ರಷ್ಯಾದಲ್ಲಿ ಭುಗಿಲೆದ್ದಿದ್ದ ಆಂತರಿಕ ಬಂಡಾಯಕ್ಕೆ ತೇಪೆ । ಮಾಜಿ ಪರಮಾಪ್ತನ ದಂಗೆಗೆ ಬೆಚ್ಚಿದ ಪುಟಿನ್ !
ಯಾರು ಈ ಪ್ರಿಗೋಝಿನ್ ? ಏನಿದು ವ್ಯಾಗ್ನರ್ ಸೇನೆ ?
ರಷ್ಯಾದಲ್ಲಿ ಪುಟಿನ್ ಇತರರನ್ನು ಕುಕ್ಕಲು ತಾನೇ ಸಾಕಿದಾ ಹದ್ದು ಅವರಿಗೇ ಕುಕ್ಕೀತೇ ? ಸರ್ವಾಧಿಕಾರಿಗಳ ಹುಲಿ ಸವಾರಿ ಒಂದಲ್ಲ ಒಂದು ದಿನ ಅವರದ್ದೇ ಬಲಿ ಕೇಳುತ್ತದೆ ಎಂಬುದು ರಶ್ಯಾದಲ್ಲೂ ಸಾಬೀತಾಯಿತೇ ? ಹೇಗಾದರೂ ಅಧಿಕಾರದಲ್ಲಿ ಉಳಿದುಕೊಳ್ಳಲು ಅಮಾಯಕರ ಬಲಿ ಪಡೆಯುವ ನಿರಂಕುಶ ಪ್ರಭುತ್ವ ಕೊನೆಗೆ ತಾನೇ ತನ್ನ ತಂತ್ರಕ್ಕೆ ಬೆಲೆ ತೆರಬೇಕಾಗುತ್ತೆ ಎಂಬುದಕ್ಕೆ ರಷ್ಯಾ ಹೊಸ ಉದಾಹರಣೆಯೇ ?
ರಷ್ಯಾದಲ್ಲಿ ಶನಿವಾರ ಭುಗಿಲೆದ್ದಿದ್ದ ಆಂತರಿಕ ದಂಗೆಯ ಕಾರ್ಮೋಡ ಕಡೆಗೂ ಸರಿದಿದೆ. ಆದರೆ, ತಾನೇ ತನ್ನ ವಿರೋಧಿಗಳನ್ನು ಹಣಿಯಲು ಬೆಂಬಲಿಸಿ ಬೆಳೆಸಿದ್ದ ವ್ಯಾಗ್ನರ್ ಎಂಬ ಖಾಸಗಿ ಮಿಲಿಟರಿ ಗುಂಪು ತನ್ನನ್ನೇ ಕುಕ್ಕಲು ಬಂದಿದ್ದ ಈ ದುಸ್ವಪ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಲಿಗೆ ಬಹುಕಾಲ ಕಾಡಲಿದೆ.
ಕಳೆದೆರಡು ದಶಕಗಳಿಂದ ರಷ್ಯಾದ ರಾಜಕೀಯ ಹಾಗು ಆಡಳಿತದ ಮೇಲೆ ಪ್ರಭಾವ ಹಾಗು ಬಿಗಿ ಹಿಡಿತ ಕಾಯ್ದುಕೊಳ್ಳಲು ಪುಟಿನ್ ಹೂಡದ ತಂತ್ರಗಳಿಲ್ಲ. ಆದರೆ ಆ ಬಿಗಿ ಹಿಡಿತ ಮೊನ್ನೆಯ ಬೆಳವಣಿಗೆಯಿಂದ ಸಡಿಲವಾಗಿರೋದು ಮಾತ್ರ ಖಚಿತ.
ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿರೋ ಉಕ್ರೇನ್ ಮೇಲಿನ ರಷ್ಯಾ ಯುದ್ಧದಲ್ಲಿ ರಷ್ಯಾ ಪರ ಉಕ್ರೇನ್ನಲ್ಲಿ ಹೋರಾಡುತ್ತಿದ್ದ ರಷ್ಯಾದ ಖಾಸಗಿ ಸೇನೆ ವ್ಯಾಗ್ನರ್, ರಷ್ಯಾದ ಅಧಿಕೃತ ಸೇನೆಯ ವಿರುದ್ಧವೇ ತಿರುಗಿಬೀಳುವ ಮೂಲಕ ದಂಗಾಗಿಸಿತ್ತು. ಪುಟಿನ್ ನ ನಂಬಿಕಸ್ತ ಖಾಸಗಿ ಸೇನಾ ಪಡೆ ಪುಟಿನ್ ವಿರುದ್ಧವೇ ಬಂಡೆದ್ದಿತ್ತು. ಆಂತರಿಕ ದಂಗೆಯ ಭೀತಿ ರಷ್ಯಾವನ್ನು ಕಾಡಿತ್ತು.
ಯುದ್ಧನಿರತ ವ್ಯಾಗ್ನರ್ ಗುಂಪು ಇದ್ದಕ್ಕಿದ್ದಂತೆ ಶನಿವಾರ ಉಕ್ರೇನ್ ಗಡಿ ಬಿಟ್ಟು ರಷ್ಯಾದೊಳಕ್ಕೆ ನುಗ್ಗಿತ್ತು. ರಷ್ಯಾ ಸೇನಾ ಪ್ರಧಾನ ಕಚೇರಿಯಿರುವ ರೊಸ್ತೊವ್ ನಗರದ ಮೇಲೆ ಪೂರ್ತಿ ಹಿಡಿತ ಸಾಧಿಸಿದ್ದು ರಷ್ಯಾ ಜನತೆಯ ಆತಂಕಕ್ಕೆ ಕಾರಣವಾಗಿತ್ತು. ರಷ್ಯಾ ಸರ್ಕಾರ ಮತ್ತು ಸೇನಾ ನಾಯಕತ್ವದ ವಿರುದ್ಧ ತಿರುಗಿಬಿದ್ದಿದ್ದ ವ್ಯಾಗ್ನರ್ ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಝಿನ್ ಕಡೆಗೂ ತಣ್ಣಗಾಗಿದ್ದಾರೆ. ಅಧಿಕಾರ ಕಿತ್ತುಕೊಳ್ಳುವ ಮಾತಾಡಿದ್ದ ಪ್ರಿಗೋಝಿನ್, ಅಧಿಕಾರಸ್ಥರೊಂದಿಗೆ ಡೀಲ್ ಮಾಡಿಕೊಂಡು ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ರಷ್ಯಾ ಮಿಲಿಟರಿ ಪ್ರಧಾನ ಕಚೇರಿ ಇರುವ ರೊಸ್ತೊವ್ ನಗರವನ್ನು ವಶಕ್ಕೆ ಪಡೆದು ರಾಜಧಾನಿ ಮಾಸ್ಕೋ ಕಡೆ ಹೊರಟ್ಟಿದ್ದ ವ್ಯಾಗ್ನರ್ ಪಡೆ, ದಂಗೆಯಿಂದ ಹಿಂದೆ ಸರಿಯಲು ಒಪ್ಪಿಕೊಂಡಿದೆ. ಒಂದು ವೇಳೆ ನಾವೇ ದಂಗೆ ಎದ್ದರೆ ರಷ್ಯಾದಲ್ಲಿ ರಕ್ತಪಾತವಾಗಲಿದೆ. ಇದನ್ನು ತಪ್ಪಿಸಲು ಹೋರಾಟದಿಂದ ಹಿಂದೆ ಸರಿದಿರುವುದಾಗಿ ವ್ಯಾಗ್ನರ್ ಪಡೆಯ ನಾಯಕ, ಪುಟಿನ್ ರ ಮಾಜಿ ಪರಮಾಪ್ತ ಯೆವ್ಗೆನಿ ಪ್ರಿಗೊಝಿನ್ ಹೇಳಿದ್ದಾರೆ.
ಶನಿವಾರ ಬೆಳಗ್ಗೆ ವಿಡಿಯೋ ಹೇಳಿಕೆ ಹರಿಬಿಟ್ಟಿದ್ದ ಪ್ರಿಗೋಝಿನ್, ರೊಸ್ತೊವ್ ನಗರವನ್ನು ವಶಕ್ಕೆ ಪಡೆಯಲಾಗಿದೆ. ರಷ್ಯಾ ಮಿಲಿಟರಿ ನಾಯಕತ್ವವನ್ನು ಕೆಳಗಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ರಶ್ಯಕ್ಕಾಗಿ ನಾವು 25 ಸಾವಿರ ಮಂದಿ ಬಲಿಯಾಗಲು ಸಿದ್ಧವಾಗಿದ್ದೇವೆ, ಬೇಕಿದ್ದರೆ ಇನ್ನೂ 25 ಸಾವಿರ ಯೋಧರು ಪ್ರಾಣ ನೀಡಲೂ ಸಿದ್ಧ ಎಂದು ಬೆದರಿಸಿದ್ದರು ಪ್ರಿಗೋಝಿನ್.
ವ್ಯಾಗ್ನರ್ ಪಡೆ ರೊಸ್ತೊವ್ ನಗರದಿಂದ 1100 ಕಿ.ಮೀ ದೂರದಲ್ಲಿದ್ದ ರಾಜಧಾನಿ ಮಾಸ್ಕೋ ಕಡೆ ಹೊರಟಿತ್ತು. ಆದರೆ ಅದಾದ ಬಳಿಕ ಹೊಸ ಆಡಿಯೋ ಸಂದೇಶದಲ್ಲಿ, ರಷ್ಯಾದಲ್ಲಿ ರಕ್ತಪಾತದ ಅಪಾಯವನ್ನು ತಡೆಗಟ್ಟುವ ಉದ್ದೇಶದಿಂದ ತಮ್ಮ ಪಡೆ ಹಿಂದಿರುಗುತ್ತದೆ ಎಂದು ಪ್ರಿಗೋಜಿನ್ ಹೇಳಿದ್ದಾರೆ ಎನ್ನಲಾಗಿದೆ.
ವ್ಯಾಗ್ನರ್ ದಂಗೆ ಹತ್ತಿಕ್ಕಲು ಮುಖ್ಯ ಪಾತ್ರ ವಹಿಸಿದ್ದು ಬೆಲಾರಸ್ ಮಧ್ಯಸ್ಥಿಕೆ. ಮಾತುಕತೆ ಮೂಲಕವೇ ದಂಗೆಯನ್ನು ಶಮನ ಮಾಡಿರುವುದು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ. ತಮ್ಮ ಮಧ್ಯಸ್ಥಿಕೆಯಿಂದ ಪ್ರಿಗೋಝಿನ್ ಮನವೊಲಿಸುವಲ್ಲಿ ಅಲೆಗ್ಸಾಂಡರ್ ಯಶಸ್ವಿಯಾಗಿದ್ದಾರೆ. ಅಲೆಕ್ಸಾಂಡರ್ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪರಮಾಪ್ತರು ಎನ್ನಲಾಗುತ್ತದೆ.
ಪ್ರಿಗೋಝಿನ್ ಜೊತೆ ಆಗಿರುವ ಮಾತುಕತೆ ಒಪ್ಪಂದವನ್ನು ರಷ್ಯಾ ಸರ್ಕಾರ ಖಚಿತಪಡಿಸಿದೆ. ಒಪ್ಪಂದದ ಪ್ರಕಾರ, ಪ್ರಿಗೋಝಿನ್ ವಿರುದ್ಧ ಎಲ್ಲ ಅಪರಾಧಗಳನ್ನು ಕೈಬಿಡುವುದಾಗಿ ರಷ್ಯಾ ಸರಕಾರ ಹೇಳಿದೆ ಎಂದೂ ವರದಿಗಳಿವೆ. ಜೊತೆಗೆ ಪ್ರಿಗೋಝಿನ್ ಬೆಲಾರಸ್ ಗೆ ಹೋಗಲಿದ್ದಾರೆ.
ದಂಗೆ ಎದ್ದಿದ್ದ ವ್ಯಾಗ್ನರ್ ಸೇನೆ ಮಾಸ್ಕೋಗೆ ನುಗ್ಗುವುದನ್ನು ತಡೆಯಲು ರಷ್ಯಾ ಸೇನೆ ಭಾರೀ ಕಸರತ್ತು ಮಾಡಿತ್ತು. ಹೆದ್ದಾರಿಗಳಲ್ಲಿ ಗುಂಡಿ ತೋಡಿತ್ತು. ವ್ಯಾಗ್ನರ್ ಸೇನೆ ಸಂಚಾರಕ್ಕೆ ಅಡ್ಡಿಪಡಿಸಿತ್ತು. ವ್ಯಾಗ್ನರ್ ಸೇನೆಯ ದಂಗೆಯ ಭೀಕರ ಪರಿಣಾಮದ ಮುನ್ಸೂಚನೆ ಅರಿತ ರಷ್ಯಾ ಸರಕಾರ ಇಡೀ ದಿನ ಮಾತುಕತೆ ನಡೆಸಿದೆ. ರಷ್ಯಾದ ಒಳಗೆ ರಕ್ತಪಾತವನ್ನು ತಪ್ಪಿಸುವ ಉದ್ದೇಶದಿಂದ ಅಂತಿಮವಾಗಿ ಒಂದು ಒಪ್ಪಂದಕ್ಕೆ ಬಂದಿತೆನ್ನಲಾಗಿದೆ. ಕಡೆಗೂ ರಷ್ಯಾದಲ್ಲಿ ಕವಿದಿದ್ದ ಆಂತರಿಕ ಯುದ್ಧದ ಕಾರ್ಮೊಡ ಸರಿದಿದ್ದು, ರಷ್ಯಾ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಷ್ಟಕ್ಕೂ ಯಾರು ಈ ಯೆವ್ಗೆನಿ ಪ್ರಿಗೊಝಿನ್, ಆತ ಬಂಡೆದ್ದುದು ಏಕೆ ಎಂಬ ಪ್ರಶ್ನೆಗಳು ಏಳುತ್ತವೆ.
ರಷ್ಯಾ ಸೇನೆಯ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ ನಂತರ ವ್ಯಾಗ್ನರ್ ಗುಂಪಿನ ನಾಯಕ ಪ್ರಿಗೋಝಿನ್ ಬಂಧನಕ್ಕೂ ರಷ್ಯಾ ಆದೇಶಿಸಿತ್ತು. ರಷ್ಯಾ ಸೇನೆಯಲ್ಲಿಯೇ ಇರುವ ಪುಟಿನ್ ವಿರೋಧಿಗಳು ಮತ್ತು ಪ್ರಿಗೋಝಿನ್ ಸೇರಿ ರಚಿಸಿರುವ ವ್ಯೂಹ ಇದು ಎಂದೂ ಆರೋಪಿಸಲಾಗಿತ್ತು. ಪುಟಿನ್ ಹತ್ಯೆಗೆ ಉಕ್ರೇನ್ ಸಂಚು ಎಂದೂ ರಷ್ಯಾ ಆರೋಪಿಸಿತ್ತು.
ಉಕ್ರೇನ್ ವಿರುದ್ಧ ದೀರ್ಘ ಕಾಲದಿಂದ ಯುದ್ಧ ನಡೆಸುತ್ತಿರುವ ರಷ್ಯಾಕ್ಕೆ ದೇಶದ ಒಳಗೇ ದಂಗೆಯ ಬಿಸಿ ತಟ್ಟುವಂತಾಗಿತ್ತು. ಯೆವ್ಗೆನಿ ಪ್ರಿಗೋಝಿನ್ ರಕ್ಷಣಾ ಸಚಿವಾಲಯದ ವಿರುದ್ಧ ಬಂಡಾಯವೆದ್ದಿದ್ದರು. ತನ್ನ ಹೋರಾಟ ದೇಶವನ್ನು ಉಳಿಸುವುದಕ್ಕಾಗಿಯೇ ಹೊರತು ಸೇನೆಯ ವಿರುದ್ಧ ಅಲ್ಲ ಎಂದೂ ಪ್ರಿಗೋಝಿನ್ ಹೇಳಿಕೊಂಡಿದ್ದರು.
ರಷ್ಯಾದ ರಕ್ಷಣಾ ನಾಯಕತ್ವದ ಸಾಮರ್ಥ್ಯವನ್ನು ಬಹಿರಂಗವಾಗಿ ಪ್ರಶ್ನಿಸಿದ್ದ ಮತ್ತು ಟೀಕಿಸಿದ್ದ ಪ್ರಿಗೋಝಿನ್ , ರಷ್ಯಾದ ರಕ್ಷಣಾ ಸಚಿವರ ಆದೇಶದ ಮೇರೆಗೆ ತಮ್ಮ ಸೈನಿಕರ ಬೆಂಗಾವಲು ವಾಹನದ ಮೇಲೆ ಯುದ್ಧ ವಿಮಾನಗಳಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದರು. ದೇಶದಲ್ಲಿ ಸೇನಾ ನಾಯಕತ್ವವನ್ನು ಪತನಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು.
ಇದರ ಬೆನ್ನಲ್ಲೇ, ರಷ್ಯಾದ ರಕ್ಷಣಾ ಸಚಿವಾಲಯ ಪ್ರಿಗೋಝಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಮಾತ್ರವಲ್ಲ, ಪ್ರಿಗೋಝಿನ್ ಆದೇಶಗಳನ್ನು ಪಾಲಿಸದಂತೆ ವ್ಯಾಗ್ನರ್ ಗುಂಪಿನ ಪಡೆಗಳಿಗೆ ಮನವಿ ಮಾಡಿತ್ತು.
ಸಶಸ್ತ್ರ ದಂಗೆಯ ಆರೋಪವನ್ನು ಪ್ರಿಗೋಝಿನ್ ಮೇಲೆ ಹೊರಿಸಿದ್ದರಿಂದ, ಪ್ರಿಗೋಜಿನ್ 20 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇತ್ತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ವ್ಯಾಗ್ನರ್ ಗುಂಪು ಈ ಹಿಂದಿನಿಂದಲೂ ರಷ್ಯಾ ಪರವಾಗಿ ಉಕ್ರೇನ್ ಸೇರಿದಂತೆ ಹಲವು ದೇಶಗಳಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿದೆ. ಆದರೆ ಹಲವು ವಿಚಾರಗಳಲ್ಲಿ ವ್ಯಾಗ್ನರ್ ಗುಂಪು ರಷ್ಯಾ ಸೇನೆ ವಿರುದ್ಧ ಅಸಮಾಧಾನ ಹೊಂದಿತ್ತು ಎನ್ನಲಾಗಿದೆ.
ಈ ಹಿಂದೆಯೂ, ತಮ್ಮ ಸೈನಿಕರಿಗೆ ಸಾಕಷ್ಟು ಶಸ್ತ್ರಾಸ್ತ್ರ ಮತ್ತು ಸಂಪನ್ಮೂಲಗಳನ್ನು ಒದಗಿಸಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಿರುದ್ಧ ಪ್ರಿಗೋಝಿನ್ ಹಲವಾರು ಬಾರಿ ಆರೋಪಿಸಿದ್ದರು ಎಂದು ಹೇಳಲಾಗಿದೆ. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ರಷ್ಯಾದ ಮಿಲಿಟರಿ ಜನರಲ್‌ಗಳೊಂದಿಗೆ ಸೇರಿ ವ್ಯಾಗ್ನರ್ ಗುಂಪನ್ನು ದಮನಿಸಲು ಉದ್ದೇಶಿಸಿದ್ದಾರೆ ಎಂದು ಕೂಡ ಪ್ರಿಗೋಝಿನ್ ದೂರಿದ್ದರು. ಈ ಪ್ರಿಗೋಝಿನ್ ರಷ್ಯಾ ಅಧ್ಯಕ್ಷ ಪುಟಿನ್ ಅವರ ಪರಮಾಪ್ತ ಎಂಬುದೇ ಈ ಇಡೀ ವಿದ್ಯಮಾನದಲ್ಲಿ ಬಹಳ ಮಹತ್ವದ ಮತ್ತು ಕುತೂಹಲಕಾರಿ ಸಂಗತಿಯಾಗಿದೆ.
6೨ ವರ್ಷದ ಪ್ರಿಗೋಝಿನ್ ಕಟ್ಟಿರುವ ಸುಮಾರು 25 ಸಾವಿರ ಸೈನಿಕರ ವ್ಯಾಗ್ನರ್ ಪಡೆ ಅತ್ಯಂತ ಬಲಿಷ್ಠ ಖಾಸಗಿ ಮಿಲಿಟರಿ ಪಡೆ ಎಂದೇ ಹೇಳಲಾಗುತ್ತದೆ. ದೇಶದೊಳಗೆ ತನ್ನ ವಿರುದ್ಧ ಸಂಚು ಮಾಡುವವರನ್ನು ಮುಗಿಸಲೆಂದು ಸ್ವತಃ ಪುಟಿನ್ ಅವರೇ ಈ ಪಡೆಯನ್ನು ಪೋಷಿಸಿದ್ದರು ಎಂಬುದು ಗುಟ್ಟಿನ ವಿಚಾರವೇನಲ್ಲ.
ಆದರೆ ಅದೇ ಪಡೆ ಇಂದು ಅವರ ವಿರುದ್ಧವೇ ನಿಂತಿದ್ದು ವಿಪರ್ಯಾಸ. ಹತ್ಯೆಗಳ ಮೂಲಕ ಅಧಿಕಾರ ಹಿಡಿದಿಟ್ಟುಕೊಳ್ಳುವ ಯತ್ನ ಯಾವತ್ತಿದ್ದರೂ ಅಪಾಯಕಾರಿಯೇ ಆಗಿರುತ್ತದೆ ಎಂಬುದರ ಸಾಕ್ಷಿಯಂತೆ ಇದು ಕಾಣುತ್ತಿದೆ.
1961ರಲ್ಲಿ ಸೋವಿಯತ್ ಯೂನಿಯನ್ ನ ಲೆನಿನ್ ಗಾರ್ಡ್ ನಲ್ಲಿ ಅಂದರೆ ಈಗಿನ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಜನಿಸಿದ್ದ ಪ್ರಿಗೋಝಿನ್, ಬಾಲ್ಯದಲ್ಲಿಯೇ ದರೋಡೆಯಂಥ ಕೃತ್ಯದಲ್ಲಿ ಭಾಗಿಯಾಗಿದ್ದ ವ್ಯಕ್ತಿ. ಸುಮಾರು 9 ವರ್ಷ ಬಾಲಾಪರಾಧಿಯಾಗಿ ಶಿಕ್ಷೆ ಅನುಭವಿಸಿದ ಬಳಿಕ ಹೊಟೇಲ್ ಉದ್ಯಮಕ್ಕಿಳಿದು, ಅತ್ಯಲ್ಪ ಕಾಲದಲ್ಲಿಯೇ ಆ ಉದ್ಯಮದ ಮೇಲೆ ಸ್ವಾಧೀನ ಸಾಧಿಸಿದ.
ಕಳೆದ 19 ವರ್ಷಗಳಿಂದಲೂ ಮಿಲಿಟರಿ ಸಿಬ್ಬಂದಿ ಹಾಗೂ ಸರ್ಕಾರಿ ಅಧಿಕಾರಿಗಳಿಗೆ, ಕಚೇರಿಗಳಿಗೆ ಆಹಾರ ಪೂರೈಸುವ ಗುತ್ತಿಗೆ ಮೇಲೆ ಹಿಡಿತ ಸಾಧಿಸಿದ್ದು ಇದೇ ಪ್ರಿಗೋಝಿನ್. ಈ ವ್ಯವಹಾರವೇ ಪುಟಿನ್ ಜೊತೆ ಆಪ್ತನಾಗುವುದಕ್ಕೂ ನೆರವಾಯಿತು. ಆರ್ಥಿಕವಾಗಿಯೂ ಅದು ಪ್ರಿಗೋಝಿನ್ ಪ್ರಬಲವಾಗುವಂತೆ ಮಾಡಿತ್ತು.
ಕಳೆದ ವರ್ಷ ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಆರಂಭದಲ್ಲಿ ಉಕ್ರೇನ್ ಜಗ್ಗಲಿಲ್ಲ. ಆಗ ರಷ್ಯಾ ಸೇನೆಗೆ ನೆರವಾಗಲು ವ್ಯಾಗ್ನರ್ ಪಡೆಯ ನೆರವು ಕೇಳುತ್ತಾರೆ ಪುಟಿನ್. ಕ್ರೌರ್ಯಕ್ಕೆ ಕುಖ್ಯಾತವಾಗಿರುವ ವ್ಯಾಗ್ನರ್ ಪಡೆ ಸಿರಿಯಾ, ಲಿಬಿಯಾ ಆಂತರಿಕ ಸಂಘರ್ಷಗಳಲ್ಲಿಯೂ ತನ್ನ ಕ್ರೌರ್ಯ ಮೆರೆದಿರುವ ಉದಾಹರಣೆಗಳಿವೆ. ಉಕ್ರೇನ್ನಲ್ಲಿಯೂ ಪ್ರಿಗೋಝಿನ್ ಅಷ್ಟೇ ಕ್ರೌರ್ಯದಿಂದ ದಾಳಿ ನಡೆಸುತ್ತಿದ್ದರು ಎನ್ನಲಾಗಿದೆ.
ಆದರೆ, ರಷ್ಯಾ ರಕ್ಷಣಾ ಸಚಿವಾಲಯದೊಂದಿಗಿನ ಅಸಮಾಧಾನ ಪುಟಿನ್ ಮತ್ತು ಪ್ರಿಗೋಝಿನ್ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗುತ್ತಿದೆ. ಇತ್ತೀಚೆಗೆ ಪ್ರಿಗೋಝಿನ್ ಅವರನ್ನು ಪುಟಿನ್ ತಮ್ಮ ಕಚೇರಿಯಿಂದ ದೂರವಿಟ್ಟಿದ್ದರು ಎಂಬ ವರದಿಗಳಿವೆ. ಇದೇ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಿಗೋಝಿನ್ ದಂಗೆಯೆದ್ದಿದ್ದರು. ಕೊನೆಯವರೆಗೂ ಹೋರಾಡುತ್ತೇವೆ. ನಮ್ಮ ಹಾದಿಗೆ ಅಡ್ಡಬರುವ ಯಾರನ್ನೇ ಆದರೂ ನಾಶಪಡಿಸುತ್ತೇವೆ ಎಂದು ಪ್ರಿಗೋಝಿನ್ ಹೇಳಿದ್ದು, ರಷ್ಯಾದ ಆಂತರಿಕ ಬಂಡಾಯದ ತೀವ್ರತೆಯನ್ನು ಸಾರುವಂತಿತ್ತು.
ಉಕ್ರೇನ್ ಮೇಲಿನ ಆಕ್ರಮಣ ಭ್ರಷ್ಟರಾಗಿರುವ ರಷ್ಯಾದ ಶ್ರೀಮಂತರು ಹೆಣೆದಿರುವ ಸಂಚು ಎಂದೂ ಪ್ರಿಗೋಝಿನ್ ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ನಂತಹ ಮಾಧ್ಯಮಗಳು ವರದಿ ಮಾಡಿದ್ದವು. ಈ ನಡೆಯು ರಾಜಕೀಯವಾಗಿ ಪ್ರಿಗೋಝಿನ್ ನ ಅಂತ್ಯಕ್ಕೆ ಕಾರಣವಾಗಬಹುದು ಎಂದು ರಷ್ಯಾ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ ಎರಡು ದಶಕಗಳಿಂದಲೂ ಅಧಿಕಾರದಲ್ಲಿರುವ ಪುಟಿನ್ ಪ್ರಾಬಲ್ಯವನ್ನು ಈ ದಂಗೆ ತೀವ್ರವಾಗಿ ಕುಗ್ಗಿಸಿದೆ ಎಂದೂ ಹೇಳಲಾಗುತ್ತಿದೆ.
ಏಕೆಂದರೆ ಪ್ರಿಗೋಝಿನ್ ಅವರ ಬೆಂಬಲಿಗರು ರಷ್ಯಾದಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಅವರು ಹೆಚ್ಚು ತೊಂದರೆಗಳನ್ನು ಎದುರಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇಡೀ ಜಗತ್ತೇ ರಷ್ಯಾದಲ್ಲಿನ ದಂಗೆಯ ಸನ್ನಿವೇಶವನ್ನು ಗಮನಿಸುತ್ತಿತ್ತು. ಸದ್ಯ ಅದು ತಣಗಾಗಿದೆ. ದಂಗೆ ವಿದ್ಯಮಾನದ ಮೇಲೆ ನಿಗಾ ಇರಿಸಿದ್ದ ಅಮೆರಿಕ, ಮಿತ್ರ ರಾಷ್ಟ್ರಗಳೊಂದಿಗೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿತ್ತು.
ವ್ಯಾಗ್ನರ್ ದಂಗೆ ರಷ್ಯಾದ ದೌರ್ಬಲ್ಯ ಹಾಗೂ ಅಲ್ಲಿನ ರಾಜಕೀಯ ಅಸ್ಥಿರತೆಗೆ ಸಾಕ್ಷಿ ಎಂದು ಉಕ್ರೇನ್ ಅಧ್ಯಕ್ಷ ವೋಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದರು. ಈ ನಡುವೆ, ಬಂಡಾಯ ತಣ್ಣಗಾಗುತ್ತಿದ್ದಂತೆ ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಲು ರಷ್ಯಾದ ರಾಜತಾಂತ್ರಿಕರು ಮುಂದಾಗಿರುವ ವರದಿಗಳೂ ಬಂದಿವೆ.
ಇತ್ತೀಚಿಗಿನ ವರದಿಗಳ ಪ್ರಕಾರ, ರಷ್ಯಾದಲ್ಲಿನ ಭುಗಿಲೆದ್ದಿದ್ದ ಪ್ರಿಗೋಝಿನ್ ದಂಗೆ ಪುಟಿನ್ ಪ್ರಾಬಲ್ಯದ ಕುಸಿತದ ಆರಂಭ ಎಂದೇ ಹೇಳಲಾಗುತ್ತಿದೆ.