ರಾಜಕೀಯ ಪಕ್ಷಗಳ ಸ್ಥಾನ ಹಂಚಿಕೆಯೂ ಸಾಮಾಜಿಕ ನ್ಯಾಯವೂ...
ಕರ್ನಾಟಕದಲ್ಲಿ ಕೆಲವೇ ವಾರಗಳ ಹಿಂದೆ ಸಾರ್ವತ್ರಿಕ ಚುನಾವಣೆ ನಡೆದು ಜನರ ಆಯ್ಕೆಯ ಸರಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಹಾತೊರೆಯುವ ಪಕ್ಷಗಳಿರುವುದು ಕೇವಲ ಮೂರು ಮಾತ್ರ. ಅವುಗಳಲ್ಲಿ ಜನತಾದಳ ಒಂದು ಪ್ರಾದೇಶಿಕ ಪಕ್ಷವೆಂತಲೋ ಅಥವಾ ಸೀಮಿತ ಗಡಿ ಪ್ರದೇಶಕ್ಕೆ ಒಳಪಡುವ ಪಕ್ಷವೆಂತಲೋ ಗುರುತಿಸಿಕೊಂಡಿದೆ. ಮತ್ತೊಂದು ಪಕ್ಷವಾದ ಭಾಜಪವೂ ಕೂಡ ಕರ್ನಾಟಕದಲ್ಲಿ ವ್ಯಾಪಕವಾಗಿ ತನ್ನ ಇರುವಿಕೆಯನ್ನು ತೋರಿಸಲು ಸಾಧ್ಯವಾಗಿಲ್ಲ! ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿ ಅದಕ್ಕೆ ಅಷ್ಟಾಗಿ ಬೆಂಬಲವಿಲ್ಲ! ಆದರೆ ಬಹು ವರ್ಷಗಳ ಕಾಲ ಅಧಿಕಾರದಲ್ಲಿದ್ದು ಅತ್ಯಂತ ದೀರ್ಘಕಾಲದ ಪಕ್ಷವೆಂದು ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಮಾತ್ರ ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ ನೆಲೆ ಕಂಡುಕೊಂಡಿದೆ ಎಂಬುದು ರಾಜಕೀಯ ಬಲ್ಲವರೆಲ್ಲರಿಗೂ ತಿಳಿದಿರುವ ಸಂಗತಿಯೇ. ಜನತಾದಳ ಪಕ್ಷಕ್ಕೆ ಅದರದೇ ಆದ ಸೀಮಿತತೆಯ ಕಾರಣ ಅದರ ತುರುಸಿನ ಸ್ಪರ್ಧೆ 50 ಕ್ಷೇತ್ರಗಳ ಗಡಿ ದಾಟುವುದಿಲ್ಲ. ಆದರೂ ಆ ಪಕ್ಷ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಾಗುವುದು ಎಂದು ಹೇಳಿಕೊಂಡಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂಬುದೂ ಅದು ಕರ್ನಾಟಕದಲ್ಲಿ ಯಾವ ರೀತಿ ಜನರ ಒಲವು ಗಳಿಸಿದೆ ಎಂಬುದಕ್ಕೆ ಪ್ರತ್ಯಕ್ಷ ಪುರಾವೆ. ಭಾಜಪದ ಸ್ಥಿತಿಯೂ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಅಷ್ಟೇನೂ ಹೇಳಿಕೊಳ್ಳುವಷ್ಟು ಪ್ರಬಲವಾಗಿಲ್ಲದ ಕಾರಣ ಸ್ಥಾನಗಳ ಗಳಿಕೆ ಇಲ್ಲವೇ ಇಲ್ಲ. ಈ ಸಲ ಆ ಪಕ್ಷ ಭಗೀರಥ ಯತ್ನವನ್ನು ಕರ್ನಾಟಕದ ಎಲ್ಲೆಡೆ ವ್ಯವಸ್ಥಿತವಾಗಿ ನಡೆಸಿ ಅಧಿಕಾರ ಪಡೆಯಬೇಕೆಂಬ ಛಲಕ್ಕೆ ಬಿದ್ದಿತ್ತು. ಪ್ರಧಾನಿ ಮೋದಿ ಅವರಿಂದ ಮೊದಲ್ಗೊಂಡು ಅನೇಕ ಕೇಂದ್ರದ ಮುಂಚೂಣಿ ಘಟಾನುಘಟಿ ನಾಯಕರು ಹಲವು ಸುತ್ತಿನ ರೋಡ್ ಶೋಗಳನ್ನು ಕೈಗೊಂಡರೂ, ಮತದಾರರನ್ನು ಆಕರ್ಷಿಸುವಲ್ಲಿ ಸಂಪೂರ್ಣ ವಿಫಲರಾದರು. ಎಲ್ಲಾ ಪಕ್ಷಗಳು ತಮ್ಮ ಇತಿಮಿತಿಯೊಳಗೆ ಚುನಾವಣೆ ಗೆಲ್ಲಬೇಕೆಂಬ ಹಂಬಲದೊಡನೆ ಯತ್ನಿಸಿದವು.
ಸ್ವತಂತ್ರ ಭಾರತದ ಮೊದಲನೇ ಚುನಾವಣೆಯ ಲಾಗಾಯಿತಿನಿಂದಲೂ ಇಂದಿನವರೆಗೂ ಬಹುತೇಕ ಅಧಿಕಾರ- ಆಡಳಿತ ಮೇಲ್ಜಾತಿಗಳ ಬಿಗಿಮುಷ್ಟಿಯಲ್ಲೇ ಇದೆ. ಹಾಗಿರಲು ಕಾರಣ ಆಯ್ಕೆಯಾಗಿ ಬರುತ್ತಿರುವ ಸದಸ್ಯರಲ್ಲಿ ಹೆಚ್ಚಿನವರು ಮೇಲ್ಜಾತಿಯವರೇ ಆಗಿರುತ್ತಾರೆ. ಅವರೇ ಆರಿಸಿ ಬರಲು ಇರುವ ಮತ್ತೊಂದು ಕಾರಣವೆಂದರೆ ಸ್ಥಾನಗಳ ಹಂಚಿಕೆಯಲ್ಲಿ ಬಹುಪಾಲು ಸ್ಥಾನಗಳನ್ನು ಅವರೇ ಕೊಟ್ಟು ಕೊಂಡಿರುತ್ತಾರೆ. ಸಂವಿಧಾನದ ಆಶಯದಂತೆ ಕಾಲಕಾಲಕ್ಕೆ ಪರಿಶಿಷ್ಟ ವರ್ಗಗಳ ಸ್ಥಾನಗಳು ಹೆಚ್ಚುತ್ತಿರುತ್ತವೆ. ಸಂಖ್ಯೆಗನುಗುಣವಾಗಿ ಪರಿಶಿಷ್ಟ ವರ್ಗಗಳು ಪಾಲು ಹಂಚಿಕೆಯಾಗುತ್ತಿವೆ. ಭಾರತೀಯ ಜಾತಿ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ಲೇಖನದ ಉದ್ದೇಶಕ್ಕೆ 4 ವಿಭಾಗಗಳನ್ನಾಗಿ ಮಾಡಲಾಗಿದೆ. 1.ಮೇಲ್ಜಾತಿಗಳು 2.ಪರಿಶಿಷ್ಟ ವರ್ಗಗಳು 3.ಹಿಂದುಳಿದ ವರ್ಗಗಳು ಮತ್ತು 4. ಧಾರ್ಮಿಕ ಅಲ್ಪಸಂಖ್ಯಾತರು. ಬ್ರಿಟಿಷ್ ಭಾರತದಲ್ಲಿ ದಶವಾರ್ಷಿಕ ಜಾತಿ ಜನಗಣತಿಯನ್ನು ಪ್ರತೀ 10 ವರ್ಷಕ್ಕೊಮ್ಮೆ ಮಾಡಿಕೊಂಡು ಬರಲಾಗುತ್ತಿತ್ತು. ಕಾರಣವೂ ಏನೇ ಇರಲಿ, ಅದು 1931ರಲ್ಲಿಯೇ ಕೊನೆಗೊಂಡಿತು. ಭಾರತ ಸ್ವಾತಂತ್ರ್ಯಗಳಿಸಿದ ತರುವಾಯ ಆ ಪದ್ಧತಿಯನ್ನು ಮೇಲ್ಜಾತಿ -ಮೇಲ್ವರ್ಗಗಳ ಒಳಸಂಚಿನಿಂದ ಮುಂದುವರಿಸಲಿಲ್ಲ ಎಂಬುದು ಸಹ ಕಟು ಸತ್ಯ. ಪ್ರಸಕ್ತ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ವರ್ಗಗಳನ್ನಷ್ಟೇ ಗಣತಿ ಮಾಡಲಾಗುತ್ತಿದೆ. ಮೇಲ್ಜಾತಿ ಮತ್ತು ಬಹು ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳನ್ನು ಗಣತಿಗೆ ಪರಿಗಣನೆ ಮಾಡುತ್ತಿಲ್ಲ. ಹೀಗಾಗಿ ಎರಡು ವರ್ಗಗಳಲ್ಲಿ ಬರುವ ಜಾತಿಗಳ ನಿಖರ ಸಂಖ್ಯೆ ತಿಳಿಯುವುದೇ ಇಲ್ಲ. ಸಹಜವಾಗಿ ಬಲಾಢ್ಯರಾಗಿರುವ ಮೇಲ್ಜಾತಿಯವರ ಕೈಯಲ್ಲಿಯೇ ಪಕ್ಷಗಳ ಹಿಡಿತವಿರುತ್ತದೆ. ಪ್ರತೀ ಸಾರ್ವತ್ರಿಕ ಚುನಾವಣೆಯಲ್ಲಿ ಬಲಿಷ್ಠ ಮೇಲ್ಜಾತಿಗಳು ಮೇಲುಗೈ ಪಡೆದು ಸ್ಥಾನಗಳ ಹಂಚಿಕೆಯಲ್ಲಿ ಸಿಂಹ ಪಾಲು ಪಡೆದುಕೊಳ್ಳುತ್ತವೆ. ತೀರಾ ಅನ್ಯಾಯಕ್ಕೆ ಒಳಗಾಗುವವರು ಎಂದರೆ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ನತದೃಷ್ಟ ಹಿಂದುಳಿದ-ಅತಿಹಿಂದುಳಿದ ವರ್ಗಗಳು. ಚುನಾವಣೆಯಿಂದ ಚುನಾವಣೆಗೆ ಇದು ಸುಧಾರಣೆ ಕಾಣದೆ ಸಾಮಾಜಿಕ ನ್ಯಾಯವೆಂಬುದು ಬಿಸಿಲ್ಗುದುರೆ ಆಗಿದೆ. ಕರ್ನಾಟಕದ ಮಟ್ಟದಲ್ಲಿ ಪೈಪೋಟಿಯಲ್ಲಿರುವ ಮೂರು ಪಕ್ಷಗಳಲ್ಲಿ ಜನತಾದಳವನ್ನು ಕುಟುಂಬ ಮತ್ತು ಜಾತೀಯ ಪಕ್ಷವೆಂದು ಬ್ರಾಂಡ್ ಮಾಡಲಾಗಿದೆ. ಮತ್ತೆ ಸಂಘ ಪರಿವಾರದ ಹಿಡಿತದಲ್ಲಿರುವ ಭಾಜಪವು, ತಾನು ನಂಬಿಕೊಂಡಿರುವ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವುದರಿಂದ ಮೇಲ್ಜಾತಿ ಹಿತವನ್ನೇ ಬಯಸಿ ಸಾಮಾಜಿಕ ನ್ಯಾಯದ ಅರ್ಥವನ್ನು ತಿಳಿದುಕೊಳ್ಳುವ ಗೋಜಿಗೆ ಅದು ಹೋಗಿಲ್ಲ. ಆ ಕಾರಣದಿಂದ ಚುನಾವಣೆಯಲ್ಲಿ ಗೆಲ್ಲಲು ಇರುವ ಮಾನದಂಡಗಳಿಗೆ ಮಾತ್ರ ಅದು ಮಾನ್ಯತೆ ಕೊಡುವುದು. ಮಾತ್ರವಲ್ಲ ಅದು ಧಾರ್ಮಿಕ ಅಲ್ಪಸಂಖ್ಯಾತರಿಗಂತೂ ಸ್ಥಾನಗಳನ್ನು ಹಂಚಿಕೆ ಮಾಡುವುದೇ ಇಲ್ಲ. ಇನ್ನು 128 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಈ ಹಿಂದೆ 3-4 ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದ ಮುಖ್ಯಮಂತ್ರಿಗಳನ್ನು ಕರ್ನಾಟಕಕ್ಕೆ ನೀಡಿದೆ. ಅದರಲ್ಲೂ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವ್ಯವಸ್ಥಿತ ರೂಪದಲ್ಲಿ ಹಿಂದುಳಿದವರಿಗೆ ಆದ್ಯತೆ ಕೊಟ್ಟಿದ್ದು ನಮ್ಮ ಕಣ್ಣಮುಂದಿದೆ. ಹಾಗಾಗಿಯೇ, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಹಿಂದುಳಿದ-ಅತಿ ಹಿಂದುಳಿದ ವರ್ಗದವರು ಹೆಚ್ಚು ಸ್ಥಾನಗಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಡುತ್ತಿರುವರು. ಆದರೆ, ಅವರ ಹೋರಾಟ-ಬೇಡಿಕೆಗಳಿಗೆಲ್ಲ ಬಲಾಢ್ಯರ ಹಿಡಿತದಲ್ಲಿರುವ ಪಕ್ಷಗಳು ಸೊಪ್ಪು ಹಾಕುತ್ತಿಲ್ಲ. ಹಿಂದುಳಿದವರ ಕೂಗು ಏನಿದ್ದರೂ, ಕಾಡಿನಲ್ಲಿರುವ ನರಿಯ ಕೂಗಾಗಿದೆ.
ಕೋಮು ಆಧಾರಿತ ವ್ಯವಸ್ಥೆಯಲ್ಲಿ ಮುಸ್ಲಿಮರು ಏನಿದ್ದರೂ ಅವರು ಹೆಚ್ಚಿರುವ ಕಡೆಯಲ್ಲೇ ಸ್ಪರ್ಧಿಸುವುದು ಅನಿವಾರ್ಯ. ಹಾಗಾಗಿ ಅವರ ಸ್ಪರ್ಧೆ ನಗರ ಕೇಂದ್ರಿತವಾಗಿರುತ್ತದೆ. ಗ್ರಾಮಾಂತರ ಕ್ಷೇತ್ರಗಳಲ್ಲಂತೂ ಸ್ಪರ್ಧೆ ಅಸಾಧ್ಯದ ಮಾತು. ಈ ಕಾರಣಗಳಿಂದಾಗಿ ಅವರ ಸಂಖ್ಯೆಗೆ ಅನುಗುಣವಾಗಿ ಸ್ಪರ್ಧಿಸಲು ಅವಕಾಶವೇ ಸಿಗುವುದಿಲ್ಲ, ಜೊತೆಗೆ ಗೆಲ್ಲುವುದು ಸುಲಭ ಸಾಧ್ಯವೂ ಅಲ್ಲ. ಹೀಗಾಗಿ ಅವರ ಒಟ್ಟು ಸ್ಥಾನಗಳು ಎರಡಂಕಿಯನ್ನು ದಾಟುವುದಿಲ್ಲ. ಕಳೆದ ಚುನಾವಣೆಯಲ್ಲಿ, 22 ಕ್ಷೇತ್ರಗಳಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದರು. ಆದರೆ ಯಾರೊಬ್ಬರೂ ಗೆಲ್ಲಲಿಲ್ಲ. ಅದಕ್ಕೆ ಕಾರಣ ಗೆಲ್ಲುವ ಕಡೆ ಸ್ಥಾನಗಳನ್ನು ಹಂಚಿಕೆ ಮಾಡುವುದಿಲ್ಲ ಆ ಪಕ್ಷ. ಕಾಂಗ್ರೆಸ್ 15 ಸ್ಥಾನಗಳನ್ನು ನೀಡಿತ್ತಾದರೂ ಬಲು ಪ್ರಯಾಸದಿಂದ ಗೆದ್ದವರು 9 ಮಂದಿ ಮಾತ್ರ. ಹಾಗೆಯೇ ಕಾಂಗ್ರೆಸ್ ಪಕ್ಷವು 3 ಮಂದಿ ಕ್ರೈಸ್ತರಿಗೆ ಅವಕಾಶ ಕಲ್ಪಿಸಿತ್ತು. ಅವರಲ್ಲಿ ಗೆದ್ದವರು ಮಾತ್ರ ಒಬ್ಬರೇ. ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಜೈನರಿಗೆ ತಲಾ ಒಂದೊಂದು ಸ್ಥಾನವನ್ನು ನೀಡಿದ್ದವು. ಸುದೈವವಶಾತ್ ಇಬ್ಬರೂ ಜಯಗಳಿಸಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ, ಭಾಜಪವು 224 ಸ್ಥಾನಗಳ ಪೈಕಿ ಪ್ರವರ್ಗ-1(ಅತಿ ಹೆಚ್ಚು ಹಿಂದುಳಿದ)ರಲ್ಲಿರುವ 95 ಜಾತಿಗಳಲ್ಲಿ ಕೇವಲ 2 ಜಾತಿಗಳಿಗಷ್ಟೇ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಬೆಸ್ತ-2, ಯಾದವ-2 ಹೀಗೆ ಒಟ್ಟು 4 ಸ್ಥಾನಗಳು. ಪ್ರವರ್ಗ-2(ಹೆಚ್ಚು ಹಿಂದುಳಿದ)ರಲ್ಲಿರುವ 102 ಜಾತಿಗಳಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು-ಬಿಲ್ಲವ-8, ಕುರುಬ-7, ರಜಪೂತ-2, ಗಾಣಿಗ-2(ಲಿಂಗಾಯತ?), ತಿಗಳ-1, ಕುಮಾರ ಪಂತ್-1 ಹೀಗೆ ಒಟ್ಟು 21 ಸ್ಥಾನಗಳಷ್ಟೇ. ಪ್ರವರ್ಗ-3ಎ(ಹಿಂದುಳಿದ)ಯಲ್ಲಿ ಬಲಿಜ ನಾಯ್ಡು ಜಾತಿಗೆ 3 ಸ್ಥಾನಗಳನ್ನು ನೀಡಲಾಗಿದೆ. ಪ್ರವರ್ಗ-3 ಬಿ (ಹಿಂದುಳಿದ)ಯಲ್ಲಿ ಮರಾಠರಿಗೆ 3 ಸ್ಥಾನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗೆ ಎಲ್ಲಾ ಹಂತದ 31 ಹಿಂದುಳಿದ ಜಾತಿಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಇವರಲ್ಲಿ ರಜಪೂತರು ಅಲ್ಪಸಂಖ್ಯಾತ ಮೇಲ್ಜಾತಿಯವರು.
ಕಾಂಗ್ರೆಸ್ ಪಕ್ಷವೂ ಪ್ರವರ್ಗ-1ರಲ್ಲಿ ಬೆಸ್ತ-5, ಗೊಲ್ಲ-2, ಉಪ್ಪಾರ-1, ಭೈರಾಗಿ-1 ಹೀಗೆ 9 ಮಂದಿ ಅತಿ ಹೆಚ್ಚು ಹಿಂದುಳಿದವರಿಗೆ ಸ್ಥಾನ ಕಲ್ಪಿಸಿದೆ. ಪ್ರವರ್ಗ-2ಎ ಯಲ್ಲಿ ಕುರುಬ-16, ಬಿಲ್ಲವ-7, ರಜಪೂತ-2, ಕುರುಹಿನ ಶೆಟ್ಟಿ (ಲಿಂಗಾಯತ ?)-1 ಹೀಗೆ ಈ ಪ್ರವರ್ಗದಲ್ಲಿ 26 ಮಂದಿಗೆ ಅವಕಾಶ ನೀಡಲಾಗಿದೆ. ಪ್ರವರ್ಗ- 3ಎ ಯಲ್ಲಿ, ಬಲಿಜ ನಾಯ್ಡು-3, ಕೊನೆಯದಾಗಿ, ಪ್ರವರ್ಗ- 3ಬಿಯಲ್ಲಿ ಮರಾಠರಿಗೆ 4 ಸ್ಥಾನಗಳನ್ನು ಕಲ್ಪಿಸಿದೆ. ಹೀಗೆ ಎಲ್ಲಾ ಸ್ತರದ ಹಿಂದುಳಿದ ವರ್ಗಗಳಿಗೆ ಒಟ್ಟು 42 ಸ್ಥಾನಗಳನ್ನು ಕೊಡಲಾಗಿದೆ. ಕಾಂಗ್ರೆಸ್ ಪಕ್ಷವೂ ಭಾಜಪಗಿಂತ ತುಸು ವಾಸಿ.
ಭಾಜಪದಲ್ಲಿ ಗೆದ್ದ ಹಿಂದುಳಿದ ವರ್ಗಗಳಲ್ಲಿ, ಪ್ರವರ್ಗ-1ರಲ್ಲಿ ಬೆಸ್ತ ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದವರು 2 ಮಂದಿ. ಪ್ರವರ್ಗ-2ಎ ಯಲ್ಲಿ, ಬಿಲ್ಲವ-2, ಕುರುಬ ಮತ್ತು ಗಾಣಿಗ ತಲಾ ಒಬ್ಬರಿರುವರು. ಪ್ರವರ್ಗ-3ಎ ಯಲ್ಲಿ ಬಲಿಜ ನಾಯ್ಡು -1 ಹಾಗೂ ಕೊನೆಯದಾಗಿ ಪ್ರವರ್ಗ- 3ಬಿ ಯ ಮರಾಠರಲ್ಲಿ ಒಬ್ಬರು ಮಾತ್ರ ಗೆದ್ದು ಬಂದಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಒಟ್ಟು 8 ಮಂದಿ ಮಾತ್ರ ಗೆದ್ದವರಿರುವರು.
ಕಾಂಗ್ರೆಸ್ ಪಕ್ಷದಲ್ಲಿ ಗೆದ್ದವರು ಪ್ರವರ್ಗ-1ರಲ್ಲಿ ಉಪ್ಪಾರ-1, ಬೆಸ್ತ-1, ಭೈರಾಗಿ-1 ಮತ್ತು ಪ್ರವರ್ಗ- 2ಎಯಲ್ಲಿ ಕುರುಬ-10, ಬಿಲ್ಲವ-4, ರಜಪೂತ್-1, ಪ್ರವರ್ಗ- 3ಎಯಲ್ಲಿ ಬಲಿಜ-1 ಹಾಗೂ ಪ್ರವರ್ಗ-3 ಬಿಯಲ್ಲಿ ಮರಾಠ-3 ಹೀಗೆ ಒಟ್ಟು 22 ಮಂದಿ ಹಿಂದುಳಿದ ವರ್ಗ ಗಳಿಗೆ ಸೇರಿದವರಿದ್ದಾರೆ.
ಜನತಾದಳದಲ್ಲಿ ಗೆದ್ದ 19 ಮಂದಿಯಲ್ಲಿ ಪ್ರವರ್ಗ -2ಎಗೆ ಸೇರಿರುವ ಕುರುಬ ಸಮುದಾಯದವರು ಮಾತ್ರ ಇಬ್ಬರಿದ್ದಾರೆ.
ಎಲ್ಲಾ ಮೂರೂ ರಾಜಕೀಯ ಪಕ್ಷಗಳಿಂದಲೂ ಗೆದ್ದ ಹಿಂದುಳಿದವರು ಒಟ್ಟು 32 ಮಂದಿ ಮಾತ್ರ. ವಿಧಾನಸಭೆಯ ಸಂಖ್ಯಾಬಲದ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಗೆ ಸೇರಿದವರು ಶೇ.14ರಷ್ಟು ಮಾತ್ರ ಇರುವರು. ಕಳೆದ ಚುನಾವಣೆ 16ನೆಯ ಸಾರ್ವತ್ರಿಕ ಚುನಾವಣೆ. ಸ್ವಾತಂತ್ರ್ಯ ಲಭಿಸಿ 75 ವರ್ಷಗಳೇ ಗತಿಸಿದ್ದರೂ ಹಿಂದುಳಿದ ವರ್ಗಗಳ ರಾಜಕೀಯ ಸ್ಥಿತಿ ಕಡು ಶೋಚನೀಯ.
ನ್ಯಾ.ಕುಲದೀಪ್ ಸಿಂಗ್ ಆಯೋಗದ ಸೂತ್ರದಂತೆ 2007ರಲ್ಲಿ 2.5 ಲಕ್ಷ ಜನಸಂಖ್ಯೆಗೆ ಒಂದು ಕ್ಷೇತ್ರ ವಿಂಗಡಣೆಯಾಗಿತ್ತು. ಅದು 2001ರ ಜನಗಣತಿಯನ್ನು ಆಧರಿಸಿತ್ತು. ಪ್ರಸಕ್ತ ಕರ್ನಾಟಕದ ಜನಸಂಖ್ಯೆ 6.5 ಕೋಟಿ ಎಂದಿಟ್ಟುಕೊಂಡರೂ, 3 ಲಕ್ಷ ಜನಸಂಖ್ಯೆಗೆ ಒಂದು ಕ್ಷೇತ್ರ ವಿಂಗಡಣೆಯಾಗಬೇಕು. ಸಾಕಷ್ಟು ಸಂಖ್ಯೆಯಲ್ಲಿರುವ ವಿಶ್ವಕರ್ಮರಿಗೆ ಕನಿಷ್ಠವೆಂದರೂ ನಾಲ್ಕು ಕ್ಷೇತ್ರಗಳನ್ನಾದರೂ ಯಾವುದೇ ಪಕ್ಷವಾದರೂ ನೀಡಬೇಕು. ಆದರೆ, ಯಾವ ರಾಜಕೀಯ ಪಕ್ಷವೂ ಒಂದೇ ಒಂದು ಸ್ಥಾನವನ್ನೂ ಕೊಡದಿರುವುದು ಕ್ರೂರ ವ್ಯಂಗ್ಯ. ಇಂಥ ಉದಾಹರಣೆಗಳು ಸಾಕಷ್ಟಿವೆ.
ಪ್ರವರ್ಗ-1ರ ಜಾತಿಗಳು ಮತ್ತು ಪ್ರವರ್ಗ- 2ಎಯಲ್ಲಿರುವ ಜಾತಿಗಳು ಹಾಗೂ ಪ್ರವರ್ಗ-3 ಎ ಮತ್ತು 3ಬಿ ಯಲ್ಲಿರುವ, ಬಲಿಜ ಮತ್ತು ಮರಾಠಾ ಸಮುದಾಯಗಳು ಸೇರಿ 2 ಕೋಟಿ ಅಂದಾಜು ಜನಸಂಖ್ಯೆಯನ್ನು ಹೊಂದಿವೆ. ನ್ಯಾ.ಕುಲದೀಪ್ ಸಿಂಗ್ ಸೂತ್ರದ ಪ್ರಕಾರ ಸರಿಸುಮಾರು 66 ಸ್ಥಾನಗಳನ್ನು ರಾಜಕೀಯ ಪಕ್ಷಗಳು ಇವಕ್ಕೆ ಹಂಚಿಕೆ ಮಾಡಬೇಕು. ಆದರೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಾನಗಳ ಹಂಚಿಕೆಯನ್ನು ಗಮನಿಸಿದಾಗ, ಎಲ್ಲಾ ರಾಜಕೀಯ ಪಕ್ಷಗಳು 30ರಿಂದ 40ರ ಮಿತಿಯಲ್ಲಿಯೇ ಸ್ಥಾನಗಳನ್ನು ಹಂಚಿಕೆ ಮಾಡಿ ಕೈ ತೊಳೆದುಕೊಂಡಿವೆ. ಅಸಂಘಟಿತ ಹಿಂದುಳಿದ ವರ್ಗಗಳು ತಮ್ಮ ಹಕ್ಕನ್ನು ಪಕ್ಷದ ಮುಂದಾಳುಗಳ ಮುಂದೆ ಮಂಡಿಸಲು ಸೋತಿವೆ. ಎಲ್ಲೋ ಸಾಮಾಜಿಕ ನ್ಯಾಯ ಸೊರಗಿದೆ.
ಕರ್ನಾಟಕದ ರಾಜಕೀಯದಲ್ಲಿ ಬಲಿಷ್ಠ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಹಾಗೂ ಪಾರಂಪರಿಕವಾಗಿ ಹೇಗೋ ನುಸುಳಿಕೊಳ್ಳುವ ಹುನ್ನಾರ ಹೊಂದಿರುವ ಬ್ರಾಹ್ಮಣರು, ತಾವು ಹೊಂದಿರುವ ಜನಸಂಖ್ಯೆಯನ್ನು ಮೀರಿ ಪಕ್ಷಗಳಲ್ಲಿ ಸ್ಥಾನಗಳನ್ನು ಗಳಿಸಿ, ನ್ಯಾಯೋಚಿತವಾಗಿ ದಕ್ಕಬೇಕಾದ ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳಲ್ಲಿ ಚುನಾಯಿತರಾಗುತ್ತಿರುವುದರಿಂದ ಸಾಮಾಜಿಕ ಅಸಮತೋಲನ ಮತ್ತು ತಾರತಮ್ಯ ಉಂಟಾಗುತ್ತಿರುವುದನ್ನು ರಾಜಕೀಯ ಪಂಡಿತರೆಲ್ಲಾ ಬಲ್ಲರು. ಇಂಥ ಸಾಮಾಜಿಕ ಅನ್ಯಾಯವನ್ನು ತೊಲಗಿಸಬೇಕೆಂದರೆ, ಈ ಬಲಾಢ್ಯ ಜಾತಿಗಳ ಸಹಕಾರ-ಕಾರುಣ್ಯ ಬೇಕೇ ಬೇಕು. ಇಲ್ಲವಾದರೆ ಶತಶತಮಾನಗಳೇ ಸಂದು ಹೋದರೂ ಅಸಮಾನತೆ ಎಂಬುದು ಅಳಿಯದೆ, ಸಾಮಾಜಿಕ ನ್ಯಾಯದ ಕನಸಿನ ದಾರಿ ದೂರದಲ್ಲೆಲ್ಲೋ ಉಳಿದುಬಿಡುತ್ತದೆ.