ಹಲವು ಪ್ರಥಮಗಳಿಗೆ ಮಂಡ್ಯ ಸಾಕ್ಷಿ: ಪ್ರೊ.ಎಂ.ಕೃಷ್ಣೇಗೌಡ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯ : ಜಿಲ್ಲೆಯ ಚರಿತ್ರೆ, ಸಾಮಾಜಿಕ ವಿಚಾರ ನೋಡಿದರೆ ಹಲವಾರು ಪ್ರಥಮಗಳನ್ನು ಮಂಡ್ಯ ದಾಖಲಿಸಿದೆ. ಮೈಸೂರಿನಿಂದ ಪ್ರತ್ಯೇಕವಾದ ಮೇಲೂ ಹಲವು ಅದ್ಭುತಗಳನ್ನು ಕೂಡ ಮಂಡ್ಯ ಸೃಷ್ಟಿಸುವ ಮೂಲಕ ನಾಡಿಗೆ ತನ್ನದೇ ಕೊಡುಗೆ ನೀಡಿದೆ ಎಂದು ವಾಗ್ಮಿ, ಉಪನ್ಯಾಸಕ ಪ್ರೊ.ಎಂ.ಕೃಷ್ಣೇಗೌಡ ತಿಳಿಸಿದ್ದಾರೆ.
ಮಂಡ್ಯ ನಗರದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ "ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ" ಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಬೆಳೆಸುವುದು ಕೇವಲ ಕನ್ನಡ ಮೇಷ್ಟ್ರುಗಳ ಕೆಲಸ ಮಾತ್ರವಲ್ಲ. ಎಲ್ಲರೂ ಒಟ್ಟುಗೂಡಿ ಮಾಡಬೇಕಾದ ಕೆಲಸ. ಕನ್ನಡದ ಕವಿಗಳು ಪ್ರಪಂಚದ ಯಾವ ಕವಿಗಳು ಕಡಿಮೆಯಿಲ್ಲ. ಮುಂದೆ ನಡೆಯುವ ಸಾಹಿತ್ಯ ಸಮ್ಮೇಳನಗಳು ಮಂಡ್ಯದಲ್ಲಿ ನಡೆದ ಸಮ್ಮೇಳನದ ಜೊತೆ ಹೋಲಿಸಿಕೊಳ್ಳುವ ರೀತಿಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ ಎಂದು ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ವಿಷಯದ ಬಗ್ಗೆ, ಡಾ.ಕೆಂಪಮ್ಮ ಅವರು ಜನಪದ, ನವೀನ್ ಕುಮಾರ್ ಅವರು ಜಲವಿದ್ಯುತ್ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದರು.