ನಾಯಕರ ವಿರುದ್ಧದ ಅಸಮಾಧಾನ ಸ್ಫೋಟ, ಬೀದಿಗೆ ಬಂತು ಬಿಜೆಪಿ ಜಗಳ
ಹೊಂದಾಣಿಕೆ ಆರೋಪದ ಬೆನ್ನಿಗೇ ಭುಗಿಲೆದ್ದ ಆಕ್ರೋಶ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ರಾಜ್ಯ ಬಿಜೆಪಿಯನ್ನು ಸಂಪೂರ್ಣ ಕಂಗೆಡಿಸಿ ಬಿಟ್ಟಂತೆ ಕಾಣುತ್ತಿದೆ. ಚುನಾವಣೆ ಗೆಲ್ಲದಿದ್ದರೂ ಹೇಗಾದರೂ ಮಾಡಿ ತಾವೇ ಅಧಿಕಾರ ಹಿಡಿಯೋದು ಇತ್ತೀಚಿಗೆ ಬಿಜೆಪಿಗೆ ದೇಶಾದ್ಯಂತ ಅಭ್ಯಾಸವಾಗಿ ಬಿಟ್ಟಿದೆ. ಕರ್ನಾಟಕದಲ್ಲಿ ಬಹುಮತ ಬರದಿದ್ದರೆ ನಮ್ಮತ್ರ ಪ್ಲ್ಯಾನ್ ಬಿ ಇದೆ ಎಂದು ಮತದಾನ ಮುಗಿದ ಬೆನ್ನಿಗೇ ಹಿರಿಯ ಬಿಜೆಪಿ ನಾಯಕರೇ ಹೇಳಿದ್ದರು.
ಆದರೆ ಕನ್ನಡಿಗರ ಪ್ಲ್ಯಾನ್ ಬೇರೇನೇ ಇತ್ತು. ಅವರು ಕಾಂಗ್ರೆಸ್ ಗೆ ಭರ್ಜರಿ ಬಹುಮತ ಕೊಟ್ಟು ಅಧಿಕಾರಕ್ಕೇರಿಸಿ ಬಿಟ್ಟರು. ಹಾಗಾಗಿ ಬಿಜೆಪಿಯ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಆ ನಿರಾಶೆಯಲ್ಲಿ ಪಕ್ಷದೊಳಗೆ ಈವರೆಗೆ ಹೇಗೋ ಮುಚ್ಚಿಟ್ಟಿದ್ದ ಭಿನ್ನಾಭಿಪ್ರಾಯಗಳು, ಅಸಮಾಧಾನಗಳು, ಆಕ್ರೋಶ ಎಲ್ಲವೂ ಒಟ್ಟಿಗೆ ಹೊರಬರುತ್ತಿವೆ. ಹಿರಿಯ ನಾಯಕರ ವಿರುದ್ಧವೇ ನೇರವಾಗಿ ಬಹಿರಂಗವಾಗಿ ಆರೋಪ, ಪ್ರತ್ಯಾರೋಪಗಳು ನಡೀತಿವೆ.
ಒಟ್ಟಾರೆ ಗ್ಯಾರಂಟಿ ಶಕ್ತಿ ತುಂಬಿಕೊಂಡಿರುವ ಕಾಂಗ್ರೆಸ್ ಅನ್ನು ಎದುರಿಸಲು ಸಜ್ಜಾಗಬೇಕಿದ್ದ ರಾಜ್ಯ ಬಿಜೆಪಿ ಸದ್ಯ ತನ್ನ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರನ್ನೇ ಎದುರಿಸುವಲ್ಲಿ ಸುಸ್ತಾಗಿ ಹೋಗಿದೆ.
ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ರವಿವಾರ ನಡೆದ ಕಾರ್ಯಕರ್ತರ ಸಭೆಗಳೇ ಸಾಕ್ಷಿ. ಸೋಮವಾರ ಬಾಗಲಕೋಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೂಡಾ ನಾಯಕರ ವಿರುದ್ಧ ಕಾರ್ಯಕರ್ತರು ರೊಚ್ಚಿಗೆದ್ದ ಘಟನೆ ನಡೆದಿದೆ. ರವಿವಾರ ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಟಾರ್ಗೆಟ್ ಮಾಡಿ ಮಾತಿನೇಟು ನೀಡಿದ್ದಾರೆ. ಎಲ್ಲರೆದುರೇ ಯತ್ನಾಳ್ ಹೀಗೆ ಮಾತಾಡುವುದನ್ನು ನೋಡಿ ಸಿಟ್ಟಾಗಿರುವ ಬೊಮ್ಮಾಯಿ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ಕೊಟ್ಟಿದ್ದಾರೆ. ಇದೆಲ್ಲವೂ ಎಲ್ಲರೆದುರೇ ವೇದಿಕೆಯಲ್ಲೇ ನಡೆದಿದೆ.
ಯತ್ನಾಳ್ ಮಾತಿಗೆ ತಿರುಗೇಟು ನೀಡಿದ ಬೊಮ್ಮಾಯಿ ಅವರು, "ನಾನು ಎಂದಿಗೂ ರಾಜಿ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಮನೆಗೆ ಬರುವವರನ್ನು ಬೇಡ ಎನ್ನಲು ಆಗುವುದಿಲ್ಲ. ಅದು ಕನ್ನಡಿಗರ ಸೌಜನ್ಯ. ಯಾರೋ ಮನೆಗೆ ಬಂದ ತಕ್ಷಣ ನಾವು ರಾಜಿ ಆಗುವುದಿಲ್ಲ ಗೌಡ್ರೆ. ನೀವು ತಲೆ ಕೆಡಿಸಿಕೊಳ್ಳಬೇಡಿ. ಕೆಲವರು ಮನೆಗೆ ಹೋಗದೆಯೇ ಒಳಗೊಳಗೇ ರಾಜಿ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ನಾವು ಬಹಿರಂಗವಾಗಿ, ಸ್ಪಷ್ಟವಾಗಿದ್ದೇವೆ " ಎಂದು ಹೇಳಿದ್ದಾರೆ.
ವಿಪಕ್ಷ ನಾಯಕರಾಗಲು ಭಾರೀ ಲಾಬಿ ಮಾಡುತ್ತಿರುವ ಯತ್ನಾಳ್ ಸದ್ಯ ಕಾಂಗ್ರೆಸ್ ಗಿಂತ ಜಾಸ್ತಿ ಬಿಜೆಪಿ ಪಾಲಿಗೇ ವಿರೋಧ ಪಕ್ಷ ನಾಯಕ ಆಗಿದ್ದಾರಾ ಎಂಬ ಸಂಶಯ ಆ ಪಕ್ಷದ ನಾಯಕರನ್ನು ಕಾಡುತ್ತಿದೆ. ಆ ಪರಿ ಅವರು ಪಕ್ಷದ ನಾಯಕರ ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಒಟ್ಟಾರೆ ಯತ್ನಾಳ್ ಹೇಳಿಕೆ ಸಂಸದ ಪ್ರತಾಪ ಸಿಂಹ ಹಾಗೂ ಮಾಜಿ ಶಾಸಕ ಸಿಟಿ ರವಿ ಅವರ 'ಹೊಂದಾಣಿಕೆ ರಾಜಕಾರಣ' ಆರೋಪ ವಿವಾದಕ್ಕೆ ತುಪ್ಪ ಸುರಿದಂತಾಗಿದೆ.
ನಿನ್ನೆಯೇ ಬೆಂಗಳೂರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರೆದುರೇ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿ ಗದ್ದಲ ಎಬ್ಬಿಸಿದ್ದಾರೆ. ದಾಸರಹಳ್ಳಿ ಶಾಸಕ ಮುನಿರಾಜು ಅವರು " ಬೆನ್ನಿಗೆ ಚೂರಿ ಹಾಕಿದವರನ್ನ ಪಕ್ಷದಿಂದ ದೂರ ಇಡೋಣ" ಎಂದು ಹೇಳಿದಾಗ ನೆರೆದಿದ್ದ ಕಾರ್ಯಕರ್ತರು " ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗ್ತಿಲ್ಲ " ಎಂದು ಕೂಗಿದ್ದಾರೆ. " ಕಾರ್ಯಕರ್ತರು ತಪ್ಪು ಮಾಡಿದಾಗ ಕಾರ್ಯಕರ್ತರಿಗೆ ಬುದ್ದಿ ಹೇಳ್ತೀರ. ಅದೇ ನಾಯಕರು ತಪ್ಪುಮಾಡಿದಾಗ ಯಾಕೆ ಬುದ್ದಿ ಹೇಳಲ್ಲ?" ಎಂದು ಅಸಮಾಧಾನ ಹೊರಹಾಕಿದ್ದಾರೆ
"ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ಕೆಳಗಿಳಿಸಿದಾಗ ಯಾಕೆ ನಾಯಕರು ಮಾತನಾಡಲಿಲ್ಲ" ಎಂದೂ ಕೇಳಿದ್ದಾರೆ. ಈ ವೇಳೆ ಶಾಸಕ ಮುನಿರಾಜು ಸಮಾಧಾನ ಪಡಿಸಿದರೂ ಕಾರ್ಯಕರ್ತರು ಬಗ್ಗಲಿಲ್ಲ. ಪರಿಸ್ಥಿತಿ ಕೈಮೀರಿ ಹೋಗುವ ಹಂತ ತಲುಪಿತ್ತು. ಕೊನೆಗೆ ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿದ್ದಾರೆ. " ಸಮಯ ಕೊಡ್ತೇನೆ, ಸಭೆ ನಂತರ ಬಂದು ನನ್ನ ಜೊತೆ ಚರ್ಚಿಸಿ. ನಿಮ್ಮ ಸಮಸ್ಯೆ ಬಗೆಹರಿಸ್ತೇನೆ. ಈಗ ಸುಮ್ಮನಾಗದಿದ್ರೆ ನಾನು ಇಲ್ಲಿಂದ ಹೋಗ್ತೇನೆ " ಎಂದು ಯಡಿಯೂರಪ್ಪ ಹೇಳಿದ್ದಾರೆ. ಆ ಬಳಿಕವಷ್ಟೇ ಕಾರ್ಯಕರ್ತರು ತಣ್ಣಗಾಗಿದ್ದಾರೆ.
ಬ್ಯಾಟರಾಯನಪುರದಲ್ಲೂ ನಿನ್ನೆ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಗೆ ಬಂದಿದ್ದ ಅಶ್ವತ್ಥ್ ನಾರಾಯಣ್ ಬಳಿ ಸಭಾಂಗಣದ ಹೊರಗೇ ಪರಾಜಿತ ಬಿಜೆಪಿ ಅಭ್ಯರ್ಥಿ ತಮ್ಮೆಶ್ ಗೌಡ ತೀವ್ರ ಅಸಮಾಧಾನ ಹೊರಹಾಕಿ ದೂರು ನೀಡಿದ್ದಾರೆ. " ಅಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನೇನ್ದ್ರ ಕುಮಾರ್ ನೇರವಾಗಿಯೇ ಕಾಂಗ್ರೆಸ್ ಗಾಗಿ ಕೆಲಸ ಮಾಡಿದ್ದಾರೆ. ಅವರನ್ನು ಒಳಗೆ ವೇದಿಕೆಯಲ್ಲಿ ಕೂರಿಸಿದ್ರೆ ನಾವು ಹೇಗೆ ಒಳಗೆ ಬರೋದು ಅಂತ ಕೇಳಿದ್ದಾರೆ. ಅವರನ್ನು ಹೊರಗೆ ಕಳಿಸಿ ಎಂದು ಆಗ್ರಹಿಸಿದ್ದಾರೆ ". ಅಶ್ವತ್ಥ್ ನಾರಾಯಣ್ ಸಾಕಷ್ಟು ಹೇಳಿದರೂ ತಮ್ಮೆಶ್ ಗೌಡ ಹಠ ಬಿಟ್ಟಿಲ್ಲ.
ರವಿವಾರದ ಬೆಳಗಾವಿ ಸಭೆಯಲ್ಲಿ "ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಹೊರಗಿಡಿ" ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೂ ಹೇಳಿದ್ದಾರೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಶಾಸಕರು ಸೇರಿ ಎಲ್ಲರೂ ಅಧೈರ್ಯರಾಗಿದ್ದರು. ಆದರೆ, ಕೆಲವರು ಬಿಜೆಪಿಯಲ್ಲಿದ್ದುಕೊಂಡು ಬಲಿಷ್ಠರಾಗಿ ನಂತರ ನಮ್ಮವರನ್ನೇ ಸೋಲಿಸಿದ್ದಾರೆ. ರಾಮದುರ್ಗ, ಕಿತ್ತೂರಿನಲ್ಲಿ ಈ ರೀತಿ ನಮ್ಮವರನ್ನು ಸೋಲಿಸಿದ್ದಾರೆ. ಟಿಕೆಟ್ ಅಂತಿಮವಾದ ಮೇಲೆ ಕೆಲವರು ವಿರೋಧ ಮಾಡುವ ಕೆಲಸ ಮಾಡಿದರು. ಕಾರ್ಯಕರ್ತರಿಗೆ ಈ ವಿಚಾರದಲ್ಲಿ ಬಹಳ ನೋವಾಗಿದೆ. ಒಂದು ಕ್ಷೇತ್ರವನ್ನು ಗೆಲ್ಲಿಸದವರನ್ನು ಕೋರ್ ಕಮಿಟಿಯಲ್ಲಿ ಇಟ್ಟುಕೊಳ್ಳಬೇಡಿ" ಅಂತ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಇತ್ತೀಚಿಗೆ ನೇರವಾಗಿಯೇ ಪಕ್ಷದ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕುತ್ತಿರುವ ಮಾಜಿ ಸಿಎಂ ಸದಾನಂದ ಗೌಡ "ಚುನಾವಣೆಯಲ್ಲಿ ತಂತ್ರ ರೂಪಿಸುವಲ್ಲಿ ಎಡವಿದ್ದೇ ಬಿಜೆಪಿ ಸೋಲಿಗೆ ಕಾರಣ. ‘ಡಬಲ್ ಎಂಜಿನ್ ಸರ್ಕಾರ, ನಮಗೇ ಜನ ಮತ ಹಾಕುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದೆವು. ಆದರೆ, ಚುನಾವಣೆ ಫಲಿತಾಂಶದಿಂದ ಬುದ್ಧಿ ಕಲಿತಿದ್ದೇವೆ. ಪಕ್ಷ ಆಡಳಿತದಲ್ಲಿ ಇದ್ದಾಗ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ನೋವಿದೆ. ಅದನ್ನು ಮುಂದೆ ಸರಿಪಡಿಸುವ ಕೆಲಸ ಮಾಡುತ್ತೇವೆ" ಎಂದು ಮೊನ್ನೆ ಮೈಸೂರಲ್ಲಿ ಹೇಳಿದ್ದಾರೆ.
ಈ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂಡ ಹಲವರು ಪ್ರಯತ್ನಿಸುತ್ತಿದ್ದು, ಅದೂ ಈಗ ಬೀದಿಗೆ ಬಂದಿರೋ ಹಾಗೆ ಕಾಣ್ತಾ ಇದೆ. ಒಂದು ಕಡೆ ನಳಿನ್ ಕುಮಾರ್ ಕಟೀಲ್ " ನಾನು ಸ್ಥಾನ ಬಿಡುತ್ತಿದ್ದೇನೆ ಎಂದು ಹೇಳುತ್ತಾರೆ, ಮತ್ತೆ ಇಲ್ಲ, ನಾನು ರಾಜೀನಾಮೆ ಕೊಟ್ಟೇ ಇಲ್ಲ" ಎನ್ನುತ್ತಾರೆ. ಹೈಕಮಾಂಡ್ ಹೇಳಿದ್ದಕ್ಕೆ ಎರಡೆರಡು ಕಡೆ ನಿಂತು ಎರಡೂ ಕಡೆ ಸೋತು ತೀವ್ರ ಹತಾಶರಾಗಿರುವ ಮಾಜಿ ಸಚಿವ ವಿ ಸೋಮಣ್ಣ "ರಾಜ್ಯಾಧ್ಯಕ್ಷ ಸ್ಥಾನ ನನಗೆ ಕೊಡಿ. ನೂರು ದಿನಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಹೇಗೆ ನಿರ್ವಹಿಸಬೇಕು ಅಂತ ತೋರಿಸ್ತೀನಿ" ಅಂತ ನೇರವಾಗಿಯೇ ಹೇಳಿದ್ದಾರೆ. ಇದು ಹಾಲಿ ರಾಜ್ಯಾಧ್ಯಕ್ಷರ ಕಾರ್ಯವೈಖರಿ ಸರಿ ಇರಲಿಲ್ಲ ಅಂತ ಸೋಮಣ್ಣ ಬಹಿರಂಗವಾಗಿ ಹೇಳಿದ ಹಾಗಾಗಿದೆ.
ಸೋಮಣ್ಣ ಹೇಳಿಕೆ ಬೆನ್ನಲ್ಲೇ ರವಿವಾರ ಮಾತಾಡಿರುವ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ "ನಾನೂ ಬಿಜೆಪಿಯ ಹಿರಿಯ ನಾಯಕ. ಅವಕಾಶ ಕೊಟ್ಟರೆ ನಾನೂ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತೇನೆ. ಬಿಜೆಪಿಯಲ್ಲಿ ದಲಿತರು ರಾಜ್ಯಾಧ್ಯಕ್ಷ ಆಗಬಾರದೇ?" ಎಂದು ಪ್ರಶ್ನಿಸಿದ್ದಾರೆ.
ಅತ್ತ ಒಕ್ಕಲಿಗ ಕೋಟಾದಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್, ಅಶ್ವತ್ಥ್ ನಾರಾಯಣ್ ಹಾಗೂ ಮೊನ್ನೆ ಸೋತ ಸಿಟಿ ರವಿ ಅವರೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆರ್. ಅಶೋಕ್ ಹಾಗು ಅಶ್ವತ್ಥ ನಾರಾಯಣ್ ಕಣ್ಣು ವಿಪಕ್ಷ ನಾಯಕ ಸ್ಥಾನದ ಮೇಲೂ ಇದೆ. ಅದಾಗದಿದ್ದರೆ ಕೊನೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಅಂತ ಅವರೂ ಓಡಾಡ್ತಾ ಇದ್ದಾರೆ.
ಒಟ್ಟಾರೆ "ಹೇಗಾದರೂ ಅಧಿಕಾರಕ್ಕೆ ಏರಿ ಬಿಡುತ್ತೇವೆ, ಬಹುಮತ ಸಿಗದೇ ಇದ್ರೂ ಮೋದಿ - ಶಾ ಜೋಡಿ ಏನಾದರೂ ಮಾಡಿ ನಮ್ಮದೇ ಸರಕಾರ ತರ್ತಾರೆ" ಎಂಬ ಆಸೆಯಲ್ಲಿದ್ದ ರಾಜ್ಯ ಬಿಜೆಪಿಗೆ ಈಗ ಸೋಲನ್ನು ಜೀರ್ಣಿಸಿಕೊಳ್ಳೋದು ಬಹಳ ಕಷ್ಟವಾಗ್ತಾ ಇದೆ. ಆ ನಿರಾಶೆ, ಅಸಮಾಧಾನ ಹೀಗೆಲ್ಲಾ ಹೊರಬರ್ತಿದೆ.