ಮಂಡ್ಯ: ಟಯರ್ ಸ್ಫೋಟಗೊಂಡು ಕಾರು ಪಲ್ಟಿ; ಅಪಾಯದಿಂದ ಪಾರಾದ ಪ್ರಯಾಣಿಕರು
ಮಂಡ್ಯ, ಮಾ.2 : ಕಾರು ಪಲ್ಟಿಯಾಗಿ ಚಾಲಕನ ಸಹಿತ ಇತರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಮದ್ದೂರು ಬಳಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ಮದ್ದೂರಿನ ಬಳಿ ಫ್ಲೈ ಓವರ್ ಇಳಿಯುತ್ತಿದ್ದಂತೆ ಮುಂಭಾಗದ ಎಡ ಭಾಗದ ಟಯರ್ ಸ್ಫೋಟಗೊಂಡ ಪರಿಣಾಮ ಪಲ್ಟಿಯಾದ ಕಾರು, ಡಿವೈಡರ್ ಗೆ ಗುದ್ದಿ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ಕಾರಿನ ವಿವಿಧ ಭಾಗಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ತಕ್ಷಣವೇ ಹೆದ್ದಾರಿಯ ವಾಹನ ಸವಾರರು ಹಾಗೂ ಸ್ಥಳೀಯರು ಧಾವಿಸಿ ಕಾರಿನಲ್ಲಿದ್ದವರನ್ನು ಹೊರ ತೆಗೆದು ರಕ್ಷಿಸಿದರು. ಸ್ಥಳಕ್ಕೆ ಮದ್ದೂರು ಸಂಚಾರ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೆ.ಇ.ಮಹೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ತಪ್ಪದೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂದು ನಡೆದಿರುವ ಭೀಕರ ಅಪಘಾತದಲ್ಲಿ ಸೀಟ್ ಬೆಲ್ಟ್ ಹಾಕಿರುವಪರಿಣಾಮ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಹಾಗಾಗಿ ಪ್ರಯಾಣಿಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಪ್ರಯಾಣಿಸಿ ಎಂದು ಸಂಚಾರ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೆ.ಇ.ಮಹೇಶ್ ಮನವಿ ಮಾಡಿದ್ದಾರೆ.
ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.