ಮನೋಜೈವಿಕ ಪ್ರಜ್ಞೆ
ಹಳ್ಳಿಯೊಂದರ ಬಳಿಯ ಹಳ್ಳದಲ್ಲಿ ನರಿಯೊಂದು ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು. ದಂಡೆಯ ಮೇಲೆ ಹೋಗುತ್ತಿದ್ದ ಜನಕ್ಕೆ ಕೇಳುವಂತೆ ಕೂಗುತ್ತಿತ್ತು, ‘‘ಅಯ್ಯೋ, ಪ್ರಳಯವಾಗುತ್ತಾ ಬರುತ್ತಿದೆ. ಜಗತ್ತೇ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ’’ ಎಂದು. ಜನರು ಜಲಪ್ರಳಯದ ಬಗ್ಗೆ ತಿಳಿದುಕೊಂಡು ತಾವುಳಿಯಲು ಆ ನರಿಯನ್ನು ನೀರಿನಿಂದ ರಕ್ಷಿಸಿ ಉಪಚರಿಸಿ ಕೇಳಿದರು, ‘‘ಹೇಳು, ಎಲ್ಲಿಂದ ಪ್ರಳಯವಾಗುತ್ತಿದೆ? ಏನಾಗುತ್ತಿದೆ? ನಾವು ಉಳಿಯಬೇಕಾದರೆ ಏನು ಮಾಡಬೇಕು?’’ ಎಂದು.
ನರಿ ಹೇಳಿತು, ‘‘ಈಗೇನೂ ಯೋಚನೆ ಮಾಡಬೇಡಿ. ನಾನು ಉಳಿದೆನಲ್ಲಾ, ಈ ಜಗತ್ತು ಉಳಿಯಿತು.’’
ಇದೇನೂ ಕಿಲಾಡಿತನವೋ, ಮೋಸವೋ, ಸ್ವಾರ್ಥವೋ ಏನೂ ಅಲ್ಲ. ‘ತಾನು ಉಳಿಯಬೇಕು’- ಇದು ನಿಸರ್ಗದ ಪ್ರತಿಯೊಂದು ಜೀವಿಯ ಮೊತ್ತ ಮೊದಲ ಆದ್ಯತೆ ಮತ್ತು ಬಹಳ ಮಹತ್ವದ ಮೌಲ್ಯ. ನೈಸರ್ಗಿಕವಾಗಿರುವ ಜೈವಿಕ ಮೌಲ್ಯವಿದು. ತಾನುಂಟು, ಮೂಲೋಕವುಂಟು ಎಂಬುದು ಯಾವುದೇ ಮನಸ್ಸಿನ ಸಹಜ ನಿಲುವು.
ಭಯ ಎನ್ನುವುದು ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾದ ಮೊತ್ತ ಮೊದಲ ಮನೋಜೈವಿಕ ಪ್ರಜ್ಞೆ. ಆದರೆ ಭಯ ಎನ್ನುವುದನ್ನು ಪುಕ್ಕಲುತನ ಅಥವಾ ಹೇಡಿತನ ಎನ್ನುವಂತೆ ಬಿಂಬಿಸುತ್ತಾ, ಧೈರ್ಯ ಎನ್ನುವುದನ್ನು ವಿಜೃಂಭಿಸುತ್ತಾ ಮನೋಜೈವಿಕ ಪ್ರಜ್ಞೆಯ ಸೂಕ್ಷ್ಮತೆಯನ್ನೇ ಹಾಳುಗೆಡವಲಾಗಿದೆ.
ತನಗೆ ಹಾನಿಯುಂಟು ಮಾಡಬಹುದಾದ ಅಥವಾ ನಾಶ ಮಾಡಬಹುದಾದಂತಹ ವಿಷಯಗಳಿಗೆ ಪಡುವ ಭಯಕ್ಕೆ ದೇಹ, ಹೃದಯ (ಭಾವನೆಗಳು) ಮತ್ತು ಮನಸ್ಸು ಸ್ಪಂದಿಸುವುದು ಅಥವಾ ಪ್ರತಿಕ್ರಿಯಿಸುವುದು ಮನೋಜೈವಿಕವಾಗಿ ಅತ್ಯಂತ ಪ್ರಾಚೀನವಾದುದು ಹಾಗೂ ಅದು ಸಹಜ ಮಾನಸಿಕ ಆರೋಗ್ಯದ ಲಕ್ಷಣ ಕೂಡಾ.
ಭಯ ಎಂಬ ಮನೋಜೈವಿಕ ಪ್ರಜ್ಞೆಯು ನೀಡುವ ಎಚ್ಚರಿಕೆಗೆ ಮೊದಲು ಸ್ಪಂದಿಸುವುದು ಹೃದಯ, ಅಂದರೆ ಭಾವನೆ. ಅದಕ್ಕೆ ಅನುಗುಣವಾಗಿ ದೇಹ ಮತ್ತು ಮನಸ್ಸು ತನ್ನನ್ನು ಉಳಿಸಿಕೊಳ್ಳಲು ಹೋರಾಡುವುದು ಅಥವಾ ಹೋರಾಡುವಷ್ಟು ತನ್ನಲ್ಲಿ ಬಲ ಇಲ್ಲದಿದ್ದರೆ ಪಲಾಯನ ಮಾಡುವುದು. ಹೋರಾಡುವವನು ಧೀರ ಮತ್ತು ಪಲಾಯನ ಮಾಡುವವನು ಹೇಡಿ ಖಂಡಿತ ಅಲ್ಲ. ತಮಗೆ ಯಾವ ಸಾಮರ್ಥ್ಯವಿದೆ ಎಂಬುದರ ತಿಳುವಳಿಕೆ ಕೂಡಾ ಮನೋಜೈವಿಕ ಪ್ರಜ್ಞೆಯೇ ಆಗಿದೆ. ಆ ಅರಿವಿನ ನಿರ್ದೇಶನದ ಪ್ರಕಾರ ಸಂಗತಿಗಳ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯನ್ನು ಜೀವಿ ನೀಡುತ್ತದೆ.
ಹೋರಾಟ ಎಂಬುದು ಧೈರ್ಯದಿಂದ ಮಾತ್ರವೇ ಆಗುವುದಲ್ಲ. ತೀವ್ರವಾದ ಭಯದ ತೀವ್ರ ಪ್ರತಿಕ್ರಿಯೆಯಿಂದಲೂ ಆಗುತ್ತದೆ. ಮನೋಜೈವಿಕ ಸಾಮರ್ಥ್ಯವು ಕ್ರೋಡೀಕರಿಸಿಕೊಂಡು ಅಪಾಯವನ್ನು ಎದುರಿಸಲು ಸಿದ್ಧವಾಗುತ್ತದೆ. ಅದು ಹೋರಾಟವೂ ಆಗಬಹುದು, ಪಲಾಯನವೂ ಆಗಬಹುದು. ಒಟ್ಟಾರೆ ಭಯವಾಗಲಿ, ಧೈರ್ಯವಾಗಲಿ ಮನೋಜೈವಿಕ ಪ್ರಜ್ಞೆಯಿಂದ ಕೂಡಿಲ್ಲದೆ ಇದ್ದಲ್ಲಿ ಅದು ಸಮಸ್ಯಾತ್ಮಕ ಎನ್ನಬಹುದು. ಅನಗತ್ಯವಾದ ಭಯವನ್ನು ಪಡುವುದಾಗಲಿ, ವಿವೇಚನೆ ಇಲ್ಲದೆ ಮೊಂಡು ಧೈರ್ಯವನ್ನು ಹೊಂದಿರುವುದಾಗಲಿ ಸಹಜವಲ್ಲದ್ದು ಎನ್ನಬಹುದು.
ಯಾವಾಗಲೇ ನಮಗೆ ಅಪಾಯಕರವಾದ ಸನ್ನಿವೇಶ ಎದುರಾದಾಗ ಪ್ರಚೋದನೆಗೊಳ್ಳುವುದು ಸಹಜ. ಆದರೆ, ಮನೋಜೈವಿಕ ಪ್ರಜ್ಞೆಯು ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ನಿಲ್ಲು, ಆಲೋಚಿಸು, ವಿವೇಚಿಸು ಮತ್ತು ಯೋಜಿಸು ಎಂಬ ಸೂತ್ರವನ್ನು ಮನೋಜೈವಿಕ ತಜ್ಞರು ನೀಡುತ್ತಾರೆ. (SಖಿಔP sಣಚಿಟಿಜs ಜಿoಡಿ Siಣ, ಖಿhiಟಿಞ, ಔbseಡಿve ಚಿಟಿಜ Pಟಚಿಟಿ.) ಸ್ಟಾಪ್ ಎಂಬ ಈ ಸಂಕ್ಷಿಪ್ತ ರೂಪದ ಸೂತ್ರಕ್ಕೆ ದೀರ್ಘಕಾಲವೇನೂ ಬೇಕಾಗಿಲ್ಲ. ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯಂತೆ ಅದು ಕೆಲವೇ ಕ್ಷಣಗಳಲ್ಲಿ ಆಗುತ್ತದೆ. ಇದರಲ್ಲಿ ಸಮಯದ್ದಲ್ಲ ವಿಷಯ, ಮನಸ್ಥಿತಿಯನ್ನು ರೂಪಿಸಿಕೊಂಡಿರುವ, ಮನೋವೃತ್ತಿಯನ್ನು ರೂಢಿಸಿಕೊಂಡಿರುವುದೇ ಮನಶಾಸ್ತ್ರೀಯ ವಿಷಯ.
ಭಾವನೆಗಳು ಅತೀ ಮುಖ್ಯ. ಪುನರಾವರ್ತಿತವಾಗುವಂತಹ ಭಾವನೆಗಳಿಂದ ಮನೋಭಾವದ ಚರಿತ್ರೆಯೇ ನಿರ್ಮಾಣವಾಗುತ್ತದೆ. ವ್ಯಕ್ತಿಯೊಬ್ಬನು ಯಾವುದೋ ಒಂದು ಸನ್ನಿವೇಶಕ್ಕೆ ಹೇಗೆ ವರ್ತಿಸುತ್ತಾನೆ, ಹೇಗೆ ಪ್ರತಿಕ್ರಿಯಿಸುತ್ತಾನೆ, ಹೇಗೆ ಹೋರಾಡುತ್ತಾನೆ ಅಥವಾ ಪಲಾಯನ ಮಾಡುತ್ತಾನೆ, ಯಾವ ನಿಲುವನ್ನು ತಾಳುತ್ತಾನೆ; ಎಂಬುದೆಲ್ಲವೂ ಭಾವನೆಗಳಿಂದ ಉಂಟಾಗಿರುವ ಮನೋಭಾವದ ಚರಿತ್ರೆಯನ್ನು ಆಧರಿಸಿರುತ್ತದೆ. ಭೂತ ಕಾಲದ ಅನುಭವಗಳು, ಪ್ರಭಾವಗಳು, ಪ್ರಚೋದನೆಗಳು ವರ್ತಮಾನ ಕಾಲದ ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತದೆ. ಆದ್ದರಿಂದಲೇ ಯಾವುದೇ ವ್ಯಕ್ತಿಯು ಯಾವುದೇ ಜೀವಿಗೆ ಯಾವ ಭಾವನೆಯನ್ನು ಉಂಟುಮಾಡುವನೋ, ಯಾವ ಭಾವನೆಯನ್ನು ಹೊಂದುವನೋ ಎಂಬುದು ಸಂಬಂಧಗಳಲ್ಲಿ, ಸಂವಹನಗಳಲ್ಲಿ ಮತ್ತು ಸಂಪರ್ಕಗಳಲ್ಲಿ ಅತಿಮುಖ್ಯವಾದ ವಿಷಯವಾಗಿರುತ್ತದೆ.
ಮನೋಜೈವಿಕ ಪ್ರಜ್ಞೆಯನ್ನು ರೂಪಿಸುವುದರಲ್ಲಿ ಭಾವನೆಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಇದೇ ಮನೋಜೈವಿಕ ಪ್ರಜ್ಞೆಯೇ ಮೆದುಳಿನ ಅಮಿಗ್ಡುಲ ಭಾಗವನ್ನು ಪ್ರಚೋದಿಸುತ್ತದೆ. ಇದು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಕೊಡುವ ವಿಷಯದಲ್ಲಿ, ಸ್ಪಂದಿಸುವ ವಿಷಯದಲ್ಲಿ, ಹೋರಾಡುವಂತೆ ಮಾಡುವುದರಲ್ಲಿ, ಪಲಾಯನ ಮಾಡುವುದರಲ್ಲಿ ಪ್ರಧಾನ ಪಾತ್ರವಹಿಸುತ್ತದೆ.
ಮನೋಜೈವಿಕ ಪ್ರಭಾವವು ನಕಾರಾತ್ಮಕವಾಗಿ ತೀವ್ರವಾದಾಗ ರಕ್ತದ ಒತ್ತಡ ಹೆಚ್ಚಾಗುವುದು, ಉಸಿರಾಟದಲ್ಲಿ ತೀವ್ರವಾದ ಏರಿಳಿತ ಉಂಟಾಗುವುದು, ತಲೆ ಸುತ್ತುವಂತಾಗುವುದು, ಬವಳಿ ಬಂದು ಬೀಳುವುದು, ವಾಂತಿಯಾಗುವುದು, ಹೊಟ್ಟೆಯಲ್ಲಿ ತಳಮಳವಾಗುವುದು, ಮೂತ್ರ ಅಥವಾ ಮಲ ವಿಸರ್ಜನೆಗೆ ಅವಸರವಾಗುವುದು, ಹೃದಯದ ಚಟುವಟಿಕೆಯ ಮೇಲೂ ಪ್ರಭಾವ ಬೀರಿ ಅದರ ವ್ಯತ್ಯಾಸಕ್ಕೆ ಕಾರಣವಾಗುವುದು, ಏನು ಮಾಡುವುದೆಂದು ತೋಚದೆ ಮಂಕಾಗುವುದು, ತತ್ಕಾಲದ ಮರೆವು ಉಂಟಾಗುವುದು, ಗಮನ ಕೊಡಲು ಸಾಧ್ಯವಾಗದಿರುವುದು, ವಸ್ತುಗಳನ್ನು ಗುರುತಿಸಲೇ ಸಾಧ್ಯವಾಗದಿರುವುದು, ಪಾರ್ಶ್ವವಾಯು ಉಂಟಾಗುವುದು, ಹೃದಯಾಘಾತವಾಗುವುದು; ಹೀಗೆ ಭಯ, ಆತಂಕ ಮತ್ತು ಮನಸ್ಸಿನ ಸಂಕೀರ್ಣ ವಿಷಯಗಳು ದೈಹಿಕವಾಗಿಯೂ ಕೂಡಾ ಪ್ರಕಟಗೊಳ್ಳುವುದು. ಹೌದು, ನಮ್ಮನ್ನು ನಾವು ಇದರಿಂದಲೂ ಕೂಡಾ ರಕ್ಷಿಸಿಕೊಳ್ಳಬೇಕು.
ಮನಸ್ಸು ಎಂಬ ಅಂತಃಕರಣವನ್ನು ಹೊಂದಿರುವಂತಹ ಮನುಷ್ಯನಿಗೆ ಅತ್ಯಂತ ಗೊಂದಲಮಯವಾಗಿರುವುದು ತಾನು ಯಾವುದನ್ನು ರಕ್ಷಿಸಿಕೊಳ್ಳಬೇಕೆಂಬುದನ್ನೇ! ಅನಗತ್ಯವಾಗಿ ಅಸ್ತಿತ್ವದಲ್ಲಿಯೇ ಇಲ್ಲದಿರುವಂತಹ ವಿಷಯಗಳನ್ನು ರಕ್ಷಿಸಿಕೊಳ್ಳಲು ಹೋಗುತ್ತಾ, ತನ್ನ ಅಸ್ತಿತ್ವದ ಅಳಿವು ಉಳಿವಿನ ಕಡೆಗೇ ಗಮನವನ್ನು ಕೊಡದೇ ಹೋಗುತ್ತಾನೆ.
ಮಮಕಾರವನ್ನು ರಕ್ಷಿಸಿಕೊಳ್ಳಲು ಹೋಗಿ, ಮಮಸಾರವನ್ನು ಬಲಿಗೊಡುತ್ತಾನೆ. ಜೈವಿಕವಾದ ತನ್ನ ಅಸ್ತಿತ್ವವನ್ನು ಸುಂದರಗೊಳಿಸಿಕೊಳ್ಳುವ ಬದಲು ಮಾನಸಿಕವಾದ ಅಹಂಕಾರವನ್ನು ಪುಷ್ಟೀಕರಿಸಿಕೊಳ್ಳುತ್ತಾನೆ. ತನ್ನನ್ನು ಇಡೀ ಜಗತ್ತಿನಿಂದಲೇ ಅಳಿಸಿ ಹಾಕಿಬಿಡಬಹುದಾದ ಜೈವಿಕ ಅಸ್ತಿತ್ವದ ನಾಶಕ್ಕಿಂತಲೂ ಮಾನಸಿಕವಾದ ಮೇಲರಿಮೆ ಮತ್ತು ಪ್ರತಿಷ್ಠೆಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಾ ಬಳಲುತ್ತಾನೆ. ಹೀಗಾಗಿ ನೇರವಾಗಿ ಮೆದುಳಿನ ವಿಷಯವಾದ, ಮನೋಜೈವಿಕ ಜಾಗೃತಿಯ ಬಗ್ಗೆ ಅರಿವನ್ನು ಹೊಂದುವುದು ಅತ್ಯಂತ ಅಗತ್ಯದ ಕಾಪುತೋಡು ಅಥವಾ ರಕ್ಷಣಾ ತಂತ್ರ.
ಈ ಮನೋಜೈವಿಕ ರಕ್ಷಣಾತಂತ್ರವು ನೈಸರ್ಗಿಕವಾಗಿ ನಮಗೆ ದಕ್ಕಿರುವುದಾದರೂ ನಮ್ಮ ಮಾನವ ನಿರ್ಮಿತ ಮನೋಸಮಾಜದಲ್ಲಿ ನಿರ್ಬಂಧಕ್ಕೆ ಒಳಗಾಗಿ ಅದರ ಅರಿವು ಮಂಕಾಗಿರಬಹುದು ಅಥವಾ ಬಳಸಲು ಬಾರದೆ ಕಿಲುಬು ಹಿಡಿದಿರಬಹುದು. ಹಾಗಾಗಿ ಅರಿವು ಮತ್ತು ಅನುಭವವನ್ನು ಜೀವಂತವಾಗಿಡಲು ತರಬೇತಿ ಅತ್ಯಗತ್ಯ. ಮನಸ್ಸೂ ದೇಹದಂತೆ ತರಬೇತಿಗೆ ಒಳಗಾದರೆ ಮಾತ್ರವೇ ಅದರ ಸಾಮರ್ಥ್ಯವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಲು ಸಾಧ್ಯವಾಗುತ್ತದೆ.