ಮಂಡ್ಯ | ಹೆಣ್ಣು ಭ್ರೂಣಹತ್ಯೆ ಪ್ರಕರಣ : ಪ್ರಮುಖ ಆರೋಪಿ ಸೇರಿ 12 ಮಂದಿಯ ಬಂಧನ
ಮಂಡ್ಯ : ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಹೆಣ್ಣುಭ್ರೂಣ ಪತ್ತೆ, ಹತ್ಯೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಅಭಿಷೇಕ್, ವೀರೇಶ್ ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಬುಧವಾರ ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿಗಳಾದ ಜಿಲ್ಲೆಯ ಪಾಂಡವಪುರ ತಾಲೂಕು ಎಂ.ಶೆಟ್ಟಿಹಳ್ಳಿ ಗ್ರಾಮದ ಅಭಿಷೇಕ್ ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯ ವೀರೇಶ್ ಅವರನ್ನು ನಿನ್ನೆ(ಸೆ.3) ಬಂಧಿಸಲಾಯಿತು. ಇವರು ನೀಡಿದ ಮಾಹಿತಿ ಮೇರೆಗೆ ಇತರ ಆರೋಪಿಗಳಾದ ಪುಟ್ಟರಾಜು, ಕುಮಾರ್, ಶಾರದಮ್ಮ, ದಾಸೇಗೌಡ, ಲ್ಯಾಬ್ ಸತ್ಯ, ಮೀನಾ, ಮಲ್ಲಿಕಾರ್ಜುನ್, ಸೋಮಶೇಖರ್, ರತ್ನಮ್ಮ, ಪ್ರೇಮ ಅಲಿಯಾಸ್ ಪಾರ್ವತಿ ಅವರನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಗಳಿಂದ ಸುಮಾರು 23 ಲಕ್ಷ ರೂ. ಮೌಲ್ಯದ ಕೃತ್ಯಕ್ಕೆ ಉಪಯೋಗಿಸಿದ ಎರಡು ಸ್ಕ್ಯಾನಿಂಗ್ ಉಪಕರಣ, ಮೂರು ಕಾರು ಹಾಗೂ ಮೂರು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.
ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಪಾಂಡವಪುರ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಎ.ಆರ್.ವಿವೇಕಾನಂದ, ಕರೆಗೋಡು ಸಿಪಿಐ ಎನ್.ವಿ.ಮಹೇಶ್, ಮದ್ದೂರರು ಗ್ರಾಮಾಂತರ ಸಿಪಿಐ ವೆಂಕಟೇಗೌಡ ಮತ್ತು ಪಿಎಸ್ಸೈ, ಸಿಬ್ಬಂದಿ ಒಳಗೊಂಡ ಅಪರಾಧ ಪತ್ತೆದಳ ತಂಡವನ್ನು ರಚಿಸಲಾಗಿತ್ತು ಎಂದು ಅವರು ಹೇಳಿದರು.
ಪಾಂಡವಪುರದ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರೆ ಅಶ್ವಿನಿ ಅವರ ವಸತಿಗೃಹದಲ್ಲಿ ನಡೆಯುತ್ತಿದ್ದ ಹೆಣ್ಣುಭ್ರೂಣ ಹತ್ಯೆ ಪ್ರಕರಣದ ಪೈಕಿ 12 ಮಂದಿಯನ್ನು ಬಂಧಿಸಿದ್ದು, ಉಳಿದ 7 ಮಂದಿ ತಲೆಮರೆಸಿಕೊಂಡಿದ್ದಾರೆ. ಮೇಲುಕೋಟೆ ಠಾಣೆ ಪ್ರಕರಣದ ಮೂರು ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, 4 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇತ್ತೀಚೆಗೆ ಬೆಳ್ಳೂರು ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣದ ಮೂರು ಮಂದಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಓರ್ವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದನು. ಮೈಸೂರು ನಗರದ ಉದಯಗಿರಿ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳೀ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಗಂಗಾಧರಸ್ವಾಮಿ ಸೇರಿದಂತೆ ಅಪರಾಧ ಪತ್ತೆದಳ ತಂಡದ ಅಧಿಕಾರಿ, ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.