ಮುಸ್ಲಿಮರು ಹಿಂದುಳಿದ ವರ್ಗವೆಂದು ಪರಿಗಣಿಸಲು ಅರ್ಹರಲ್ಲವೇ?
ಭಾರತ ಚುನಾವಣೆ ಆಯೋಗವು ಸಾರ್ವತ್ರಿಕ ಚುನಾವಣೆಯನ್ನು ಘೋಷಿಸುವ ಕೆಲವೇ ದಿನಗಳ ಮುನ್ನ ಕರ್ನಾಟಕದ ಭಾಜಪ ಸರಕಾರವು ಸಚಿವ ಸಂಪುಟದಲ್ಲಿ ಅಪರೂಪ ಎನ್ನಬಹುದಾದ ತೀರ್ಮಾನ ಒಂದನ್ನು ಮುಸ್ಲಿಮರ ಮೀಸಲಾತಿ ಕುರಿತು ತೆಗೆದುಕೊಂಡಿತು. ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಡುವ ಚಾರಿತ್ರಿಕ ಎನ್ನಬಹುದಾದ ತೀರ್ಮಾನ ಅದು.
ಭಾರತೀಯ ಸಮಾಜದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿಯೇ ಒಂದು ಪ್ರಮುಖ ಆಧಾರ. ಜಾತಿ ಭಾರತದ ವಾಸ್ತವ. ಅದು ಮುಸ್ಲಿಮ್ ಸಮುದಾಯದೊಳಗೂ ಹಾಸು ಹೊಕ್ಕಾಗಿರುವುದು ಅಷ್ಟೇ ಸತ್ಯ. ಭಾರತದಲ್ಲಿ ಮುಸ್ಲಿಮರಲ್ಲಿ ಜಾತಿಗಳನ್ನು ಮೊದಲು ಗುರುತಿಸಿದ್ದು 14ನೇ ಶತಮಾನದಲ್ಲಿ ಝಿಯಾವುದ್ದೀನ್ ಬರನಿ. ಅವನು ತನ್ನ ಪುಸ್ತಕ ‘ಫತ್ವ-ಇ-ಜಹಾನ್‌ದಾರಿ’ಯಲ್ಲಿ ಉತ್ತಮ, ಮಧ್ಯಮ ಹಾಗೂ ಕನಿಷ್ಠ ಎಂಬ ಮೂರು ದರ್ಜೆಗಳನ್ನು ಮುಸ್ಲಿಮರಲ್ಲಿ ಗುರುತಿಸಿದ್ದಾನೆ. ಬಾಬಾ ಸಾಹೇಬರು ಕೂಡ ಜಾತಿಗಳು ಮುಸ್ಲಿಮರಲ್ಲಿಯೂ ಉಳಿದಿವೆ ಎಂದಿದ್ದಾರೆ. ಮುಂದುವರಿದು ಅವರೇ, ಹಿಂದೂ ಸಮಾಜದಂತೆಯೇ ಸಾಮಾಜಿಕ ಪಿಡುಗುಗಳ ಯಾತನೆಯಿಂದ ಮುಸ್ಲಿಮ್ ಸಮುದಾಯ ಸಹ ಬಳಲುತ್ತಿವೆ ಎಂದಿರುತ್ತಾರೆ.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಇರುವ ಮಾನದಂಡಗಳಿಗೆ ಯಾವುದೇ ಧರ್ಮ ಸಂಬಂಧಿತ ನಿರ್ಬಂಧ ಇರುವುದಿಲ್ಲ ಮತ್ತು ಯಾವುದೇ ಜಾತಿ ಅಥವಾ ಸಮೂಹಗಳು ಆ ಮಾನದಂಡಗಳಿಗೆ ಅನುಗುಣವಾಗಿದ್ದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಧರ್ಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಸೇರಿಸಬಹುದು. ಆ ಪ್ರಕಾರವಾಗಿ ಮುಸ್ಲಿಮ್ ಸಮೂಹಗಳ ಅಂಥ ವರ್ಗಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದವರ ಪಟ್ಟಿಯಲ್ಲಿ ಸೇರಿಸಿವೆ.
ಸ್ವಾತಂತ್ರ ಪೂರ್ವದಲ್ಲಿ 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉದ್ಯೋಗ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಲೆಸ್ಲಿ ಸಿ. ಮಿಲ್ಲರ್ ಸಮಿತಿ ರಚಿಸುತ್ತಾರೆ. ಸಮಿತಿ ಎಲ್ಲಾ ಮುಸ್ಲಿಮರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿ ಮೀಸಲಾತಿ ನೀಡಿದೆ.
ಸ್ವತಂತ್ರ ಭಾರತದ 1953ರಲ್ಲಿ ಕಾಕಾ ಕಾಲೆಲ್ಕರ್ ಆಯೋಗವು ಮುಸ್ಲಿಮರ ಕೆಲವು ಹಿಂದುಳಿದ ಉಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿತ್ತು ಎಂಬುದು ಬಹು ಮುಖ್ಯವಾಗುತ್ತದೆ.
ಮತ್ತೆ ಒಕ್ಕೂಟ ಸರಕಾರ 22 ವರ್ಷಗಳ ನಂತರ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವುದು. ಇದು ಇಡೀ ಮುಸ್ಲಿಮ್ ಸಮೂಹಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ನಿರ್ಧರಿಸದಿದ್ದರೂ ಹಿಂದೂಯೇತರ ಹಿಂದುಳಿದ ವರ್ಗಗಳನ್ನು ಗುರುತಿಸಲು ಕೆಲವು ಮಾನದಂಡಗಳನ್ನು ಅನುಸರಿಸಿದೆ. ಅವು: ಹಿಂದೂಯೇತರ ಧರ್ಮಗಳಿಗೆ ಮತಾಂತರ ಹೊಂದಿರುವ ಎಲ್ಲಾ ಅಸ್ಪೃಶ್ಯರು ಹಾಗೂ ಹೆಸರಿನಿಂದಲೇ ಗುರುತಿಸಲ್ಪಡುವ ಕಸುಬು ಆಧಾರಿತ ಜಾತಿಗಳಂತಹವುಗಳನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸಿದೆ. ಆಯೋಗ ಗುರುತಿಸಿರುವ ಕರ್ನಾಟಕದ ಜಾತಿಗಳೆಂದರೆ- ಅನ್ಸಾರಿ, ಜುಲಾಯಿ, ಭಾಗ್ವಾನ್, ತಂಬೋಲಿ, ಬೇರಿ, ಚಪ್ಪರ, ದರ್ಜಿ, ಧೋಬಿ, ಮನ್ಸೂರಿ, ಪಿಂಜಾರ, ನಲ್ಬಂದ್, ಪಿಂಡಾರ, ಖುರೇಶಿ ಮುಂತಾದವು. ಆನಂತರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಅವುಗಳನ್ನು ಸರಿಪಡಿಸಿ, ವಿಚಾರಣೆ ಮೂಲಕ ಇನ್ನೂ ಕೆಲವು ಉಪ ಪಂಗಡಗಳನ್ನು ಸೇರಿಸಿತು. ಆದರೆ ಕೆಲವು ಮುಂದುವರಿದ ಪಂಗಡಗಳನ್ನು ಸೇರಿಸಿರುವುದಿಲ್ಲ.
ಕರ್ನಾಟಕದಲ್ಲಿ, 1960ರ ಸಮಯದಲ್ಲಿ ರಚಿಸಿದ ಡಾ. ನಾಗನಗೌಡ ಸಮಿತಿ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಈ ರೀತಿ ಅಭಿಪ್ರಾಯ ಪಟ್ಟಿದೆ: ‘‘ಮುಸ್ಲಿಮರು ಮತ್ತು ಕ್ರೈಸ್ತರು ಜಾತಿ ಪದ್ಧತಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಸಂಗತಿ ನಮಗೆ ತಿಳಿದಿದೆ ಹಾಗಿದ್ದರೂ ಉಚ್ಚ ಮತ್ತು ನೀಚ ಎಂಬ ಪರಿಕಲ್ಪನೆಗಳು ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಗಳಲ್ಲೂ ಇವೆ. ಹಾಗಾಗಿ ಸಮಿತಿಯು ಎಲ್ಲ ಮುಸ್ಲಿಮರನ್ನು ಹಿಂದುಳಿದವರೆಂದು ಪರಿಗಣಿಸದೆ ಕೆಲವು ಪಂಗಡಗಳನ್ನು ಹಿಂದುಳಿದವರು ಎಂದು ಪರಿಗಣಿಸಿ ಪಟ್ಟಿಯಲ್ಲಿ ಸೇರಿಸಿದೆ.’’
1972ರಲ್ಲಿ ರಚಿತವಾದ ಹಾವನೂರು ಆಯೋಗ ಇಡೀ ಮುಸ್ಲಿಮ್ ಸಮುದಾಯಕ್ಕೆ ಅವರ ಹಿಂದುಳಿದಿರುವಿಕೆಗೆ ಬೇರೊಂದು ಮಾರ್ಗ ಕಂಡುಕೊಳ್ಳಬೇಕೆಂದು ಶಿಫಾರಸು ಮಾಡಿತ್ತು. ಆದರೆ (ಎಂ.ಆರ್.ಬಾಲಾಜಿ ವರ್ಸಸ್ ಸ್ಟೇಟ್ ಆಫ್ ಮೈಸೂರು) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ, ಮುಸ್ಲಿಮ್ ಸಮೂಹಗಳಲ್ಲಿರುವ ಕೆಲವು ಉಪ ಪಂಗಡಗಳನ್ನು, ವಿಮುಕ್ತ ಬುಡಕಟ್ಟುಗಳನ್ನು ಅಥವಾ ಅಲೆಮಾರಿ ಬುಡಕಟ್ಟುಗಳನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿತ್ತು.
ಆದರೆ 1977ರಲ್ಲಿ ಡಿ. ದೇವರಾಜ ಅರಸು ಮುಸ್ಲಿಮ್ ಸಮುದಾಯವನ್ನು ಸಂಪೂರ್ಣವಾಗಿ ಹಿಂದುಳಿದ ಕೋಮು ಎಂದು ಪರಿಗಣಿಸಿ ಒಕ್ಕಲಿಗ ಮುಂತಾದ ಜಾತಿಗಳೊಡನೆ ಸೇರಿಸಿ ಶೇ.18ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿ ಆದೇಶ ಹೊರಡಿಸಿದ್ದರು ಎಂಬುದು ಉಲ್ಲೇಖನೀಯ. ಈ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ನ್ಯಾಯಾಲಯವು ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿರದಿದ್ದರೂ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಪುರಸ್ಕರಿಸಿ ಉಚ್ಚ ನ್ಯಾಯಾಲಯ ಈ ಮುಂದಿನಂತೆ ಅಭಿಪ್ರಾಯ ಪಟ್ಟಿದೆ: ‘‘ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದ ಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಮ್ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ.
ನ್ಯಾ. ಚಿನ್ನಪ್ಪ ರೆಡ್ಡಿ ಅಧ್ಯಕ್ಷತೆಯ ಏಕವ್ಯಕ್ತಿ ಆಯೋಗ 1990ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಅದರಲ್ಲಿ ಮುಸ್ಲಿಮ್ ಸಮೂಹಗಳ ಬಗ್ಗೆ ಆಯೋಗ ವಿಸ್ತೃತವಾದ ಅಧ್ಯಯನ ನಡೆಸಿದೆ. ಆರ್.ಎಚ್. ಗೂಡ್ವಾಲ ಅಧ್ಯಕ್ಷತೆಯ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಧ್ಯಂತರ ವರದಿಯಲ್ಲಿ ಮುಸ್ಲಿಮರ ಸ್ಥಿತಿಗತಿಗಳ ಕುರಿತು ಹೇಳಿರುವ ಕೆಲವು ಅಂಶಗಳನ್ನು ಆಯೋಗ ತನ್ನ ವರದಿಯಲ್ಲಿ ದಾಖಲಿಸಿದೆ. ಮುಸ್ಲಿಮರ ವಾಸಸ್ಥಾನ -ಕಡು ಬಡತನ-ಹುಳಗಳಿಗಿಂತ ಕಡೆಯಾಗಿ ಒಂದೆಡೆ ಬದುಕುವುದು ಈ ಎಲ್ಲಾ ಅಂಶಗಳನ್ನು ವರದಿಯಲ್ಲಿ ಸೇರಿಸಿರುತ್ತಾರೆ. ನ್ಯಾ. ಚಿನ್ನಪ್ಪರೆಡ್ಡಿ ಅವರೇ ಕೆಲವು ಪ್ರದೇಶಗಳಿಗೆ ಭೇಟಿಕೊಟ್ಟು ಕಣ್ಣಾರೆ ಮುಸ್ಲಿಮರ ಸ್ಥಿತಿಗತಿಗಳನ್ನು ಕಂಡುಕೊಂಡಿರುತ್ತಾರೆ. ಹಾಗೆಯೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವರು ಪಡೆದಿರುವ ಪ್ರಾತಿನಿಧ್ಯವನ್ನು ಅಂಕಿ ಅಂಶಗಳ ಸಮೇತ ಪ್ರಸ್ತುತಪಡಿಸಿರುತ್ತಾರೆ. ಈ ಚಿತ್ರಣದ ಹಿನ್ನೆಲೆಯಲ್ಲಿ ನ್ಯಾ. ಚಿನ್ನಪ್ಪ ರೆಡ್ಡಿ ಅವರು ಇಡೀ ಮುಸ್ಲಿಮ್ ಸಮೂಹವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ಪರಿಗಣಿಸಿ ಅದನ್ನು 2ನೇ ಪ್ರವರ್ಗದಲ್ಲಿ ಇನ್ನಿತರ ಸಮುದಾಯಗಳೊಡನೆ ಸೇರಿಸಿ ಶೇ.28ರಷ್ಟು ಮೀಸಲಾತಿ ಕೋಟಾ ನಿಗದಿಪಡಿಸಿದ್ದರು.
ಸರಕಾರ 1994ರಲ್ಲಿ ನ್ಯಾ. ಚಿನ್ನಪ್ಪರೆಡ್ಡಿ ವರದಿಯನ್ನು ಆಧರಿಸಿ ಹೊಸದಾಗಿ ಮೀಸಲಾತಿಯ ಆದೇಶವನ್ನು ಹೊರಡಿಸುತ್ತದೆ. ಹಾಗೆ ಹೊರಡಿಸುವಾಗ ಮುಸ್ಲಿಮರನ್ನು ಬೇರ್ಪಡಿಸಿ ಪ್ರವರ್ಗ-2ಬಿ ಎಂದು ಪ್ರತ್ಯೇಕ ವಿಂಗಡಿಸಿ ಯಾವುದೇ ಮಾನದಂಡ ಅನುಸರಿಸದೆ, ವೈಜ್ಞಾನಿಕವಲ್ಲದ ರೀತಿಯಲ್ಲಿ ಮೀಸಲಾತಿ ಕೋಟಾ 4ರಷ್ಟನ್ನು ನಿಗದಿಗೊಳಿಸಿತ್ತು. ಹಾಗೆ ಕೋಟಾ ನಿಗದಿಗೊಳಿಸಿದ್ದುದು ಅನ್ಯಾಯದ ಪರಮಾವಧಿ ಎನ್ನಲಡ್ಡಿ ಇಲ್ಲ. ಈ ವ್ಯವಸ್ಥೆ ಕಳೆದ 29 ವರ್ಷಗಳಿಂದಲೂ ನಡೆದುಕೊಂಡು ಬಂದು ಮುಸ್ಲಿಮರು ತಕ್ಕಮಟ್ಟಿಗೆ ಅನುಕೂಲ ಪಡೆಯುತ್ತಿದ್ದರು.
ಹಿಂದಿನ ಸರಕಾರ ಈ ವ್ಯವಸ್ಥೆಯನ್ನು ಬದಲಿಸಿ ಇಡೀ ಮುಸ್ಲಿಮ್ ಸಮುದಾಯ ಹಿಂದುಳಿದ ವರ್ಗ ಅಲ್ಲ ಎಂದು ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ. ಏಕಪಕ್ಷೀಯ ಎಂದು ಹೇಳಲು ಪ್ರಬಲವಾದ ಕಾರಣವಿದೆ. ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿರುವಂತೆ ಒಕ್ಕೂಟ ಮತ್ತು ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳಿಗಾಗಿಯೇ ಅನ್ವಯಿಸುವಂತೆ ಆಯೋಗ ರಚಿಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ, 1995 ಕಲಂ 11ರಂತೆ ಪ್ರತೀ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಆಯೋಗದ ಸಲಹೆ ಪಡೆದುಕೊಂಡು ಪರಿಸ್ಕರಿಸಬೇಕು. ಆದರೆ ಹಿಂದಿನ ಸರಕಾರ ಈ ನ್ಯಾಯೋಚಿತ ಪ್ರಕ್ರಿಯೆಯನ್ನು ಮಾಡಿಲ್ಲ. ಈ ಅನ್ಯಾಯದ ನಿಲುವು ಪ್ರಶ್ನಾರ್ಹವಾಗಿದೆ. ಕಣ್ಣಿಗೆ ಕಾಣುವ ಇಂತಹ ಅನ್ಯಾಯವನ್ನು ಕಾಣದೆ ಕುಳಿತಿರುವ, ಸಮೂಹ ಪ್ರಜ್ಞೆಯೇ ಇಲ್ಲದ ಮುಸ್ಲಿಮ್ ಜನ ಸಮುದಾಯದ ಈ ನಡೆ ನನಗೆ ಸೋಜಿಗ ತಂದಿದೆ. ಇದು ದುರದೃಷ್ಟಕರ.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘‘ಧಾರ್ಮಿಕ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳ ಮೀಸಲಾತಿಗೆ ಆರ್ಹರಲ್ಲ ಆದ್ದರಿಂದ ಹಿಂದುಳಿದ ವರ್ಗಗಳ ಪಟ್ಟಿಯಿಂದ ಅವರನ್ನು ಕೈ ಬಿಡಲಾಗಿದೆ ಎಂದಿದ್ದಾರೆ’’. ಅವರ ದೃಷ್ಟಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರೇ ಇರಬಹುದು. ಬೌದ್ಧರು, ಕ್ರೈಸ್ತರು, ಸಿಖ್ಖರು ಮತ್ತು ಜೈನರೂ ಕೂಡ ಧಾರ್ಮಿಕ ಅಲ್ಪಸಂಖ್ಯಾತರು ಎಂಬುದು ಅವರಿಗೆ ತಿಳಿಯದೇ. ಕೇವಲ ವಾದಕ್ಕಾಗಿ ಅವರ ಮಾತನ್ನು ಒಪ್ಪುವುದಾದರೆ ಮೀಸಲಾತಿ ಪಟ್ಟಿಯ ಪ್ರವರ್ಗ-2ಡಿ(ಹಿಂದಿನ 3ಬಿ)ಯಲ್ಲಿ ಕ್ರೈಸ್ತರು ಮತ್ತು ಜೈನ ದಿಗಂಬರರು ಸ್ಥಾನ ಪಡೆದಿದ್ದಾರೆ. ಅವರ ಬಗ್ಗೆ ಏಕೆ ದಿವ್ಯ ಮೌನಕ್ಕೆ ಶರಣಾಗಿದ್ದರು ಮಾನ್ಯ ಮಾಜಿ ಮುಖ್ಯಮಂತ್ರಿಗಳು.
ರಾಜ್ಯದಲ್ಲಿ ಇಡಬ್ಲುಎಸ್ ಜಾರಿಗೆ ಬಂದಿರುವುದಿಲ್ಲ. ಸದ್ಯ ಯಾವುದೇ ಮೀಸಲಾತಿ ವರ್ಗಕ್ಕೆ ಸೇರದ ಬ್ರಾಹ್ಮಣ, ಆರ್ಯವೈಶ್ಯ, ವೈಷ್ಣವ ನಗರ್ಥ, ಮೊದಲಿಯಾರ್, ಪೊಮ್ಮಲ, ಬೇಡಗಂಪಣ, ಘ್ಯಾರೆ ಇನ್ನು ಮುಂತಾದ ಜಾತಿ-ಉಪಜಾತಿಗಳು ಇವೆ. ಅವುಗಳಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಲು ಕೆಲವು ಅರ್ಹತೆ ಪಡೆದಿವೆ. ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರಗುಳಿದ ಇಂಥವು ಶೇ. 3ರಷ್ಟಿರಬಹುದು. ಇಡಬ್ಲುಎಸ್ ಮೂಲಕ ಮುಸಲ್ಮಾನರನ್ನು ಸೇರಿಸಿ ಎಷ್ಟು ಪ್ರಮಾಣದ ಮೀಸಲಾತಿ ಕೋಟಾ ನಿಗದಿ ಮಾಡಲು ಸರಕಾರದ ಬಳಿ ದತ್ತಾಂಶವೇ ಇಲ್ಲವಲ್ಲ! ಯಾಕೆಂದರೆ ಇಡಬ್ಲುಎಸ್ ಕೋಟಾದಡಿ ಶೇ.10ರ ವರೆಗೆ ಮೀಸಲಾತಿ ನಿಗದಿಪಡಿಸಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಭಾಜಪ ಸರಕಾರದ್ದು ಅಲ್ಪಸಂಖ್ಯಾತರ ಮೇಲಿರುವ ದ್ವೇಷ ಹಾಗೂ ರಾಜಕೀಯ ಕಾರಣಗಳಿಗಾಗಿ ತೆಗೆದುಕೊಂಡ ತೀರ್ಮಾನ ಎಂಬುದನ್ನು ಸಾಮಾನ್ಯ ಪ್ರಜ್ಞಾವಂತನೂ ಕೂಡ ಹೇಳಬಲ್ಲ!
ಭಾಜಪ ಸರಕಾರದ ನ್ಯಾಯೋಚಿತವಲ್ಲದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ನ್ಯಾಯಾಲಯವು ಬಾಯಿ ಮಾತಿನಲ್ಲಿ ಸರಕಾರವು ಈ ಆದೇಶವನ್ನು ಅನುಷ್ಠಾನಗೊಳ್ಳಬಾರದೆಂದು ಆಜ್ಞಾಪಿಸಿ ಪ್ರತಿವಾದಿಗಳಿಗೆ ನೋಟಿಸು ಜಾರಿ ಮಾಡಲು ಆದೇಶಿಸಿದೆ. ಸದ್ಯ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಕಾಯುವುದೊಂದೇ ಬಾಕಿ