ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡ್ತಾರಾ ಡಿಸಿಎಂ ಡಿಕೆಶಿ?
► ಹೊಸ ಹೆಸರು : ಡಿ ಕೆ ಶಿವಕುಮಾರ್ ಲೆಕ್ಕಾಚಾರಗಳೇನು ? ► ಭೂಮಿ ಕೊಳ್ಳೆ ಹೊಡೆಯುವ ಹುನ್ನಾರ ಎಂದ ಕುಮಾರಸ್ವಾಮಿ
ರಾಜ್ಯ ಸರ್ಕಾರ ಹೊಸ ಬೆಂಗಳೂರು ದಕ್ಷಿಣ ಜಿಲ್ಲೆ ಘೋಷಣೆಗೆ ಸಿದ್ಧತೆ ನಡೆಸ್ತಿದೆಯಾ ?. ಈ ಮೂಲಕ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಜೊತೆಗೆ ಮತ್ತೊಂದು ಬೆಂಗಳೂರು ಜಿಲ್ಲೆ ಸೇರ್ಪಡೆಯಾಗುವ ಸಾಧ್ಯತೆಗಳಿವೆಯಾ?. ಈ ಪ್ರಶ್ನೆಗಳು ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರು ದಕ್ಷಿಣ ಜಿಲ್ಲೆ ಘೋಷಣೆ ಕುರಿತ ಹೇಳಿಕೆಗಳು ಮತ್ತು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾಡುತ್ತಿರುವ ತೀಕ್ಷ್ಣ ಟೀಕೆಗಳು.
'ಚನ್ನಪಟ್ಟಣ, ರಾಮನಗರ, ಕನಕಪುರ ಮತ್ತು ಮಾಗಡಿ ತಾಲ್ಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರೋದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಡಿಸಿಎಂ ಡಿಕೆಶಿ ಅವರು, ಈ ಹಿಂದೆ ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ, ದೇವನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಹೊಸಕೋಟೆ, ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದವು. ತದನಂತರ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಯಿತು. ನಂತರ ದೊಡ್ಡಬಳ್ಳಾಪುರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೊಸಕೋಟೆ, ನೆಲಮಂಗಲ ದೇವನಹಳ್ಳಿ, ದೊಡ್ಡಬಳ್ಳಾಪುರ ಒಳಗೊಂಡಂತೆ ಬೆಂಗಳೂರು ಗ್ರಾಮಂತರ ಜಿಲ್ಲೆಯನ್ನಾಗಿ ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಹೆಸರನ್ನು ಹಾಗೇ ಉಳಿಸಿಕೊಳ್ಳಲಾಯಿತು.
'ಅದೇ ರೀತಿ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಯಿತು. ರಾಮನಗರ ಜಿಲ್ಲಾ ಕೇಂದ್ರವಾಯಿತು. ನಂತರ ಈ ಜಿಲ್ಲೆಗೆ ಹಾರೋಹಳ್ಳಿ ಹೊಸ ತಾಲ್ಲೂಕು ಸೇರ್ಪಡೆಯಾಯಿತು. ಈಗ ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ಹಾರೋಹಳ್ಳಿ ತಾಲೂಕುಗಳಿಗೆ ಲಭ್ಯ ಆಗಬೇಕೆಂಬುದು ಜನರ ಆಶಯ ಮತ್ತು ನನ್ನ ಚಿಂತನೆಯೂ ಕೂಡ. ಹೀಗಾಗಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಇರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಜನರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗುತ್ತಿದೆ' ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆಶಿ ಹೇಳಿಕೆಯಿಂದ ರೊಚ್ಚಿಗೆದ್ದಿರುವ ಎಚ್ ಡಿ ಕುಮಾರಸ್ವಾಮಿ, 'ಚೂರು ಮಾಡಲು ರಾಮನಗರ ಜಿಲ್ಲೆ ಏನು ಕಲ್ಲು ಬಂಡೆಯೇ? ಜನರು ತಿರುಗಿ ಬೀಳುತ್ತಾರೆ ಜೋಕೆ. ವೈಜ್ಞಾನಿಕವಾಗಿ ಪರಿಶೀಲಿಸಿಯೇ ರಾಮನಗರ ಜಿಲ್ಲೆ ರಚಿಸಲಾಗಿದೆ. ಏಳು ಜನ್ಮ ಎತ್ತಿ ಬಂದರೂ ಅದನ್ನು ಛಿದ್ರ ಮಾಡಲಾಗದು. ಇದನ್ನು ಡಿಕೆಶಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಬಡವರ ಹೊಟ್ಟೆ ಮೇಲೆ ಹೊಡೆಯುವ, ಬೇರೆಯವರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ 'ದುಷ್ಟ' ಪ್ರಜ್ಞೆ 'ಅತಿ' ಬುದ್ಧಿವಂತಿಕೆ, 'ಅಸಾಮಾನ್ಯ' ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ ಎಂದು ಡಿ.ಕೆ.ಶಿ ಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
' ಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ನನ್ನ ತಲೆಯಲ್ಲಿ ಏನೋ ಯೋಚನೆ ಇದೆ' ಎನ್ನುತ್ತಾರೆ ಉಪಮುಖ್ಯಮಂತ್ರಿಗಳು. ಇಷ್ಟಕ್ಕೂ ಅವರ ತಲೆಯಲ್ಲಿ ಏನಿದೆ? ಚಿನ್ನದ ಬೆಲೆಯ ಕನಕಪುರದ ಭೂಮಿಗಳನ್ನು ಕೊಳ್ಳೆ ಹೊಡೆದು ಬಿಲ್ಡರುಗಳಿಗೆ ಒಪ್ಪಿಸುವುದೇ ? ಅಥವಾ ತಾವು ಈಗಾಗಲೇ ಎಗ್ಗಿಲ್ಲದೆ ಬೇಲಿ ಹಾಕಿಕೊಂಡಿರುವ ಬೇನಾಮಿ ಭೂಮಿಗಳಲ್ಲಿ ಕೋಟೆ ಕಟ್ಟಿಕೊಳ್ಳುವುದೇ? ಬಿಡಿಸಿ ಹೇಳಿದರೆ ನಾವು ಕೃತಾರ್ಥರಾಗುತ್ತೇವೆ. ಇವರು ಹೇಳಲ್ಲ, ಜನರೂ ನಂಬಲ್ಲ.. ಎಲ್ಲವೂ ನಿಗೂಢ..! ಎಂದು ವ್ಯಂಗ್ಯವಾಡಿದ್ದಾರೆ ಎಚ್ ಡಿ ಕೆ.
' ಹಿಂದೆ ಜನಹಿತ ಪರಿಗಣಿಸಿ ಹೊಸ ಜಿಲ್ಲೆಗಳನ್ನು ರಚನೆ ಮಾಡಿದ ಮುಖ್ಯಮಂತ್ರಿಗಳಿಗೆ ಸ್ವಹಿತ ಇರಲಿಲ್ಲ. ಕನಕಪುರವನ್ನು ಬೆಂಗಳೂರಿಗೆ ಸೇರಿಸಬೇಕೆನ್ನುವುದರ ಹಿಂದೆ ಯಾರ ಹಿತ ಅಡಗಿದೆ ? ಕನಕಪುರದ ಪ್ರತಿಯೊಬ್ಬರಿಗೂ ಅಸಲಿ ಸತ್ಯ ಗೊತ್ತಿದೆ. ಇರುವ ಶ್ರೀಮಂತಿಕೆ, ಸಂಪತ್ತು ಸಾಲದೆ, ಇನ್ನೆಷ್ಟನ್ನು ಕೂಡಿ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ ಕುಮಾರಸ್ವಾಮಿ. ಕನಕಪುರದಲ್ಲಿ ದಾದಾಗಿರಿ, ಗೂಂಡಾಗಿರಿ ಮಾಡಿದ್ದು. ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಿ ಇನ್ನೊಂದು ಮಾಫಿಯಾ ಕಟ್ಟುವುದಾ? ಇದಾ ನಿಮ್ಮ ತಲೆಯಲ್ಲಿ ಇರುವ ಆಲೋಚನೆ' ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ಜಿಲ್ಲೆಗೆ ಸೇರ್ಪಡೆ ಮಾಡುವ ಕುರಿತು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ. ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ಕುರಿತು ಶಿವಕುಮಾರ್ ಅವರ ಬಳಿಯೇ ಚರ್ಚಿಸುತ್ತೇನೆ ಎಂದಿದ್ದಾರೆ.
ಮೂಲಗಳ ಪ್ರಕಾರ ಡಿಕೆಶಿ ಅವರ ಹೇಳಿಕೆ ಹಿಂದಿನ ಲೆಕ್ಕಾಚಾರ ಈ ರೀತಿ ಇದೆ ಎನ್ನಲಾಗುತ್ತಿದೆ. ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆ ಮಾಡಲು ಚಿಂತನೆ. ಮುಂದೆಯೂ ರಾಮ ನಗರವೇ ಜಿಲ್ಲಾ ಕೇಂದ್ರವಾಗಿ ಮುಂದುವರಿಕೆ. ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿ ಅಂತಾರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಭಾಗ ಎಂದು ಬಿಂಬಿಸಲು ಯೋಜನೆ. ತನ್ಮೂಲಕ ಬೆಂಗಳೂರಿಗೆ ದೊರಕುವ ಎಲ್ಲ ಮಾನ್ಯತೆ, ಸೌಲಭ್ಯಗಳನ್ನು ರಾಮನಗರದ 4 ತಾಲೂಕುಗಳಿಗೂ ಒದಗಿಸುವುದು. ಇದರೊಂದಿಗೆ ರಾಮನಗರವೂ ಬೆಂಗಳೂರಿನ ಭಾಗ ಎನಿಸಿಕೊಂಡು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆಂಬ ಯೋಚನೆ. 'ಬೆಂಗಳೂರು' ಬ್ರ್ಯಾಂಡ್ ಮೂಲಕ ರಾಷ್ಟ್ರ - ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಸೆಳೆದು, ಪ್ರಗತಿಗೆ ವೇಗ ನೀಡುವ ಯತ್ನ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸೇವಾ ಕ್ಷೇತ್ರ, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಅಧಿಕವಾಗಿ ಉದ್ಯೋಗ ಹೆಚ್ಚುವ ನಿರೀಕ್ಷೆ. ಬೆಂಗಳೂರಿನ ಮೆಟ್ರೋ, ಸಬ್ ಅರ್ಬನ್, ಹೈ ಡೆನ್ಸಿಟಿ ಕಾರಿಡಾರ್‌ಗಳನ್ನು ರಾಮನಗರ ಜಿಲ್ಲಾ ವ್ಯಾಪ್ತಿಗೂ ವಿಸ್ತರಿಸುವ ಸಾಧ್ಯತೆ. ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ತಾಲೂಕುಗಳನ್ನು ಬೆಂಗಳೂರು ಉಪನಗರಗಳಾಗಿ ಅಭಿವೃದ್ಧಿಪಡಿಸಲು ಅವಕಾಶ. ಬೆಂಗಳೂರನ್ನು ವಿಸ್ತಾರ ಹಾಗೂ ಯೋಜಿತವಾಗಿ ಬೆಳೆಸಲು ಅನುಕೂಲ. ಬೆಂಗಳೂರು ವೇಗದಲ್ಲೇ ಅಭಿವೃದ್ಧಿಯಾಗುವ ನಿರೀಕ್ಷೆ.
ಆದರೆ, ಕಾಂಗ್ರೆಸ್ ಸರಕಾರ ಅದರಲ್ಲೂ ಡಿಸಿಎಂ ಡಿಕೆಶಿ ವಿರುದ್ಧ ಮುಗಿಬೀಳುವ ಒಂದೇ ಒಂದು ಅವಕಾಶ ಬಿಟ್ಟು ಕೊಡದ ಬಿಜೆಪಿ ಹಾಗು ಅದರ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನ ಕುಮಾರಸ್ವಾಮಿಗೆ ಈಗ ಒಳ್ಳೆಯ ಅಸ್ತ್ರ ಸಿಕ್ಕಂತಾಗಿದೆ. ಇದು ಡಿಕೆಶಿಯ ರಿಯಲ್ ಎಸ್ಟೇಟ್ ದಂಧೆ ವಿಸ್ತರಿಸಿಕೊಳ್ಳುವ ಹುನ್ನಾರ ಎಂದೇ ಅವರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
'ರಿಯಲ್‌ಎಸ್ಟೇಟ್‌ಗೆ ಮತ್ತು ಡೆವಲಪರ್‌ಗಳಿಗೆ ಅನುಕೂಲ ಮಾಡಿಕೊಡಲು ಡಿ.ಕೆ.ಶಿವಕುಮಾರ್ ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ಹೊರಟಿದ್ದಾರೆ' ಎಂದು ಬಿಜೆಪಿ ಶಾಸಕ ಆರ್.ಅಶೋಕ ದೂರಿದ್ದಾರೆ. `ಕನಕಪುರದ ಬಗ್ಗೆ ಬಹಳ ಕಾಳಜಿ ಇದ್ದರೆ ಬೆಂಗಳೂರಿಗೆ ಸೇರಿಸುವುದನ್ನು ಬಿಟ್ಟು, ಪ್ರತ್ಯೇಕ ಜಿಲ್ಲೆಯನ್ನು ಮಾಡಿಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ' ಎಂದು ಅವರು ಹೇಳಿದ್ದಾರೆ.
'ಶಿವಕುಮಾರ್ ಒಂದಲ್ಲ ನೂರು ಬಾರಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು, ನಾನು ಮೊದಲು ಬಿಸಿನೆಸ್ ಮ್ಯಾನ್, ರಾಜಕಾರಣ ನನ್ನ ಹವ್ಯಾಸ ಎಂದಿದ್ದಾರೆ. ಅವರು ಏನೇ ಮಾಡಿದರೂ ಬಿಜಿನೆಸ್ ಮೊದಲ ಸ್ಥಾನ ಪಡೆಯುತ್ತದೆ..ಆ ಮೇಲಿನ ಸ್ಥಾನ ರಾಜಕೀಯಕ್ಕೆ' ಎಂದು ಕುಟುಕಿದ್ದಾರೆ ಆರ್ ಅಶೋಕ್ .
ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, "ಆಡಳಿತದ ದೃಷ್ಟಿಯಿಂದ ರಾಮನಗರ ಜಿಲ್ಲೆ ಆಗಿರುವುದೇ ಸೂಕ್ತ. ರಾಮನಗರ, ಕನಕಪುರದವರು ಎಲ್ಲ ಕೆಲಸಗಳಿಗೆ ಬೆಂಗಳೂರು ನಗರಕ್ಕೆ ಹೋಗುವುದು ಕಷ್ಟವಾಗುತ್ತದೆ. ಬೆಂಗಳೂರಿನಲ್ಲಿ ಒಕ್ಕಲಿಗರ ಸಂಖ್ಯೆ ಜಾಸ್ತಿ ಇರುವುದರಿಂದ, ಸಮುದಾಯದ ಮೇಲೆ ಹಿಡಿತ ಸಾಧಿಸುವ ಆಲೋಚನೆ ಅವರಿಗೆ ಬಂದಿರಬಹುದು. ಅಧಿಕಾರ ಕೈತಪ್ಪಬಾರದು ಎಂಬ ಮುನ್ನೆಚ್ಚರಿಕೆಯೂ ಇರಬಹುದು. ರಾಜಕೀಯ ಮಹತ್ವಾಕಾಂಕ್ಷೆ ಇರುವ ಅವರು ಅದಕ್ಕೆ ತಕ್ಕಂತೆಯೇ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
“ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯ ಸಂದರ್ಭ ನನಗೂ ತಿಳಿದಿಲ್ಲ. ಈ ಸಂಬಂಧ ಮನವಿ ಸಲ್ಲಿಕೆಯಾದ ಬಳಿಕ ಕಂದಾಯ ಇಲಾಖೆ ತನ್ನ ಅಭಿಪ್ರಾಯ ನೀಡಲಿದೆ. ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಹೊಸ ಜಿಲ್ಲೆ ಘೋಷಣೆಯ ರಾಜಕೀಯ ಎಲ್ಲಿಗೆ ಹೋಗಿ ತಲುಪಲಿದೆ ಎಂದು ಕಾದು ನೋಡೋಣ.