ಬಿಜೆಪಿ ಸೇರುವುದಾಗಿ ಘೋಷಿಸಿದ ಮಂಡ್ಯ ಸಂಸದೆ ಸುಮಲತಾ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದ ಹಾಲಿ ಸಂಸದೆ
ಮಂಡ್ಯ : ನಿರೀಕ್ಷೆಯಂತೆ ಸಂಸದೆ ಸುಮಲತಾ ಅಂಬರೀಷ್ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಬಿಜೆಪಿಗೆ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
ನಗರದ ಕಾಳಿಕಾಂಬಾ ಸಮುದಾಯ ಭವನದಲ್ಲಿ ಬುಧವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದಿದ್ದರೆ ಹಲವು ರಾಜಕಾರಣಿಗಳು ಪಕ್ಷ ಬದಲಾಯಿಸುತ್ತಾರೆ. ಆದರೆ, ನಾನು ಟಿಕೆಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತಿದ್ದೇನೆ ಎಂದರು.
ಬಿಜೆಪಿಯ ಟಿಕೆಟ್‍ಗಾಗಿ ಕೊನೆಯವರೆಗೂ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಮೈತ್ರಿ ಆಗಿರುವುದರಿಂದ ಅದು ಸಿಗಲಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವ ಹಟ ನನ್ನಲ್ಲಿ ಇಲ್ಲ. ನನ್ನ ಅವಶ್ಯಕತೆ ಇಲ್ಲವೆಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಆ ಪಕ್ಷಕ್ಕೆ ಹೋಗುವುದು ಗೌರವವಲ್ಲ ಎಂದು ಅವರು ಹೇಳಿದರು.
ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನನಗೆ ಸ್ಫೂರ್ತಿ. ಅವರಿಗೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿಲ್ಲ. ಪಕ್ಷೇತರ ಸದಸ್ಯೆಯಾದರೂ 4 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಆ ಪಕ್ಷ ನನಗೆ ಸೂಕ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಗೆ ಆಹ್ವಾನವಿತ್ತು. ಮಂಡ್ಯದ ಅಭಿಮಾನಕ್ಕಾಗಿ ನಿರಾಕರಿಸಿದ್ದೇನೆ. ನನ್ನ ರಾಜಕೀಯ ಏನಿದ್ದರೂ ಮಂಡ್ಯದಲ್ಲೇ. ಮಂಡ್ಯವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ನಾನು ಎಂದಿದ್ದರೂ ಅಂಬರೀಷ್ ಪತ್ನಿ, ಮಳವಳ್ಳಿ ಹುಚ್ಚೇಗೌಡರ ಸೊಸೆಯೇ ಎಂದು ಅವರು ಬಾವುಕರಾದರು.
ಇದೇ ವೇಳೆ ಸುಮಲತಾ ಅವರ ಅಭಿವೃದ್ಧಿ ಕಾರ್ಯಗಳ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ಮತ್ತು ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ನಟ ದರ್ಶನ್, ಕೈ ಆಪರೇಷನ್ ಇದ್ದರೂ ಸುಮಲತ ಅಮ್ಮನಿಗೋಸ್ಕರ ಬಂದಿದ್ದೇನೆ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ಅವರ ಜತೆ ಇರುತ್ತೇನೆ ಎಂದರು.
ಸುಮಲತಾ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಅಖಿಲ ಕರ್ನಾಟಕ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಹನಕೆರೆ ಶಶಿಕುಮಾರ್ ಸೇರಿದಂತೆ ಹಲವು ಅಭಿಮಾನಿಗಳು ಉಪಸ್ಥಿತರಿದ್ದರು.
ಸುಮಲತಾ ಮೈತ್ರಿ ಅಭ್ಯರ್ಥಿ ಬೆಂಬಲಿಸುವರೇ?
ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿರುವ ಸಂಸತ್ ಸದಸ್ಯೆ ಸುಮಲತಾ ಅಂಬರೀಷ್, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ನಿರೀಕ್ಷೆಯಂತೆ ತನ್ನ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಸೇರ್ಪಡೆಯಾಗವುದಾಗಿ ಘೋಷಣೆ ಮಾಡುವ ಮೂಲಕ ಸ್ಪರ್ಧೆ ಗೊಂದಲಕ್ಕೆ ತೆರೆ ಎಳೆದಿರುವ ಅವರು, ಮೈತ್ರಿ ವಿಷಯದ ಬಗ್ಗೆ ಪ್ರಸ್ತಾಪಿಸದೆ ಕುತೂಹಲವನ್ನು ಇನ್ನೂ ಜೀವಂತವಾಗಿರಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಸುಮಲತಾ, ತಾನು ಸದ್ಯದಲ್ಲೇ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಮೈತ್ರಿ ಅಭ್ಯರ್ಥಿ ಬೆಂಬಲಿಸಿ ಪ್ರಚಾರಕ್ಕೆ ತೊಡಗಬೇಕೆ ಎಂಬುದರ ಬಗ್ಗೆ ತೀರ್ಮಾನಿಸಿಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ತನ್ನ ಮನೆಗೆ ಬಂದು ಸೌಹಾರ್ದಯುತವಾಗಿ ಮಾತನಾಡಿ, ತಮಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ. ಬೇರೆ ಇನ್ನೇನು ವಿಷಯ ಚರ್ಚೆಯಾಗಿಲ್ಲ ಎಂದಷ್ಟೇ ಅವರು ಸ್ಪಷ್ಟಪಡಿಸಿದರು.