ಹಾಸ್ಯ ಪದ್ಯಗಳನ್ನು ಜನಪ್ರಿಯಗೊಳಿಸಿದ ಎಡ್ವರ್ಡ್ ಲಿಯರ್
21ನೇ ಮಗನಾಗಿ ಹುಟ್ಟಿದ ಎಡ್ವರ್ಡ್ ಲಿಯರ್ ಮುಂದೆ ಚಿತ್ರಕಾರನೆಂದೂ, ಆಂಗ್ಲ ಸಾಹಿತ್ಯದ ಅಸಂಬದ್ಧ ಕವಿ ಎಂದು ಹೆಸರು ಪಡೆದವನು. ಲಂಡನ್ನ ಬಳಿ 1812ರ ಮೇ 12ರಂದು ಆತ ಜನಿಸಿದ. 15 ವರ್ಷದ ವಯಸ್ಸಿನಲ್ಲಿ ಚಿತ್ರ ಬರೆದು ಜೀವನ ಸಾಗಿಸಬೇಕಾಯಿತು. 19 ವರ್ಷವಾದಾಗ ಲಂಡನ್ನ ಮೃಗಾಲಯದಲ್ಲಿ ಹಕ್ಕಿಗಳ ಚಿತ್ರ ಬರೆಯುವ ಕೆಲಸ ಸಿಕ್ಕಿತು. ಬರೆದ ಸೊಗಸಾದ ಹಾಗೂ ದೋಷರಹಿತವಾದ ಆ ಚಿತ್ರಗಳನ್ನು ಡರ್ಬಿಯ ಅರ್ಲ್ ಕಂಡು, ತಾನು ಸಂಗ್ರಹಿಸಿ ಸಾಕಿಕೊಂಡಿದ್ದ ಪ್ರಾಣಿಗಳ ಚಿತ್ರ ಬರೆಯುವ ಕೆಲಸವನ್ನು ಲಿಯರ್ಗೆ ಒಪ್ಪಿಸಿದ. ಲಿಯರ್ ನಾಲ್ಕು ವರ್ಷಗಳ ಕಾಲ ಇವನ ಮನೆಯಲ್ಲಿಯೇ ಇದ್ದ. ಅರ್ಲ್ ನ ಮೊಮ್ಮಕ್ಕಳೊಡನೆ ಆಡುತ್ತಾ, ಅವರನ್ನು ನಗಿಸಲು, ಅರ್ಥವಿಲ್ಲದ ಆದರೆ ಅತ್ಯಂತ ಸುಂದರವಾದ ಪ್ರಾಸ ಲಯಗಳಿಂದ ಕೂಡಿದ ಪದ್ಯಗಳನ್ನು ರಚಿಸಿ ಅವರಿಗೆ ಓದಿ ಹೇಳುತ್ತಿದ್ದ. ಅಲ್ಲದೆ ಪದ್ಯಗಳಿಗೆ ತಕ್ಕ ಚಿತ್ರಗಳನ್ನು ಲಿಯರ್ ಬರೆದು ತೋರಿಸುತ್ತಿದ್ದ. ಲಿಯರ್ನ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಹವಾ ಬದಲಾವಣೆಗಾಗಿ ಅವನು ಇಟಲಿ, ಗ್ರೀಸ್, ಈಜಿಪ್ಟ್, ಭಾರತ ಮೊದಲಾದ ದೇಶಗಳಿಗೆ ಪ್ರವಾಸ ಮಾಡಿದ.
1846ರಲ್ಲಿ ವಿಕ್ಟೋರಿಯಾ ರಾಣಿಗೆ ಚಿತ್ರಕಲೆಯನ್ನು ಕಲಿಸುವ ಕೆಲಸ ಇವನ ಪಾಲಿಗೆ ಬಂತು. ಲಿಯರ್ ವೃತ್ತಿಯಲ್ಲಿ ಚಿತ್ರಕಾರನಾದರೂ ಅವನ ಪ್ರತಿಭೆ ಪ್ರಕಟವಾದದ್ದು ಅವನ ಅಸಂಬದ್ಧ ಕವನಗಳಲ್ಲಿ. ಅತ್ಯಂತ ವಿಚಿತ್ರ ಕಲ್ಪನೆ, ಅದಕ್ಕೆ ತಕ್ಕ ಭಾಷೆ ಅವಶ್ಯವಾದ ಕಡೆ ಹೊಸ ಹೊಸ ಸಂಯುಕ್ತ ಪದಗಳನ್ನು ಲೀಲಾಜಾಲವಾಗಿ ಸೃಷ್ಟಿಸುವ ಚಾತುರ್ಯ, ತನ್ನ ಹಾಸ್ಯ ಕವನಗಳಿಗೆ ತಕ್ಕ ಹಾಸ್ಯ ಚಿತ್ರ ರಚಿಸುವ ಶಕ್ತಿ ಇವೆಲ್ಲ ಅವನಿಗೆ ಸಿದ್ಧಿಸಿದ್ದವು. ಇವನ ಕವನಗಳ ವಸ್ತು ತೀರಾ ಸರಳ ಹಾಗೂ ಅಸಂಬದ್ಧ. ಕುಳಿತು ಕುಳಿತು ಬೇಸರವಾಗಿ ವಿಹಾರ ಹೊರಡುವ ಕುರ್ಚಿ ಟೇಬಲ್ಗಳು ದಾರಿ ತಪ್ಪುವುದು ಇಂಥದು ಅವನ ಕವನ ವಸ್ತು. ಐದು ಸಾಲಿನ ಲಿಮರಿಕ್ ಹಾಸ್ಯ ಪದ್ಯಗಳನ್ನು ಅತ್ಯಂತ ಜನಪ್ರಿಯಗೊಳಿಸಿದ ಕವಿಗಳಲ್ಲಿ ಲಿಯರ್ ಪ್ರಮುಖ. ಇವನ ಲಿಮರಿಕ್ಗಳಲ್ಲಿ ಪರಿಚಿತವಾದ ಒಂದನ್ನು ಎಸ್. ವಿ. ರಂಗಣ್ಣನವರು ಹೀಗೆ ಕನ್ನಡೀಕರಿಸಿದ್ದಾರೆ:
ಹಿಂದೆ ಅಲ್ಲೊಬ್ಬ ಮುದುಕಾಗಿತ್ತೊಂದು ದಾಡಿ
ಅವನಿಂದ ನಾ ಭಯಪಟ್ಟಿದ್ದು ಸರಿ ನೋಡಿ
ಎರಡು ಗೂಬೆ, ಕಾಡು ಹಕ್ಕಿಯೊಂದು
ನಾಲ್ಕು ಬಾನಾಡಿ, ಕೋಳಿಯೊಂದು
ಎಲ್ಲ ಗೂಡು ಕಟ್ಟಲು ತಾಣ ನನ್ನ ದಾಡಿ
ದೊಡ್ಡವರು ಕಾಲಹರಣಕ್ಕಾಗಿ, ಚಿಕ್ಕವರು ಕುತೂಹಲಕ್ಕಾಗಿ ಮತ್ತು ನಕ್ಕು ನಲಿಯುವುದಕ್ಕಾಗಿ ಓದುವ ಇವನ ಕವನಗಳು ಮಕ್ಕಳ ಸಾಹಿತ್ಯದಲ್ಲಿ ಒಂದು ಹೆಗ್ಗುರುತು.
ಜನರೊಡನೆ ಸುಲಭವಾಗಿ ಬೆರೆತು ನಲಿಯುವುದಕ್ಕೂ ಚೆನ್ನಾಗಿ ರೂಢಿಸಿಕೊಂಡಿದ್ದ ವ್ಯಕ್ತಿ ಲಿಯರ್. ಅವನು ಕೊನೆಯವರೆಗೂ ಅವಿವಾಹಿತನಾಗಿ ಉಳಿದ. ಇವನು ತನ್ನ ಜೀವನದಲ್ಲಿ ಅನುಭವಿಸಿದ ದುಃಖದ ನೆರಳು ಇವನ ಕೆಲವು ಹಾಸ್ಯ ಕವನಗಳಲ್ಲಿ ಕಂಡುಬರುತ್ತದೆ. ‘ದಿ ಬುಕ್ ಆಫ್ ನಾನ್ಸೆನ್ಸ್’ ಮುಂತಾದ ಅಸಂಬದ್ಧ ಕವನಗಳ ನಾಲ್ಕು ಸಂಕಲನಗಳಲ್ಲದೆ, ‘ಜರ್ನಲಸ್ ಆಫ್ ಎಂ ಲ್ಯಾಂಡ್ ಸ್ಕೇಪ್ ಪೇಂಟರ್ ಇನ್ ಗ್ರೀಸ್ ಆ್ಯಂಡ್ ಅಲ್ಬೇನಿಯಾ’ ಮುಂತಾದ ಪ್ರವಾಸ ಸಾಹಿತ್ಯವನ್ನು ಇವನು ರಚಿಸಿದ್ದಾನೆ.
ತನ್ನ ಪ್ರಿಯ ಬೆಕ್ಕಿನೊಂದಿಗೆ ಲಿಯರ್ ಜೀವನದ ಕೊನೆಯ ದಿನಗಳನ್ನು ಇಟಲಿಯಲ್ಲಿ ಕಳೆದು, ಅಲ್ಲಿಯೇ 1888ರ ಜನವರಿ 29ರಂದು ನಿಧನನಾದ. ಲೂಯಿಸ್ ಕ್ಯಾರಲ್ ನೊಂದಿಗೆ ಇವನ ಹೆಸರು ಹಾಸ್ಯ ಸಾಹಿತ್ಯದಲ್ಲಿ ಚಿರಕಾಲ ನಿಲ್ಲುವಂಥದ್ದು. 212ನೇ ಜನ್ಮದಿನದ ನೆನಪಿಗಾಗಿ ಅವರ ಕಿರು ಪರಿಚಯ ಇದು.