾಯಕ ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಸಿಗಲು ಸಾಧ್ಯವಿಲ್ಲ. ಆರು ಸಾವಿರ ಭಾಷೆಗಳಲ್ಲಿ 200 ಭಾಷೆಗಳು ನಶಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯನ್ನು ಉಳಿಸುವ ಸಲುವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಲ್ವಡಿ ಕೃಷ್ಣರಾಜ ಅವರ ಉಪಸ್ಥಿತಿಯಲ್ಲಿ ಶುರುಮಾಡಿ, ಇಂದು ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸುವಂತೆ ಮಾಡಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕನ್ನಡ ಸಾಹಿತ್ಯ, ಕನ್ನಡ ಭಾಷೆ ಅತ್ಯಂತ ಶ್ರೀಮತವಾದುದು. ದಿವಾನರಿಂದ ಮೊದಲು ಪ್ರಾರಂಭವಾಗಿ ಇಂದು ನಾವು 87ನೇ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರಿಂದ ಗೊ.ರು.ಚ. ಅವರಿಗೆ ಧ್ವಜವನ್ನು ಹಸ್ತಂತರಿಸಲಾಯಿತು.
ಐದು ಸಾವಿರ ಇತಿಹಾಸದ ಬೇರುಗಳನ್ನು ನಮ್ಮ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಒಳಗೊಂಡಿದೆ. ಇಂತಹ ಐತಿಹಾಸಿಕ ಕನ್ನಡ ಭಾಷೆಯು ಬಿ.ಎಂ. ಶ್ರೀಕಂಠಯ್ಯ ಅವರ ನಂತರ ಪ್ರವರ್ಗಕ್ಕೆ ಬಂದು ತಲುಪಿರುವುದು ಬಹಳಷ್ಟು ದುಃಖ ತಂದಿದೆ ಎಂದು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ, ಎಚ್.ಡಿ.ಕುಮಾರಸ್ವಾಮಿ ಗೈರು! :
ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿದ್ದಂತೆ ಮೆರವಣಿಗೆಗೆ ಚಾಲನೆ ನೀಡಬೇಕಿದ್ದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಾಲನೆ ನೀಡಿದರು. ಹಾಗೆಯೇ ಪ್ರಧಾನ ವೇದಿಕೆಗೆ ಘನ ಉಪಸ್ಥಿತಿ ವಹಿಸಬೇಕಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಗೈರಾಗಿದ್ದರು.