ರಾಜ್ಯ ಕಾಂಗ್ರೆಸ್ ಸರಕಾರ ಹೆಜ್ಜೆ ಹೆಜ್ಜೆಗೂ ನನಗೆ ಅಡ್ಡಿಪಡಿಸುತ್ತಿದೆ: ಎಚ್.ಡಿ. ಕುಮಾರಸ್ವಾಮಿ ಆರೋಪ

ಮಂಡ್ಯ: "ರಾಜಕೀಯ ಅಸೂಯೆಯಿಂದ ರಾಜ್ಯ ಕಾಂಗ್ರೆಸ್ ಸರಕಾರ ಹೆಜ್ಜೆ ಹೆಜ್ಜೆಗೂ ನನಗೆ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿ ಕೆಲಸ ಮಾಡಲು ನನಗೆ ಬಿಡುತ್ತಿಲ್ಲ' ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಳವಳ್ಳಿ ತಾಲೂಕಿನ ಹಂಡನಹಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದಿ ವಿನಾಯಕ ದೇವರು ಹಾಗೂ ನಾಗದೇವತೆಗಳ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
" ಹೇಗಾದರೂ ಪ್ರಯತ್ನಪಟ್ಟು ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳ ಯಾವುದೇ ಭಾಗಕ್ಕೆ ಒಂದೆರೆಡು ಕೈಗಾರಿಕೆ ತರಬೇಕು ಎಂದು ಶ್ರಮ ಹಾಕುತ್ತಿದ್ದೇನೆ. ಆದರೆ, ರಾಜ್ಯ ಸರಕಾರ ನನಗೆ ಬೆಂಬಲ ಕೊಡುತ್ತಿಲ್ಲ" ಎಂದು ಅವರು ನೇರ ಆರೋಪ ಮಾಡಿದರು.
ಕುದುರೆಮುಖ ಕಾರ್ಖಾನೆ ಪುನಶ್ಚೇತನಕ್ಕೆ ಅಡ್ಡಿ:
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ ರಾಜ್ಯದ ಹೆಮ್ಮೆಯ ಕಾರ್ಖಾನೆಗಳಲ್ಲಿ ಒಂದು. ಮಂಗಳೂರಿನ ಕಡಲ ದಂಡೆಯಲ್ಲಿ ಅದರ ಪ್ರಮುಖ ಕಾರ್ಖಾನೆ ಇದೆ. ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡದೆ, ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತವಾದ ಮೇಲೆ ಬಳ್ಳಾರಿಯ ಸಂಡೂರಿನ ದೇವದಾರಿಯಲ್ಲಿ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಹಣ ಪಡೆದುಕೊಂಡು ಅನುಮತಿ ನೀಡಿತ್ತು. ಗಣಿ ಹಂಚಿಕೆ ಮಾಡಲು ಕೋಟಿಗಟ್ಟಲೆ ಹಣ ಪಡೆದು ಅನೇಕ ವರ್ಷವಾದರೂ ಗಣಿ ಮಾಡಿಲ್ಲ. ಅಲ್ಲಿ ಗಣಿಗಾರಿಕೆ ಮಾಡದ ಹೊರತು ಕಾರ್ಖಾನೆಗೆ ಅದಿರು ಸಿಗದಂತಾಯಿತು ಎಂದು ಕೇಂದ್ರ ಸಚಿವರು ದೂರಿದರು.
ನಾನು ಕೇಂದ್ರದಲ್ಲಿ ಉಕ್ಕು ಸಚಿವನಾದ ಕೂಡಲೇ ಸಚಿವಾಲಯದ ಅಧಿಕಾರಿಗಳು ಈ ವಿಷಯವನ್ನು ನನ್ನ ಗಮನಕ್ಕೆ ತಂದರು. ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿರುವ ಬಗ್ಗೆ ತಿಳಿಸಿದರು. ಅಲ್ಲದೆ, ಕುದುರೆಮುಖ ಕಂಪೆನಿಗೆ ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಹಣದ ಅವಶ್ಯಕತೆ ಇತ್ತು. 1,700 ಕೋಟಿ ರೂ. ಮೊತ್ತದ ಹಣಕಾಸು ನೆರವು ಕೊಡುವ ಪ್ರಸ್ತಾವ ವಿತ್ತ ಸಚಿವಾಲಯಕ್ಕೆ ಹೋಗುವ ಕಡತಕ್ಕೆ ಸಹಿ ಹಾಕಿದೆ. ಉಕ್ಕು ಸಚಿವನಾಗಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಮೊತ್ತ ಮೊದಲ ಸಹಿಯನ್ನು ನಾನು ಹಾಕಿದೆ. ರಾಜಕೀಯವಾಗಿ ನನ್ನ ವಿರುದ್ಧ ಅಸೂಯೆ ಪಡುತ್ತಿರುವ ರಾಜ್ಯ ಸರ್ಕಾರ ಅದಕ್ಕೆ ಅಡ್ಡಿಪಡಿಸಿತು. ಮಂಗಳೂರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎರಡು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಕೊನೆಗೆ ಇವರ ಹಿತ, ರಾಜ್ಯದ ಹಿತಕ್ಕಾಗಿ ನಾನು ಕುದುರೆಮುಖ ಸಂಸ್ಥೆಯನ್ನು ರಾಷ್ಟ್ರೀಯ ಖನಿಜಾವೃದ್ಧಿ ನಿಗಮ (NMDC) ವಿಲೀನ ಮಾಡುವ ನಿರ್ಧಾರ ಕೈಗೊಂಡೆ. ಅದೇ ರೀತಿ ಎಚ್ ಎಂಟಿ ಅಭಿವೃದ್ಧಿ ವಿಷಯದಲ್ಲಿಯೂ ರಾಜ್ಯ ಸರಕಾರ ರಾಜಕೀಯ ಮಾಡುತ್ತ ಅಡ್ಡಗಾಲು ಹಾಕುತ್ತಿದೆ ಎಂದು ಕೇಂದ್ರ ಸಚಿವರು ದೂರಿದರು.
ಅಭಿವೃದ್ಧಿಯಲ್ಲಿ ಕೂಡ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ. ತಮ್ಮ ರಾಜಕೀಯ ವಿರೋಧಿಗಳಿಗೆ ಸಹಕಾರ ನೀಡುವುದು ಇರಲಿ, ಅವರ ಒಳ್ಳೆಯ ಕೆಲಸಗಳನ್ನು ಬೆಂಬಲಿಸುವ ಕೆಲಸವನ್ನು ಮಾಡುತ್ತಿಲ್ಲ. ಹೀಗಾದರೆ ರಾಜ್ಯಕ್ಕೆ ಕೈಗಾರಿಕೆಗಳು ಎಲ್ಲಿಂದ ಬರುತ್ತವೆ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಮಂಡ್ಯ ಜನರು ನೀವು ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದೀರಿ. ಎಂಪಿ ಯಾಗಿ ಗೇಲಿಸಿದ್ದೀರಿ. ನಿಮ್ಮ ಋಣ ತೀರಿಸುತ್ತೇನೆ. ಇಲ್ಲಿ ದೇವರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಈ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಮಂಡ್ಯ ಜನರ ನಿರೀಕ್ಷೆಗಳನ್ನು ನಾನು ತಪ್ಪದೇ ಈಡೇರಿಸುತ್ತೇನೆ ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಮನಗರದ ಶಿವಗಿರಿ ಕ್ಷೇತ್ರದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಮಾಜಿ ಶಾಸಕ ಡಾ. ಕೆ.ಅನ್ನದಾನಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.