ಕೆರಗೋಡು ʼಹನುಮ ಧ್ವಜʼ ವಿವಾದಕ್ಕೆ ಜಿಲ್ಲಾಡಳಿತದ ವೈಫಲ್ಯ ಕಾರಣ: ಎಚ್.ಡಿ ಕುಮಾರಸ್ವಾಮಿ
ಮಂಡ್ಯ: ಜಿಲ್ಲಾಡಳಿತದ ವೈಫಲ್ಯ ಹಾಗೂ ಸರಕಾರದ ಉದ್ಧಟತನದಿಂದ ಕೆರಗೋಡು ಗ್ರಾಮದಲ್ಲಿ ಅಶಾಂತಿ ಮೂಡಿದೆ. ಕೂಡಲೇ ಜಿಲ್ಲಾಧಿಕಾರಿಯನ್ನು ಅಮಾನತು ಗೊಳಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಖಂಡಿಸಿ ಕೆರಗೋಡಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿದ ಜೆಡಿಎಸ್, ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೂ ಅಪಮಾನ ಮಾಡಲಾಗಿದೆ. ಇದಕ್ಕೆಲ್ಲಾ ಜಿಲ್ಲಾಧಿಕಾರಿ ನೇರ ಹೊಣೆ ಎಂದು ಆರೋಪಿಸಿದರು.
ಶಾಂತಿಸಭೆ ನಡೆಸಿ ಶಾಂತಿಯುತವಾಗಿ ಪ್ರಕರಣಕ್ಕೆ ತೆರೆ ಎಳೆಯಬೇಕೆಂದು ಮಂಡ್ಯ ಜಿಲ್ಲಾಡಳಿತಕ್ಕೆ ತಿಳಿಸಿದ್ದೆ. ಜನರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಆದರೆ, ಏಕಾಏಕಿ ಪೊಲೀಸರನ್ನು ಬಳಸಿಕೊಂಡು ಧ್ವಜ ತೆರವುಗೊಳಿಸಿ ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಅವರು ದೂರಿದರು.
ಧ್ವಜ ಸ್ಥಂಭ ಸ್ಥಾಪಿಸಿ ಹುನುಮ ಧ್ವಜ ಹಾರಿಸಲು ಸ್ಥಳೀಯ ಗ್ರಾಮ ಪಂಚಾಯತ್ ಸಭೆಯು ಅನುಮತಿ ನೀಡಿದೆ. ಆದರೆ, ನಿನ್ನೆ ಸರಕಾರದ ನಡವಳಿಕೆ ಸರಿ ಇರಲಿಲ್ಲ ಎಂದು ಕಿಡಿಕಾರಿದರು.
ಲಾಠಿ ಚಾರ್ಜ್ ಮಾಡುವ ಮೂಲಕ ಸರಕಾರ ದೌರ್ಜನ್ಯ ಪ್ರದರ್ಶನ ಮಾಡಿದೆ. ಹನುಮಂತನ ಕೆಣಕಿ ಉಳಿಯುವವರು ಇಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಮೊದಲು ಅದನ್ನು ಸರಿಪಡಿಸಿ. ಕೆರಗೋಡು ಗ್ರಾಮದಲ್ಲಿ ನಡೆದ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ನಮ್ಮ ಹೋರಾಟವಿದೆ. ಹನುಮ ಧ್ವಜ ತೆಗೆದು ಸರಕಾರ ತಪ್ಪು ಮಾಡಿದೆ. ಕೂಡಲೇ ಕ್ಷಮೆ ಕೇಳಿ, ಮತ್ತೆ ಹನುಮ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿದರು.