ಮಂಡ್ಯ | ಮಾರೇನಹಳ್ಳಿಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ ; ಇಬ್ಬರು ವೃದ್ಧೆಯರು ಮೃತ್ಯು
ಜಿಲ್ಲಾಧಿಕಾರಿ, ಜಿಪಂ ಸಿಇಒ, ಆರೋಗ್ಯಾಧಿಕಾರಿಗಳು ಭೇಟಿ
ಮಂಡ್ಯ : ಕಲುಷಿತ ನೀರು ಸೇವನೆಯಿಂದ ಕೆ.ಆರ್.ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿಯ ಗಡಿ ಗ್ರಾಮ ಮಾರೇನಹಳ್ಳಿಯಲ್ಲಿ ಕಳೆದ ಐದು ದಿನಗಳಿಂದ ವಾಂತಿ-ಭೇದಿಯಿಂದ ಇಬ್ಬರು ವೃದ್ಧೆಯರು ಸಾವನ್ನಪ್ಪಿದ್ದು, ಸುಮಾರು 11 ಮಂದಿ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶೇಖ್ ತನ್ವೀರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಲುಷಿತ ನೀರು ಸೇವನೆಯಿಂದ ಗ್ರಾಮದ ಜನರಲ್ಲಿ ಕಳೆದ ಐದು ದಿನಗಳಿಂದ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಪರಿಣಾಮ ಇಬ್ಬರು ವೃದ್ಧೆಯರು ಸಾವನ್ನಪ್ಪಿದ್ದು, ಹಲವರು ಹಾಸನ ಜಿಲ್ಲಾಸ್ಪತ್ರೆ ಚನ್ನರಾಯಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಜಿಲ್ಲಾಧಿಕಾರಿ ಡಾ.ಕುಮಾರ ಇತರ ಅಧಿಕಾರಿಗಳ ಜತೆ ಗ್ರಾಮಕ್ಕೆ ದೌಡಾಯಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ 11 ಮಂದಿ ಪೈಕಿ ಐವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ನಿಂಗೇಗೌಡ ಮತ್ತು ಲಕ್ಷ್ಮಮ್ಮ ಎಂಬುವವರು ಪ್ರಸ್ತುತ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ರೋಗಿಗಳಿಗೆ ಚನ್ನರಾಯಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ನಂತರ, ನಿಖರ ಕಾರಣ ತಿಳಿಯಲಿದೆ ಎಂದು ಡಿಎಚ್‌ಒ ಡಾ.ಮೋಹನ್ ಹೇಳಿದ್ದಾರೆ.
ಗ್ರಾಮಸ್ಥರ ಆಕ್ರೋಶ:
ಗ್ರಾಮ ಪಂಚಾಯತ್‌ನಿಂದ ಪೂರೈಕೆಯಾದ ನೀರು ಕಲುಷಿತವಾಗಿದ್ದು, ಇದರಿಂದಲೇ ಗ್ರಾಮಸ್ಥರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಶತಾಯುಷಿ ಜವರಮ್ಮ ಮತ್ತು ಅವರ ಸಂಬಂಧಿ ಕಾಳಮ್ಮ(70) ಎಂಬುವರು ಮರಣ ಹೊಂದಿದ್ದು, ಇವರ ಸಾವಿಗೆ ಕಲುಷಿತ ನೀರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಗ್ರಾಮದಕ್ಕೆ ಕೊಳವೆ ಬಾವಿ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ನಲ್ಲಿ ನೀರು ಪೂರೈಕೆ ಆಗುತ್ತಿದೆ. ಕೊಳವೆ ಬಾವಿ ನೀರಿನಿಂದ ತೊಂದರೆ ಆಗಿಲ್ಲ. ಪಂಚಾಯತ್‌ನವರು ಸರಬರಾಜು ಮಾಡುವ ನಲ್ಲಿ ನೀರು ಕುಡಿದವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಅಧಿಕಾರಿಗಳು ಕಾಟಚಾರಕ್ಕೆ ಬಂದು ಹೋಗುತ್ತಿದ್ದಾರೆ. ಆದರೆ, ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.