ಮಂಡ್ಯ | ನಾಗಮಂಗಲ ಕಲ್ಲು ತೂರಾಟ ಪ್ರಕರಣ : 150 ಮಂದಿ ವಿರುದ್ಧ ಎಫ್‍ಐಆರ್ ದಾಖಲು
ಮಂಡ್ಯ : ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯನಿರತ ಪಿಎಸ್ಸೈ ರವಿ ಬಿ.ಜೆ. ಅವರು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡು ಗುಂಪಿನ ಪ್ರಮುಖ 54 ಮಂದಿ ಸೇರಿದಂತೆ 150 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಬದರಿಕೊಪ್ಪಲಿನಿಂದ ಮಧ್ಯಾಹ್ನ 1.30ಕ್ಕೆ ಗಣೇಶ ವಿಸರ್ಜನೆ ಮೆರವಣಿಗೆ ಹೊರಟು ಸಂಜೆ 7.30ರ ವೇಳೆಗೆ ಮೈಸೂರು ರಸ್ತೆಯ ಮಸೀದಿಯೊಂದರ ಬಳಿಗೆ ಬಂದಾಗ ಯುವಕರು ಪಟಾಕಿ ಸಿಡಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹತ್ತು ನಿಮಿಷ ನೃತ್ಯ ಮಾಡಿದರು. ಭದ್ರತೆಗೆ ನಿಯೋಜನೆಗೊಂಡಿದ್ದ ನಾವು(ಪೊಲೀಸರು) ಮನವಿ ಮಾಡಿದರೂ ನೃತ್ಯ ಮುಂದುವರಿಸಿದರು. ಆಗ ಸುತ್ತಮುತ್ತ ಇದ್ದ ಮುಸ್ಲಿಂ ಯುವಕರೂ ಆಗಮಿಸಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದರು. ಈ ವೇಳೆ ಪರಸ್ಪರ ಘರ್ಷಣೆಯಾಗಿ ಎರಡೂ ಗುಂಪಿನವರು ಕಲ್ಲುತೂರಾಟ ನಡೆಸಿದರು. ಈ ವೇಳೆ ಲಘು ಲಾಠಿ ಪ್ರಹಾರ ನಡೆಸಿದೆವು ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಎಷ್ಟೇ ಪ್ರಯತ್ನ ಪಟ್ಟರೂ ಘರ್ಷಣೆ ನಿಲ್ಲಲಿಲ್ಲ. ಎರಡೂ ಕಡೆಯ ಗುಂಪಿನವರೂ ನಮ್ಮ ಮೇಲೆಯೇ ಕಲ್ಲು ತೂರಾಟ ನಡೆಸಿದರು. ನಾನು ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಇದೇ ವೇಳೆ ಗುಂಪುಗಳು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ದೊಣ್ಣೆ, ಮಚ್ಚು ಹಿಡಿದಿದ್ದರು. ಗಾಯಗೊಂಡ ನಾನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಳ್ಳೂರು ಕ್ರಾಸ್‍ನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಪಿಎಸ್ಸೈ ರವಿ ಬಿ.ಜೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.