ಜನಗಣತಿಯ ಹಣೆಬರಹ ನಿರ್ಧರಿಸಲಿರುವ ಚುನಾವಣೆ
ಮಾಧವ ಐತಾಳ್
ಇದು ಅಧಿಕೃತ ಸುದ್ದಿ-2024ರ ಲೋಕಸಭೆ ಚುನಾವಣೆ ಮುಗಿಯುವವರೆಗೆ ಜನಗಣತಿ ನಡೆಯುವುದಿಲ್ಲ.
ಜಿಲ್ಲೆ, ತೆಹಸಿಲ್ ಮತ್ತು ನಗರಗಳ ಆಡಳಿತಾತ್ಮಕ ಎಲ್ಲೆಯನ್ನು ಅಮಾನತಿನಲ್ಲಿಡುವ ಅಂತಿಮ ದಿನವನ್ನು ಡಿಸೆಂಬರ್ 31, 2023ರವರೆಗೆ ವಿಸ್ತರಿಸಿ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದು, ರಾಜ್ಯ ಸರಕಾರಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿನ ಬದಲಾವಣೆಗಳ ಅಧಿಸೂಚನೆಯ ಪ್ರತಿಯನ್ನು ಜನಗಣತಿ ಕಚೇರಿಗೆ ಕಳಿಸಬೇಕೆಂದು ಸೂಚಿಸಿದ್ದಾರೆ. ಗಣತಿದಾರರಿಗೆ ತರಬೇತಿ ನೀಡಲು ಕನಿಷ್ಠ ಮೂರು ತಿಂಗಳು ಕಾಲಾವಕಾಶ ಮತ್ತು ಜನಗಣತಿಗೆ 30 ಲಕ್ಷ ಸರಕಾರಿ ಅಧಿಕಾರಿಗಳು ಬೇಕಾಗುತ್ತಾರೆ. ಇದೇ ಅಧಿಕಾರಿಗಳು ಲೋಕಸಭೆ ಚುನಾವಣೆ ನಡೆಸಬೇಕಿದೆ ಮತ್ತು, ಚುನಾವಣೆ ಸಂಹಿತೆ ಜಾರಿಯಲ್ಲಿರುವುದರಿಂದ, ಜನಗಣತಿ ಪ್ರಕ್ರಿಯೆ ಎಪ್ರಿಲ್ 2024ಕ್ಕೆ ಆರಂಭವಾಗುವುದಿಲ್ಲ. ಹೊಸ ಸರಕಾರ ಬಂದ ಮೇಲೆ, ಅದು ಇಚ್ಛಿಸಿದಲ್ಲಿ, ಇಚ್ಛಿಸಿದಾಗ ಜನಗಣತಿ ನಡೆಯಲಿದೆ.
ದೇಶದಲ್ಲಿ ಜನಗಣತಿ ಪ್ರಕ್ರಿಯೆ ಆರಂಭಿಸಿದವರು ಲಾರ್ಡ್ ರಿಪ್ಪನ್; ಮೊದಲ ಜನಗಣತಿ ನಡೆದಿದ್ದು 1881ರಲ್ಲಿ. ಹೆನ್ರಿ ವಾಲ್ಟರ್ ಅವರನ್ನು ಜನಗಣತಿಯ ಪಿತಾಮಹ ಎನ್ನಲಾಗುತ್ತದೆ. ಬರ, ಸೋಂಕುರೋಗದ ಹಾವಳಿ, ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ ಮಾತ್ರವಲ್ಲ, ಎರಡನೇ ಮಹಾಯುದ್ಧದ ಸಮಯದಲ್ಲೂ ಜನಗಣತಿ ನಡೆದಿದೆ. ಜನಗಣತಿ ಸಂವಿಧಾನದ ವಿಧಿ 246ರಡಿ ಕೇಂದ್ರಕ್ಕೆ ಸಂಬಂಧಿಸಿದ ವಿಷಯ; ಏಳನೇ ಪರಿಶಿಷ್ಟದ 69ನೇ ಅಂಶ. 2021ರ ಜನಗಣತಿಗೆ ಸಿದ್ಧತೆ 2020ರಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಆಗ ಹಲವು ದೇಶಗಳು ಜನಗಣತಿ ಮುಂದೂಡಿದ್ದವು. ಆದರೆ, ಈ ದೇಶಗಳೆಲ್ಲವೂ ಜನಗಣತಿ ನಡೆಸಿವೆ-ನಮ್ಮನ್ನು ಹೊರತುಪಡಿಸಿ.
ಒಕ್ಕೂಟ ಸರಕಾರಕ್ಕೆ ಜನಗಣತಿಯನ್ನು ನಡೆಸಲು ಆಸಕ್ತಿಯಿಲ್ಲ ಎಂಬುದರ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಫೆಬ್ರವರಿ 7, 2020ರಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಮಾರ್ಚ್ 28, 2019ರ ರಾಜ್ಯಪತ್ರದಲ್ಲಿ ಜನಗಣತಿಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. 2011ರ ಜನಗಣತಿಯನ್ನು ಆಧರಿಸಿದ, 2011-2036ರವರೆಗಿನ ಜನಸಂಖ್ಯೆಯ ಅಂದಾಜು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಜನಸಂಖ್ಯೆ ಅಂದಾಜು ತಾಂತ್ರಿಕ ಗುಂಪಿನ ವರದಿಯಲ್ಲಿ ಲಭ್ಯವಿದೆ ಎಂದು ಹೇಳಿದ್ದರು. ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ, ‘‘ಜನಗಣತಿಯನ್ನು ಡಿಜಿಟಲ್ ಮಾದರಿಯಲ್ಲಿ ಕರಾರುವಾಕ್ಕಾಗಿ ನಡೆಸಲಾಗುತ್ತದೆ ಮತ್ತು ಇದರ ಮೂಲಕ ಮತದಾರರ ಪಟ್ಟಿ, ಆಧಾರ್, ಪಡಿತರ ಚೀಟಿ, ಪಾಸ್ಪೋರ್ಟ್, ಡಿಎಲ್(ಚಾಲನಾ ಪರವಾನಿಗೆ) ಇತ್ಯಾದಿಯನ್ನು ಮೇಲ್ದರ್ಜೆಗೇರಿಸಲಾಗುತ್ತದೆ’’ ಎಂದು ಹೇಳಿದ್ದರು. ಆದರೆ, ಜನಗಣತಿ ಯಾವಾಗ ನಡೆಯುತ್ತದೆ ಎಂದು ಹೇಳಲಿಲ್ಲ.
ಜನಗಣತಿ ಎಂದರೇನು ಮತ್ತು ಏಕೆ ಬೇಕು?
ನಿರ್ದಿಷ್ಟ ಕಾಲಘಟ್ಟದಲ್ಲಿ ದೇಶದ ಜನಸಂಖ್ಯೆ, ಆರ್ಥಿಕ ಮತ್ತು ಸಾಮಾಜಿಕ ಅಂಕಿಅಂಶಗಳ ಸಂಗ್ರಹ, ಸಂಕಲನ, ವಿಶ್ಲೇಷಣೆ ಮತ್ತು ಪ್ರಸಾರ ಮಾಡುವ ಕ್ರೋಡೀಕೃತ ಪ್ರಕ್ರಿಯೆಯೇ ಜನಗಣತಿ. ಜನಸಂಖ್ಯೆ, ಭೌಗೋಳಿಕ ಹಾಗೂ ಆರ್ಥಿಕ ಬದಲಾವಣೆಗಳನ್ನು ದಾಖಲಿಸಲಿದ್ದು, ದೇಶಿ ಜನಗಣತಿಯು ಜಗತ್ತಿನ ಅತ್ಯಂತ ದೊಡ್ಡ ಆಡಳಿತಾತ್ಮಕ ಪ್ರಕ್ರಿಯೆ ಎನ್ನಲಾಗಿದೆ. ಸಂಶೋಧಕರು/ಅರ್ಥಶಾಸ್ತ್ರಜ್ಞರು/ಯೋಜನಾ ತಜ್ಞರು ಈ ಅಂಕಿಅಂಶ ಆಧರಿಸಿ, ಬೆಳವಣಿಗೆ ಮತ್ತು ಜನಸಂಖ್ಯೆಯ ಚಲನೆಯನ್ನು ವಿಶ್ಲೇಷಿಸುತ್ತಾರೆ ಮತ್ತು ಭವಿಷ್ಯದಲ್ಲಿ ಆಗಬಹುದಾದ ಹೆಚ್ಚಳ/ಕುಸಿತವನ್ನು ಅಂದಾಜಿಸುತ್ತಾರೆ.
ಆಡಳಿತ, ಯೋಜನೆ ಮತ್ತು ಕಾರ್ಯನೀತಿಯನ್ನು ರೂಪಿಸಲು ಹಾಗೂ ಸರಕಾರದ ನಾನಾ ಕಾರ್ಯಕ್ರಮಗಳ ಮೌಲ್ಯಮಾಪನ ಮತ್ತು ನಿರ್ವಹಣೆಗೆ ಜನಸಂಖ್ಯೆಯ ಅಂಕಿಅಂಶ ಬಳಕೆಯಾಗುತ್ತದೆ. ವಿತ್ತ ಆಯೋಗ ಜನಸಂಖ್ಯೆಯನ್ನು ಆಧರಿಸಿ, ರಾಜ್ಯಗಳಿಗೆ ಅನುದಾನ ನಿಗದಿಪಡಿಸುತ್ತದೆ. ಗಡಿ ನಿರ್ಧಾರ, ಕ್ಷೇತ್ರಗಳ ಎಲ್ಲೆ ಗುರುತಿಸುವಿಕೆ, ಸ್ಥಳೀಯ ಸಂಸ್ಥೆಗಳು/ವಿಧಾನಸಭೆ/ಸಂಸತ್ತಿಗೆ ಜನಪ್ರತಿನಿಧಿಗಳನ್ನು ನಿಗದಿಗೊಳಿಸಲು ಬಳಕೆಯಾಗುತ್ತದೆ. ಉದ್ಯಮ- ಮಾರುಕಟ್ಟೆಗಳು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಲು ಮತ್ತು ಈವರೆಗೆ ತಲುಪಲು ಆಗದ ಸ್ಥಳಗಳಿಗೆ ತಮ್ಮ ವಿತರಣೆ ಜಾಲವನ್ನು ವಿಸ್ತರಿಸಲು ನೆರವಾಗುತ್ತದೆ. ಜನಗಣತಿ ಜನಸಂಖ್ಯೆಯನ್ನು ಮಾತ್ರವಲ್ಲ; ದೇಶದಲ್ಲಿ ಜನರ ಹಂಚಿಕೆ ಹೇಗಿದೆ ಎಂಬುದನ್ನೂ ತಿಳಿಸುತ್ತದೆ. ಜನಸಂಖ್ಯೆ ಪ್ರಮಾಣ-ಹಂಚಿಕೆ ಕುರಿತ ಮಾಹಿತಿ ಇಲ್ಲದೆ ರೂಪಿಸಿದ ಕಾರ್ಯಕ್ರಮಗಳು ನಂಬಿಕೆಗೆ ಅರ್ಹವಾಗಿರುವುದಿಲ್ಲ; ಜೊತೆಗೆ, ಲೋಪದಿಂದ ಕೂಡಿರುತ್ತವೆ.
ರಾಜ್ಯಗಳು ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತವೆ ಮತ್ತು ಮೂಲಸೌಕರ್ಯ ನಿರ್ಮಾಣ, ಶಿಕ್ಷಣ-ಆರೋಗ್ಯ ಮತ್ತಿತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತವೆ. ಇಂಥ ಹೂಡಿಕೆಗಳು ಫಲ ನೀಡಿವೆಯೇ ಎಂದು ಮೌಲ್ಯಮಾಪನ ಮಾಡಬೇಕಾಗುತ್ತದೆ. ಇದಕ್ಕಾಗಿ ಸಮೀಕ್ಷೆಗಳು ನಡೆಯುತ್ತವೆ. ಜನಸಂಖ್ಯೆಯ ಹಂಚಿಕೆ, ಲಿಂಗ, ವಯಸ್ಸು, ಧರ್ಮ, ಪ್ರಾಂತ ಮತ್ತು ಜಾತಿ ಇತ್ಯಾದಿ ಮಾಹಿತಿ ನಿಷ್ಕೃಷ್ಟವಾಗಿದ್ದರೆ ಮಾತ್ರ ಇಂಥ ಸಮೀಕ್ಷೆಗಳು ಸರಿಯಾದ ಫಲಿತಾಂಶ ನೀಡುತ್ತವೆ. ಇದನ್ನು ಆಧರಿಸಿ, ಕೇಂದ್ರ-ರಾಜ್ಯ ಸರಕಾರಗಳು ಯೋಜನೆ-ಕಾರ್ಯಕ್ರಮಗಳನ್ನು ರೂಪಿಸುತ್ತವೆ.
ಜನಸಂಖ್ಯೆಯ ಕರಾರುವಾಕ್ ಮಾಹಿತಿ ಇಲ್ಲದಿದ್ದರೆ, ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆ ಮೇಲೆ ಪರಿಣಾಮ ಆಗಲಿದೆ. ನವೆಂಬರ್ 2017ರಲ್ಲಿ ರಚನೆಯಾದ 15ನೇ ಹಣಕಾಸು ಆಯೋಗದ ಶಿಫಾರಸುಗಳು 2011ರ ಜನಗಣತಿಯನ್ನು ಆಧರಿಸಿದ್ದು, 2025-26ರವರೆಗೆ ಅನ್ವಯವಾಗಲಿವೆ. ಜನಸಂಖ್ಯೆಯ ಖಚಿತ ಅಂಕಿಅಂಶಗಳಿಲ್ಲದೆ, ಕೇಂದ್ರದಿಂದ ರಾಜ್ಯಗಳಿಗೆ ಅನುದಾನ ವರ್ಗಾವಣೆ ಹಾಗೂ ಇನ್ನಿತರ ಅನುದಾನಗಳನ್ನು ನಿರ್ಧರಿಸಲು ಸಾಧ್ಯವಿಲ್ಲ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್ಎಫ್ಎಚ್ಎಸ್), ನಿರುದ್ಯೋಗ ಪ್ರಮಾಣ, ಬಡತನ ಇನ್ನಿತರ ಆರ್ಥಿಕ ಸಮೀಕ್ಷೆ ನಡೆಸುವ ಸಿಎಂಐಇ(ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ) ಕೂಡ 2011ರ ಜನಗಣತಿಯನ್ನು ಆಧರಿಸಿ, 2023ರ ಪ್ರಾತಿನಿಧಿಕ ಸ್ಯಾಂಪಲ್ಗಳನ್ನು ರೂಪಿಸಬೇಕಾಗಿ ಬಂದಿದೆ. ನಿಖರ ಅಂಕಿಅಂಶ ಇಲ್ಲದೆ ಇರುವುದರಿಂದ, ಇಂಥ ಸ್ಯಾಂಪಲ್ಗಳು ನಂಬಿಕಾರ್ಹವಾಗಿರುವುದಿಲ್ಲ. ಕಳೆದ 10 ವರ್ಷದಲ್ಲಿ ನಿರುದ್ಯೋಗ ಹೆಚ್ಚಿದೆಯೇ/ಕಡಿಮೆಯಾಗಿದೆಯೇ? ತಲಾದಾಯ ಹೆಚ್ಚಿದೆಯೇ/ಕಡಿಮೆಯಾಗಿದೆಯೇ? ತಾನು 81 ಕೋಟಿ ಜನರಿಗೆ ಉಚಿತ ಧಾನ್ಯ ನೀಡುತ್ತಿರುವುದಾಗಿ ಒಕ್ಕೂಟ ಸರಕಾರ ಹೇಳಿಕೊಳ್ಳುತ್ತಿದೆ. ಇದು ಎಷ್ಟು ನಿಜ? ಇದರ ಪರಿಶೀಲನೆ ಹೇಗೆ? ಸರಕಾರ ಹೇಳಿಕೊಳ್ಳುವ ಸಾಧನೆಗಳನ್ನು ಒರೆಗೆ ಹಚ್ಚಲು ಮೂಲವೊಂದು ಇಲ್ಲವಾಗಿದೆ.
ಹೀಗಿದ್ದರೂ, ಒಕ್ಕೂಟ ಸರಕಾರ ಏಕೆ ಜನಗಣತಿಗೆ ಮುಂದಾಗುತ್ತಿಲ್ಲ? ರಾಷ್ಟ್ರೀಯ ಅಂಕಿಅಂಶ ಸಂಸ್ಥೆ(ಎನ್ಎಸ್ಒ) ದೇಶದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಂತ ಹೆಚ್ಚು ಇದೆ ಎಂದು 2018ರ ಅಂತ್ಯಭಾಗದಲ್ಲಿ ಹೇಳಿತ್ತು. ಸರಕಾರ ಈ ಅಪ್ರಿಯ ವರದಿಯನ್ನು ಮುಚ್ಚಿಟ್ಟಿತು. ಈ ವರದಿ ಪ್ರಕಟಗೊಂಡಿದ್ದು 2019ರ ಚುನಾವಣೆ ಮುಗಿದ ಬಳಿಕ! ತನ್ನ ರಾಜಕೀಯ ಮತ್ತು ಪ್ರಚಾರಕ್ಕೆ ಅನುಕೂಲಕರವಲ್ಲದ ಅಂಕಿಅಂಶಗಳು ಬಹಿರಂಗಗೊಳ್ಳುತ್ತವೆ ಎಂಬ ಆತಂಕ ಜನಗಣತಿ ನಡೆಸದೆ ಇರಲು ಕಾರಣ ಇರಬಹುದು.
ಜನಗಣತಿಯ ಮಹತ್ವವನ್ನು ತಿಳಿಸುವ ಎರಡು ಉದಾಹರಣೆಗಳನ್ನು ನೋಡಿ: 2011ರ ಜನಗಣತಿಯು ಗ್ರಾಮೀಣ ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಕುಸಿತವನ್ನು ದಾಖಲಿಸಿತ್ತು. ನಗರ ಪ್ರದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ.30 ಮಂದಿ ನೆಲೆಸಿದ್ದಾರೆ. 2001-2011ರ ಅವಧಿಯಲ್ಲಿ ಚದರ ಕಿ.ಮೀ.ಗೆ 400 ಮಂದಿ ಇರುವಂಥ ನಗರಗಳ ಸಂಖ್ಯೆ 1,362ರಿಂದ 3,894ಕ್ಕೆ ಹೆಚ್ಚಳಗೊಂಡಿದೆ. ಸಣ್ಣ ಪ್ರಮಾಣದ ಭೂಮಿ ಇರುವವರು ಮತ್ತು ನಿರುದ್ಯೋಗಿಗಳು ಕೂಡ ಕೃಷಿಯನ್ನು ತೊರೆಯುತ್ತಿದ್ದಾರೆ ಅಥವಾ ಕೃಷಿಯೇತರ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 1970ರಲ್ಲಿ ಗ್ರಾಮೀಣ ಕುಟುಂಬಗಳ 3/4ರಷ್ಟು ಆದಾಯ ಕೃಷಿಯಿಂದ ಬರುತ್ತಿತ್ತು. 45 ವರ್ಷಗಳ ಬಳಿಕ(2015ರಲ್ಲಿ) ಅದು 1/3ಕ್ಕಿಂತ ಕಡಿಮೆ ಆಯಿತು ಎಂಬ ಮಾಹಿತಿ ಬಹಿರಂಗಗೊಂಡಿತು. ಎರಡನೆಯ ಉದಾಹರಣೆ- ವಲಸಿಗರ ಕುರಿತದ್ದು. ಕೋವಿಡ್ ಸಮಯದಲ್ಲಿ ಸ್ವಂತ ಊರಿಗೆ ಸಿಕ್ಕ ವಾಹನಗಳಲ್ಲಿ ಇಲ್ಲವೆ ನಡೆದೇ ಸ್ವಂತ ಊರಿಗೆ ಹೊರಟು ಮಾರ್ಗಮಧ್ಯದಲ್ಲೇ ಜೀವ ಕಳೆದುಕೊಂಡ ವಲಸಿಗರ ಫೋಟೊಗಳು ನಿಮ್ಮ ನೆನಪಿನಲ್ಲಿ ಉಳಿದಿರಬಹುದು. ದೇಶದಲ್ಲಿ 454 ದಶಲಕ್ಷ ವಲಸಿಗರಿದ್ದು, ಇವರಲ್ಲಿ 54 ದಶಲಕ್ಷ ಮಂದಿ ಅಂತರ್ರಾಜ್ಯ ವಲಸಿಗರು. ಆದರೆ, ಇದು ಬಹಳ ಕಡಿಮೆ ಅಂದಾಜು. ರಾಜ್ಯಗಳಿಂದ ರಾಜ್ಯಗಳಿಗೆ ಮಾತ್ರವಲ್ಲದೆ, ರಾಜ್ಯವೊಂದರ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಹೋಗುವವರಿದ್ದಾರೆ. ಈ ವಲಸಿಗರು ಒಟ್ಟು ಜಿಡಿಪಿಯಲ್ಲಿ ಶೇ.10ರಷ್ಟು ಪಾಲು ನೀಡುತ್ತಾರೆ.
ರಾಜಕೀಯ ಆಖ್ಯಾನ
ದೇಶದಲ್ಲಿ ಕ್ರಿಶ್ಚಿಯನ್/ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ; ಮುಸ್ಲಿಮ್ ಬಾಹುಳ್ಯದ ರಾಷ್ಟ್ರವಾಗಲಿದೆ ಎಂಬುದು ಬಿಜೆಪಿ ಮುಂದೊತ್ತುತ್ತಿರುವ ಆಖ್ಯಾನ. ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಳ ಎನ್ನುವುದು ಮಿಥ್ಯೆ. 2011ರ ಜನಗಣತಿ ಪ್ರಕಾರ, ಒಟ್ಟು ಜನಸಂಖ್ಯೆ 121.09 ಕೋಟಿ. ಇದರಲ್ಲಿ ಹಿಂದೂಗಳು 96.63 ಕೋಟಿ(ಶೇ.79.8), ಮುಸ್ಲಿಮ್ 17.22 ಕೋಟಿ(ಶೇ.14.2), ಕ್ರಿಶ್ಚಿಯನ್ 2.78 ಕೋಟಿ(ಶೇ.2.3), ಸಿಖ್ 2.08 ಕೋಟಿ(ಶೇ.1.7) ಹಾಗೂ ಇನ್ನಿತರರು(ಬೌದ್ಧಮತೀಯರು 0.84 ಕೋಟಿ, ಜೈನರು 0.45 ಕೋಟಿ, ಇತರ ಧರ್ಮಗಳು ಹಾಗೂ ಧಾರ್ಮಿಕ ನಂಬಿಕೆಯವರು 0.79 ಕೋಟಿ, ಧರ್ಮವನ್ನು ಉಲ್ಲೇಖಿಸದವರು 0.29 ಕೋಟಿ). ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ(ಯುಎನ್ಎಫ್ಪಿಎ) ಪ್ರಕಾರ, ದೇಶದ ಜನಸಂಖ್ಯೆ 142.86 ಕೋಟಿ. ಇದರಲ್ಲಿ ಹಿಂದೂಗಳು 111 ಕೋಟಿ(ಶೇ.78.9), ಮುಸ್ಲಿಮ್ 22 ಕೋಟಿ(ಶೇ.15), ಕ್ರಿಶ್ಚಿಯನ್ 3.22 ಕೋಟಿ, ಸಿಖ್ 2.38 ಕೋಟಿ. ಪ್ಯೂ ರಿಸರ್ಚ್ ಸೆಂಟರ್ ಅನ್ವಯ, 1951ರಿಂದ 2011ರ ಅವಧಿಯಲ್ಲಿ ಹಿಂದೂಗಳ ಸಂಖ್ಯೆ 30.4 ಕೋಟಿಯಿಂದ 96.6 ಕೋಟಿಗೆ, ಮುಸ್ಲಿಮರ ಸಂಖ್ಯೆ 3.5 ಕೋಟಿಯಿಂದ 17.2 ಕೋಟಿಗೆ, ಕ್ರಿಶ್ಚಿಯನ್ನರ ಸಂಖ್ಯೆ 0.8 ಕೋಟಿಯಿಂದ 2.8 ಕೋಟಿಗೆ ಹೆಚ್ಚಳಗೊಂಡಿದೆ. 1990ರ ಬಳಿಕ ಜನಸಂಖ್ಯೆ ಹೆಚ್ಚಳ ದರ ಕಡಿಮೆಯಾಗಿದೆ(ಪಾಪ್ಯುಲೇಷನ್ ಗ್ರೋತ್ ಆ್ಯಂಡ್ ರಿಲಿಜಿಯಸ್ ಕಂಪೊಸಿಷನ್-ಸ್ಟೆಫಾನೀ ಕ್ರೇಮರ್).ಇದು ಏನನ್ನು ತೋರಿಸುತ್ತದೆ?
ಅಸ್ಸಾಮಿನ ಕರಡು ಪ್ರಸ್ತಾಪ
‘‘ಜನಗಣತಿ ಡಿಜಿಟಲ್ ಆಗಿರಲಿದ್ದು, 2 ಹಂತದಲ್ಲಿ ನಡೆಯಲಿದೆ. ಮೊದಲಿಗೆ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಮನೆಗಳ ಗಣತಿ ನಡೆಯುತ್ತದೆ. ಆನಂತರ ಜನಗಣತಿ. ಮೊದಲ ಹಂತದ ಗಣತಿ ಬಳಿಕ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್(ಎನ್ಪಿಆರ್)ನ್ನು ಅಪ್ಡೇಟ್ ಮಾಡಲಾಗುತ್ತದೆ’’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದು ಅಪಾಯದ ಮುನ್ಸೂಚನೆ. ಎನ್ಪಿಆರ್ ದೇಶದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆ(ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ರಿಜಿಸ್ಟರ್(ಎನ್ಆರ್ಸಿ)ನ ಮೊದಲ ಹೆಜ್ಜೆ. ದೇಶದಲ್ಲಿ ನೆಲೆಸಿರುವ ದಾಖಲೆರಹಿತ ವಲಸಿಗರನ್ನು ಗುರುತಿಸುವ ಉದ್ದೇಶ ಹೊಂದಿದೆ.
ಇದರ ವಿಸ್ತರಣೆಯನ್ನು ಚುನಾವಣೆ ಆಯೋಗ ಜೂನ್ 20ರಂದು ಪ್ರಕಟಿಸಿದ ಅಸ್ಸಾಮಿನ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಎಲ್ಲೆ ಗುರುತಿಸುವಿಕೆ ಕರಡು ಪ್ರಸ್ತಾವದಲ್ಲಿ ನೋಡಬಹುದು. ಅಕ್ರಮ ವಲಸೆಕೋರರು ಎಂದು ಕರೆಸಿಕೊಳ್ಳುವ ಬಂಗಾಳ ಮೂಲದ ಮುಸ್ಲಿಮ್ ಸಮುದಾಯದವರು ಬಹುಸಂಖ್ಯಾತರಾಗಿರುವ ಮತ್ತು ಪ್ರತಿಪಕ್ಷಗಳ ಶಾಸಕರು ಆಯ್ಕೆಯಾಗಿರುವ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ/ವರ್ಗಕ್ಕೆ ಮೀಸಲುಗೊಳಿಸುವ ಅಂಶ ಪ್ರಸ್ತಾವದಲ್ಲಿದೆ. ಇಂಥ ಕ್ಷೇತ್ರಗಳನ್ನು ಒಂದೋ ಸಂಯೋಜಿಸುವ ಇಲ್ಲವೇ ಹೊಸದಾಗಿ ಸೃಷ್ಟಿಯಾಗಲಿರುವ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಲಾಗುತ್ತದೆ. ಅಸ್ಸಾಮಿನಲ್ಲಿ ಮೂಲವಾಸಿಗಳು ಮೇಲುಗೈ ಗಳಿಸಬೇಕು ಎನ್ನುವ ಬಿಜೆಪಿ ಕಾರ್ಯಸೂಚಿಗೆ ಈ ಪ್ರಸ್ತಾವ ಅನುಗುಣವಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ‘‘ಮೂಲವಾಸಿಗಳಿಗೆ ಕನಿಷ್ಠ 100 ಸ್ಥಾನ ಮೀಸಲು ನೀಡಬೇಕು’’ ಎಂದು ಹೇಳಿದ್ದಾರೆ. ಅಸ್ಸಾಮ್ 126 ಶಾಸಕರು, 14 ಸಂಸದರು ಹಾಗೂ 7 ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡುತ್ತದೆ. ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ 4.22 ಕೋಟಿ(ಶೇ.34.22). ಇದರಲ್ಲಿ 3/4ರಷ್ಟು ಬಂಗಾಳ ಮೂಲದ ಮುಸ್ಲಿಮರಿದ್ದಾರೆ. ಮುಸ್ಲಿಮರು 35 ವಿಧಾನಸಭೆ ಹಾಗೂ 6 ಲೋಕ ಸಭೆ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು. ಪ್ರಸಕ್ತ 39 ಮುಸ್ಲಿಮ್ ಶಾಸಕರಿದ್ದು, ಬಿಜೆಪಿ ಪಾಲು ಶೂನ್ಯ. ಒಂದುವೇಳೆ ಪ್ರಸ್ತಾವ ಕಾಯ್ದೆಯಾದರೆ, ಅಲ್ಪಸಂಖ್ಯಾತರು ಅಧಿಕಾರದಿಂದ ವಂಚಿತರಾಗುತ್ತಾರೆ; ಕ್ರಮೇಣ ನಿರ್ಲಕ್ಷಿತರಾಗುತ್ತಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. 38 ಪಕ್ಷಗಳನ್ನು ಒಂದೆಡೆ ತಂದಿದೆ. ಅಸ್ಸಾಮ್ ರಾಜ್ಯದಲ್ಲಿ ಪ್ರತ್ಯೇಕತೆಯ ದಾಳ ಎಸೆದಿದೆ. ಸಾಕುಪ್ರಾಣಿಗಳು, ವನ್ಯಜೀವಿಗಳು ಮಾತ್ರವಲ್ಲದೆ, ಹಕ್ಕಿಗಳ ಗಣತಿ ಕೂಡ ನಡೆಸುವ ತಂತ್ರಜ್ಞಾನ ಲಭ್ಯವಿರುವ ಕಾಲಮಾನದಲ್ಲಿ ಜನಗಣತಿ ನಡೆಸುವುದು ಕಷ್ಟವೇನಲ್ಲ: ಆದರೆ, ಸರಕಾರಕ್ಕೆ ಅದು ಬೇಕಿಲ್ಲ. 1948ರ ಭಾರತೀಯ ಜನಗಣತಿ ಕಾಯ್ದೆಯು ‘ತಿಳಿಯಪಡಿಸಿದ ಅವಧಿಯೊಳಗೆ ಜನಗಣತಿ ನಡೆಸಬೇಕು ಮತ್ತು ಫಲಿತಾಂಶ ಪ್ರಕಟಿಸಬೇಕು’ ಎಂದು ಕಡ್ಡಾಯಗೊಳಿಸಿಲ್ಲ. ಹಾಗೆಂದ ಮಾತ್ರಕ್ಕೆ ಸರಕಾರ ತನಗೆ ಇಷ್ಟ ಬಂದಾಗ ನಡೆಸಬಹುದು ಎಂದಲ್ಲ. ಲೋಕಸಭೆ ಚುನಾವಣೆಯ ಫಲಿತಾಂಶ ಜನಗಣತಿಯ ಹಣೆಬರಹ ನಿರ್ಧರಿಸಲಿದೆ.