ಕಾರ್ಲೋಸ್ ಅಲ್ಕರಾಸ್: ಟೆನಿಸ್ ಲೋಕದ ಹೊಸ ತಾರೆ
ಜಗತ್ತನ್ನೇ ನಿಬ್ಬೆರಗಾಗಿಸಿದ ಹಳ್ಳಿ ಹುಡುಗ । ದಿಗ್ಗಜನನ್ನೇ ಕೆಡವಿದ ವಿಶ್ವ ನಂ.1 ಕಾರ್ಲೋಸ್
twitter/carlosalcaraz
ಆರ್. ಜೀವಿ
"ಆತನ ಆಟದಲ್ಲಿ ಫೆಡೆರರ್, ನಡಾಲ್ ಹಾಗು ನನ್ನ ಆಟದ ಅಂಶಗಳಿವೆ ಎಂದು ಜನರು ಹೇಳುತ್ತಿದ್ದರು. ನಾನಿದನ್ನು ಒಪ್ಪುತ್ತೇನೆ. ನನ್ನ ಪ್ರಕಾರ ನಾವು ಮೂವರೂ ಆಟಗಾರರ ಅತ್ಯುತ್ತಮ ಅಂಶಗಳು ಆತನ ಆಟದಲ್ಲಿ ಸೇರಿವೆ. 20 ವರ್ಷ ವಯಸ್ಸಿಗೇ ಆತನಿಗೆ ಅಸಾಮಾನ್ಯ ಮಾನಸಿಕ ಸ್ಥೈರ್ಯ ಹಾಗು ಪ್ರಬುದ್ಧತೆ ಇದೆ. ಇದು ನಿಜಕ್ಕೂ ಅತ್ಯಂತ ಪ್ರಭಾವಶಾಲಿ ವಿಷಯ. ಇಂತಹ ಆಟಗಾರನೊಬ್ಬನ ವಿರುದ್ಧ ನಾನು ಈವರೆಗೆ ಎಂದೂ ಆಡಿಯೇ ಇಲ್ಲ. ಆತನೊಬ್ಬ ಪರಿಪೂರ್ಣ ಆಟಗಾರ."
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರ ಎಂದೇ ಖ್ಯಾತಿ ಪಡೆದಿರುವ ನೊವಾಕ್ ಜೊಕೊವಿಕ್ ರಿಂದ ಇಂತಹದೊಂದು ಹೊಗಳಿಕೆ ಪಡೆಯೋದು ಅಂದ್ರೆ ಸುಮ್ನೇನಾ. ಜೊಕೊವಿಕ್ ರಂತಹ ಶ್ರೇಷ್ಠರೇ ಇಂತಹದೊಂದು ಸರ್ಟಿಫಿಕೇಟ್ ಕೊಡ್ತಾರೆ. ಅದೂ ಅದೇ ಆಟಗಾರನ ವಿರುದ್ಧ ಸೋತಮೇಲೆ ಅಂದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದಿದೆ ?
ಜೊಕೊವಿಕ್ ರಿಂದ ಇಂತಹದೊಂದು ಶ್ರೇಷ್ಠ ಶಹಬ್ಬಾಸ್ ಗಿರಿ ಪಡೆದ ಆಟಗಾರ ಕೇವಲ 20 ವರ್ಷದ ಸ್ಪೇನ್ನ ಪ್ರತಿಭಾವಂತ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಸ್. ಈ ಕಾರ್ಲೋಸ್ ಮೂಲಕ ವಿಂಬಲ್ಡನ್ ಲೋಕಕ್ಕೆ ಯುವರಾಜನ ಎಂಟ್ರಿಯಾಗಿದೆ. ಅದೂ ಅಂತಿಂತಹ ಎಂಟ್ರಿಯಲ್ಲ. ವಿಶ್ವಶ್ರೇಷ್ಠ ಜೊಕೊವಿಕ್ ರನ್ನೇ ಬಗ್ಗು ಬಡಿದು ನಿಂತಿರುವ ಸಾಮ್ರಾಟ ಕಾರ್ಲೋಸ್ ಅಲ್ಕರಾಸ್.
ಕೆಲವೇ ಸಾವಿರ ಜನರಿರುವ ಹಳ್ಳಿಯಿಂದ ಬಂದ ಹುಡುಗ ಇಂದು ಜಗತ್ತನ್ನೇ ನಿಬ್ಬೆರಗಾಗಿಸಿರೋ ಮೋಡಿಗಾರ. ಐದು ಸೆಟ್ಗಳ ಹಣಾಹಣಿಯಲ್ಲಿ ಅತ್ಯಂತ ಅನುಭವಿ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿದ ಅಲ್ಕರಾಸ್, ವಿಂಬಲ್ಡನ್ ಟೆನಿಸ್ ಟೂರ್ನಿಯ ಕಿರೀಟ ಗೆದ್ದಿದ್ದು ಒಂದು ಅದ್ಭುತ ಕ್ಷಣ.
ನಾಲ್ಕು ಗಂಟೆ 42 ನಿಮಿಷಗಳ ಸೆಣಸಾಟ ಟೆನಿಸ್ ಪ್ರಿಯರನ್ನು ಹಿಡಿದಿಟ್ಟ ರೋಚಕ ಘಳಿಗೆಯಾಗಿತ್ತು. ಅಂತಿಮವಾಗಿ, ಅದೊಂದು ಮಹತ್ವದ ಫಲಿತಾಂಶವಾಗಿ ದಾಖಲಾಯಿತು. ಕೇವಲ 20 ವರ್ಷದ ಅಲ್ಕರಾಸ್, 36 ವರ್ಷದ ಜೊಕೊವಿಕ್ ಅವರನ್ನು ಎದುರಿಸಿದ ರೀತಿ, ಅವರಿಗೆ ಪೈಪೋಟಿಯೊಡ್ಡಿದ ರೀತಿ, ಸೋಲಿನ ದವಡೆಯಿಂದ ಪುಟಿದೆದ್ದು ದಿಗ್ಗಜನನ್ನೇ ಸೋಲಿಸಿದ ಬಗೆ ಟೆನಿಸ್ ಪ್ರಿಯರನ್ನು ನಿಬ್ಬೆರಗಾಗಿಸಿತು. ಅನುಭವಿಯೆದುರು ಅನನ್ಯ ತಾಕತ್ತು ಮತ್ತು ಮಿಂಚಿನ ವೇಗದ ಮೂಲಕ ಪ್ರತ್ಯುತ್ತರ ಕೊಡುತ್ತ ಗುರಿ ಮುಟ್ಟಿದ ಅಲ್ಕರಾಸ್, ವಿಂಬಲ್ಡನ್ ಚಾಂಪಿಯನ್ ಆದ ಮೂರನೇ ಅತಿ ಕಿರಿಯ ಆಟಗಾರ ಎನ್ನಿಸಿಕೊಂಡರು.
ಈ ಹಿಂದೆ 17 ನೇ ವರ್ಷಕ್ಕೆ ವಿಂಬಲ್ಡನ್ ಗೆದ್ದವರು ಬೋರಿಸ್ ಬೇಕರ್. ಆಮೇಲೆ ಜೋನ್ ಬೋರ್ಗ್ 20 ವರ್ಷ ಒಂದು ತಿಂಗಳ ವಯಸ್ಸಲ್ಲಿ ವಿಂಬಲ್ಡನ್ ಚಾಂಪಿಯನ್ ಆದರು. ಈಗ 20 ವರ್ಷ 2 ತಿಂಗಳು ವಯಸ್ಸಿನ ಕಾರ್ಲೋಸ್ ವಿಂಬಲ್ಡನ್ ಕಿರೀಟ ಧರಿಸಿದ್ದಾರೆ. ಅಲ್ಕರಾಸ್ ಅವರ ಈ ಗೆಲುವಿನೊಂದಿಗೆ, ದಾಖಲೆ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಮತ್ತು ಎಂಟು ಸಲ ವಿಂಬಲ್ಡನ್ನಲ್ಲಿ ಚಾಂಪಿಯನ್ ಆಗಿರುವ ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ಜೊಕೊವಿಕ್ ಕನಸು ಭಗ್ನವಾಯಿತು. ಅಷ್ಟೇ ಅಲ್ಲ, ವಿಶ್ವ ಶ್ರೇಷ್ಠ ವಿಂಬಲ್ಡನ್ ನ ಪ್ರತಿಷ್ಠಿತ ಸೆಂಟರ್ ಕೋರ್ಟ್ ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸತತ 45 ಪಂದ್ಯಗಳನ್ನು ಗೆದ್ದ ಜೊಕೊವಿಕ್ ದಾಖಲೆಯೂ ನುಚ್ಚು ನೂರಾಯಿತು.
ಯಾರು ಈ ಅಲ್ಕರಾಸ್?
ಸುಮಾರು 24,000 ನಿವಾಸಿಗಳಿರುವ ಸ್ಪೇನ್ ನ ಸಣ್ಣ ಹಳ್ಳಿ ಎಲ್ ಪಾಲ್ಮಾರ್ನಲ್ಲಿ ಜನಿಸಿದ ಅಲ್ಕರಾಸ್ ಅವರ ಕುಟುಂಬವೇ ಟೆನ್ನಿಸ್ ಪ್ರತಿಭಾವಂತರದ್ದು. ಅವರ ಅಜ್ಜ ಮತ್ತು ತಂದೆ ಇಬ್ಬರೂ ವೃತ್ತಿಪರ ಟೆನಿಸ್ ಆಟಗಾರರಾಗಿದ್ದರು. ಅವರ ತಂದೆ ಟೆನಿಸ್ ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ.
ಟೆನಿಸ್ ಅಂಗಳಕ್ಕೆ ಅಲ್ಕರಾಸ್ ಚೊಚ್ಚಲ ವೃತ್ತಿಪರ ಎಂಟ್ರಿಯಾದದ್ದು 2018ರಲ್ಲಿ. ತಮ್ಮ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಯುಎಸ್ ಓಪನ್ ಗೆದ್ದದ್ದು 2022ರಲ್ಲಿ. ಈಗ ಕಾರ್ಲೋಸ್ ಅಲ್ಕರಾಸ್ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ.
ಹೇಗಿದೆ ಈ ಅದ್ಭುತ ಸಾಧನೆ ?
ಅಲ್ಕರಾಸ್ ಅವರ ಕೋಚ್ ಜುವಾನ್ ಕಾರ್ಲೋಸ್ ಫೆರೆರೊ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ. ಎರಡು ಸಲದ ಒಲಿಂಪಿಯನ್ ಆಗಿರೋ ಅವರು 2003ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದವರು. ತಮ್ಮ ಆಟ ರೋಜರ್ ಫೆಡರರ್ ಅವರ ಆಟದಂತಿದ್ದರೂ, ತಮ್ಮದೇ ದೇಶದ ಶ್ರೇಷ್ಠ ಟೆನಿಸ್ ಆಟಗಾರ ರಫೆಲ್ ನಡಾಲ್ ಅವರನ್ನು ತಮ್ಮ ರೋಲ್ ಮಾಡೆಲ್ ಎನ್ನುತ್ತಾರೆ ಅಲ್ಕರಾಸ್.
ಈ ಸಲದ ಪಂದ್ಯದಲ್ಲಿ ಜೊಕೊವಿಕ್ ಗೆ ಅಲ್ಕರಾಸ್ ಎದುರಾಗಿದ್ದ ಸಂದರ್ಭ, ಟೆನಿಸ್ ಜಗತ್ತಿನ ಸುಮಾರು 50 ವರ್ಷಗಳ ಇತಿಹಾಸದಲ್ಲಿಯೇ ವಯಸ್ಸಿನ ಭಾರೀ ಅಂತರವಿರುವ ಎದುರಾಳಿಗಳ ಹಣಾಹಣಿಯ ಸಂದರ್ಭವಾಗಿತ್ತು.
"ನಾನು ಹುಟ್ಟುವಾಗಲೇ ನೀವು ಚಾಂಪಿಯನ್ ಆಗಿದ್ದಿರಿ, ಹಾಗಾಗಿ ನನಗೆ ಇದೊಂದು ಅದ್ಭುತ ಕ್ಷಣ " ಎಂದು ಕಾರ್ಲೋಸ್ ವಿಂಬಲ್ಡನ್ ಗೆದ್ದ ಮೇಲೆ ಮಾತಾಡುವಾಗ ಜೊಕೊವಿಕ್ ಬಗ್ಗೆ ಹೇಳಿದ್ದು ಅವರ ನಡುವೆ ವಯಸ್ಸು ಹಾಗು ಅನುಭವದ ಅಂತರ ಎಷ್ಟಿತ್ತು ಎಂಬುದಕ್ಕೆ ಅತ್ಯುತ್ತಮ ಸಾಕ್ಷಿ.
ಜೊಕೊವಿಕ್ ಪ್ರಾಬಲ್ಯವನ್ನು ಕೊನೆಗೊಳಿಸುವ ಮೂಲಕ ಪುರುಷರ ಟೆನಿಸ್ನಲ್ಲಿ ತಲೆಮಾರಿನ ಬದಲಾವಣೆಯ ಮಾತು ಶುರುವಾಗುವುದಕ್ಕೆ ಅಲ್ಕರಾಸ್ ಈಗ ಕಾರಣರಾಗಿದ್ದಾರೆ. ಯಾವುದೇ ಆಟದಲ್ಲೂ ಇಂಥ ಹೊಸ ಹರಿವಿನ ಬೆರಗು ಒಂದು ಹಂತದಲ್ಲಿ ಸಂಭವಿಸುತ್ತದೆ. ಆದರೆ ಪುರುಷರ ಟೆನಿಸ್ನಲ್ಲಿನ ಈ ಪ್ರಾಬಲ್ಯದ ಬದಲಾವಣೆ, ಈ ಅಮೋಘ ಕ್ಷಣಗಳು ಟೆನಿಸ್ ಅಭಿಮಾನಿಗಳು ಈ ಹಿಂದೆ ಕಂಡಿದ್ದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಎಂಬ ವಿಶ್ಲೇಷಣೆಗಳು ಬರುತ್ತಿವೆ.
ಈ ವಿಂಬಲ್ಡನ್ ಗೆಲುವು ಏಕೆ ಮಹತ್ವದ್ದಾಗಿದೆ?
ರೋಜರ್ ಫೆಡರರ್ 2001ರಲ್ಲಿ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಂದಿನ ಖ್ಯಾತ ಆಟಗಾರ ಪೀಟ್ ಸಾಂಪ್ರಾಸ್ ಅವರನ್ನು ಸೋಲಿಸಿದ್ದು ವಿಂಬಲ್ಡನ್ನಲ್ಲಿ ಒಂದು ಮಹತ್ವದ ಬದಲಾವಣೆಯ ಘಟ್ಟವಾಗಿ ಕಂಡಿತ್ತು. ಆದರೆ, ಅಲ್ಕರಾಸ್ ಗೆದ್ದ ಕ್ಷಣ ಅದಕ್ಕಿಂತ ದೊಡ್ಡದೆನ್ನಲಾಗುತ್ತಿದೆ.
ಪುರುಷರ ಟೆನಿಸ್ನ ವಿಚಾರದಲ್ಲಿ ಈಗ ಮೂವರನ್ನು ವಿಶ್ವದ ಅತ್ಯಂತ ಮಹತ್ವದ ಆಟಗಾರರೆಂದು ಗುರುತಿಸಲಾಗಿದೆ. ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್. ಈ ಮೂವರೂ ಒಟ್ಟು 65 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಹಂಚಿಕೊಂಡು ಎರಡು ದಶಕಗಳ ಕಾಲ ಟೆನಿಸ್ ಅಂಗಣಗಳಲ್ಲಿ ಪ್ರಾಬಲ್ಯ ಸಾಧಿಸಿದವರು.
ಈ ಮೊದಲು ಕೂಡ ಈ ಮೂವರು ಅನೇಕ ದಿಟ್ಟ ಎದುರಾಳಿಗಳನ್ನು ಎದುರಿಸಿದ್ದರಾದರೂ, ಅಂತಿಮವಾಗಿ ಅವರ ವಿರುದ್ಧ ಗೆದ್ದು ಬೀಗಿದ್ದರು. ಆದರೆ ಮೊನ್ನೆಯ ವಿಂಬಲ್ಡನ್ 2023ರ ಅಂತಿಮ ಹಣಾಹಣಿ ಬೇರೆಯೇ ಬಗೆಯದಾಗಿತ್ತು.
ಜೊಕೊವಿಕ್ ವಿರುದ್ಧ ಅಲ್ಕರಾಸ್ ಗೆಲುವು ಸಾಂಪ್ರಾಸ್ ಅವರನ್ನು ಫೆಡರರ್ ಸೋಲಿಸಿದ್ದಕ್ಕಿಂತ ಹೆಚ್ಚಿನದು ಏಕೆ ?
2001ರಲ್ಲಿ ಸಾಂಪ್ರಾಸ್ ವಿರುದ್ಧ ಫೆಡರರ್ ಗೆಲುವು ಸುಲಭದ್ದಾಗಿತ್ತು ಎಂದು ಕೆಲವು ತಜ್ಞರು ಉಲ್ಲೇಖಿಸುತ್ತಾರೆ. ಯಾಕೆಂದರೆ ಸಾಂಪ್ರಾಸ್ ತಮ್ಮ ಉತ್ತುಂಗದ ಹಂತವನ್ನು ದಾಟಿದ ಹೊತ್ತು ಅದಾಗಿತ್ತು. ಆದರೆ, ಜೊಕೊವಿಕ್ ಹಾಗಲ್ಲ. ಇನ್ನೂ ತಮ್ಮ ಉತ್ತುಂಗದಲ್ಲಿರುವವರು. ಈ ವಿಂಬಲ್ಡನ್ ಫೈನಲ್ ಅವರೇ ಗೆಲ್ಲುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಸ್ವತಃ ಅವರೂ ಗೆದ್ದೇ ಬಿಟ್ಟೆ ಎಂಬಷ್ಟು ಆತ್ಮ ವಿಶ್ವಾಸದಲ್ಲಿದ್ದರು. ಅವರ ವಿರುದ್ಧದ ಕಿರಿಯ ಆಟಗಾರನ ಈ ಅಚ್ಚರಿಯ ಗೆಲುವು ಸಾಧಾರಣವಾದದ್ದಲ್ಲ.
ರೋಜರ್ ಫೆಡರರ್ ನಿವೃತ್ತಿ ಬಳಿಕ ರಫೆಲ್ ನಡಾಲ್ ಕೂಡ ಹೆಚ್ಚು ಕಾಲ ಅಂಗಣದಲ್ಲಿ ಉಳಿದಿರಲಿಲ್ಲ. ಸೆರ್ಬಿಯನ್ ಆಟಗಾರ ಜೊಕೊವಿಕ್ ಇನ್ನೂ ಕೆಲವು ವರ್ಷಗಳ ಕಾಲ ಪ್ರಬಲರಾಗಿಯೇ ಇರಲಿದ್ದಾರೆ ಎಂದು ಹಲವರು ಊಹಿಸುತ್ತಾರೆ. ಆದರೆ, ಐದು ಸೆಟ್ಗಳ ಈ ತೀವ್ರವಾದ ಪಂದ್ಯದಲ್ಲಿ ಅಲ್ಕರಾಸ್ ಒಡ್ಡಿದ ಪೈಪೋಟಿಯನ್ನು ಕಂಡವರಿಗೆ, ಮುಂದಿನ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಗಳು ಎಷ್ಟು ಕುತೂಹಲಕಾರಿಯಾಗಿ ಇರಲಿವೆ ಎಂಬುದರ ಸುಳಿವಂತೂ ಸಿಕ್ಕಿದೆ.
ಕಾರ್ಲೋಸ್ ಅಲ್ಕರಾಸ್ ಈ ಗೆಲುವಿನ ಮೂಲಕ ಶ್ರೇಷ್ಠರ ಕ್ಲಬ್ ಸೇರಿದಂತಾಗಿದೆ. ಜೊಕೊವಿಕ್ ಸೋಲಿನಿಂದ ಬೇಸರಿಸಿಕೊಂಡವರೂ ಕಾರ್ಲೋಸ್ ಆಟ ನೋಡಿ ಟೆನಿಸ್ ಲೋಕದಲ್ಲಿ ಹೊಸ ತಾರೆಯ ಉದಯವಾಗಿದೆ ಎಂದು ಸಂತಸಪಟ್ಟಿದ್ದಾರೆ. ಅವರಿಗೆ ಹೆಮ್ಮೆ ಮತ್ತು ಅಭಿಮಾನದ ಸ್ವಾಗತ ಸಿಕ್ಕಿದೆ.
A very strong hug and enjoy the moment Champion ಎಂದು ರಫೆಲ್ ನಡಾಲ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಅಲ್ಕರಾಸ್ ಎಂಬ ಹೊಸ ಮಿಂಚಿನೊಂದಿಗೆ ಟೆನಿಸ್ ಲೋಕ ಬೆಳಗತೊಡಗಿದೆ.