ಮಂಗಳೂರು: ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಿಂದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಧರಣಿ ವೇಳೆ ಘಟನೆ
ಮಂಗಳೂರು: ವರದಿಗಾರಿಕೆಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಪುಂಡಾಟಿಕೆ ಮೆರೆದ ಘಟನೆ ಇಂದು ನಗರದಲ್ಲಿ ನಡೆದಿದೆ.
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ದ.ಕ. ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಗ್ಗೆ ಮಂಗಳೂರಿನಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಧರಣಿನಿರತರು ಕ್ಲಾಕ್ ಟವರ್ ಬಳಿ ಪೊಲೀಸ್ ಬ್ಯಾರಿಕೇಡ್ ಗಳನ್ನು ಬದಿಗೊತ್ತಿ ರಸ್ತೆ ತಡೆಗೆ ಮುಂದಾಗಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ರಸ್ತೆ ತಡೆ ಮಾಡಲು ಯತ್ನಿಸಿದವರನ್ನು ತಡೆಯಲೆತ್ನಿಸಿದರು. ಇದು ಪೊಲೀಸರು ಮತ್ತು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ವೇಳೆ ವರದಿಗಾರಿಕೆಗೆ ತೆರಳಿದ್ದ ಮಾಧ್ಯಮದವರ ಮೇಲೆ ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿ ವರದಿಗಾರಿಕೆಗೆ ಅಡ್ಡಿಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗಳ ವಿಡಿಯೋ ಜರ್ನಲಿಸ್ಟ್ ಮೇಲೆ ಮುಗಿಬಿದ್ದ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ತಳ್ಳಾಡಿದ್ದಲ್ಲದೆ, ಹಲ್ಲೆಗೆ ಯತ್ನಿಸಿದ್ದಾರೆ.
ವರದಿಗಾರಿಕೆ ಬಹಿಷ್ಕರಿಸಿದ ಪತ್ರಕರ್ತರು
ಹಲ್ಲೆಗೆ ಯತ್ನ ನಡೆದ ಹಿನ್ನೆಲೆಯಲ್ಲಿ ಮಾಧ್ಯಮದವರು ಧರಣಿಯ ವರದಿಗಾರಿಕೆಯನ್ನು ಬಹಿಷ್ಕರಿಸಿ ವಾಪಸ್ಸಾದರು.