ಮಂಡ್ಯ | ಹಳ್ಳಕ್ಕೆ ಬಿದ್ದ ಸಾರಿಗೆ ಬಸ್ : ಚಾಲಕ ಸೇರಿ 8 ಮಂದಿಗೆ ಗಾಯ
ಮಂಡ್ಯ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಗೆ ಚಲಿಸಿ, ಬಳಿಕ ಪಕ್ಕದ ಹಳ್ಳಕ್ಕೆ ಬಿದ್ದಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಬಸ್ ಚಾಲಕ ಶೇಖರ್ ಕಾಲು ಮುರಿದಿದ್ದು, ನಿರ್ವಾಹಕ ರವಿಚಂದ್ರ, ಪ್ರಯಾಣಿಕರಾದ ಭಾಸ್ಕರ್, ಕುಶಾಲ್, ಅಭಿ, ದೀಪಕ್, ನಾಗರಾಜು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಎಲ್ಲರನ್ನೂ ಜಿಲ್ಲಾಸ್ಪತ್ರೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಮೈಸೂರಿಗೆ ಚಲಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ರಾಗಿಮುದ್ದನಹಳ್ಳಿ ಬಳಿ ಸ್ಟೇರಿಂಗ್ ರಾಡ್ ಕಟ್ಟಾದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಡಿವೈಡರ್ ಗುದ್ದಿಕೊಂಡು ಸರ್ವೀಸ್ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸರ್ವೀಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡದ ಬಸ್, ರಸ್ತೆ ಪಕ್ಕದ ಚಹ ಅಂಗಡಿ ಮುಂದೆ ನಿಂತಿದ್ದ ಬೈಕ್‌ಗಳ ಮೇಲೆ ನುಗ್ಗಿ ಪಕ್ಕದ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ. ಮೂರು ಬೈಕ್‌ಗಳು ಜಖಂಗೊಂಡಿದ್ದು, ಒಂದು ಬೈಕ್ ಬಸ್ ಕೆಳಗೆ ಸಿಲುಕಿಕೊಂಡು ಹಳ್ಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.