ಮೊದಲ ಖೋ ಖೋ ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡದಲ್ಲಿ ಮೈಸೂರಿನ ಯುವತಿ ಚೈತ್ರಾ ಬಿ. ಭಾಗಿ
ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಮೈಸೂರು: ದೆಹಲಿಯಲ್ಲಿ ನಡೆದ ಮೊದಲ ಖೋ ಖೋವಿಶ್ವಕಪ್ ಪಂದ್ಯಾಕೂಟದಲ್ಲಿ ರವಿವಾರ ನೇಪಾಳ ತಂಡವನ್ನು ಸೋಲಿಸಿ ಜಯಸಾಧಿಸಿ ವಿಶ್ವ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿರುವ ಭಾರತ ಮಹಿಳಾ ಖೋ ಖೋ ತಂಡದಲ್ಲಿದ್ದ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಚೈತ್ರಾ ಬಿ. ಅವರು ಕರ್ನಾಟಕಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಭಾರತ ಮಹಿಳಾ ಖೋ ಖೋ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಮಹಿಳಾ ಕ್ರೀಡಾಪಟುವಾಗಿ ದೇಸಿ ಆಟದಲ್ಲಿ ಭಾಗವಹಿಸಿ ತಮ್ಮ ದಿಟ್ಟ ಪ್ರದರ್ಶನದ ಮೂಲಕ ವಿಶ್ವಕಪ್ ಗಳಿಸುವಲ್ಲಿ ಪ್ರಮುಖಪಾತ್ರ ವಹಿಸಿರುವುದು ಹೆಮ್ಮೆ ತಂದಿದೆ.
ಗ್ರಾಮೀಣ ಭಾಗದ ಈ ಯುವತಿ ತಮ್ಮ ತಂಡದ ಅಪ್ರತಿಮ ಸಾಧನೆಯ ಭಾಗವಾಗಿ ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಹೇಳುವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ.
ಕುರುಬೂರು ಗ್ರಾಮದ ರೈತ ಕೆ.ಎಂ.ಬಸವಣ್ಣ ಮತ್ತು ನಾಗರತ್ನ ದಂಪತಿಗಳ ಪುತ್ರಿಯಾಗಿರುವ ಇವರು, 31 ರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ 11 ಚಿನ್ನ, 9 ಬೆಳ್ಳಿ, 6 ಕಂಚಿನ ಪದಕ ಗಳಿಸಿದ್ದಾರೆ.
ಕನ್ನಡ ನಾಡಿನ ಮತ್ತು ಗ್ರಾಮೀಣ ಯುವತಿ ವಿಶ್ವಕಪ್ ಸಾಧನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಎಲ್ಲಾ ಶಾಸಕರುಗಳು, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ರಚ್.ಸಿ.ಮಹದೇವಪ್ಪ, ಚಾಮರಾಜನಗರ ಸಂಸದ ಸುನೀಲ್ ಬೋಸ್ ಸಹಿತ ಹಲವರು ಚೈತ್ರ ಬಿ. ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮೊಟ್ಟ ಮೊದಲ ಖೋ ಖೋ ವಿಶ್ವಕಪ್ ಪಂದ್ಯಾಕೂಟದಲ್ಲಿ ನೇಪಾಳವನ್ಮು ಬಗ್ಗು ಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಮಹಿಳಾ ಮತ್ತು ಪುರುಷರ ತಂಡಕ್ಕೆ ಅಭಿನಂದನೆಗಳು.
ಚೊಚ್ಚಲ ಖೋ ಖೋ ವಿಶ್ವಕಪ್ ನಲ್ಲಿ ಭಾರತೀಯ ತಂಡಗಳ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಕುರುಬೂರಿನ ಯುವತಿ ಚೈತ್ರಾ ಬಿ. ಅವರು ವಿಶ್ವವಿಜೇತ ಮಹಿಳಾ ಖೋ ಖೋ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ. ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ.
- ಸಿದ್ಧರಾಮಯ್ಯ, ಮುಖ್ಯಮಂತ್ರಿ.