ಬಿಜೆಪಿಯ ನಿದ್ದೆಗೆಡಿಸಿರುವ ಪುತ್ತೂರಿನ ಗ್ರಾ ಪಂ ಉಪಚುನಾವಣೆ ! 2024 ರ ದ.ಕ ಲೋಕಸಭಾ ಬಿಜೆಪಿ ಟಿಕೆಟ್ ಯಾರಿಗೆ ?
► ನಳಿನ್ ವಿರುದ್ಧದ ಕಾರ್ಯಕರ್ತರ ಆಕ್ರೋಶದ ಲಾಭ ಯಾರಿಗೆ ?
ಎರಡು ಗ್ರಾಮಪಂಚಾಯತ್ ಸ್ಥಾನಗಳಿಗೆ ನಡೆಯುವ ಉಪಚುನಾವಣೆ ಎಲ್ಲಾದರೂ ಸುದ್ದಿಯಾಗತ್ತಾ ? ಅದರ ಸುತ್ತಮುತ್ತ ನಡೆಯುವ ಚಟುವಟಿಕೆಗಳ ಬಗ್ಗೆ ಪತ್ರಿಕೆಗಳಲ್ಲಿ, ವೆಬ್ ಸೈಟ್ ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ, ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಾ ?
ಅದು ಇಡೀ ಒಂದು ಗ್ರಾಮ ಪಂಚಾಯತ್ ಗೆ ನಡೆಯುವ ಚುನಾವಣೆಯೂ ಅಲ್ಲ. ಎರಡೇ ಸ್ಥಾನಗಳಿಗೆ ನಡೆಯುವ ಉಪಚುನಾವಣೆ. ಅದರ ಬಗ್ಗೆ ಒಂದು ಅತ್ಯಂತ ಪ್ರಬಲ ರಾಷ್ಟ್ರೀಯ ಪಕ್ಷ , ಅದರ ರಾಜ್ಯಾಧ್ಯಕ್ಷರು, ಆ ಪಕ್ಷದ ಜಿಲ್ಲಾ ಮುಖಂಡರು, ಅದರ ಪರಿವಾರ ಸಂಘಟನೆಗಳ ಪ್ರಮುಖರು ಸಹಿತ ಘಟಾನುಘಟಿ ನಾಯಕರು ತಲೆಕೆಡಿಸಿಕೊಳ್ಳೋದನ್ನು ನೀವೆಲ್ಲಾದರೂ ಕೇಳಿದ್ದೀರಾ ?
ಗ್ರಾಮ ಪಂಚಾಯತ್ ನ ಎರಡು ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ತಮ್ಮ ಪಕ್ಷದ ಬೆಂಬಲಿತರು ಸ್ಪರ್ಧಿಸುವ ಬಗ್ಗೆ ಬಿಜೆಪಿಯಂತಹ ಪಕ್ಷದ ರಾಜ್ಯಾಧ್ಯಕ್ಷರು ಹೇಳಿಕೆ ಕೊಡೋದನ್ನು ನೀವೆಲ್ಲಾದರೂ ಗಮನಿಸಿದ್ದೀರಾ ?
ಆದರೆ ಈಗ ಪರಿಸ್ಥಿತಿ ಹಾಗಾಗುವಂತೆ ಮಾಡಿದೆ. ಕೇವಲ ಎರಡು ಗ್ರಾಮ ಪಂಚಾಯತ್ ಸ್ಥಾನಗಳಿಗೆ ನಾಡಿದ್ದು ಜುಲೈ 23 ಕ್ಕೆ ನಡೆಯುವ ಉಪಚುನಾವಣೆ ಬಗ್ಗೆ ದೇಶ ಆಳುವ ಬಿಜೆಪಿ ಪಕ್ಷ ಭಾರೀ ತಲೆಕೆಡಿಸಿಕೊಂಡಿದೆ. ಅದರ ರಾಜ್ಯಾಧ್ಯಕ್ಷರೇ ಚುನಾವಣೆ ನಡೆಯೋ ಊರಿಗೆ ಬಂದು ಸರಣಿ ಸಭೆ ನಡೆಸಿದ್ದಾರೆ. ಇನ್ನು ಜಿಲ್ಲಾ ಮುಖಂಡರು, ಮಾಜಿ ಎಮ್ಮೆಲ್ಲೆಗಳು ಅಲ್ಲೇ ಇದ್ದು ಹೇಗಾದರೂ ಆ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳಲೇಬೇಕು ಎಂದು ಹೆಣಗಾಡುತ್ತಿದ್ದಾರೆ.
ಈ ದೇಶದಲ್ಲಿ ಒಂದಾದ ಮೇಲೊಂದು ಚುನಾವಣೆ ಗೆಲ್ಲೋದನ್ನೇ ಅಭ್ಯಾಸ ಮಾಡಿಕೊಂಡಿರುವ, ವರ್ಷದ ಎಲ್ಲ ದಿನಗಳೂ ಯಾವುದೇ ಚುನಾವಣೆ ಎದುರಿಸಲು ಸಜ್ಜಾಗಿರುವ ಪಕ್ಷ ಎಂದೇ ಹೆಸರು ಪಡೆದಿರುವ ಬಿಜೆಪಿ ನಾಯಕರಿಗೇ ಬೆವರಿಸುತ್ತಿರುವ ಆ ಎರಡು ಗ್ರಾಮ ಪಂಚಾಯತ್ ಸ್ಥಾನಗಳು ಆರ್ಯಾಪು ಹಾಗು ನಿಡ್ಪಳ್ಳಿ.
ಈ ಎರಡು ಗ್ರಾಮ ಪಂಚಾಯತ್ ಸ್ಥಾನಗಳಿರೋದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ. ಈ ಎರಡು ಸ್ಥಾನಗಳು ನಿದ್ದೆ ಗೆಡಿಸಿರೋದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು. ಇಡೀ ರಾಜ್ಯದಲ್ಲೇ ಸೋತರೂ ದಕ್ಷಿಣ ಕನ್ನಡ ಹಾಗು ಉಡುಪಿಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಗೆ ಇಷ್ಟು ದೊಡ್ಡ ತಲೆನೋವಾಗಿರೋರು ಸಂಘ ಪರಿವಾರದಲ್ಲೇ ಬೆಳೆದು ಬಂದು ಈಗ ಸಂಘ ಪರಿವಾರಕ್ಕೇ ರೆಬೆಲ್ ಆಗಿ ತನ್ನದೇ ಪರಿವಾರ ಕಟ್ಟಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ.
ಸಂಘ ಪರಿವಾರದ ಶಕ್ತಿ ಕೇಂದ್ರ ಪುತ್ತೂರಿನಲ್ಲಿ ಈಗ ಪುತ್ತಿಲ ಪರಿವಾರ vs ಸಂಘ ಪರಿವಾರ ಎಂಬ ಸ್ಥಿತಿ. ಪುತ್ತಿಲ ಪರಿವಾರ ಅಲ್ಲಿ ಬಿಜೆಪಿಗೆ ಅದ್ಯಾವ ಪರಿ ಸೆಡ್ಡು ಹೊಡೆದಿದೆ ಅಂದ್ರೆ ಜುಲೈ 26 ಕ್ಕೆ ಬರಲಿರುವ ಆ ಎರಡು ಗ್ರಾಮ ಪಂಚಾಯತ್ ಸ್ಥಾನಗಳ ಉಪಚುನಾವಣೆ ಫಲಿತಾಂಶದ ಮೇಲೆ ಇಡೀ ಜಿಲ್ಲೆಯ ಕಣ್ಣಿದೆ. ಜಿಲ್ಲೆ ಮಾತ್ರವಲ್ಲ, ರಾಜ್ಯ ಬಿಜೆಪಿಯೂ ಅದರ ಆ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಯಾಕಂದ್ರೆ ಜಿಲ್ಲೆಯ ಮುಂದಿನ ಬಿಜೆಪಿ ರಾಜಕೀಯದ ದಿಕ್ಕು ದೆಸೆಯನ್ನು ಈ ಎರಡು ಗ್ರಾಮ ಪಂಚಾಯತ್ ಸ್ಥಾನಗಳ ಫಲಿತಾಂಶ ನಿರ್ಧರಿಸಲಿದೆ ಎಂದೇ ಹೇಳಲಾಗುತ್ತಿದೆ.
ಅಷ್ಟರಮಟ್ಟಿಗೆ ಕದನ ಕುತೂಹಲ ಸೃಷ್ಟಿಸಿವೆ ಈ ಎರಡು ಗ್ರಾಮ ಪಂಚಾಯತ್ ಸ್ಥಾನಗಳು. ಮೊದಲಿನಿಂದಲೇ ರೆಬೆಲ್ ವ್ಯಕ್ತಿತ್ವದ ಅರುಣ್ ಕುಮಾರ್ ಪುತ್ತಿಲ ಬಜರಂಗದಳದಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರೂ ಆಮೇಲೆ ಅಲ್ಲಿಂದ ಹೊರಬಂದು ಶ್ರೀರಾಮ ಸೇನೆ ಕಟ್ಟಿದವರು. ಆಮೇಲೆ ಇದ್ಯಾವುದೂ ಬೇಡ ಎಂದು ಸ್ವಲ್ಪ ಸಮಯ ಸುಮ್ಮನಿದ್ದರು. ಮತ್ತೆ ಧಾರ್ಮಿಕ ಚಟುವಟಿಕೆಗಳ ಮೂಲಕ ಸಕ್ರಿಯರಾದ ಅರುಣ್ ಕುಮಾರ್ ಪುತ್ತಿಲ ಇವತ್ತು ಇಡೀ ಪುತ್ತೂರಿನಲ್ಲಿ ಸಂಘ ಪರಿವಾರದ ಹುಡುಗರ ಪಾಲಿನ ಡಾರ್ಲಿಂಗ್. ಪುತ್ತಿಲ ಒಂದು ಮಾತು ಹೇಳಿದರೆ ಅದನ್ನು ಪಾಲಿಸಲು, ಅವರನ್ನು ಅನುಸರಿಸಲು ಸಿದ್ಧವಿರುವ ಸಂಘ ಪರಿವಾರದ ದೊಡ್ಡ ಪಡೆಯೇ ಇದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಇದು ಸಾಬೀತು ಕೂಡ ಆಗಿದೆ.
ತನಗೆ ಟಿಕೆಟ್ ನಿರಾಕರಿಸಿದ ಬಿಜೆಪಿಗೆ ಬಂಡಾಯವಾಗಿ ಪುತ್ತಿಲ ಕೊನೆ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಅವರ ಹಿಂದೆ ಸಾವಿರಾರು ಯುವಕರು ಬಂದಿದ್ದರು. ಪುತ್ತಿಲ ಪರವಾಗಿ ಮನೆಮನೆ ಪ್ರಚಾರಕ್ಕೆ ಸ್ವಯಂ ಪ್ರೇರಿತರಾಗಿ ನೂರಾರು ಯುವಜನರು ಹೋಗಿದ್ದಾರೆ. ಪುತ್ತೂರು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಿಂದ ಸ್ವಯಂ ಪ್ರೇರಿತರಾಗಿ ಪುತ್ತೂರಿಗೆ ಬೆಳಗ್ಗೆ ಬಂದು ಪ್ರಚಾರ ಮಾಡಿ ಸಂಜೆ ವಾಪಸ್ ಹೋದವರು ಅದೆಷ್ಟೋ ಮಂದಿ. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಪುತ್ತಿಲ ಅವರದ್ದೇ ಹವಾ. ಅವರ ಪರ ಫೇಸ್ ಬುಕ್ ಪೇಜ್ ಗಳು, ವಾಟ್ಸ್ ಆಪ್ ಗ್ರೂಪ್ ಗಳು ನೂರಾರು, ಅವುಗಳಲ್ಲಿ ಸಾವಿರಾರು ಅಭಿಮಾನಿಗಳು. ಜಿಲ್ಲೆಯ ವಿವಿಧೆಡೆ ಸಾವಿರಕ್ಕೂ ಅಧಿಕ ಫ್ಲೆಕ್ಸ್ ಗಳು ಎದ್ದು ನಿಂತಿವೆ. ಒಟ್ಟಾರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದ ಬೆಂಬಲಿಗರಲ್ಲಿ ಪುತ್ತಿಲ ಅವರದ್ದೇ ಚರ್ಚೆ.
ಪುತ್ತಿಲ ಅವರೇ ಹೇಳುವ ಪ್ರಕಾರ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅವರ ಪರವಾಗಿ ಮಾಡಲಾಗಿರುವ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಸಕ್ರಿಯವಾಗಿ ಅವರನ್ನು ಬೆಂಬಲಿಸುತ್ತಿರುವವರು ಒಂದು ಲಕ್ಷಕ್ಕೂ ಹೆಚ್ಚು ಜನ. ಹೀಗೆ ಸಂಘ ಪರಿವಾರದ ಯುವಕರಲ್ಲಿ ಬಹುತೇಕರು ಪುತ್ತಿಲ ಹಿಂದೆ ನಿಂತಿರುವುದು ಸಂಘ ಪರಿವಾರವನ್ನು , ಬಿಜೆಪಿಯನ್ನು ಕಂಗೆಡಿಸಿಬಿಟ್ಟಿದೆ. ವಿಧಾನ ಸಭಾ ಚುನಾವಣೆಯಲ್ಲಿ ಪುತ್ತಿಲ ಸ್ಪರ್ಧೆಯಿಂದಾಗಿಯೇ ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕಿಳಿಯಬೇಕಾಯಿತು. ಈಗ ಪುತ್ತಿಲ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸರಿ, ಇಲ್ಲದಿದ್ದರೆ ನನ್ನ ದಾರಿ ನನಗೆ, ಲೋಕಸಭೆಗೆ ಸ್ಪರ್ಧಿಸುವುದು ಖಚಿತ ಎಂದು ಅವರು ಈಗಲೇ ತಯಾರಿ ಶುರು ಮಾಡಿ ಬಿಟ್ಟಿದ್ದಾರೆ. ಅವರ ಸ್ಪರ್ಧೆಗೆ ಅವರಿಗಿಂತ ಹೆಚ್ಚು ಕಾರ್ಯಕರ್ತರೇ ಆಗ್ರಹಿಸಿದ್ದಾರೆ.
ಅದರ ಮೊದಲ ಹೆಜ್ಜೆ ಪುತ್ತೂರಿನ ಎರಡು ಗ್ರಾಮ ಪಂಚಾಯತ್ ಸ್ಥಾನಗಳಿಗೆ ನಡೆಯುವ ಉಪಚುನಾವಣೆ. ಆ ಎರಡೂ ಸ್ಥಾನಗಳಲ್ಲಿ ಇದ್ದಿದ್ದು ಬಿಜೆಪಿ ಬೆಂಬಲಿಗ ಸದಸ್ಯರು. ಅವರ ಮರಣದಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಅದಕ್ಕೆ ಈಗ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿಯೂ ತನ್ನ ಅಭ್ಯರ್ಥಿಗಳನ್ನು ಇಳಿಸಿದೆ. ಎಮ್ಮೆಲ್ಲೆ ಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಿಂದಲೂ ಅಭ್ಯರ್ಥಿಗಳಿದ್ದಾರೆ. ಮೊನ್ನೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಚಲಾವಣೆಯಾದ ಮತ ನೋಡಿದರೆ ಆರ್ಯಾಪುವಿನಲ್ಲಿ ಪುತ್ತಿಲ ಪರಿವಾರ, ನಿಡ್ಪಳ್ಳಿಯಲ್ಲಿ ಕಾಂಗ್ರೆಸ್ ಮುಂದಿದೆ. ಎರಡೂ ಕಡೆ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಆದರೆ ಈ ಉಪಚುನಾವಣೆಯಲ್ಲಿ ಏನಾಗಲಿದೆ ಎಂದು ಜುಲೈ 26 ಕ್ಕೆ ಗೊತ್ತಾಗಲಿದೆ.
ಅಲ್ಲೊಂದು ವೇಳೆ ಪುತ್ತಿಲ ಪರಿವಾರ ಎರಡೂ ಸ್ಥಾನ ಗೆದ್ದು ಬಿಟ್ಟರೆ ಅದು ಬಿಜೆಪಿ ಪಾಲಿಗೆ ಬಹುದೊಡ್ಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ತಳಮಟ್ಟದಲ್ಲಿ ಬಿಜೆಪಿ ಶಕ್ತಿಕೇಂದ್ರದಲ್ಲೇ ಅದರ ಕಾರ್ಯಕರ್ತರು ಪಕ್ಷದಿಂದ ದೂರ ಸರಿದು ಪುತ್ತಿಲ ಜೊತೆ ನಿಂತಿದ್ದಾರೆ ಎಂಬ ಸಂದೇಶ ರವಾನೆಯಾಗಲಿದೆ. ಎರಡರ ಪೈಕಿ ಒಂದು ಪುತ್ತಿಲ ಬೆಂಬಲಿಗರು ಗೆದ್ದು ಇನ್ನೊಂದು ಕಾಂಗ್ರೆಸ್ ಗೆದ್ದರೂ ಬಿಜೆಪಿ ತಲೆಬಿಸಿ ಕಡಿಮೆಯಾಗದು. ಆಗಲೂ ಅದಕ್ಕೆ ಹಿನ್ನಡೆಯೇ. ಎರಡೂ ಸ್ಥಾನಗಳನ್ನು ಉಳಿಸಿಕೊಂಡರೆ ಮಾತ್ರ ಬಿಜೆಪಿ "ನಿನ್ನದೇನಿದ್ದರೂ ಇಷ್ಟೇ" ಎಂದು ಪುತ್ತಿಲಗೆ ಹೇಳುವ ತಾಕತ್ತು ತೋರಿಸಬಹುದು.
ಫಲಿತಾಂಶ ಏನೇ ಬಂದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಾಲಿಗೆ ಮುಂದಿನ ಲೋಕಸಭಾ ಚುನಾವಣೆಯ ಟಿಕೆಟ್ ಪಡೆಯುವ ಹಾದಿ ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ ಎಂಬುದು ಮಾತ್ರ ಇಡೀ ಜಿಲ್ಲೆಯ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. 2009 ರಲ್ಲಿ ಮೊದಲ ಬಾರಿ ದಿಢೀರನೆ ಎಂಪಿ ಟಿಕೆಟ್ ಪಡೆದು ಕಣಕ್ಕಿಳಿದ ಸಾಮಾನ್ಯ ಕಾರ್ಯಕರ್ತ ನಳಿನ್ ಕುಮಾರ್ ಕಟೀಲ್ ಆಮೇಲೆ ಹಿಂದಿರುಗಿ ನೋಡಿದ್ದೇ ಇಲ್ಲ. ಕಾಂಗ್ರೆಸ್ ನ ದಿಗ್ಗಜ ನಾಯಕ ಜನಾರ್ದನ ಪೂಜಾರಿಯವರನ್ನೇ 40 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿದ ನಳಿನ್ ಆಗ ಸಂಘ ಪರಿವಾರದ ನೀಲಿ ಕಣ್ಣಿನ ಹುಡುಗ. ಕಾರ್ಯಕರ್ತರ ಪಾಲಿನ ಪ್ರೀತಿಯ ನಳಿನಣ್ಣ. ಕಲ್ಲಡ್ಕ ಹೈಕಮಾಂಡ್ ಡಾ. ಪ್ರಭಾಕರ್ ಭಟ್ಟರ ರೈಟ್ ಹ್ಯಾಂಡ್.
2014 ರಲ್ಲಿ ಮೋದಿ ಅಲೆಯಲ್ಲಿ ಒಂದೂವರೆ ಲಕ್ಷದಷ್ಟು ಮತಗಳಿಂದ ಮತ್ತೆ ಜನಾರ್ದನ ಪೂಜಾರಿಯವರನ್ನು ಸೋಲಿಸಿದ ಮೇಲೆ ನಳಿನ್ ರನ್ನು ತಡೆಯುವವರೇ ಇಲ್ಲದ ಹಾಗಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮೇಲೆ ಅವರೇ ಹಿಡಿತ ಸಾಧಿಸಿದರು. ಆಗಲೇ ಬಿಜೆಪಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿದ್ದ ಬಿ ಎಲ್ ಸಂತೋಷ್ ಅವರ ಬೆಂಬಲವೂ ಸಿಕ್ಕಿದ ಮೇಲೆ ನಳಿನ್ ಬಿಜೆಪಿಯಲ್ಲಿ ಶರವೇಗದಲ್ಲಿ ಬೆಳೆದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗಲೇ ರಾಜ್ಯಾಧ್ಯಕ್ಷವೂ ಸ್ಥಾನ ಸಿಕ್ಕಿದ ಮೇಲೆ ನಳಿನ್ ಅತ್ಯಂತ ಪವರ್ ಫುಲ್ ಬಿಜೆಪಿ ರಾಜಕಾರಣಿಯಾದರು. ಕರಾವಳಿಯ ಮಟ್ಟಿಗೆ ಬಿಜೆಪಿ ಅಂದ್ರೆ ನಳಿನ್ , ನಳಿನ್ ಅಂದ್ರೆ ಬಿಜೆಪಿ ಅನ್ನೋ ಹಾಗಾಯಿತು.
ಆದರೆ ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. 2019 ರಲ್ಲೇ ಅವರಿಗೆ ಟಿಕೆಟ್ ತಪ್ಪಿಸಲು ಒಂದು ಬಣ ಪ್ರಯತ್ನಿಸಿದರೂ ನಳಿನ್ ಟಿಕೆಟ್ ಪಡೆದರು. ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಿದರು. ಆದರೆ ಅಲ್ಲಿಂದಲೇ ಅವರ ಸಮಸ್ಯೆಗಳು ಒಂದೊಂದಾಗಿ ಶುರುವಾದವು. ಅದಕ್ಕೆ ಅವರ ಮಾತುಗಳೇ ಮೊದಲ ಕಾರಣವೂ ಆದವು. ಯಡಿಯೂರಪ್ಪ ಸಹಿತ ರಾಜ್ಯದ ಹಿರಿಯ ನಾಯಕರ ಬಗ್ಗೆ ಅವರು ಆಡಿದ್ದಾರೆ ಎನ್ನಲಾದ ಮಾತುಗಳಿಂದ ರಾಜ್ಯಾದ್ಯಂತ ಅವರ ಬಗ್ಗೆ ಬಿಜೆಪಿ ವಲಯದಲ್ಲೇ ಅಸಮಾಧಾನ ಸೃಷ್ಟಿಯಾಯಿತು. ನಳಿನ್ ಕಾರ್ಯಕರ್ತರ ಬಲದಲ್ಲಿ ಗೆದ್ದು ಬಂದವರು. ಅವರು ಬಿ ಎಲ್ ಸಂತೋಷ್ ಬೆನ್ನಿಗಿರೋ ಧೈರ್ಯದಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿದ ಅತ್ಯಂತ ಹಿರಿಯ ನಾಯಕರನ್ನೇ ಕಡೆಗಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇನ್ನು " ಡಾಲರ್ ಗಿಂತ ರೂಪಾಯಿ ಸದೃಢವಾಗುತ್ತದೆ, ಎರಡೇ ಸಾವಿರ ರೂಪಾಯಿಗೆ ಒಂದು ಲೋಡು ಮರಳು ಸಿಗುತ್ತದೆ " ಎಂಬೆಲ್ಲ ಮಾತುಗಳೂ ನಳಿನ್ ರ ವರ್ಚಸ್ಸಿಗೆ ಧಕ್ಕೆ ತಂದವು. ಅವರು ಸಾಕಷ್ಟು ಟ್ರೋಲ್ ಗೆ ಒಳಗಾದರು. ಪಂಪ್ ವೆಲ್ ಫ್ಲೈ ಓವರ್ ಮಾಡಿಸುವಲ್ಲಿನ ಭಾರೀ ವಿಳಂಬ ಅವರ ಕಾರ್ಯವೈಖರಿಗೆ ಕನ್ನಡಿ ಹಿಡಿದು ಅಲ್ಲೂ ಅವರು ಭಾರೀ ಟ್ರೋಲ್ ಆದರು. ಇದೆಲ್ಲವನ್ನೂ ಸರಿದೂಗಿಸಲು ಆಗಾಗ ತೀರಾ ಕೋಮು ಪ್ರಚೋದಕ ಹೇಳಿಕೆಗಳನ್ನು ಕೊಟ್ಟರು. ಅವೂ ಕೈ ಹಿಡಿಯಲಿಲ್ಲ.
ಇನ್ನೊಂದು ಕಡೆ ಅಧಿಕಾರ ಹಾಗು ಪ್ರಭಾವದ ಅಮಲಿನಲ್ಲಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂಬ ದೂರುಗಳು ಅಲ್ಲಲ್ಲಿ ಕೇಳಿ ಬರಲಾರಂಭಿಸಿದವು. " ಶೆಟ್ಟರ್, ಈಶ್ವರಪ್ಪ ರಂತಹ ನಾಯಕರನ್ನೆಲ್ಲ ಮನೆಗೆ ಕಳಿಸುತ್ತೇವೆ, ಇನ್ನೇನಿದ್ದರೂ ನಮ್ಮದೇ ಜಮಾನ " ಅನ್ನೋ ಧಾಟಿಯಲ್ಲಿ ಅವರು ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಯ್ತು. ಈ ಎಲ್ಲ ಬೆಳವಣಿಗೆಗಳಿಂದ ಬರಬರುತ್ತಾ ರಾಜ್ಯದ ವಿವಿಧೆಡೆಯ ಪ್ರಭಾವಿ ನಾಯಕರನ್ನು ಸಂಭಾಳಿಸೋದು ನಳಿನ್ ಗೆ ಕಷ್ಟವಾಯಿತು. ಅವರೇನಿದ್ದರೂ ಬಿ ಎಲ್ ಸಂತೋಷ್ ಅವರ ಕೈಗೊಂಬೆ ಎಂಬ ಇಮೇಜ್ ಬೆಳೆಯಿತು.
ರಾಜ್ಯಾಧ್ಯಕ್ಷರಾದರೂ ಕರಾವಳಿಯಾಚೆಗೆ ವರ್ಚಸ್ಸು ಬೆಳೆಯಲಿಲ್ಲ. ಇಲ್ಲಿ ಅವರ ಆಧಾರವಾಗಿದ್ದ ಕಾರ್ಯಕರ್ತರೂ ನಿಧಾನವಾಗಿ ಅವರಿಂದ ದೂರವಾಗುತ್ತಾ ಹೋದರು. ಅದಕ್ಕೆಲ್ಲ ಕಳಶವಿಟ್ಟಂತೆ ಸುಳ್ಯದಲ್ಲಿ ಬಿಜೆಪಿಯ ಕಟ್ಟಾ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಬರ್ಬರ ಕೊಲೆಯಾಯಿತು. ಪ್ರವೀಣ್ ಕೊಲೆಯಿಂದ ಆಕ್ರೋಶಿತ ಕಾರ್ಯಕರ್ತರ ಸಿಟ್ಟು ನಳಿನ್ ಕಡೆ ತಿರುಗಿತು. ತಡವಾಗಿ ಭೇಟಿ ನೀಡಿದ ನಳಿನ್ ರ ಕಾರನ್ನು ಅಲ್ಲಿದ್ದ ಕಾರ್ಯಕರ್ತರ ಪಡೆ ಹಿಡಿದು ಅಲ್ಲಾಡಿಸಿದ್ದು ನಳಿನ್ ರನ್ನು ಕಂಗೆಡಿಸಿಬಿಟ್ಟಿತು. ನಳಿನ್ ರನ್ನೇ ಪ್ರವೀಣ್ ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಿದ್ದರಾಮಯ್ಯ ರಂತಹ ಹಿರಿಯ ವಿಪಕ್ಷ ನಾಯಕರು ಹೇಳಿದರು.
ನಳಿನ್ ರ ಶಕ್ತಿ ಇದ್ದಿದ್ದೇ ಕಾರ್ಯಕರ್ತರ ಬೆಂಬಲದಲ್ಲಿ. ಜನಾರ್ದನ ಪೂಜಾರಿಯಂತಹ ನಾಯಕನನ್ನು ಅವರು ಸೋಲಿಸಿದ್ದೇ ಸಂಘ ಪರಿವಾರದ ತಳಮಟ್ಟದ ಸಂಘಟನೆ ಹಾಗು ನಿಷ್ಠಾವಂತ ಕಾರ್ಯಕರ್ತರ ಬಲದಿಂದ. ಅದನ್ನೇ ನಳಿನ್ ಕಳೆದುಕೊಂಡ ಹಾಗೆ ಅಂದು ಕಂಡು ಬಂದಿತ್ತು. ಈಗದು ಇನ್ನಷ್ಟು ಸ್ಫಷ್ಟವಾಗಿ, ಢಾಳಾಗಿ ಎದ್ದು ಕಾಣುತ್ತಿದೆ. ಬಿಜೆಪಿಯ ಶಕ್ತಿ ಅದರ ಕಾರ್ಯಕರ್ತರು ಹಾಗು ಸಂಘಟನೆ, ಅದೀಗ ನಳಿನ್ ಜೊತೆಗಿಲ್ಲ ಎಂಬುದು ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಚರ್ಚೆಯ ವಿಷಯ. ರಾಜ್ಯಾಧ್ಯಕ್ಷ ಸ್ಥಾನವೂ ಬೇಗ ಬೇರೆಯವರ ಪಾಲಾಗಲಿದೆ.
ಪುತ್ತೂರಿನಲ್ಲಿ ಬಿಜೆಪಿಗೆ ಸವಾಲ್ ಹಾಕಿ ಸ್ಪರ್ಧಿಸಿ ಅದನ್ನು ಸೋಲಿಸಿರುವ ಪುತ್ತಿಲರಿಗೆ ಲೋಕಸಭಾ ಟಿಕೆಟ್ ಕೊಡಲು ಬಿಜೆಪಿಗೆ ಮನಸ್ಸಿಲ್ಲ. ಆದರೆ ನಳಿನ್ ಗೆ ಮತ್ತೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರೇ ಕೈ ಕೊಡುವ ಭಯವಿದೆ. ಈಗಾಗಲೇ ಮುಂದಿನ ಲೋಕಸಭಾ ಚುನಾವಣೆ ಸುಲಭವಿಲ್ಲ ಎಂಬುದು ಬಿಜೆಪಿಗೆ ಮನವರಿಕೆಯಾಗಿದೆ. ಉತ್ತರದಲ್ಲಿ ಕಳಕೊಳ್ಳುವ ಸೀಟುಗಳನ್ನು ದಕ್ಷಿಣದಲ್ಲಿ ಸರಿದೂಗಿಸಲು ಬಿಜೆಪಿ ಇನ್ನಿಲ್ಲದ ಲೆಕ್ಕಾಚಾರ ಮಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಅದರ ತಲೆನೋವು ಹೆಚ್ಚಿಸಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಚುನಾವಣೆಯಲ್ಲಿ ಮೇಲುಗೈ ಆಗೋದು ಸಾಮಾನ್ಯ.
ಹೀಗಿರುವಾಗ ಇಡೀ ರಾಜ್ಯದಲ್ಲಿ ಸೋತಾಗಲೂ ಕೈ ಬಿಡದ ತನ್ನ ಶಕ್ತಿ ಕೇಂದ್ರ ದಕ್ಷಿಣ ಕನ್ನಡದ ಕಾರ್ಯಕರ್ತರನ್ನು ಎದುರು ಹಾಕಿಕೊಳ್ಳಲು ಬಿಜೆಪಿ ರೆಡಿ ಇಲ್ಲ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಇನ್ನೊಂದು ಪುತ್ತೂರು ಆಗಲು ಬಿಜೆಪಿ ಬಿಡೋದಿಲ್ಲ. ನಾಲ್ಕು ಬಾರಿ ಗೆದ್ದು ಮೆರೆಯುತ್ತಿದ್ದ ಧನಂಜಯ್ ಕುಮಾರ್ ರನ್ನು ಬಿಟ್ಟು ಸದಾನಂದ ಗೌಡರಿಗೆ ಟಿಕೆಟ್ ಕೊಟ್ಟಿದ್ದು, ಆಮೇಲೆ ಅವರನ್ನೂ ಬಿಟ್ಟು ನಳಿನ್ ರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ತನ್ನ ಕಾರ್ಯಕರ್ತರ ಮನದಾಳದ ಮಾತು ಕೇಳಿ.
ಹಾಗಾಗಿ ಪುತ್ತಿಲ ಜೊತೆ ರಾಜಿ ಸೂತ್ರದಡಿ ಹೊಸ ಅಭ್ಯರ್ಥಿ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಟಿಕೆಟ್ ಪಡೀತಾರ ?
ಅಥವಾ 2019 ರಂತೆಯೇ ನಳಿನ್ ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗ್ತಾರಾ ? ಕಾದು ನೋಡೋಣ.