ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಖರೀದಿಸಲು ಹೆಚ್ಚುವರಿ ಧನ ಸಹಾಯವಿಲ್ಲ
ದಾನಿಗಳ ಬಳಿ ಶಿಕ್ಷಕರು ಕೈಯೊಡ್ಡುವುದು ಅನಿವಾರ್ಯ
ಬೆಂಗಳೂರು: ಐದು ಗ್ಯಾರಂಟಿಗಳ ಅನುಷ್ಠಾನ ಮತ್ತು ಇದರಿಂದಾಗುವ ಆರ್ಥಿಕ ಪರಿಣಾಮಗಳನ್ನು ಎದುರಿಸುವುದು ಹೇಗೆ ಎಂದು ಏದುಸಿರು ಬಿಡುತ್ತಿರುವ ಕಾಂಗ್ರೆಸ್ ಸರಕಾರವು ಇದೀಗ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿಸಲು ಹೆಚ್ಚುವರಿ ಧನ ಸಹಾಯ ನೀಡಿಲ್ಲ. ಬದಲಿಗೆ ಹೆಚ್ಚುವರಿ ಧನ ಸಹಾಯಕ್ಕಾಗಿ ಖಾಸಗಿ ಸಂಘ ಸಂಸ್ಥೆ ಮತ್ತು ದಾನಿಗಳ ಬಳಿ ಶಿಕ್ಷಕರು ಅನಿವಾರ್ಯವಾಗಿ ಕೈಯೊಡ್ಡಿ ನಿಲ್ಲಬೇಕಿದೆ.
ಹಿಂದಿನ ಬಿಜೆಪಿ ಸರಕಾರ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಸಲು 132 ಕೋಟಿ ರೂ. ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಸರಕಾರವು 125 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 01ರಿಂದ 8ನೇ ತರಗತಿ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು 99.70 ಕೋಟಿಯನ್ನಷ್ಟೇ ಬಿಡುಗಡೆ ಮಾಡಿದೆ. ಹಿಂದಿನ ಸರಕಾರಕ್ಕೆ ಹೋಲಿಸಿದರೆ ಈಗಿನ ಸರಕಾರವು ಉಚಿತ ಶೂ ಮತ್ತು ಸಾಕ್ಸ್ ಖರೀದಿಸಲು 7 ಕೋಟಿ ರೂ. ಕಡಿಮೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಅಲ್ಲದೇ ಹಿಂದಿನ ಬಿಜೆಪಿ ಸರಕಾರವೂ ಉತ್ತಮ ಗುಣಮಟ್ಟ ಶೂ, ಸಾಕ್ಸ್ಗಳ ಖರೀದಿಗಾಗಿ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳ ಬಳಿ ಶಿಕ್ಷಕರನ್ನು ನಿಲ್ಲಿಸಿತ್ತು. ಇದೀಗ ಕಾಂಗ್ರೆಸ್ ಸರಕಾರವು ಹೊರಡಿಸಿರುವ ಸುತ್ತೋಲೆಯು ಹಿಂದಿನ ಬಿಜೆಪಿ ಸರಕಾರವು ಹೊರಡಿಸಿದ್ದ ಸುತ್ತೋಲೆಯನ್ನೇ ಮರು ಜಾರಿಗೊಳಿಸಿರುವುದರಿಂದ ಶಿಕ್ಷಕರು ದಾನಿಗಳು, ಖಾಸಗಿ ಸಂಘ ಸಂಸ್ಥೆಗಳ ಬಳಿ ಕೈಯೊಡ್ಡಬೇಕಿದೆ.
ಹಿಂದಿನ ಬಿಜೆಪಿ ಸರಕಾರವು ಹೊರಡಿಸಿದ್ದ ಸುತ್ತೋಲೆಗೆ ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆದರೀಗ ಕಾಂಗ್ರೆಸ್ ಪಕ್ಷವೇ ಈಗ ಅಧಿಕಾರದಲ್ಲಿದ್ದರೂ ಹಿಂದಿನ ಬಿಜೆಪಿ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನೇ ಮರು ಜಾರಿಗೊಳಿಸಿರುವುದು ಪ್ರತಿಪಕ್ಷಗಳ ಕೈಗೆ ಅಸ್ತ್ರವೊಂದನ್ನು ಕೊಟ್ಟಂತಾಗಿದೆ.
ವಿಶೇಷವೆಂದರೇ 2017-18ನೇ ಸಾಲಿನಲ್ಲಿಯೂ ಅಧಿಕಾರದಲ್ಲಿದ್ದ ಇದೇ ಕಾಂಗ್ರೆಸ್ ಸರಕಾರವು ಆಗ ನಮೂದಿಸಿದ್ದ ದರವನ್ನೇ ೨೦೨೩-೨೪ನೇ ಸಾಲಿನಲ್ಲಿಯೂ ನಮೂದಿಸಿದೆ. ಪ್ರಸಕ್ತ ಸಾಲಿನಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನೂ ಪರಿಗಣಿಸದೇ ಆದೇಶ ಹೊರಡಿಸಿರುವುದು ನಗೆಪಾಟಲಿಗೀಡಾಗಿದೆ. ಹಾಗೆಯೇ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪೆನಿ, ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY)ದಿಂದ ಕೂಡಿರುವ ಶೂ, ಸಾಕ್ಸ್ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಕಾಂಗ್ರೆಸ್ ಸರಕಾರವು ಇದಕ್ಕಾಗಿ ಹೆಚ್ಚುವರಿ ಧನ ಸಹಾಯ ನೀಡದೇ ಖಾಸಗಿ ಸಂಘ, ಸಂಸ್ಥೆ, ದಾನಿಗಳ ಬಳಿ ಕೈಯೊಡ್ಡಲು ನಿಲ್ಲಿಸಿರುವುದು ಶಿಕ್ಷಕರನ್ನು ಪೇಚಿಗೆ ಸಿಲುಕಿಸಿದಂತಾಗಿದೆ.
ವಿದ್ಯಾವಿಕಾಸ ಯೋಜನೆಯಡಿ 2023-24ನೇ ಸಾಲಿಗೆ ರಾಜ್ಯದಲ್ಲಿನ ಸರಕಾರಿ ಶಾಲೆಗಳಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಉಚಿತ ಶೂ ಮತ್ತು ಸಾಕ್ಸ್ ವಿತರಣೆಗೆ (ಲೆಕ್ಕ ಶೀರ್ಷಿಕೆ; 2202-01-109-0-03-221 ಮತ್ತು 2202-01-109-03-422) 125.00 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಆದೇಶಿಸಿತ್ತು. 01ರಿಂದ 8ನೇ ತರಗತಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಕೆ-2 ಮೂಲಕ ಒಟ್ಟರು 99.70 ಕೋಟಿ ರೂ.ಗಳನ್ನು ಅನುದಾನವನ್ನು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆ ಮಾಡಿರುವುದು ಗೊತ್ತಾಗಿದೆ.
ಹಾಗೆಯೇ 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೂ ಮತ್ತು ಸಾಕ್ಸ್ ಖರೀದಿಗೆ 2023ರ ಜೂನ್ 19ರ ಅಂತ್ಯದವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಆದರೆ, ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯು ಜ್ಞಾಪನ ಪತ್ರ ಹೊರಡಿಸಿದೆ ಎಂದು ತಿಳಿದು ಬಂದಿದೆ.
‘2023-24ನೇ ಸಾಲಿನ ಈ ಯೋಜನೆ ಅನುಷ್ಠಾನಕ್ಕೆ ಆಯಾ ಶಾಲೆಗಳಲ್ಲಿನ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೆ-2 ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಶಾಲೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಮಕ್ಕಳ ಪಾದರಕ್ಷೆ ಅಳತೆ ತೆಗೆದುಕೊಂಡು ಅಳತೆಗನುಗುಣವಾಗಿ ಜುಲೈ 30ರೊಳಗಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು,’ ಎಂದು 2023ರ ಜೂನ್ 22ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಜೂನ್ 22ರಂದು ಹೊರಡಿಸಿರುವ ಸುತ್ತೋಲೆಗೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಇದರ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರವು ಏರಿಕೆಯಾಗಿರುವ ಕಾರಣ ಎಲ್ಲ ರೀತಿಯ ಸರಕು, ಸಾಮಗ್ರಿ, ಉತ್ಪನ್ನಗಳ ದರವೂ ಸಹಜವಾಗಿ ಸ್ಥಳೀಯ ಮಟ್ಟದಲ್ಲಿಯೂ ಏರಿಕೆ ಕಂಡಿದೆ. ಹೀಗಿರುವಾಗ 6 ವರ್ಷದ ಹಿಂದಿನ ದರವನ್ನೇ ಈಗಲೂ ನಮೂದಿಸಿ ಬಿಡುಗಡೆ ಮಾಡಿರುವುದಕ್ಕೆ ಶಿಕ್ಷಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
2023ರ ಜೂನ್ 22ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರೂ., 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ. ಎಂದು ದರ ನಿಗದಿಪಡಿಸಿರುವುದು ಆದೇಶದಿಂದ ಗೊತ್ತಾಗಿದೆ.
‘ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿಂತೆ ಸೇವಾ ದೃಷ್ಟಿಯಿಂದ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ಹೆಚ್ಚುವರಿ ಧನ ಸಹಾಯ ಮಾಡಿದಲ್ಲಿ ಅದನ್ನೂ ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ಗಳನ್ನು ಖರೀದಿಸಬಹುದು. ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪೆನಿ, ಸಂಸ್ಥೆಗಳ ಮೊದಲ ಗುಣಮಟ್ಟದಿಂದ ಕೂಡಿರುವ ಶೂ, ಸಾಕ್ಸ್ಗಳನ್ನೇ ಕಡ್ಡಾಯವಾಗಿ ಖರೀದಿಸಬೇಕು,’ ಎಂದು ಆದೇಶದಲ್ಲಿ ಹೇಳಿದೆ. ಆದರೆ 2023ರ ಜೂನ್ 22ರಂದು ಹೊರಡಿಸಿರುವ ಅದೇಶದಲ್ಲಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಕಂಪೆನಿ/ಸಂಸ್ಥೆಗಳ ಮೊದಲ ಗುಣಮಟ್ಟದಿಂದ ಕೂಡಿರುವ ಶೂ, ಸಾಕ್ಸ್ಗಳನ್ನು ಖರೀದಿ ಮಾಡಬೇಕು ಎಂದು ಹೇಳಿರುವುದು ಶಿಕ್ಷಕರನ್ನು ಪೇಚಿಗೆ ಸಿಲುಕಿಸಿದೆ.
6 ವರ್ಷಗಳ ಹಿಂದಿನ ದರ
‘6 ವರ್ಷ ಹಿಂದಿನ ದರವನ್ನೇ ಆದೇಶದಲ್ಲಿ ನಮೂದಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಈಗಲೂ ಅದೇ ದರ ಇರುವುದಿಲ್ಲ. ಎಲ್ಲ ಸರಕು ಸಾಮಗ್ರಿಗಳ ದರವೂ ಏರಿಕೆಯಾಗಿರುತ್ತದೆ. ಹೀಗಿರುವಾಗ 6 ವರ್ಷದ ಹಿಂದಿನ ದರವನ್ನು ಪರಿಷ್ಕರಿಸಿ ಚಾಲ್ತಿ ದರವನ್ನು ನಮೂದಿಸಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಈಗಿನ ಸರಕಾರವು ೬ ವರ್ಷದ ಹಿಂದಿನ ದರವನ್ನೇ ನಮೂದಿಸಿ ಶಿಕ್ಷಕರನ್ನು ಮತ್ತೊಮ್ಮೆ ಕೈಚಾಚುವಂತೆ ಮಾಡಿದೆ. ಒಂದೊಮ್ಮೆ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ನೆರವು ನೀಡದಿದ್ದರೇ ಕೆಳದರ್ಜೆಯ ಶೂಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕರೊಬ್ಬರು.