ಮಂಡ್ಯ ನಗರಸಭೆ ಚುನಾವಣೆ | ಕಾಂಗ್ರೆಸ್ ಸದಸ್ಯನ ಬೆಂಬಲದಿಂದ ಜೆಡಿಎಸ್-ಬಿಜೆಪಿ ಮೈತ್ರಿಗೆ ಗೆಲುವು
ನಾಗೇಶ್/ಅರುಣ್ಕುಮಾರ್
ಮಂಡ್ಯ: ತೀವ್ರ ಪೈಪೋಟಿ ಏರ್ಪಟ್ಟಿದ್ದ ಮಂಡ್ಯ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಜೆಡಿಎಸ್ ಒಂದು ಮತದ ಅಂತರದಿಂದ ಗೆಲುವು ಸಾಧಿಸಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ.
ಬುಧವಾರ ನಡೆದ ಚುನಾವಣೆಯಲ್ಲಿ 1ನೇ ವಾರ್ಡ್ನ ಜೆಡಿಎಸ್ ಸದಸ್ಯ ನಾಗೇಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ 11ನೇ ವಾರ್ಡ್ನ ಬಿಜೆಪಿ ಸದಸ್ಯ ಅರುಣ್ಕುಮಾರ್ ತಲಾ 19 ಮತಗಳಿಂದ ಆಯ್ಕೆಯಾದರು.
ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 20ನೇ ವಾರ್ಡ್ನ ಜೆಡಿಎಸ್ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಹಾಗೂ ಉಪಾಧ್ಯಕ್ಷ ಸ್ಥಾನದ 3ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ಜಾಕೀರ್ ಹುಸೇನ್ ತಲಾ 18 ಮತ ಪಡೆದು ಸೋತರು.
ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ಪ್ರವರ್ಗ-1ಕ್ಕೆ ಮೀಸಲಾಗಿತ್ತು. ಒಟ್ಟು 35 ಸದಸ್ಯರ ಪೈಕಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2 ಹಾಗೂ 5 ಪಕ್ಷೇತರ ಸದಸ್ಯರಿದ್ದರು. ಇವರೊಂದಿಗೆ ಕಾಂಗ್ರೆಸ್ ಶಾಸಕ ಪಿ.ರವಿಕುಮಾರ್ ಗಣಿಗ, ಸಂಸದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಹಾಗಾಗಿ ಒಟ್ಟು ಸದಸ್ಯರ ಸಂಖ್ಯೆ 37 ಆಗಿತ್ತು.
ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಪಕ್ಷೇತರ 5 ಸದಸ್ಯರು ಸೇರಿದಂತೆ ಜೆಡಿಎಸ್ನ ಮೂವರು ಸದಸ್ಯರ ಬೆಂಬಲವನ್ನು ಪಡೆದು ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ತಂತ್ರವನ್ನು ಕಾಂಗ್ರೆಸ್ ನಾಯಕರು ಹೆಣೆದಿದ್ದರು. ಆದರೆ, ಅವರದೇ ಪಕ್ಷದ 27ನೇ ವಾರ್ಡ್ನ ಸದಸ್ಯ ಟಿ.ಕೆ.ರಾಮಲಿಂಗಯ್ಯ ಜೆಡಿಎಸ್ ಬೆಂಬಲಿಸಿದ್ದರಿಂದ ತಂತ್ರ ವಿಫಲವಾಯಿತು.
ನಗರಸಭೆ ಗದ್ದುಗೆ ಕಾಂಗ್ರೆಸ್ ಪಾಲಾಗಲಿದೆ ಎಂಬ ಸುಳಿವನ್ನು ಅರಿತ ಸಚಿವ ಎಚ್.ಡಿ.ಕುಮಾರಸ್ವಾಮಿ ತಾನೇ ನೇರವಾಗಿ ಅಖಾಡಕ್ಕಿಳಿದು, ತನ್ನ ಪಕ್ಷದ ಮೂವರು ಸದಸ್ಯರು ಕೈಕೊಟ್ಟರೂ, ಕಾಂಗ್ರೆಸ್ನ ಓರ್ವ ಸದಸ್ಯನನ್ನು ಸೆಳೆದುಕೊಂಡು ಗದ್ದುಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಜೆಡಿಎಸ್-ಕಾಂಗ್ರೆಸ್ ನಡುವೆ ಜಟಾಪಟಿ :
ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ವರಿಷ್ಠರ ಚುನಾವಣೆ ಹಿನ್ನೆಲೆಯಲ್ಲಿ ಸಾವಿರಾರು ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಆವರಣದಲ್ಲಿ ಜಮಾಯಿಸಿದ್ದರು. ಎರಡೂ ಬಣದ ಸದಸ್ಯರು ಪ್ರತ್ಯೇಕ ವಾಹನಗಳಲ್ಲಿ ನಗರಸಭೆ ಆವರಣಕ್ಕೆ ಬಂದ ಸಂದರ್ಭ ತೀವ್ರ ನೂಕುನುಗ್ಗಲು ಉಂಟಾಯಿತು.
ಮೊದಲು ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರಿದ್ದ ವಾಹನವನ್ನು ನಗರಸಭೆ ಆವರಣದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವ ಯತ್ನ ನಡೆಯಿತು. ಆಗ ಪೊಲೀಸರು ಮಧ್ಯಪ್ರವೇಶ ಮಾಡಿ ವಾಹನವನ್ನು ನಗರಸಭೆ ಆವರಣಕ್ಕೆ ಕಳುಹಿಸಿದರು.
ನಂತರ ಮತ ಚಲಾಯಿಸಲು ಎಚ್.ಡಿ.ಕುಮಾರಸ್ವಾಮಿ ತನ್ನ ಸರಕಾರಿ ವಾಹನದಲ್ಲಿ ಆಗಮಿಸಿದರು. ಅವರ ಹಿಂದೆಯೇ ಬರುತ್ತಿದ್ದ ಜೆಡಿಎಸ್ ಸದಸ್ಯರ ವಾಹನವನ್ನು ಗೇಟಿನ ಬಳಿ ಕೆಲವರು ತಡೆದರು. ಈ ವೇಳೆ ಕೆಲಕಾಲ ಪೊಲೀಸರು ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ವಾಗ್ವಾದ ಮತ್ತು ನೂಕುನುಗ್ಗಲು ಉಂಟಾಯಿತು. ಕುಮಾರಸ್ವಾಮಿ ಸ್ವತಃ ಗೇಟಿನ ಬಳಿ ತೆರಳಿ ಸದಸ್ಯರ ವಾಹನವನ್ನು ಪೊಲೀಸರ ಭದ್ರತೆಯಲ್ಲಿ ಅವರಣದೊಳಕ್ಕೆ ಕರೆ ತಂದರು.