ಕೇಂದ್ರದ ಅಡೆತಡೆ ಮೆಟ್ಟಿ ನಿಂತು ಕೊಟ್ಟ ಮಾತು ಉಳಿಸಿದ ಸಿದ್ದರಾಮಯ್ಯ
ಕರ್ನಾಟಕ ಮಾದರಿಯ ಅನ್ನಭಾಗ್ಯಕ್ಕೆ ಹತ್ತರ ಸಂಭ್ರಮ
- ಆರ್. ಜೀವಿ
“ನಾನು ನನ್ನ ಬದುಕಿನಲ್ಲಿ ಅನುಭವಿಸಿದ ಹಸಿವು, ಬಡತನದ ಅನುಭವದಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೆ.” ಇದು ಸಿಎಂ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆ ಶುರುಮಾಡಿ ಹತ್ತು ವರ್ಷವಾಗಿರುವ ಸಂದರ್ಭದಲ್ಲಿ ಮಾಡಿರುವ ಟ್ವೀಟ್.
ತಮ್ಮ ಟ್ವೀಟ್ನಲ್ಲಿ ಅವರು ಹೇಳುತ್ತಾರೆ: "ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಸದಾಶಯದೊಂದಿಗೆ ಬಡಕುಟುಂಬಗಳಿಗೆ ತಲಾ 5 ಕೆ.ಜಿ ಆಹಾರಧಾನ್ಯವನ್ನು ವಿತರಣೆ ಮಾಡುವ ಯೋಜನೆಯನ್ನು 10 ಜುಲೈ 2013ರಂದು ಜಾರಿಗೊಳಿಸಿ, ನಾಡಿನ ಹಸಿದವರಿಗೆ ನೆಮ್ಮದಿಯ ಅನ್ನ ನೀಡಿದ್ದೆ."
"ನಮ್ಮ ಈ ಯೋಜನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಆರ್ಥಿಕ- ಸಾಮಾಜಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಶ್ಲಾಘಿಸಿವೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ನಾಡಿನ ಜನತೆ ವಿಶ್ವಾಸವಿರಿಸಿ ನೀಡಿದ್ದ ರಾಜಕೀಯ ಅಧಿಕಾರವನ್ನು ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸದ್ಬಳಕೆ ಮಾಡಿಕೊಂಡ ಸಂತೃಪ್ತಿ ನನ್ನದು."
ಸಿದ್ದರಾಮಯ್ಯನವರ ಈ ಮಾತುಗಳು ಅವರ ಶುದ್ಧ ಕನ್ನಡ ಮನಸ್ಸು ಮತ್ತು ಆಡಳಿತದಲ್ಲಿ ಅವರ ಧೋರಣೆ ಎಷ್ಟು ಜನಪರವಾದುದು ಎಂಬುದಕ್ಕೆ ಅತ್ಯುತ್ತಮ ಸಾಕ್ಷಿ.
ಈಗ ಮತ್ತೆ ಅವರದೇ ಸರ್ಕಾರ ಬಂದಿದ್ದು, ಈ ಬಾರಿ 10 ಕೆಜಿ ಅಕ್ಕಿಯನ್ನು ನೀಡುವ ಘೋಷಣೆ ಮಾಡಿದ್ದರು. ಆದರೆ ಅದಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಕಲ್ಲು ಹಾಕಿತು ಎಂಬುದು ದೇಶಕ್ಕೇ ಗೊತ್ತಿರುವ ವಿಚಾರ. ದುಡ್ಡು ಕೊಟ್ಟು ಖರೀದಿಸುತ್ತೀವಿ ಅಂತ ಹೇಳಿದ್ರೂ, ಸಾಕಷ್ಟು ದಾಸ್ತಾನು ಇದ್ರೂ, ಕೇಂದ್ರ ಸರಕಾರ ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡದಂತೆ ನಿರ್ಬಂಧಿಸಿತು. ಆದರೆ ಕೊಟ್ಟ ಮಾತಿಗೆ ತಪ್ಪದ ಸಿದ್ದರಾಮಯ್ಯ ಸರಕಾರ ಕಡೆಗೆ ತಲಾ 5 ಕೆಜಿ ಅಕ್ಕಿ ಹಾಗೂ 170 ರೂ. ನೀಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಅನ್ನಭಾಗ್ಯದ ಹಣ ವರ್ಗಾವಣೆಗೆ ಚಾಲನೆ ನೀಡುವ ಮೂಲಕ ಈ ಸಲದ ಯೋಜನೆಯನ್ನು ಸಿಎಂ ಸಿದ್ಧರಾಮಯ್ಯ ಸೋಮವಾರ ಆರಂಭಿಸಿದ್ದಾರೆ. ಕಳೆದ ಆಡಳಿತ ಅವಧಿಯಲ್ಲಿ ಸರ್ಕಾರ ರಚನೆಯಾದ ದಿನವೇ ಅನ್ನಭಾಗ್ಯ ಶುರುಮಾಡಲಾಗಿತ್ತು. ಈ ಸಲ 50 ದಿನ ಬೇಕಾಯಿತು. ಎಲ್ಲದಕ್ಕೂ ಬಿಜೆಪಿಯ ಡರ್ಟಿ ಪಾಲಿಟಿಕ್ಸ್ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ತುಂಬ ನೋವಿನಿಂದಲೇ ಹೇಳಿದ್ದಾರೆ.
ಅನ್ನಭಾಗ ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿಯಾಗಿ ಬೇಕಿರುವ ಅಕ್ಕಿಯನ್ನು ಪೂರೈಸುವಂತೆ ಕೇಳಿಕೊಂಡರೂ ಕೇಂದ್ರ ಒಪ್ಪಲಿಲ್ಲ. ಸೇಡಿನ ರಾಜಕಾರಣ ಮಾಡಿತು. ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದ್ದು ಅತ್ಯಂತ ಕೆಟ್ಟ ರಾಜಕಾರಣ.
ಸಿದ್ದರಾಮಯ್ಯ ಅವರೇ ಹೇಳಿದಂತೆ, ಅಕ್ಕಿಯನ್ನು ಕೇಂದ್ರ ಸರ್ಕಾರವೇನೂ ಪುಕ್ಕಟೆ ಕೊಡುತ್ತಿರಲಿಲ್ಲ. ಒಂದು ಕೆಜಿ ಅಕ್ಕಿಗೆ 34 ರೂಪಾಯಿ ಪಡೆದುಕೊಂಡೇ ಕೊಡುತ್ತಿತ್ತು. ಹೀಗಿದ್ದೂ ಅದು ನಡೆದುಕೊಂಡ ರೀತಿ ಕರ್ನಾಟಕದಲ್ಲಿ ಸೋತ ಸೇಡನ್ನು ಕನ್ನಡಿಗರ ವಿರುದ್ಧ ತೀರಿಸಿಕೊಳ್ಳುವ ಹಾಗಿದೆ. ಘೋಷಿಸಿದಂತೆ ಪೂರ್ಣ ಪ್ರಮಾಣದಲ್ಲಿ ಅಕ್ಕಿಯನ್ನೇ ಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಿತಾದರೂ, ಆ ಹಾದಿ ಕಷ್ಟದ್ದಾಯಿತು. ಕಡೆಗೆ 5 ಕೆಜಿ ಅಕ್ಕಿ ಮತ್ತು 170 ರೂ ಹಣ ನೀಡುವ ನಿರ್ಧಾರ ಮಾಡಲಾಯಿತು.
ಅಕ್ಕಿಯ ಬದಲಿಗೆ ನೀಡುತ್ತಿರುವ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರವೇ ಬಳಸುವಂತೆಯೂ ಸಿದ್ದರಾಮಯ್ಯ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೊದಲ ಬಾರಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಿದ್ದರಾಮಯ್ಯ ಅವರು 10 ವರ್ಷಗಳ ಹಿಂದೆ ಇದೇ ದಿನ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ್ದರು.
ಆಗ ಮುಖ್ಯಮಂತ್ರಿಯಾಗಿ ಒಂದು ಗಂಟೆಯಲ್ಲಿ ಅನ್ನಭಾಗ್ಯ ಘೋಷಣೆಯಾಗಿತ್ತು. "ನೆಮ್ಮದಿಯ ಬದುಕಿಗೆ ಆಹಾರ ಭದ್ರತೆ ಅನ್ನಭಾಗ್ಯ" ಎಂಬುದು ಅನ್ನಭಾಗ್ಯ ಯೋಜನೆಯ ಘೋಷವಾಕ್ಯ. ಮೊದಲ ಬಾರಿ ಬಸವ ಜಯಂತಿಯಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಿದ್ದರಾಮಯ್ಯ, ಬಸವಣ್ಣನವರ ದಾಸೋಹ ಸಂಸ್ಕೃತಿಯಂತೆ ಹಸಿವು ಮುಕ್ತ ಕರ್ನಾಟಕ ಮಾಡುವ ತಮ್ಮ ಜೀವಮಾನದ ಆಶಯ ಮತ್ತು ಕಾಳಜಿಯ ಭಾಗವಾಗಿ ಅನ್ನಭಾಗ್ಯ ಯೋಜನೆ ಘೋಷಿಸಿದ್ದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆಯ ಭಾಗವಾಗಿ ಅನ್ನಭಾಗ್ಯ ಜಾರಿಯಾಗಿತ್ತು. ಹಸಿದ ಹೊಟ್ಟೆಗೆ, ದುಡಿಯುವ ಕೈಗಳಿಗೆ ಶಕ್ತಿ-ಚೈತನ್ಯ ತುಂಬುವ ಸಲುವಾಗಿ ಅನ್ನಭಾಗ್ಯವನ್ನು ರೂಪಿಸಿದ್ದು ಸಿದ್ದರಾಮಯ್ಯನವರ ಒಂದು ಮಹತ್ವದ ಸಾಧನೆ.
ಈ ಸಲ ಅವರು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಎತ್ತಿರುವ ಪ್ರಶ್ನೆಗಳು ಮಹತ್ವದವು."ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಕೇಂದ್ರದ ಈ ರೀತಿಯನ್ನು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕನ್ನಡ ಜನತೆ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ? "
ಇವು ಸಿಎಂ ಸಿದ್ದರಾಮಯ್ಯ ಅವರು ನಾಡಿನ ಜನತೆಯೆದುರು ಇಟ್ಟಿರುವ ಪ್ರಶ್ನೆಗಳು.
" ರಾಜ್ಯದ ಬಡವರು, ಮಧ್ಯಮ ವರ್ಗದವರು ಎರಡು ಹೊತ್ತು ತಿಂದರೆ ಬಿಜೆಪಿಗೆ ಏನು ಹೊಟ್ಟೆಯುರಿ ? " ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯ ಈ ಬಗೆಯ ಆಟ ಇದೇನೂ ಹೊಸದಲ್ಲ. ಈ ಹಿಂದೆ ರಾಜ್ಯದಲ್ಲಿ ಅಡ್ಡದಾರಿಯಿಂದ ಅಧಿಕಾರ ಹಿಡಿದ ಹೊತ್ತಲ್ಲಿ, ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿತ ಮಾಡಿತ್ತು. ಜನರಿಗಾಗಿ ತರಲಾಗಿದ್ದ ಯೋಜನೆಯ ಅನ್ನಕ್ಕೆ ಆಗಲೂ ಬಿಜೆಪಿಯಿಂದ ಕಲ್ಲು ಬಿದ್ದಿತ್ತು. ಈಗಲೂ ಕಲ್ಲುಹಾಕಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಈಡೇರುವುದೇ ಬಿಜೆಪಿಗೆ ಬೇಕಿರಲಿಲ್ಲ. ಹಾಗಾಗಿಯೇ ಅನ್ನಭಾಗ್ಯ ಯೋಜನೆಗೆ ಅಕ್ಕಿ ಮಾರಲು ನಿರಾಕರಿಸಿ, ಹೇಗಾದರೂ ಅನ್ನಭಾಗ್ಯ ಈಡೇರದಂತೆ ಮಾಡಲು ಹೊರಟಿತ್ತು ಕೇಂದ್ರ ಸರ್ಕಾರ. ದಿಲ್ಲಿಗೆ ಹೋಗಿದ್ದ ಆಹಾರ ಸಚಿವ ಮುನಿಯಪ್ಪನವರನ್ನು ಭೇಟಿಯಾಗಲು ಮೂರು ದಿನ ಕಾಯಿಸಿ ಆಮೇಲೆ ಅಕ್ಕಿ ಮಾರಲು ಬಿಡೋದಿಲ್ಲ ಅಂತ ಹೇಳಿ ಕಳಿಸಿದ್ದರು ಕೇಂದ್ರ ಸಚಿವ ಪಿಯೂಷ್ ಗೋಯಲ್. ಸ್ವತಃ ಸಿದ್ದರಾಮಯ್ಯ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿನಂತಿಸಿದ್ದರೂ ಪ್ರಯೋಜನವಾಗಲಿಲ್ಲ.
ಈ ದೇಶದಲ್ಲಿ ಹಸಿದವರ ಸಂಖ್ಯೆ ದೊಡ್ಡದಿದೆ. ಒಂದು ತುತ್ತಿನ ಊಟಕ್ಕೂ ಗತಿಯಿಲ್ಲದವರ ಪ್ರಮಾಣ ದೊಡಡ್ದಿದೆ. 2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ, 121 ದೇಶಗಳಲ್ಲಿ ಭಾರತ ಶೋಚನೀಯ 107ನೇ ಸ್ಥಾನದಲ್ಲಿದೆ. ಇದು ಪಾಕ್, ಬಾಂಗ್ಲಾಕ್ಕಿಂತಲೂ ಕೆಳಗಿನ ಸ್ಥಾನ. ನೇಪಾಳ, ಶ್ರೀಲಂಕಾ ಕೂಡ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇ.19.3ರಷ್ಟಿದ್ದು, ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆ ಇರುವ ದೇಶವಾಗಿದೆ ಎಂದು ವರದಿ ಹೇಳಿತು. ಒಟ್ಟಾರೆ ಭಾರತದಲ್ಲಿ ಹಸಿವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದೆ ಆ ಜಾಗತಿಕ ಸೂಚ್ಯಂಕ. ಎಂದಿನಂತೆ ಭಾರತ ಸರಕಾರ ಮಾತ್ರ ಸಮೀಕ್ಷೆಯೇ ತಪ್ಪು ಎಂದು ಟೀಕಿಸಿತು.
ತನ್ನ ಕಾರ್ಪೋರೇಟ್ ಸ್ನೇಹಿತರ ಏಳಿಗೆ ಬಗ್ಗೆ ಮಾತ್ರ ಚಿಂತಿಸುವ, ಅವರನ್ನು ಮಾತ್ರ ಬೆಳೆಸುವ ಮೋದಿ ಸರ್ಕಾರಕ್ಕೆ ಹಸಿದವರು ಕಾಣಿಸುತ್ತಿಲ್ಲ. ಹಸಿದವರಿಗಾಗಿ ಅನ್ನ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಬೇಕಿದ್ದ ಹೆಚ್ಚುವರಿ ಅಕ್ಕಿಯನ್ನು ದುಡ್ಡು ಪಡೆದೇ ಕೊಡುವುದಕ್ಕೂ ಅದು ಒಪ್ಪದೆ ಅತ್ಯಂತ ಸಣ್ಣ ಬುದ್ಧಿ ತೋರಿಸಿತು. ಕ್ಷುಲ್ಲಕ ರಾಜಕಾರಣ ಮಾಡಿತು.
ದೇಶದಲ್ಲಿ ವಾಯುಮಾಲಿನ್ಯ ತಡೆಯಲು ಪೆಟ್ರೋಲ್‌ಗೆ ಮಿಶ್ರಣ ಮಾಡುವ ಎಥೆನಾಲ್ ಉತ್ಪಾದನೆಗೆ 2019ರಿಂದ 2023ರವರೆಗೆ ಒಟ್ಟು 29.05 ಲಕ್ಷ ಟನ್ ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದೆ. ಬಡವರ ಹಸಿವು ತಣಿಸಲು ಅಕ್ಕಿ ನೀಡುವಾಗ ಸಾಕಷ್ಟು ದಾಸ್ತಾನು ಇಲ್ಲ ಎಂಬ ಸಬೂಬು, ಆದರೆ ಎಥೆನಾಲ್ ಗೆ ಅಡುಗೆಗೆ ಬಳಸುವ ಉತ್ತಮ ಅಕ್ಕಿಯನ್ನೇ ಯಾವುದೇ ಸಮಸ್ಯೆಯಿಲ್ಲದೆ ನೀಡುತ್ತದೆ ಮೋದಿ ಸರಕಾರ.
ಆದರೆ ಕೇಂದ್ರ ಅದೆಷ್ಟು ಅಡೆತಡೆ ಹಾಕಿದರೂ ನುಡಿದ ಮಾತಿಗೆ ತಪ್ಪದಂತೆ ಸಿದ್ದರಾಮಯ್ಯ ಸರ್ಕಾರ ಬಡವರ ಹೊಟ್ಟೆ ತಣ್ಣಗಿರಿಸಲು ಕಟಿಬದ್ಧವಾಗಿ ನಿಂತಿದೆ. ಕೇಂದ್ರ ಸರ್ಕಾರದ ದುರುದ್ದೇಶದ ನಡೆಯಿಂದ ಎದುರಾದ ಇಕಟ್ಟಿನ ಸ್ಥಿತಿಯನ್ನು ಈಗ ಈ ಪರ್ಯಾಯ ಮಾರ್ಗದ ಮೂಲಕ ಎದುರಿಸಿ, ಜನರ ಕೈಹಿಡಿಯುವ ತನ್ನ ಬದ್ಧತೆಯನ್ನು ತೋರಿಸಿದೆ. ಅಷ್ಟರಮಟ್ಟಿಗೆ ತನ್ನದು ಶುದ್ಧ ಕನ್ನಡ ಮನಸ್ಸಿನ ಸರಕಾರ ಎಂದು ಸಿದ್ದರಾಮಯ್ಯ ಸಾಬೀತು ಪಡಿಸಿದ್ದಾರೆ.