ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ಮಾಂಸಾಹಾರವನ್ನೂ ನೀಡಬೇಕು : ವಕೀಲರ ಒಕ್ಕೂಟ ಒತ್ತಾಯ
ಮಂಡ್ಯ : ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರವನ್ನು ನೀಡುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿಹಿಡಿದು ಜಿಲ್ಲಾಡಳಿತ, ಸಮ್ಮೇಳನದ ಸ್ವಾಗತ ಸಮಿತಿ ಮತ್ತು ಸರಕಾರ ಮಾದರಿಯಾಗಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಇರುವಂತೆ ನೋಡಿಕೊಳ್ಳಲಿ. ಅವರು ತೆಗೆದುಕೊಳ್ಳುವ ದಿಟ್ಟ ನಿರ್ಧಾರ ಕೋಮು ಸೌಹಾರ್ದ ಕರ್ನಾಟಕವಾಗಿ ಉಳಿಯಲು ಮತ್ತು ಬೆಳೆಯಲು ಇಂಧನವನ್ನು ಒದಗಿಸುತ್ತದೆ ಎಂದರು.
ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರವನ್ನಷ್ಟೇ ಕೊಟ್ಟು, ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸುವುದು ಈ ದೇಶದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಸಂವಿಧಾನಕ್ಕೆ ಎಸಗುವ ಅಪಮಾನವಾಗಿರುತ್ತದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಸಂವಿಧಾನದ ಆರ್ಟಿಕಲ್ 51ಎ(ಎಚ್)ನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕು ಎಂದು ಎದ್ದಿರುವ ಚಳುವಳಿಯನ್ನು ಬಗ್ಗುಬಡಿಯಲು ಕೋಮು ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ಇದ್ಯಾವುದೋ ಬರಗೆಟ್ಟ ಬಾಡೂಟದ ಹೋರಾಟ, ತುಂಡೈಕಳ ಚಳುವಳಿ’ ಎಂದು ಬಿಂಬಿಸಲು ಯತ್ನಿಸುತ್ತಿವೆ. ಪ್ರಜ್ಞಾವಂತ ಜನರು ಈ ಪಿತೂರಿಗೆ ಕಿವಿಗೊಡಬಾರದು. ನಮ್ಮ ಸಂಘಟನೆ ಚಳವಳಿಗೆ ನೈತಿಕ ಬೆಂಬಲ ನೀಡುತ್ತಿದೆ ಎಂದು ಅವರು ತಿಳಿಸಿದರು.
ಈ ದೇಶದ ಶೇಖಡ 80ಕ್ಕೂ ಹೆಚ್ಚು ಜನ ಮಾಂಸಾಹಾರಿಗಳಾಗಿದ್ದು ಅವರೆಂದೂ ಸಸ್ಯಾಹಾರಿಗಳನ್ನು ನಿಕೃಷ್ಟವಾಗಿ ಕಂಡದ್ದಿಲ್ಲ. ಆದರೆ, ಆಹಾರದಲ್ಲಿ ಬೇಧವೆಣಿಸುವ ಮೂಲಕ ಸಸ್ಯಾಹಾರವನ್ನು ವಿಭಜಿಸಿ, ಕೋಮುವಾದ ಮತ್ತಿತರ ನೇತಾರರು ಬಹುಸಂಖ್ಯಾತರನ್ನು ಹಣಿಯುವ ಬಡಿಗೆಯನ್ನಾಗಿಸಿ ಪರಿವರ್ತಿಸಿಕೊಂಡಿರುವುದು ನಿಚ್ಚಳ ವಾಸ್ತವ ಎಂದು ಅವರು ಅಭಿಪ್ರಾಯಪಟ್ಟರು.
ಒಕ್ಕೂಟದ ಕಾರ್ಯದರ್ಶಿ ಚಂದನ್ ಮಾತನಾಡಿ, ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠ ‘ಪಳನಿ ದೇವಸ್ಥಾನದ ಬೆಟ್ಟದ ಸುತ್ತ’ ಮಾಂಸಾಹಾರ ನಿಷೇಧಿಸಲು ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿ ಕೊಟ್ಟಿರುವ ತೀರ್ಪಿನಲ್ಲಿ ‘ಮಾಂಸಾಹಾರ – ಸಸ್ಯಾಹಾರ ಎಂದು ತಾರತಮ್ಯ ಮಾಡಲು ಈ ದೇಶದಲ್ಲಿನ ಯಾವ ಕಾನೂನುಗಳು ಮತ್ತು ಸಂವಿಧಾನ ಸಮ್ಮತಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿರುವುದನ್ನು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ ಎಂದರು.
ವಕೀಲರಾದ ಜೆ.ರಾಮಯ್ಯ, ಆಕಾಶ್, ಸುಚೀಂದ್ರ, ಚೇತನ್ ಹಾಗೂ ಕಿಶೋರ್ ಉಪಸ್ಥಿತರಿದ್ದರು.
“ಸಂವಿಧಾನ ಆಹಾರ ಹಕ್ಕಿನಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ. ನೆಲದ ಯಾವ ಕಾನೂನುಗಳು ಕೂಡ ಸಸ್ಯಾಹಾರ ಶ್ರೇಷ್ಠ ಮತ್ತು ಮಾಂಸಾಹಾರ ಕನಿಷ್ಠ ಎಂದು ಹೇಳಿಲ್ಲ. ಹೀಗಿರುವಾಗ ಬಹುಸಂಖ್ಯಾತರ ಮೇಲೆ ಸಸ್ಯಾಹಾರದ ಹೇರಿಕೆ ಯಾಕೆ? ಮಾಂಸಾಹಾರವನ್ನು ಸಮ್ಮೇಳನದಲ್ಲಿ ನಿμÉೀಧಿಸಿರುವುದು ಯಾಕೆ? ಬಹುಸಂಖ್ಯಾತರ ತೆರಿಗೆ ಹಣವನ್ನು ಪ್ರಭುತ್ವ ಇಂತಹ ಸಮ್ಮೇಳನಗಳನ್ನು ನಡೆಸಲು ವಿನಿಯೋಗಿಸುತ್ತಿಲ್ಲವೇ? ಹಾಗಿದ್ದ ಮೇಲೆ ಈ ತಾರತಮ್ಯ ಯಾಕೆ?”
-ಬಿ.ಟಿ.ವಿಶ್ವನಾಥ್, ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ.