ಶಿವರಾಜ್‍ಸಿಂಗ್ ಚೌಹಾಣ್‍ಗೆ ಕೇಂದ್ರ ಕೃಷಿ ಸಚಿವ ಸ್ಥಾನ: ಕರ್ನಾಟಕ ಪ್ರಾಂತ ರೈತಸಂಘ ಖಂಡನೆ
ಮಂಡ್ಯ: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ಅವರನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನಾಗಿ ಎನ್‍ಡಿಎ ಆಯ್ಕೆ ಮಾಡಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‍ರಾಜ್ ಹಾಗೂ ಮಳವಳ್ಳಿ ತಾಲೂಕು ಅಧ್ಯಕ್ಷ ಎನ್.ಲಿಂಗರಾಜಮೂರ್ತಿ ಖಂಡಿಸಿದ್ದಾರೆ.
ಚೌಹಾಣ್ ಆಡಳಿತದಲ್ಲಿಯೇ ಜೂನ್ 6, 2017ರಂದು ಮಧ್ಯಪ್ರದೇಶದ ಮಂದಸೌರ್‍ನಲ್ಲಿ 6 ರೈತರನ್ನು ಕಗ್ಗೊಲೆ ಮಾಡಲಾಯಿತು. ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿ ಮತ್ತು ಖರೀದಿ, ಸಾಲಮನ್ನಾ ಮತ್ತು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಒತ್ತಾಯಿಸಿ ನಡೆಸಿದ ಹೋರಾಟಗಾರ ರೈತರ ರಕ್ತವನ್ನು ಕೈಯಲ್ಲಿ ಹಿಡಿದಿರುವ ರಾಜಕಾರಣಿಗೆ ಕೃಷಿ ಸಚಿವ ಸ್ಥಾನ ನೀಡಿರುವುದು ನೈತಿಕವಾಗಿ ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಚೌಹಾಣ್ ಅವರನ್ನು ಕೃಷಿ ಸಚಿವರನ್ನಾಗಿ ಮಾಡಿರುವುದು ದೇಶದ ರೈತರು ಮತ್ತು ಕೃಷಿ ಸಂಕಷ್ಟದ ಬಗ್ಗೆ ಎನ್‍ಡಿಎ ಸರಕಾರದ ಧೋರಣೆಯನ್ನು ಸಂಕೇತಿಸುತ್ತದೆ. ದುರ್ಬಲವಾಗಿರುವ ಬಿಜೆಪಿಯೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಎನ್‍ಡಿಎ ಸರಕಾರವು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ರೈತ ವಿರೋಧಿ ಎಂಬುದು ಸಾಬೀತಾಗಿದೆ ಎಂದು ಅವರು ಟೀಕಿಸಿದ್ದಾರೆ.
ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ 2,000 ರೂ.ಗಳ ನೇರ ನಗದು ವರ್ಗಾವಣೆಯ ಕಂತು ಬಿಡುಗಡೆಯು ಒಂದು ಕಣ್ಣೊರೆಸುವ ತಂತ್ರವಾಗಿದೆ. ಇದು ಅಸಮರ್ಪಕವಾದ ಹಳೆಯ ಯೋಜನೆಯ ಮುಂದುವರಿಕೆಯಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದೆಹಲಿ ಗಡಿಯಲ್ಲಿ ರೈತರನ್ನು ನಡೆಸಿಕೊಂಡ ರೀತಿಗೆ ಎನ್‍ಡಿಎ ಸರಕಾರಕ್ಕೆ ಚುನಾವಣೆಯಲ್ಲಿ ರೈತರು ತಕ್ಕಪಾಠ ಕಲಿಸಿದ್ದಾರೆ. ರಾಜಸ್ಥಾನದ ಸಿಕರ್‍ನಿಂದ ಆಮ್ರಾ ರಾಮ್, ಬಿಹಾರದ ಕರಾಕಟ್‍ನಿಂದ ರಾಜಾರಾಮ್ ಸಿಂಗ್, ಅರ್ರಾದಿಂದ ಸುದಾಮ ಪ್ರಸಾದ್ ಮತ್ತು ತಮಿಳುನಾಡಿನ ದಿಂಡಿಗಲ್‍ನಿಂದ ಆರ್.ಸಚಿಂತನಂತಂ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ನಾಯಕರ ಗೆಲುವು ರೈತ ಚಳವಳಿಗೆ ಶಕ್ತಿ ತುಂಬಿದೆ ಎಂದು ಅವರು ಹೇಳಿದ್ದಾರೆ.