ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆ ಎರಡೂ ಸಾಧ್ಯ
ದಲಿತ-ಮುಸ್ಲಿಮ್ ಜಂಟಿ ಸಹಭಾಗಿತ್ವ
ಇತ್ತೀಚೆಗೆ ಹಿಂದೂ ರಾಷ್ಟ್ರೀಯತಾವಾದಿ ಎಂದೇ ಕರೆಸಿಕೊಂಡಿರುವ ವಿ.ಡಿ.ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್, ''ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರ ಹೇರಿ, ಹಿಂದೂಗಳು ಹಿಂದೂ ವರ್ತಕರೊಂದಿಗೇ ವ್ಯವಹರಿಸಲು ಮುಂದಾಗಬೇಕು'' ಎಂದು ವಿವಾದಾತ್ಮಕ ಕರೆ ನೀಡಿದ್ದಾರೆ. ಇದಕ್ಕೂ ಮುನ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಸಂಚಾಲಕ ಮೋಹನ್ ಭಾಗವತ್ ಅವರು, ''ಮುಸ್ಲಿಮರು ಮೂಲತಃ ದಲಿತರೇ ಆಗಿದ್ದು, ಅವರು ತಮ್ಮ ಸ್ವಧರ್ಮಕ್ಕೆ ಮರಳಬೇಕು'' ಎಂದು ಕರೆ ನೀಡಿದ್ದರು. ಈ ಎರಡೂ ಹೇಳಿಕೆಗಳಲ್ಲಿ ಮೇಲ್ನೋಟಕ್ಕೆ ವೈರುಧ್ಯ ಕಂಡರೂ, ಎರಡೂ ಹೇಳಿಕೆಗಳಿಗೂ ನೇರಾನೇರ ಸಂಬಂಧವಿದೆ. ಅದು, ಮುಸ್ಲಿಮರ ಮೇಲಿನ ಅಸಹನೆ, ಈ ನೆಲದ ಮೂಲನಿವಾಸಿಗಳಾದ ದಲಿತರ ಮೇಲಿನ ಅಸಹನೆ ಎಂಬುದು. ಮೊಗಲರು ಭಾರತದಲ್ಲಿ ಮತಾಂತರ ಶುರು ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ಮತಾಂತರವಾಗಿದ್ದು ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯಿಂದ ನಲುಗಿ ಹೋಗಿದ್ದ ದಲಿತರು. ಹೀಗೆ ಇಸ್ಲಾಮ್ ಧರ್ಮಕ್ಕೆ ಮತಾಂತರವಾದ ದಲಿತರು ಕಾಲಾಂತರದಲ್ಲಿ ತಮ್ಮದೇ ಆದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಸ್ಮಿತೆ ಹೊಂದಿದರು. ಇದು ಸಹಜವಾಗಿಯೇ ಶ್ರೇಣೀಕೃತ ವ್ಯವಸ್ಥೆಯ ನಿರ್ಮಾತೃಗಳಾಗಿದ್ದ ವೈದಿಕರಲ್ಲಿ ಇನ್ನಿಲ್ಲದ ಅಸಹನೆ ಉಂಟು ಮಾಡಿತ್ತು. ಈ ಅಸಹನೆಯ ಕಾರ್ಯಸೂಚಿಗೆ ಸಾಂಸ್ಥಿಕ ಸ್ವರೂಪ ನೀಡಿದ್ದು ಸಂಘ ಪರಿವಾರ. ಸರಿಸುಮಾರು ಒಂದು ಶತಮಾನದ ಇತಿಹಾಸ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು, ತಮ್ಮ ಹಿಂದೂ ರಾಷ್ಟ್ರೀಯವಾದಿ ಕಾರ್ಯಸೂಚಿಯನ್ನು ಬ್ರಿಟಿಷರ ಕಾಲದಲ್ಲೇ ಬಿತ್ತಿತ್ತಾದರೂ, ಅದು ಬೆಳೆದು ಹೆಮ್ಮರವಾಗಿದ್ದು 1990ರಲ್ಲಿ ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ನಡೆಸಿದ ರಾಮ ರಥಯಾತ್ರೆಯ ನಂತರ.
ಅಲ್ಲಿಯವರೆಗೂ ತನ್ನ ಹಿಂದೂ ರಾಷ್ಟ್ರೀಯವಾದಿ ಕಾರ್ಯಸೂಚಿಯನ್ನು ಜಾರಿಗೊಳಿಸಲು ರಾಜಕೀಯ ಅಧಿಕಾರ ಪಡೆಯುವಲ್ಲಿ ವಿಫಲವಾಗಿದ್ದ ಬಿಜೆಪಿ, 1999ರಲ್ಲಿ ಅದನ್ನೂ ಯಶಸ್ವಿಯಾಗಿ ದಕ್ಕಿಸಿಕೊಂಡಿತು. ಇದಾದ ನಂತರ ಸಂಘ ಪರಿವಾರದ ಜಾಲ ಇಡೀ ದೇಶವನ್ನೇ ವಿಸ್ತರಿಸಿತು. ಇದರೊಂದಿಗೆ ಮುಸ್ಲಿಮ್ ವಿರೋಧವನ್ನು ತನ್ನ ಪ್ರಮುಖ ಕಾರ್ಯಸೂಚಿ ಯಾಗಿಸಿಕೊಂಡ ಸಂಘ ಪರಿವಾರ, ದೇಶದ ದಶದಿಕ್ಕಿನಲ್ಲೂ ಅದನ್ನು ಪರಿಣಾಮಕಾರಿಯಾಗಿ ಹರಡುವಲ್ಲಿ ಯಶಸ್ವಿಯಾಯಿತು. ಅದರ ಫಲವಾಗಿ ಕಳೆದ ಒಂಭತ್ತು ವರ್ಷಗಳಿಂದ ಸಂಘ ಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿ ಕೇಂದ್ರ ಸರಕಾರದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಬಲದಿಂದ ಸಂವಿಧಾನ ವಿರೋಧಿ ಹೇಳಿಕೆಗಳು, ಮುಸ್ಲಿಮ್ ವಿರೋಧಿ ಹೇಳಿಕೆಗಳು, ದಲಿತರ ಮೇಲಿನ ದೌರ್ಜನ್ಯಗಳು ಎಗ್ಗಿಲ್ಲದಂತೆ ಮುಂದುವರಿದಿವೆ.
ಇಡೀ ಭಾರತದಲ್ಲಿ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಮುಸ್ಲಿಮ್ ಸಮುದಾಯ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ಸಮುದಾ ಯವಾಗಿಯೇ ಮುಂದುವರಿದಿದೆ. ಅದಕ್ಕಿರುವ ಪ್ರಮುಖ ಕಾರಣ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿರುವ ದಲಿತರು ಈಗಲೂ ಆರ್ಥಿಕ ದುರ್ಬಲ ಸಮುದಾಯವಾಗಿ ಮುಂದುವರಿದಿರುವುದು. ಇದಕ್ಕೆ ಕಲಶವಿಟ್ಟಂತೆ ಈ ಸಮುದಾಯದಲ್ಲಿ ಅನಕ್ಷರತೆ ಕೂಡಾ ದೊಡ್ಡ ಪ್ರಮಾಣದಲ್ಲಿದೆ. ಮುಸ್ಲಿಮರಂತೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮತ್ತೊಂದು ಸಮುದಾಯ ದಲಿತರು. ಇಡೀ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ, ದೇಶದ ಬಹುತೇಕ ಭಾಗಗಳಲ್ಲಿ ತಮ್ಮ ಅಸ್ತಿತ್ವ ಹೊಂದಿದ್ದರೂ ಈಗಲೂ ಸಾಮಾಜಿಕ ಬಹಿಷ್ಕಾರ, ದೈಹಿಕ ದೌರ್ಜನ್ಯ ಹಾಗೂ ಅತ್ಯಾಚಾರಗಳಿಗೆ ಈಡಾಗುತ್ತಿರುವ ಏಕೈಕ ಸಮುದಾಯ ದಲಿತರದ್ದು. ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹೇರಬೇಕು ಎಂಬುದು ತೀರಾ ಇತ್ತೀಚಿನ ಮನಸ್ಥಿತಿಯಾಗಿದ್ದರೆ, ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರಗಳನ್ನು ಸಾವಿರಾರು ವರ್ಷಗಳಿಂದ ಅನುಭವಿಸಿಕೊಂಡು ಬಂದ ಇತಿಹಾಸ ದಲಿತರದ್ದು. ಗ್ರಾಮೀಣ ಭಾಗಗಳಲ್ಲಿ ಈ ಪರಿಸ್ಥಿತಿ ಇನ್ನೂ ಅಂತ್ಯಗೊಂಡಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಮತ್ತಷ್ಟು ಕಠಿಣ ಸ್ವರೂಪ ಪಡೆಯುತ್ತಿದೆ. ಕರ್ನಾಟಕದ ಮಟ್ಟಿಗೇ ಹೇಳುವುದಾದರೆ, ಸೋರಿಕೆಯಾಗಿರುವ ಕಾಂತರಾಜು ಆಯೋಗದ ಜಾತಿ ಜನಗಣತಿ ವರದಿಯ ಪ್ರಕಾರ, ದಲಿತರ ಜನಸಂಖ್ಯೆ 1.08 ಕೋಟಿಯಷ್ಟಿದ್ದರೆ, ಮುಸ್ಲಿಮರ ಜನಸಂಖ್ಯೆ 75 ಲಕ್ಷದಷ್ಟಿದೆ. ದುರಂತವೆಂದರೆ, ಈ ಎರಡು ಸಮುದಾಯಗಳು ರಾಜಕೀಯ ದಿಕ್ಕನ್ನು ನಿರ್ಣಯಿಸುವಲ್ಲಿ ಇಂದಿಗೂ ನಿರ್ಣಾಯಕವಾಗಿಲ್ಲ. ಅದಕ್ಕೆ ಬಲವಾದ ಕಾರಣವೂ ಇದೆ. ದಲಿತರ ಜನಸಂಖ್ಯೆಯೇ ರಾಜ್ಯಾದ್ಯಂತ 1.08 ಕೋಟಿಯಷ್ಟಿದ್ದರೂ, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಹರಿದು ಹಂಚಿ ಹೋಗಿದ್ದಾರೆ. ಮುಸ್ಲಿಮರು ಕೂಡಾ ರಾಜ್ಯಾದ್ಯಂತ ತಮ್ಮ ಅಸ್ತಿತ್ವ ಹೊಂದಿದ್ದಾರೆ. ಇದರಿಂದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲೂ ನಿರ್ಣಾಯಕರಾಗುವ ಸ್ಥಿತಿಯಲ್ಲಿ ಈ ಎರಡು ಸಮುದಾಯಗಳೂ ಇಲ್ಲ.
ಆದರೆ, ರಾಜ್ಯದ ಪ್ರಮುಖ ಜಾತಿಗಳಾದ ಒಕ್ಕಲಿಗ, ಲಿಂಗಾಯತ ಹಾಗೂ ಕುರುಬರ ವಿಚಾರ ಹಾಗಿಲ್ಲ. ಒಕ್ಕಲಿಗರು ಹಳೆ ಮೈಸೂರು ಪ್ರಾಂತದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಂದ್ರವಾಗಿ ವಾಸಿಸುತ್ತಿದ್ದು, ಈ ಭಾಗದಲ್ಲಿ ಅವರೇ ನಿರ್ಣಾಯಕರಾಗುತ್ತಿದ್ದಾರೆ. ಹಾಗೆಯೇ ಲಿಂಗಾಯತರು ಉತ್ತರ ಕರ್ನಾಟಕ ಭಾಗದಲ್ಲಿ ಸಾಂದ್ರವಾಗಿ ವಾಸಿಸುತ್ತಿರುವುದರಿಂದ ಆ ಭಾಗದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಅವರೇ ನಿರ್ಣಾಯಕರಾಗುತ್ತಿದ್ದಾರೆ. ಇನ್ನು ಮಧ್ಯ ಕರ್ನಾಟಕದ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬರು ದೊಡ್ಡ ಸಂಖ್ಯೆಯಲ್ಲಿರುವುದರಿಂದ ಅವರೂ ಈ ಭಾಗದಲ್ಲಿ ನಿರ್ಣಾಯಕರಾಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಪ್ರತೀ ವಿಧಾನಸಭಾ ಚುನಾವಣೆಯಲ್ಲೂ ಅತಿ ದೊಡ್ಡ ಸಂಖ್ಯೆಯಲ್ಲಿ ಆರಿಸಿ ಬರುತ್ತಿರುವ ಶಾಸಕರು ಈ ಮೂರು ಸಮುದಾಯಗಳಿಗೇ ಸೇರಿದ್ದಾರೆ. ರಾಜಕೀಯ ಅಧಿಕಾರ ಈ ಮೂರು ಸಮುದಾಯಗಳ ಕೈಯಲ್ಲೇ ಕೇಂದ್ರೀಕೃತವಾಗಿರುವುದರಿಂದ ಆರ್ಥಿಕ ಚಲನೆಯೂ ಈ ಸಮುದಾಯ ಗಳಲ್ಲೇ ಚುರುಕಾಗಿದೆ. ರಾಜ್ಯದಲ್ಲಿನ ಬಹುತೇಕ ಶ್ರೀಮಂತರು ಬ್ರಾಹ್ಮಣ, ವೈಶ್ಯ ಸಮುದಾಯಗಳನ್ನು ಹೊರತುಪಡಿಸಿದರೆ ಈ ಸಮುದಾಯಕ್ಕೇ ಸೇರಿದವರಾಗಿದ್ದಾರೆ. ಹೀಗಾಗಿ ರಾಜ್ಯದ ಬಹುತೇಕ ಉದ್ಯಮಗಳು, ವ್ಯಾಪಾರ ವಹಿವಾಟುಗಳು ಈ ಸಮುದಾಯಗಳಲ್ಲೇ ಕೇಂದ್ರೀಕೃತಗೊಂಡಿವೆ. ಆದರೆ, ದಲಿತರು ಹಾಗೂ ಮುಸ್ಲಿಮರು ರಾಜ್ಯದ ಜನಸಂಖ್ಯೆಯಲ್ಲಿ ಮೂರನೇ ಒಂದರಷ್ಟಿದ್ದರೂ ಅವರಿನ್ನೂ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಾಗಿಯೇ ಉಳಿದಿದ್ದಾರೆ. ಆದರೆ, ಈ ಎರಡು ಸಮುದಾಯಗಳಲ್ಲಿ ಕಂಡು ಬರುವ ಸಮಾನ ಅಂಶ: ಈ ಎರಡೂ ಸಮುದಾಯಗಳು ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಸಾಂದ್ರವಾಗಿ ನೆಲೆಸಿರದಿದ್ದರೂ, ರಾಜ್ಯಾದ್ಯಂತ ಹರಡಿಕೊಂಡಿರುವುದು. ಇಡೀ ರಾಜ್ಯದಲ್ಲಿ ತಮ್ಮ ಅಸ್ತಿತ್ವ ಹೊಂದಿರುವ ಯಾವುದಾದರೂ ಸಮುದಾಯಗಳಿದ್ದರೆ ಅದು ದಲಿತರು ಹಾಗೂ ಮುಸ್ಲಿಮರು ಮಾತ್ರ. ದಲಿತರು ಜಾತಿ ವ್ಯವಸ್ಥೆಯ ಏಣಿಶ್ರೇಣಿಯಿಂದ ಸಾಮಾಜಿಕ ಅಸಮಾನತೆಯನ್ನು ಮಾತ್ರ ಅನುಭವಿಸುತ್ತಿಲ್ಲ; ಬದಲಿಗೆ ಆರ್ಥಿಕ ಅಸಮಾನತೆಯನ್ನೂ ತೀವ್ರವಾಗಿ ಅನುಭವಿಸುತ್ತಿದ್ದಾರೆ. ಗ್ರಾಮೀಣ ಭಾಗದ ದಲಿತರು ಹೂ ಮಾರಾಟ, ತರಕಾರಿ, ಸೊಪ್ಪು ಮಾರಾಟದಂಥ ಸಾಮಾನ್ಯ ವ್ಯವಹಾರಗಳನ್ನು ಹೊರತುಪಡಿಸಿ, ಬೇರಾವುದೇ ಪ್ರಮುಖ ವ್ಯವಹಾರಗಳಲ್ಲಿ ತೊಡಗಿಸಿಕೊಂಡರೆ ಅಂಥವರು ನೇರವಾಗಿಯೇ ಆರ್ಥಿಕ ಬಹಿಷ್ಕಾರಗಳನ್ನು ಎದುರಿಸಬೇಕಾದ ಸ್ಥಿತಿ ಈಗಲೂ ಮುಂದುವರಿದಿದೆ. ಅಂಥ ಆರ್ಥಿಕ ಬಹಿಷ್ಕಾರಗಳಿಂದ ಮುಸ್ಲಿಮರು ಮುಕ್ತವಾಗಿರುವುದರಿಂದಲೇ ಈಗ ಸನಾತನವಾದಿಗಳ ಕಣ್ಣು ಮುಸ್ಲಿಮ್ ವರ್ತಕರ ಮೇಲೆ ಬಿದ್ದಿರುವುದು. ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರ ಹೇರಬೇಕು ಎಂಬುದರ ಪರೋಕ್ಷ ಅರ್ಥವೇ ಮುಸ್ಲಿಮರನ್ನು ದಲಿತರಂತೆ ಆರ್ಥಿಕ ಗುಲಾಮರನ್ನಾಗಿಸಬೇಕು ಎಂಬುದಾಗಿದೆ. ವೈದಿಕಶಾಹಿಯ ಇಂತಹ ಅಸಹನೆಯಿಂದ ದಲಿತರು ಹಾಗೂ ಮುಸ್ಲಿಮರು ಇಂದಿಗೂ ಮೇಲ್ಜಾತಿಗಳ ಗ್ರಾಹಕರು ಹಾಗೂ ಸೇವಕರಾಗಿಯೇ ಮುಂದುವರಿದ್ದಾರೆಯೇ ಹೊರತು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಸಾಧ್ಯವಾಗಿಯೇ ಇಲ್ಲ. ಇನ್ನು ಈ ಸಮುದಾಯಗಳಲ್ಲಿ ಬಂಡವಾಳಶಾಹಿಗಳಾಗಿ ಬೆಳೆದು ನಿಂತಿರುವವರು ತಮ್ಮ ತಮ್ಮ ಸಮುದಾಯಗಳಿಂದ ದೊಡ್ಡ ಅಂತರವನ್ನೇ ಕಾಯ್ದುಕೊಂಡು ತಮ್ಮ ವ್ಯಾಪಾರಿ ಹಿತಾಸಕ್ತಿಯನ್ನು ಮಾತ್ರ ರಕ್ಷಿಸಿಕೊಳ್ಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಸಾಮಾನ್ಯ ದಲಿತರು ಹಾಗೂ ಮುಸ್ಲಿಮರ ನಡುವಿನ ದಿನನಿತ್ಯದ ವ್ಯವಹಾರಗಳಾದ ಚರ್ಮೋದ್ಯಮ, ಕುರಿ ಮತ್ತು ಮೇಕೆ ಸಾಕಣೆ, ಮಾಂಸೋದ್ಯಮ ಹಾಗೂ ಕುಕ್ಕುಟೋದ್ಯಮದಲ್ಲಿ ಸಹಭಾಗಿತ್ವ ತರಲು ಸಾಧ್ಯವಿದೆ. ದಲಿತರು ತಮ್ಮ ಮಾಂಸಾಹಾರಕ್ಕೆ ಆಶ್ರಯಿಸಿರುವುದು ಮುಸ್ಲಿಮ್ ಮಾಂಸ ವ್ಯಾಪಾರಿಗಳನ್ನಾದರೆ, ಮುಸ್ಲಿಮರು ದಿನ ನಿತ್ಯ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ತೊಡಗುವುದು ದಲಿತ ಸಮುದಾಯದೊಂದಿಗಾಗಿದೆ. ದಲಿತರ ಪೈಕಿ ಮಾದಿಗ ಸಮುದಾಯ ಚಮ್ಮಾರಿಕೆಯಲ್ಲಿ ನಿಪುಣರಾಗಿರುವುದರಿಂದ ಅವರೊಂದಿಗೆ ಚರ್ಮೋತ್ಪನ್ನಗಳ ಸಹಭಾಗಿತ್ವ ಹೊಂದುವುದರಿಂದ ಮುಸ್ಲಿಮ್ ಸಮುದಾಯವು ತಮ್ಮ ಚರ್ಮೋದ್ಯಮವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಹಾಗೆಯೇ ದಲಿತರು ತಯಾರಿಸುವ ಚರ್ಮೋತ್ಪನ್ನಗಳಿಗೆ ಗ್ರಾಹಕರಾಗುವುದರಿಂದ ಅವರ ಆರ್ಥಿಕ ಸಬಲೀಕರಣದಲ್ಲಿ ಪಾಲುದಾರರಾಗಬಹುದಾಗಿದೆ. ಇದೇ ರೀತಿಯಲ್ಲಿ ಕುರಿ ಮತ್ತು ಮೇಕೆ ಸಾಕಣೆ, ಕುಕ್ಕುಟೋದ್ಯಮದಲ್ಲೂ ಕೊಡುಕೊಳ್ಳುವಿಕೆ ರೂಪಿಸಿಕೊಂಡರೆ, ಮುಸ್ಲಿಮ್, ದಲಿತ ಸಮುದಾಯ ಗಳೆರಡೂ ಆರ್ಥಿಕ ಸ್ವಾಯತ್ತತೆ ಪಡೆಯಲು ಸಾಧ್ಯವಾಗಲಿದೆ. ಇಂತಹ ಕೊಡುಕೊಳ್ಳುವಿಕೆ ಯಶಸ್ವಿಯಾಗಲು ಈ ಎರಡು ಸಮುದಾಯಗಳು ಹೊಂದಿರುವ ಜನಸಂಖ್ಯೆ ಹಾಗೂ ರಾಜ್ಯಾದ್ಯಂತ ಹೊಂದಿರುವ ಅಸ್ತಿತ್ವವೇ ದೊಡ್ಡ ಕೊಡುಗೆ ನೀಡಲಿವೆ. ಭವಿಷ್ಯದಲ್ಲಿ ಮುಸ್ಲಿಮ್ ಸಮುದಾಯವು ಸನಾತನಾವಾದಿಗಳು ಹೇರಬಹುದಾದ ಆರ್ಥಿಕ ಬಹಿಷ್ಕಾರದಂಥ ಕ್ರಮಗಳನ್ನು ಹಿಮ್ಮೆಟ್ಟಿಸಬೇಕಿದ್ದರೆ, ದಲಿತರೊಂದಿಗೆ ಆರ್ಥಿಕ ಸಹಕಾರ ವಿಸ್ತರಣೆಗೆ ಮುಂದಾಗಬೇಕಿದೆ. ಈ ಆರ್ಥಿಕ ಸಹಭಾಗಿತ್ವದ ಲಾಭ ಪ್ರತೀ ಸಾಮಾನ್ಯ ದಲಿತ ಹಾಗೂ ಮುಸ್ಲಿಮನಿಗೂ ತಲುಪಬೇಕಿದ್ದರೆ, ಈ ಸಮುದಾಯಗಳಲ್ಲಿರುವ ಪ್ರಜ್ಞಾವಂತರು ಸಮಾನ ಮನಸ್ಕ ವೇದಿಕೆ ಸೃಷ್ಟಿಸಿಕೊಂಡು, ಪರಿಣಾಮಕಾರಿ ಯೋಜನೆಗಳ ಕುರಿತು ವಿಚಾರ ವಿನಿಮಯಕ್ಕೆ ಮುಂದಾಗಬೇಕಿದೆ. ಆಗ ಮಾತ್ರ ಈ ಎರಡು ಸಮುದಾಯಗಳು ಭವಿಷ್ಯದಲ್ಲಿ ಎದುರಿಸಬಹುದಾದ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲು ಸಾಧ್ಯ