ಮಂಡ್ಯ | ಮುಂದುವರಿದ ಮಳೆ : ಕಾವೇರಿ ಜಲಾನಯನ ಪ್ರದೇಶದಲ್ಲಿರುವ ತೋಟ, ಕೃಷಿ ಭೂಮಿ ಜಲಾವೃತ
ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿರುವುದರಿಂದ ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ 1.5 ಲಕ್ಷ ಕ್ಯುಸೆಕ್‍ಗೂ ಹೆಚ್ಚು ನೀರನ್ನು ನದಿಗೆ ಹರಿಸುತ್ತಿದ್ದು, ಜಲಾಶಯದ ತಗ್ಗಿನಲ್ಲಿರುವ ತೋಟಗಳು, ಇತರೆ ಕೃಷಿ ಭೂಮಿ, ಹಲವು ಕಟ್ಟಡಗಳು ಜಲಾವೃತವಾಗಿವೆ. ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮಟ್ಟಕ್ಕೆ ನದಿಯಲ್ಲಿ ನೀರು ಹರಿಯುತ್ತಿದೆ.
ಬುಧವಾರ ಸಂಜೆ ನದಿಗೆ ಅಣೆಕಟ್ಟೆಯಿಂದ 1 ಲಕ್ಷದ 70 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದ ಪರಿಣಾಮ ವೆಲ್ಲೆಸ್ಲಿ ಸೇತುವೆ ಮೇಲೆ ನೀರು ಹರಿದು ಪಕ್ಕದ ರಸ್ತೆಯ ತಡೆಗೋಡೆ ಕುಸಿದಿದೆ. ಗುರುವಾರ ನೀರು ಕಡಿಮೆಯಾಗಿರುವುದರಿಂದ ಸೇತುವೆ ಮಟ್ಟಕ್ಕೆ ಹರಿಯುತ್ತಿದೆ. ಪಶ್ಚಿಮವಾಹನಿಯ ರಸ್ತೆ ಜಲಾವೃತಗೊಂಡಿದ್ದು, ಪಾಲಹಳ್ಳಿ ಮಾರ್ಗದ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಚಿಕ್ಕಪಾಳ್ಯ ಬಳಿ ಹಾಗೂ ಗಂಜಾಂನ ಕಾವೇರಿ ನದಿ ತೀರದ ಸ್ಮಶಾನ ಜಲಾವೃತವಾಗಿವೆ. ನಿಮಿಷಾಂಬ ದೇವಾಲಯದ ಮೆಟ್ಟಿಲುಗಳು ಸಂಪೂರ್ಣ ಮುಳುಗಿವೆ. ಹಂಗರಹಳ್ಳಿ ಗ್ರಾಮದ ಅಂಚಿನವರೆಗೂ ನದಿಯ ನೀರು ಚಾಚಿಕೊಂಡಿದೆ. ಶ್ರೀನಿವಾಸ ಅಗ್ರಹಾರ, ಮರಳಾಗಾಲ, ಮಹದೇವಪುರ, ಮೇಳಾಪುರ, ಚಂದಗಾಲು, ನಗುವನಹಳ್ಳಿ ಬಳಿ ನದಿ ಅಂಚಿನಲ್ಲಿರುವ ನೂರಾರು ಎಕರೆ ಕಬ್ಬು, ತೆಂಗು, ಬಾಳೆ ತೋಟಗಳು ಜಲಾವೃತವಾಗಿವೆ.
ಬಿದ್ದೋಟೆ ಗಣಪತಿ ದೇವಾಲಯ ನೀರಿನಲ್ಲಿ ಸಂಪೂರ್ಣ ಮುಳುಗಿದೆ. ಕಿರಂಗೂರು ವೃತ್ತದಿಂದ ವಿಸಿಆರ್ ಲೇಔಟ್‍ಗೆ ಇದ್ದ ಏಕೈಕ ಮಾರ್ಗದಲ್ಲಿ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಪಟ್ಟಣದ ಸ್ಥಾನಘಟ್ಟ, ಜೀವಿ ಗೇಟ್, ಪಶ್ಚಿಮವಾಹಿನಿ ಬಳಿ ಕೂಡ ನೀರಿನ ಮಟ್ಟ ಹೆಚ್ಚಾಗಿದೆ. ಅತ್ತ ಯಾರೂ ಸುಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿ ಸ್ಥಳಗಳಾದ ಕೆಆರ್‌ಎಸ್ ಜಲಾಶಯ, ಬೃಂದಾವನ ಉದ್ಯಾನ, ಪಶ್ಚಿಮವಾಹಿನಿ, ಗೋಸಾಯ್ ಘಾಟ್, ಬಲಮುರಿ ಎಡಮುರಿ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಬ ದೇವಸ್ಥಾನದ ಪಕ್ಕದಲ್ಲಿರುವ ಸ್ನಾನಘಟ್ಟ, ರಂಗನತಿಟ್ಟು, ಕಾವೇರಿ ನದಿ ವೀಕ್ಷಣೆಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಕುಮಾರ ಆದೇಶ ಹೊರಡಿಸಿದ್ದಾರೆ.