‘ಬ್ಲ್ಯಾಕ್ ಟಿಕೆಟ್’ಗಳ ಮಾರಾಟದ ಚೈತ್ರ ಕಾಲ !
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಮಳೆ ನಿಂತರೂ ಮಳೆ ಹನಿ ಉದುರುವುದು ನಿಲ್ಲಲಿಲ್ಲ’ ಎಂಬಂತೆ, ಬಿಜೆಪಿ ಅಧಿಕಾರ ಕಳೆದುಕೊಂಡರೂ, ಅದು ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರಗಳು ಬೇರೆ ಬೇರೆ ರೂಪದಲ್ಲಿ ಸುದ್ದಿಯಾಗುವುದು ನಿಲ್ಲುತ್ತಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮಾಡಿದ ಅಕ್ರಮಗಳ ತ್ಯಾಜ್ಯ ಇದೀಗ ‘ಚೈತ್ರಾ ಕುಂದಾಪುರ’ ಎನ್ನುವ ಹೆಸರಿನಲ್ಲಿ ಮಾಧ್ಯಮಗಳ ಮುಖಪುಟದಲ್ಲಿ ರಾಡಿ ಎಬ್ಬಿಸಿದೆ. ಹಿಂದುತ್ವದ ರಕ್ಷಕಿ, ಸಂಘಪರಿವಾರದ ನಾಯಕಿ ಎನ್ನುವ ಮುಖವಾಡ ಧರಿಸಿ, ಹತ್ತು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಗುರುತಿಸಿ ಕೊಂಡಿದ್ದ ಚೈತ್ರಾ ಕುಂದಾಪುರ ಎನ್ನುವ ತರುಣಿ ‘ಬಿಜೆಪಿಯ ಟಿಕೆಟ್ ಕೊಡಿಸುತ್ತೇನೆಂದು’ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿದ ಬೃಹತ್ ಹಗರಣವೊಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಸುಮಾರು ಏಳು ಕೋಟಿ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡ ಗೋವಿಂದ ಬಾಬು ಪೂಜಾರಿ ಎನ್ನುವ ಬಿಲ್ಲವ ಸಮುದಾಯದ ಉದ್ಯಮಿ ಸಂಘಪರಿವಾರದ ನಾಯಕಿ ಚೈತ್ರಾ ಕುಂದಾಪುರ ನೇತೃತ್ವದ ತಂಡದ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ಸಲ್ಲಿಸಿದ್ದಾರೆ. ಈ ಅಕ್ರಮದಲ್ಲಿ ಗುರುತಿಸಿಕೊಂಡವರೆಲ್ಲರೂ ಸಮಾಜದಲ್ಲಿ ದ್ವೇಷ, ಕೋಮುಗಲಭೆಗಳನ್ನು ಹಬ್ಬಿಸುತ್ತಾ ಬಿಜೆಪಿಗೆ ಚುನಾವಣೆಯಲ್ಲಿ ಪರೋಕ್ಷ ನೆರವಾಗುತ್ತಿರುವವರು. ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರೊಂದಿಗೆ ಸಂಬಂಧಗಳನ್ನು ಇಟ್ಟುಕೊಂಡವರು. ಆದುದರಿಂದ ಚೈತ್ರಾ ಕುಂದಾಪುರ ತಂಡ ಮಾಡಿದ ಕೋಟ್ಯಂತರ ರೂ. ವಂಚನೆಯಲ್ಲಿ ಬಿಜೆಪಿಯೊಳಗಿರುವ ಇತರ ನಾಯಕರ ಪಾಲೆಷ್ಟು ಎನ್ನುವುದು ಕೂಡ ತನಿಖೆಯಾಗಬೇಕಾಗಿದೆ.
ಸಂಘಪರಿವಾರದ ನಾಯಕಿಯೆಂದು ಕರೆಸಿಕೊಂಡು, ಸಾರ್ವಜನಿಕವಾಗಿ ಮೂರನೇ ದರ್ಜೆಯ ಭಾಷೆಯಲ್ಲಿ ದ್ವೇಷ ಭಾಷಣ ಮಾಡುತ್ತಾ ಜೀವನ ಸಾಗಿಸುತ್ತಿರುವ ಯುವತಿಯೊಬ್ಬಳು ತನ್ನ ತಂಡದ ಜೊತೆಗೆ ‘ಬಿಜೆಪಿಯ ಟಿಕೆಟ್ ಕೊಡಿಸುತ್ತೇನೆ’ ಎಂದು ಹೇಳಿ ಕೋಟ್ಯಂತರ ರೂ.ಯನ್ನು ವಂಚಿಸಬಹುದು ಎಂದಾದರೆ, ಬಿಜೆಪಿ ಮತ್ತು ಆರೆಸ್ಸೆಸ್ನೊಳಗಿರುವ ಇತರ ಪ್ರಮುಖ ನಾಯಕರು ಈ ಟಿಕೆಟ್ ಹೆಸರಿನಲ್ಲಿ ಅಕ್ರಮವಾಗಿ ಸಂಪಾದಿಸಿರುವ ಹಣ ಎಷ್ಟಿರಬಹುದು? ಕಳೆದ ಚುನಾವಣೆಯಲ್ಲಿ ಬ್ಲ್ಯಾಕ್ನಲ್ಲಿ ಬಿಕರಿಯಾದ ಬಿಜೆಪಿಯ ಟಿಕೆಟ್ಗಳ ಮೊತ್ತವೆಷ್ಟು ಎನ್ನುವ ಪ್ರಶ್ನೆಗಳು ಮಹತ್ವವನ್ನು ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ಟಿಕೆಟ್ಗಾಗಿ ಬಿಜೆಪಿ ಮತ್ತು ಆರೆಸ್ಸೆಸ್ನ ನಾಯಕರಿಗೆ ಅಕ್ರಮವಾಗಿ ಕೋಟ್ಯಂತರ ರೂ.ಯನ್ನು ಸುರಿದು ಮೋಸ ಹೋದ ಇನ್ನೆಷ್ಟು ಉದ್ಯಮಿಗಳಿರಬಹುದು? ಗೋವಿಂದ ಪೂಜಾರಿಯವರಿಗೆ ವಂಚಿಸಿದವಳು ಸಂಘಪರಿವಾರದ ತಳಸ್ತರದ ಪುಡಿ ನಾಯಕಿಯಾಗಿರುವುದರಿಂದ ಪ್ರಕರಣ ಬಹಿರಂಗವಾಗಿದೆ. ಆದರೆ ಮೇಲ್ಸ್ತರದ ನಾಯಕರ ಆಶೀರ್ವಾದವಿಲ್ಲದೆ ಇಷ್ಟು ದೊಡ್ಡ ಮೊತ್ತ ಹಣವನ್ನು ವಂಚಿಸಲು ಆಕೆಗೆ ಸಾಧ್ಯವೆ? ಮೇಲ್ನೋಟಕ್ಕೆ ಚೈತ್ರಾ ಕುಂದಾಪುರ ತನ್ನ ಕೆಲವು ಗ್ಯಾಂಗ್ಗಳ ಜೊತೆಗೆ ಉದ್ಯಮಿಯನ್ನು ವಂಚಿಸಿದಂತೆ ತೋರುತ್ತಿದ್ದರೂ, ಇದರ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ಇನ್ನಷ್ಟು ದೊಡ್ಡ ತಲೆಗಳ ಪಾತ್ರಗಳು ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಮುಖ್ಯ ಆರೋಪಿ ಚೈತ್ರಾ ‘‘ತಲೆಮರೆಸಿಕೊಂಡಿರುವ ಸ್ವಾಮೀಜಿಯ ಬಂಧನವಾದರೆ ಇನ್ನಷ್ಟು ಪ್ರಮುಖರ ಹೆಸರುಗಳು ಬಹಿರಂಗವಾಗುತ್ತವೆ’’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾಳೆ. ಅಂದರೆ ತನ್ನನ್ನು ರಕ್ಷಿಸದೇ ಇದ್ದರೆ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನಿತರರ ಹೆಸರನ್ನೂ ಬಹಿರಂಗಪಡಿಸುತ್ತೇನೆ ಎನ್ನುವ ಬೆದರಿಕೆಯನ್ನು ಆಕೆ ಸಂಘಪರಿವಾರದ ಇತರ ನಾಯಕರಿಗೆ ಒಡ್ಡಿದ್ದಾಳೆ.
ಇಲ್ಲಿ ಆರೋಪಿಗಳೆಲ್ಲ ಯಾವುದೋ ಕ್ರಿಮಿನಲ್ ಹಿನ್ನೆಲೆಗಳಿರುವ ಅಪರಿಚಿತರಲ್ಲ. ತಲೆಮರೆಸಿಕೊಂಡಿರುವ ಸ್ವಾಮೀಜಿಯೂ ಸೇರಿದಂತೆ ಹಲವರು ಬಿಜೆಪಿ ಮತ್ತು ಸಂಘಪರಿವಾರದೊಳಗಿನ ಮುಖಂಡರ ಜೊತೆಗೆ ವೇದಿಕೆ ಹಂಚಿಕೊಂಡಿರುವ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚಕ್ರವರ್ತಿ ಸೂಲಿಬೆಲೆಯಂತಹ ಹಲವು ಆರೆಸ್ಸೆಸ್ ಮುಖಂಡರ ಜೊತೆಗೆ ಸ್ವಾಮೀಜಿ ಗುರುತಿಸಿಕೊಂಡಿದ್ದಾರೆ. ಆರೆಸ್ಸೆಸ್ ಅಥವಾ ಬಿಜೆಪಿಯೊಳಗಿರುವ ಪ್ರಮುಖರ ಭರವಸೆ ಇಲ್ಲದೆ ‘ಟಿಕೆಟ್ ಕೊಡಿಸುತ್ತೇನೆ’ ಎಂದು ಉದ್ಯಮಿಯೊಬ್ಬರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಲು ಸಾಧ್ಯವೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಷ್ಟಕ್ಕೂ ಸಂತ್ರಸ್ತ ಉದ್ಯಮಿ ರಾಜಕೀಯ ಅನಕ್ಷರಸ್ಥರಲ್ಲ. ಬಿಜೆಪಿಯ ನಾಯಕರ ಜೊತೆಗೆ ಅವರಿಗೆ ಆಳವಾದ ಸಂಪರ್ಕವಿದೆ. ಅಮಿತ್ ಶಾರಂತಹ ನಾಯಕರನ್ನು ಗೋವಿಂದ ಪೂಜಾರಿಯವರು ಸ್ವಾಗತಿಸುತ್ತಿರುವ ಪೋಟೊಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರ ಜೊತೆಗೆ ಅವರು ವೇದಿಕೆಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ವೇದಿಕೆಗಳನ್ನು ಹಂಚಿಕೊಳ್ಳುವುದು ಚೈತ್ರಾ ಕುಂದಾಪುರಳಂತಹ ಪುಡಿ ಕಾರ್ಯಕರ್ತೆಯ ಶಿಫಾರಸಿನಿಂದ ಸಾಧ್ಯವೆ? ಅಮಿತ್ ಶಾ ಅವರ ಜೊತೆಗೆ ಉದ್ಯಮಿ ಗೋವಿಂದ ಪೂಜಾರಿಯವರು ವೇದಿಕೆ ಹಂಚಿಕೊಂಡಿದ್ದಾರೆ ಎಂದರೆ ಅದರ ಅರ್ಥ, ರಾಜ್ಯದ ಬಿಜೆಪಿಯೊಳಗಿರುವ ಅಥವಾ ಆರೆಸ್ಸೆಸ್ನೊಳಗಿರುವ ಪ್ರಮುಖರ ಪರಿಚಯ ಗೋವಿಂದ ಪೂಜಾರಿಗೆ ಇದೆ ಎಂದಲ್ಲವೆ? ಟಿಕೆಟ್ ಕೊಡಿಸುವ ವಿಷಯದಲ್ಲಿ ಚೈತ್ರಾ ಕುಂದಾಪುರ ಅವರನ್ನು ಕೆಲವು ನಾಯಕರು ‘ಮಧ್ಯವರ್ತಿ ಅಥವಾ ಬ್ರೋಕರ್’ ಆಗಿ ಬಳಸಿಕೊಂಡಿರುವ ಸಾಧ್ಯತೆಗಳು ಎದ್ದು ಕಾಣುತ್ತವೆ. ಚೈತ್ರಾ ಕುಂದಾಪುರ ನೀಡಿರುವ ಹೇಳಿಕೆಯ ಆಧಾರದಲ್ಲಿ ಹೇಳುವುದಾದರೆ, ತಲೆಮರೆಸಿಕೊಂಡಿರುವ ಆರೋಪಿ ಈ ಸಂಬಂಧ ಬಿಜೆಪಿಯ ಅಥವಾ ಆರೆಸ್ಸೆಸ್ನ ಹಲವು ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಆತನಿಂದ ಈ ಹಗರಣ ಇನ್ನಷ್ಟು ವಿಶಾಲ ರೂಪ ಪಡೆಯುವ ಸಾಧ್ಯತೆಗಳಿವೆ.ಕಬಾಬ್ ಮಾರುವವನಿಗೆ ವೇಷ ಹಾಕಿಸಿ ಆತನನ್ನು ‘ಆರೆಸ್ಸೆಸ್ ವರಿಷ್ಠ’ ಎಂದು ಪರಿಚಯಿಸಿದರೆ ಅದನ್ನು ನಂಬುವಷ್ಟು ಗೋವಿಂದ ಪೂಜಾರಿಯವರು ಮುಗ್ಧರೆ? ಯಾರನ್ನೋ ತೋರಿಸಿದಾಕ್ಷಣ ಕೋಟ್ಯಂತರ ರೂ. ತೆಗೆದುಕೊಡುತ್ತಾರೆಯೆ? ಆದುದರಿಂದ ಅವರು ಎಫ್ಐಆರ್ನಲ್ಲಿ ಪೂರ್ತಿ ಸತ್ಯವನ್ನು ಬಹಿರಂಗಪಡಿಸಿಲ್ಲ ಎನ್ನುವ ಶಂಕೆಯನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಯಾರೋ ಪ್ರಮುಖ ನಾಯಕರನ್ನು ಮುಂದಿಟ್ಟುಕೊಂಡು ಚೈತ್ರಾ ಕುಂದಾಪುರ ತಂಡ ಗೋವಿಂದ ಪೂಜಾರಿಯವರಿಗೆ ಯಾಮಾರಿಸಿದ ಸಾಧ್ಯತೆಗಳು ಕಾಣುತ್ತಿವೆ.
ಒಂದಂತೂ ಸ್ಪಷ್ಟವಾಗುತ್ತದೆ. ಬಿಜೆಪಿಯ ಟಿಕೆಟ್ಗಳು ಕೋಟ್ಯಂತರ ರೂಗಳಿಗೆ ಬಿಕರಿಯಾಗುತ್ತವೆ ಮತ್ತು ಮೇಲ್ಮಟ್ಟದಿಂದ ಹಿಡಿದು ತಳಮಟ್ಟದವರೆಗಿನ ಸಂಘಪರಿವಾರದ ನಾಯಕರು ‘ಬ್ಲ್ಯಾಕ್ ಟಿಕೆಟ್ ಮಾರಾಟಗಾರರಾಗಿ’ ದುಡ್ಡು ಬಾಚಿಕೊಳ್ಳುತ್ತಿದ್ದಾರೆ. ಹೀಗೆ ಕೋಟ್ಯಂತರ ರೂ.ಗಳನ್ನು ಚೆಲ್ಲಿ ಶಾಸಕರಾಗುವವರು ಮುಂದೆ ಸರಕಾರದ ಭಾಗವಾಗಿ ಶೇ. ೪೦ ಕಮಿಷನ್ ಕಾರಣಕ್ಕೆ ಕುಖ್ಯಾತರಾದರೆ ಅದರಲ್ಲಿ ಅಚ್ಚರಿಯಾದರೂ ಏನಿದೆ? ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಟಿಕೆಟ್ಗಳನ್ನು ಹಲವಾರು ಕೋಟಿ ರೂ.ಗಳಿಗೆ ಮಾರಾಟ ಮಾಡುತ್ತಿರುವುದು ವ್ಯಾಪಕ ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದೆ. ಆದುದರಿಂದಲೇ ಚೈತ್ರಾ ಹಗರಣ ಇನ್ನಷ್ಟು ಆಳವಾಗಿ ತನಿಖೆಗೊಳಪಡಬೇಕು. ಹಾಗೆ ತನಿಖೆಯಾದರೆ, ಅಕ್ರಮ ಟಿಕೆಟ್ಗಳಿಗಾಗಿ ಕೋಟ್ಯಂತರ ರೂ.ಗಳನ್ನು ತೆತ್ತು ಮೋಸ ಹೋದವರು ಮತ್ತು ಮೋಸ ಮಾಡಿದ ಇನ್ನಷ್ಟು ಗಣ್ಯರ ಹೆಸರುಗಳು ಹೊರಬರುವ ಸಾಧ್ಯತೆಗಳಿವೆ. ಚುನಾವಣೆಯ ಸಂದರ್ಭದಲ್ಲಿ ನಡೆಯುವ ಈ ‘ಬ್ಲ್ಯಾಕ್ ಟಿಕೆಟ್’ ಮಾರಾಟ ದಂಧೆಗೆ ಕಡಿವಾಣ ಬೀಳಲೇಬೇಕು. ಇದೇ ಸಂದರ್ಭದಲ್ಲಿ, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಗಾಂಧೀಜಿಯಂತಹ ಮಹನೀಯರು ಕಟ್ಟಿ ಬೆಳೆಸಿದ ಹಿಂದೂ ಧರ್ಮವನ್ನು ಚೈತ್ರಾ ಕುಂದಾಪುರಳಂತಹ ನಕಲಿ ಹಿಂದೂ ಹೋರಾಟಗಾರರಿಂದ ರಕ್ಷಿಸುವ ಕೆಲಸವೂ ಹಿಂದೂ ಧರ್ಮದೊಳಗಿಂದಲೇ ನಡೆಯಬೇಕಾಗಿದೆ.