ಮಂಡ್ಯ: ತಂಡದಿಂದ ವ್ಯಕ್ತಿಯ ಬರ್ಬರ ಹತ್ಯೆ; ಪ್ರಕರಣ ದಾಖಲು

ಕೃಷ್ಣೇಗೌಡ
ಮಂಡ್ಯ: ಮೂವರ ತಂಡ ವ್ಯಕ್ತಿಯೊಬ್ಬನ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆಗ್ಯೆದಿರುವ ಘಟನೆ ಮುದ್ದೂರು ತಾಲೂಕು ಕೆ.ಎಂ. ದೊಡ್ಡಿ ಸಮೀಪದ ಲಕ್ಷ್ಮೇಗೌಡನ ದೊಡ್ಡಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಎಲ್. ಕೃಷ್ಣೇಗೌಡ (47) ಹತ್ಯೆಯಾದ ವ್ಯಕ್ತಿ. ಮದನಹಟ್ಟಿ ದೇವಾಲಯದ ಬಳಿ ಕೃಷ್ಣೇಗೌಡರ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.
ಮಂಗಳವಾರ ಮುಂಜಾನೆ ಎಂದಿನಂತೆ ಡೈರಿಗೆ ಹಾಲು ಕೊಟ್ಟು ಮನೆಗೆ ತೆರಳಿದ್ದ ಎಲ್. ಕೃಷ್ಣೇಗೌಡ ತೋಟದ ಬಳಿ ಎಮ್ಮೆ, ಕರುವನ್ನು ಕಟ್ಟುತ್ತಿದ್ದಾಗ ಬೈಕಿನಲ್ಲಿ ಬಂದ ಮೂವರು ಏಕಾಏಕಿ ಮುಗಿ ಬಿದ್ದು ಹೊಟ್ಟೆ, ಕುತ್ತಿಗೆಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಕೃಷ್ಣೇಗೌಡ ಮೃತಪಟ್ಟಿದ್ದಾರೆ.
ಹಣಕಾಸು ವಿಚಾರವಾಗಿ ದುಷ್ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಕೆ ಎಂ ದೊಡ್ಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಜೊತೆ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು,ಮೃತ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮೃತ ಕೃಷ್ಣೇಗೌಡ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಅಗಲಿದ್ದಾರೆ. ಕೆ.ಎಂ. ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.