ಮೋದಿ ವಿರುದ್ಧ INDIA: ಪ್ರತಿಪಕ್ಷ ಮೈತ್ರಿಕೂಟದ ಮುಂದಿವೆ ಸವಾಲುಗಳು
✍ಆನಂದ ವರ್ಧನ್
ಕಳೆದ ತಿಂಗಳು ತನ್ನ ಮೊದಲ ಸಭೆಯನ್ನು ಪಾಟ್ನಾದಲ್ಲಿ ನಡೆಸಿದ್ದ ಪ್ರತಿಪಕ್ಷ ಮೈತ್ರಿಕೂಟದ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆದಿದೆ. 26 ಪಕ್ಷಗಳು ಸೇರಿದ್ದ ಈ ಸಭೆಯಲ್ಲಿ, ಪಾಟ್ನಾ ಸಭೆಯಲ್ಲಿನ ಸಂಕಲ್ಪಕ್ಕೆ ಹೊಸ ಮತ್ತು ಹೆಚ್ಚು ಸ್ಪಷ್ಟವಾದ ರೂಪ ಸಿಕ್ಕಿದೆ. INDIA ಎಂಬ ಹೆಸರಿನೊಂದಿಗೆ ಮೈತ್ರಿಕೂಟ ಹೊರಹೊಮ್ಮಿದೆ.
INDIA ಎಂದರೆ Indian National Developmental Inclusive Alliance. ಈ ಆಕರ್ಷಕ ಸಂಕೇತ ವಾಸ್ತವದ ಹಾದಿಯಲ್ಲಿ ಹೇಗೆ ಅನುಷ್ಠಾನಗೊಳ್ಳಲಿದೆ ಎಂಬುದು ಕುತೂಹಲಕರ. ಕಾಂಗ್ರೆಸ್ ಮತ್ತದರ ಇತರ ಮೈತ್ರಿಪಕ್ಷಗಳಿಗೆ ತಿಳಿದಿರುವಂತೆ, ಇದು 2024ರ ಲೋಕಸಭಾ ಚುನಾವಣೆಗೆ ಪರಿಣಾಮಕಾರಿ ಒಕ್ಕೂಟವನ್ನು ಗಟ್ಟಿಗೊಳಿಸುವ ಕಠಿಣ ಹೋರಾಟದ ಮೊದಲ ಹೆಜ್ಜೆ ಮಾತ್ರ. ಚುನಾವಣೆಯಲ್ಲಿ ಮೋದಿಗೆ ಸೋಲಿನ ರುಚಿಯುಣಿಸುವ ಹಾದಿಯಲ್ಲಿನ ಅದರ ಹೆಜ್ಜೆಗಳು ಹೇಗೆಲ್ಲ ಇರಬೇಕು ಎಂಬುದಿನ್ನೂ ನಿಶ್ಚಯಗೊಳ್ಳಬೇಕಿದೆ.
ಪಾಟ್ನಾ ಸಭೆಗೆ 16 ಪಕ್ಷಗಳು ಹಾಜರಾಗಿದ್ದವು, ಅದು ಬೆಂಗಳೂರಿನ ಸಭೆಯ ವೇಳೆಗೆ 26ಕ್ಕೆ ಏರಿತು. ದಿಲ್ಲಿಯಲ್ಲಿ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣ ಹೇರುವ ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್ ನಿರ್ಧರಿಸಿದ ಬಳಿಕ ಆಮ್ ಆದ್ಮಿ ಪಕ್ಷ ಕೂಡ ಮೈತ್ರಿಕೂಟವನ್ನು ಸೇರಿಕೊಂಡಿತು. ಸಮ್ಮಿಶ್ರ ಯುಗದ ರಾಷ್ಟ್ರೀಯ ಮೈತ್ರಿ ಹೊಸ ನಿರೀಕ್ಷೆಯನ್ನು ಹುಟ್ಟಿಸಿರುವಾಗಲೇ, ಅದರೆದುರು ಇರುವ ಹಾದಿ ಸುಲಭದ್ದಲ್ಲ ಎಂಬುದು ಕೂಡ ಅಷ್ಟೇ ಸತ್ಯವಾಗಿದೆ.
ಮೈತ್ರಿಕೂಟದಲ್ಲಿ ಕಾಂಗ್ರೆಸ್ ಕೆಂದ್ರದಲ್ಲಿದ್ದು, ಇತರ ಮಿತ್ರಪಕ್ಷಗಳು ಒಂದು ಬದ್ಧತೆಯೊಂದಿಗೆ ಜೊತೆಯಾಗಿ ಮುನ್ನಡೆಯಬೇಕಿದೆ. ಹೀಗಿರುವಾಗ ಹುಟ್ಟಿಕೊಳ್ಳಬಹುದಾದ ಹಲವಾರು ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಸಾಂಸ್ಥಿಕ ಚೌಕಟ್ಟಿನ ಅಗತ್ಯವಿದೆ. ಈ ಅಂಶಗಳೊಂದಿಗೆ ವ್ಯವಹರಿಸಲು ಒಂದು ಕಾರ್ಯವಿಧಾನದ ಅಗತ್ಯದ ಬಗ್ಗೆ ಮೈತ್ರಿಕೂಟ ಈಗಾಗಲೇ ಅರಿತಿದೆ ಎಂಬುದೂ ಸ್ಪಷ್ಟ. ‘ದಿ ಹಿಂದೂ’ ವರದಿ ಪ್ರಕಾರ, ಸಮನ್ವಯ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುವ ಕುರಿತು ಚಿಂತನೆ ನಡೆದಿದೆ. ಇದು ಮೈತ್ರಿ ಪಕ್ಷಗಳ ಪ್ರತಿನಿಧಿಗಳನ್ನು ಹೊಂದಿರುತ್ತದೆ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧದ ಪ್ರಚಾರದ ಮುಖ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಸಂವಹನ ಮತ್ತು ಜಂಟಿ ಕಾರ್ಯತಂತ್ರಗಳು, ಪ್ರಚಾರ ಮತ್ತು ಚುನಾವಣಾ ಕಾರ್ಯಕ್ರಮಗಳು ಮತ್ತು ಕೇಂದ್ರ ಸರಕಾರದ ವಿರುದ್ಧ ಆಂದೋಲನಕ್ಕಾಗಿ ಮೈತ್ರಿಕೂಟವು ಉಪಸಮಿತಿಗಳನ್ನು ರಚಿಸುವ ಸಾಧ್ಯತೆಯಿದೆ.
ಕಳೆದ ದಶಕಗಳ ಮೈತ್ರಿ ರಾಜಕಾರಣದ ಪ್ರಮುಖ ಅಂಶವೆಂದರೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ. ಮೈತ್ರಿಗಳ ವ್ಯಾವಹಾರಿಕ ನಿಲುವನ್ನು ಅಂತಹ ಸಾಮಾನ್ಯ ಸಂಹಿತೆಗಳು ಅಷ್ಟಾಗಿ ಕಟ್ಟಿಹಾಕಲಾರವಾದರೂ, ಅಧಿಕಾರ ರಾಜಕಾರಣದ ಅನುಕೂಲಕರ ನಡೆಗಳಿಗೆ ಸೈದ್ಧಾಂತಿಕ ಹೊದಿಕೆಯನ್ನು ನೀಡಲು ಅವುಗಳ ಅಗತ್ಯವಿರುತ್ತದೆ. ತೊಂಭತ್ತರ ದಶಕದಲ್ಲಿ, ಚುನಾವಣಾ ಪೂರ್ವ ಒಪ್ಪಂದಗಳಲ್ಲಿ ಮತ್ತು ಸಮ್ಮಿಶ್ರ ಸರಕಾರಗಳ ಮತದಾನೋತ್ತರ ಮೈತ್ರಿಗಳಲ್ಲಿ ಅಂಥ ವ್ಯವಸ್ಥೆ ಇದ್ದುದನ್ನು ಕಾಣಬಹುದಾಗಿದೆ.
ಇದನ್ನು ಚುನಾವಣೋತ್ತರ ಪರಿಗಣನೆಗೆ ಬಿಡಬಹುದು ಎಂದು ಹೊಸ ಮೈತ್ರಿಕೂಟ ಹೇಳುತ್ತಿದ್ದರೂ, INDIA ಚುನಾವಣಾ ಪೂರ್ವ ನಿಲುವನ್ನು ಘೋಷಿಸಲಿದೆ ಎಂಬುದು ಈಗ ಸ್ಪಷ್ಟವಾಗಿದೆ. ಒಂದು ಕಾರ್ಯತಂತ್ರವಾಗಿ, ಮೈತ್ರಿಯು ಸೈದ್ಧಾಂತಿಕ ಒಗ್ಗಟ್ಟು ಹೊಂದಿಲ್ಲ ಎಂದು ಎನ್ಡಿಎ ಟೀಕಿಸುತ್ತಿರುವುದು ಇದರ ಕುರಿತಾಗಿಯೇ ಇರುವಂತಿದೆ. ಆದರೂ ಮೈತ್ರಿಕೂಟದ ಪ್ರಚಾರ ಶೈಲಿಯನ್ನು ಸುಗಮಗೊಳಿಸುವಲ್ಲಿ ಚುನಾವಣಾ ಪೂರ್ವ ಕಾರ್ಯಯೋಜನೆ ಹೆಚ್ಚು ಅನುಕೂಲಕರವಾಗುವ ಸಾಧ್ಯತೆಯೂ ಇದೆ.
ಹೊಸ ಮೈತ್ರಿಕೂಟದ ಉನ್ನತ ನಾಯಕರ ಮುಂದಿನ ಸಭೆ ಮುಂಬೈನಲ್ಲಿ ನಡೆಯಲಿದೆ. ಆದರೆ, ಈ ನಡುವೆ ಅದು ಪ್ರಸಕ್ತ ಮತ್ತು ನಿರೀಕ್ಷಿತ ಸವಾಲುಗಳನ್ನು ಮತ್ತು ಅವುಗಳನ್ನು ನಿವಾರಿಸಿಕೊಳ್ಳುವ ಅವಕಾಶಗಳನ್ನು ಕುರಿತು ಹೆಚ್ಚು ಗಂಭೀರವಾಗಿ ಯೋಚಿಸಬೇಕಿದೆ.
ಮೊದಲನೆಯದಾಗಿ, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯ ವಿಚಾರವಾಗಿ ತಾನು ಅಷ್ಟೊಂದು ಆಸಕ್ತಿ ಹೊಂದಿಲ್ಲ ಎಂದು ಹೇಳುವುದರೊಂದಿಗೆ ಮೈತ್ರಿಕೂಟದ ನಾಯಕನ ಅಗತ್ಯವನ್ನು ತಳ್ಳಿಹಾಕಿತು. ಪಾಟ್ನಾ ಸಭೆಯಲ್ಲಿ ನಾಯಕತ್ವದ ಪ್ರಶ್ನೆಯನ್ನು ಅಸಂಗತವೆಂದು ಪ್ರತಿಪಾದಿಸಿದ್ದಕ್ಕೆ ಅನುಗುಣವಾಗಿಯೇ ಅದರ ಈ ನಿಲುವು ಇಲ್ಲಿ ವ್ಯಕ್ತವಾಯಿತು.
ನಾಯಕತ್ವದ ವಿಷಯದ ಬಗ್ಗೆ ಮಾತನಾಡದೆ ಎರಡು ಉದ್ದೇಶಗಳನ್ನು ಪೂರೈಸಲು ಹೊಸ ಒಕ್ಕೂಟವು ಪ್ರಯತ್ನಿಸುತ್ತಿದೆ. ಮೊದಲನೆಯದಾಗಿ, ಮೈತ್ರಿಯು ಚುನಾವಣೆಯನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಅಧಿಕಾರದ ಸಮೀಕರಣಗಳಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಳ್ಳುವ ಮೂಲಕ ಯಾವುದೇ ಸಂಭಾವ್ಯ ಮಿತ್ರರನ್ನು ಹಿಮ್ಮೆಟ್ಟಿಸುವ ವಿಚಾರ. ಇನ್ನೊಂದು, ಯುದ್ಧತಂತ್ರವಾಗಿರಬಹುದು ಮತ್ತು ಚುನಾವಣಾ ಹೋರಾಟದಲ್ಲಿ ರಕ್ಷಣಾತ್ಮಕವಾದ ನಡೆಯಾಗಿ ಇದು ಒದಗಬಹುದೆಂಬ ಲೆಕ್ಕಾಚಾರ. ಬಿಜೆಪಿ ನೇತೃತ್ವದ ಪ್ರಚಾರದ ಬಗ್ಗೆ ಮೈತ್ರಿಯು ವಹಿಸಿರುವ ಜಾಗರೂಕತೆ ಇದಾಗಿದೆ. ವಿರೋಧ ಪಕ್ಷಗಳು ಒಟ್ಟಾಗಿ ಘೋಷಿಸಬಹುದಾದ ಯಾವುದೇ ನಾಯಕನ ವಿರುದ್ಧ ಮೋದಿ ವಾಗ್ದಾಳಿ ಶುರುಮಾಡುವುದರ ತೊಡಕಿನಿಂದ ತಪ್ಪಿಸಿಕೊಳ್ಳುವ ತಂತ್ರ ಇದು ಮತ್ತು ಮೊದಲೇ ಅಭ್ಯರ್ಥಿಯನ್ನು ಘೋಷಿಸುವುದು ಬಿಜೆಪಿಯ ಪ್ರಚಾರಕ್ಕೇ ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂಬುದು ಒಕ್ಕೂಟದ ಲೆಕ್ಕಾಚಾರವಾಗಿರಬಹುದು.
ಈ ಅಂಶಗಳ ಹೊರತಾಗಿಯೂ, ನಾಯಕತ್ವದ ವಿಚಾರದಲ್ಲಿನ ಈ ಅಸ್ಪಷ್ಟ ಮತ್ತು ಅಸ್ಥಿರ ನಿರ್ಣಯ ಒಗ್ಗಟ್ಟಿನ ಕೊರತೆ ಮತ್ತು ಭವಿಷ್ಯದ ಅಧಿಕಾರಕ್ಕಾಗಿ ಹೋರಾಟದ ಸಮಸ್ಯೆಗಳನ್ನು ತರುವ ಸಾಧ್ಯತೆ ಇಲ್ಲದಿಲ್ಲ. ಅಲ್ಲದೆ ಇದು ಮೈತ್ರಿಕೂಟದ ಶಕ್ತಿ ಕುಸಿತದ ಊಹಾಪೋಹಗಳಿಗೆ ಎಡೆ ಮಾಡಿಕೊಡಬಹುದು ಮತ್ತು ಅಂಥ ಅನುಮಾನಗಳಿಗೆ ಸೂಕ್ತ ಬಗೆಯಲ್ಲಿ ಉತ್ತರಿಸಲು ಸಾಧ್ಯವಾಗದೆಯೂ ಇರಬಹುದು.
ಎರಡನೆಯದಾಗಿ, ಮಿತ್ರಪಕ್ಷಗಳು ತಮ್ಮ ಮತಗಳನ್ನು ಮೈತ್ರಿಕೂಟದ ಇತರ ಪಕ್ಷಗಳಿಗೆ ವರ್ಗಾಯಿಸುವ ವಿಚಾರಕ್ಕೆ ಹೇಗೆ ಬದ್ಧವಾಗುತ್ತವೆ ಎಂಬ ಸವಾಲು ಇದೆ. ಕೆಲವನ್ನು ಹೆಸರಿಸುವುದಾದರೆ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಈ ಬಿಕ್ಕಟ್ಟು ತಲೆದೋರಬಹುದು. ಒಮ್ಮತದ ಅಭ್ಯರ್ಥಿಗೆ ಮತಗಳನ್ನು ವರ್ಗಾಯಿಸುವುದು ಕೇವಲ ಔಪಚಾರಿಕ ಮೈತ್ರಿಗಿಂತ ಹೆಚ್ಚಿನದಾಗಿದ್ದು, ತೀರ್ಮಾನ ಗೊಂದಲಮಯವಾಗಲೂ ಬಹುದು. ಡಿಎಂಕೆಯಂತಹ ಪಕ್ಷ ಕಾಂಗ್ರೆಸ್ ಅಥವಾ ಎಡಪಕ್ಷಗಳ ಗಂಭೀರ ಪೈಪೋಟಿಯನ್ನು ಹೊಂದಿರದ ತಮಿಳುನಾಡಿನಂತಹ ರಾಜ್ಯಗಳಲ್ಲಿ ಇಂತಹ ಸಮಸ್ಯೆ ಅಷ್ಟೇನೂ ಗಂಭೀರ ಎನ್ನಿಸಲಾರದು. ಆದರೆ ಮೈತ್ರಿಕೂಟದ ಪಾಲುದಾರರು ಆಡಳಿತ ನಡೆಸುತ್ತಿರುವ 11 ರಾಜ್ಯಗಳಲ್ಲಿ, ಮತ ವರ್ಗಾವಣೆ ಪ್ರಮುಖ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಹೆಚ್ಚು ತೊಡಕನ್ನು ಉಂಟುಮಾಡಬಹುದು.
ಮೂರನೆಯದಾಗಿ, ಮಿತ್ರ ಪಕ್ಷಗಳ ಕಾರ್ಯಕರ್ತರ ನಡುವಿನ ಸಮನ್ವಯ ಕೂಡ ಗಮನಾರ್ಹವಾಗಿದೆ. ಈಗ ಮಿತ್ರಪಕ್ಷಗಳೆಂದು ಗುರುತಿಸಿಕೊಳ್ಳುವ ಪಕ್ಷಗಳ ವಿರುದ್ಧ ಪ್ರಚಾರ ಮಾಡುತ್ತಿರುವ, ಪ್ರಬಲ ಕಾರ್ಯಕರ್ತರನ್ನು ಹೊಂದಿರುವ ಪಕ್ಷಗಳಿಗೆ ಇದು ಹೆಚ್ಚು ಮುಖ್ಯವಾಗಿ ಕಾಡಲಿದೆ. ಮಿತ್ರಪಕ್ಷಗಳಿಗೆ ಅದೇ ಉತ್ಸಾಹದಿಂದ ಕೆಲಸ ಮಾಡಲು ಕಾರ್ಯಕರ್ತರ ಮನವೊಲಿಸುವುದು ಅಥವಾ ಕನಿಷ್ಠ ಪಕ್ಷ ಅವರು ವಿರೋಧಿಸುವುದನ್ನು ತಡೆಯುವುದು ಕಷ್ಟದ ಕೆಲಸ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷಗಳ ಮೈತ್ರಿಯನ್ನು ಒಪ್ಪಿಕೊಂಡು ಸಂಘಟಿತ ಪ್ರಚಾರದಲ್ಲಿ ತೊಡಗುವುದು ಕಷ್ಟಕರವಾಗಿ ಕಂಡಿತ್ತು.
26 ಪಕ್ಷಗಳ ರಾಷ್ಟ್ರೀಯ ಪ್ರತಿಪಕ್ಷ ಮೈತ್ರಿಕೂಟವನ್ನು ಸ್ಥಾಪಿಸುವಲ್ಲಿ ಬೆಂಗಳೂರು ಸಭೆ ಗೆದ್ದಿದೆ. ಕಳೆದ ದಶಕಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕಂಡಿದ್ದ ಎದುರಾಳಿ ಮೈತ್ರಿಗಳ ಘರ್ಷಣೆಯ ಸನ್ನಿವೇಶವೇ ಮತ್ತೆ ಎದುರಾಗಲೂಬಹುದು ಎನ್ನುವಂತಾಗಿದೆ. ಒಂದು ರೀತಿಯಲ್ಲಿ ಇದೊಂದು ವಿಶಿಷ್ಟ ಮತ್ತು ವಿಲಕ್ಷಣ ಸನ್ನಿವೇಶದಲ್ಲಿ ಆಗುತ್ತಿರುವ ಮೈತ್ರಿ. ಹಿನ್ನೆಲೆ ಗಮನಾರ್ಹವಾಗಿ ಬದಲಾಗಿದೆ, ಈ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಮೈತ್ರಿಕೂಟಗಳ ನಡುವಿನ ಕದನಗಳು ಸ್ಪರ್ಧೆಯ ಅಖಾಡವನ್ನೇ ಮರು ವ್ಯಾಖ್ಯಾನಿಸುವ ಮಟ್ಟಿಗೆ ತೀವ್ರವಾಗಲಿರುವುದಂತೂ ನಿಜ.
(ಕೃಪೆ: newslaundry.com)