ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಡುವುದಲ್ಲ: ಸ್ಪೀಕರ್ ಯು.ಟಿ.ಖಾದರ್
ಬೆಳಗಾವಿ: ‘ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಡುವುದಲ್ಲ. ಸಮಾಜವನ್ನು ಒಗ್ಗೂಡಿಸುವುದು ನನ್ನ ಆದ್ಯತೆ. ಏಕೆಂದರೆ ನಾನು ಬೆಳೆದು ಬಂದ ಪರಿಸರ ಆ ರೀತಿಯದ್ದು’ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯ ಒಳಗಡೆ ಅಳವಡಿಸಿರುವ ಸಾವರ್ಕರ್ ಭಾವಚಿತ್ರವನ್ನು ತೆಗೆದು ಹಾಕುತ್ತಿದ್ದೆ ಎಂದು ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಅರ್ಪಣೆ ಮಾಡುವಾಗ ‘ಈ ರಥವನ್ನು ಸಾಧ್ಯವಾದರೆ ಮುಂದಕ್ಕೆ ತೆಗೆದುಕೊಂಡು ಹೋಗಿ, ಸಾಧ್ಯವಿಲ್ಲದಿದ್ದರೆ ಅದು ಎಲ್ಲಿದೆಯೋ ಅಲ್ಲಿಯೇ ಬಿಟ್ಟು ಬಿಡಿ. ಆದರೆ, ಹಿಂದಕ್ಕೆ ಮಾತ್ರ ತೆಗೆದುಕೊಂಡು ಹೋಗಬೇಡಿ’ ಎಂದು ಹೇಳಿದ್ದರು. ಅದರಂತೆ, ಹಿಂದೆ ಏನಾಯಿತು ಎಂದು ಆಲೋಚಿಸುವ ಬದಲು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಮ್ಮ ಲಕ್ಷ್ಯವಿರಲಿ ಎಂದು ಅವರು ಹೇಳಿದರು.
ಶಾಸಕರು ಹಾಗೂ ಮಂತ್ರಿಗಳು ಅವರವರ ಕೆಲಸಗಳನ್ನು ಮಾಡಲಿ, ಸದನಕ್ಕೆ ಸರಿಯಾದ ಸಮಯಕ್ಕೆ ಬರಲಿ, ಚರ್ಚೆಗಳಲ್ಲಿ ಭಾಗವಹಿಸಲು, ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಿ. ಅವರವರ ಕೆಲಸಗಳನ್ನು ಅವರು ನಿರ್ವಹಿಸಲಿ ಎಂದು ಸ್ಪೀಕರ್ ಹೇಳಿದರು.
ಯಶವಂತಪುರ ಬಳಿ ಇರುವ ಮೇಲ್ಸೆತುವೆಗೆ ಒಂದು ಹೆಸರಿಟ್ಟಿದ್ದಾರೆ. ಆ ಮೇಲ್ಸೆತುವೆಯನ್ನು ಯಾರು ಬಳಸುವುದಿಲ್ಲವೇ? ವಿಧಾನಸಭೆಯಲ್ಲಿ ಭಾವಚಿತ್ರವನ್ನು ತೆಗೆದು ಹಾಕುವ ಅಥವಾ ಅಳವಡಿಸುವ ಯಾವುದೆ ಪ್ರಸ್ತಾವ ಸದ್ಯಕ್ಕೆ ನನ್ನ ಮುಂದೆ ಇಲ್ಲ ಎಂದು ಖಾದರ್ ತಿಳಿಸಿದರು.