ನಾಡುನುಡಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು: ಎನ್.ಚಲುವರಾಯಸ್ವಾಮಿ
ಎನ್.ಚಲುವರಾಯಸ್ವಾಮಿ
ಮಂಡ್ಯ : ನಾಡುನುಡಿಯ ಬಗೆಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಸಂಸ್ಕೃತಿ, ಒಗ್ಗಟ್ಟಿನ ಭಾವನೆಗಳನ್ನು ಪ್ರತಿಯೊಬ್ಬ ಕನ್ನಡಿಗನ ಮನೆಮನಗಳಲ್ಲಿ ಭಿತ್ತಿ ಬೆಳೆಸಲು ಶ್ರಮಿಸೋಣ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾಡುನುಡಿಗಾಗಿ ಶ್ರಮಿಸಿದ ಮಹನೀಯರು, ಕವಿಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಮತ್ತು ಯುವಜನರು ಅವರ ಆದರ್ಶಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಕನ್ನಡ ರಾಜ್ಯೋತ್ಸವವು ನಾಡುನುಡಿಯ ಬಗೆಗಿನ ಪ್ರೀತಿ, ಅಭಿಮಾನವನ್ನು ಸದಾ ನಮಗೆ ನೆನಪಿಸುತ್ತದೆ. ಕನ್ನಡ ನಾಡಿನ ಏಕೀಕರಣಕ್ಕಾಗಿ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಕನ್ನಡ ಭಾಷೆ ಸಮೃದ್ಧವಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಆಡಳಿತವನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವುದು ನಮ್ಮ ಸರಕಾರದ ಆಶಯವಾಗಿದೆ. ಸರಕಾರ ರೂಪಿಸುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಎಲ್ಲರ ಸಹಕಾರ ಮತ್ತು ಬದ್ಧತೆ ಅಗತ್ಯವಾಗಿದೆ ಎಂದು ಅವರು ಮನವಿ ಮಾಡಿದರು.
ವಿವಿಧ ಕ್ಷೇತ್ರದ 21 ಮಂದಿ ಸಾಧಕರಿಗೆ ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು. ಜಿಲ್ಲಾ ಶಸಸ್ತ್ರ ಸಶಸ್ತ್ರ ಪೋಲಿಸ್ ಪಡೆ, ನಾಗರಿಕ ಪುರುಷ ಹಾಗೂ ಮಹಿಳಾ ಪೋಲಿಸ್ ಪಡೆ, ಗೃಹ ರಕ್ಷಕ ದಳ ಅಬಕಾರಿ ದಳ, ಅಗ್ನಿ ಶಾಮಕ ಇಲಾಖೆ, ಕಾಲೇಜುಗಳ ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ತಂಡಗಳು ಪಥಸಂಚಲನ, ವಿವಿಧ ಇಲಾಖೆಗಳ ಸ್ತಬ್ಧಚಿತ್ರ ಹಾಗೂ ಶಾಲಾ ಮಕ್ಕಳು ಪ್ರಸ್ತುತಪಡಿಸಿದ ಸಂಸ್ಕೃತಿಕಕಾರ್ಯಕ್ರಮಗಳ ಗಮನ ಸೆಳೆದವು.
ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮುಡಾ ಅಧ್ಯಕ್ಷ ನಯೀಂ, ನಗರಸಭೆ ಅದ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಪರ ಪೋಲಿಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.