ಮೈಸೂರು | ಕಾಂಗ್ರೆಸ್ನ ಲಕ್ಷ್ಮಣ್ ವಿರುದ್ಧ ಯದುವೀರ್ಗೆ 1,39,262 ಮತಗಳ ಅಂತರದಿಂದ ಜಯ
ಮೈಸೂರು : ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಜಯ ದೊರೆತಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾಗಿ ಆಯ್ಕೆಯಾಗಿದ್ದಾರೆ.
2014, 2019ರಲ್ಲಿ ಜಯ ಸಾಧಿಸಿದ್ದ ಬಿಜೆಪಿ 2024ರ ಚುನಾವಣೆಗಳಲ್ಲೂ ಗೆಲುವಿನ ಓಟ ಮುಂದುವರಿಸಿದೆ. ಯದುವೀರ್ ಅವರು ಪ್ರಥಮ ಪ್ರಯತ್ನದಲ್ಲಿಯೇ ಅಭೂತಪೂರ್ವ ಗೆಲುವಿನೊಂದಿಗೆ ಸಂಸತ್ ಪ್ರವೇಶಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಯದುವೀರ್ 7,95,503 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ಧ 1,39,262 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ 6,56,241 ಮತಗಳನ್ನು ಪಡೆದು ಪರಾಜಯಗೊಂಡರು.
ಅಭ್ಯರ್ಥಿ ಬದಲಾವಣೆ, ರಾಜವಂಶಸ್ಥರು ಬೀದಿಯಲ್ಲಿ ನಿಂತು ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸುವರೇ ಎಂಬಿತ್ಯಾದಿ ಟೀಕೆಗಳ ನಡುವೆಯೂ ರಾಜವಂಶಸ್ಥ ಯದುವೀರ್ ಅವರಿಗೆ ಮೈಸೂರು-ಕೊಡಗು ಜಿಲ್ಲೆಗಳ ಮತದಾರರು ಆಶೀರ್ವಾದ ಮಾಡಿದ್ದಾರೆ. ಪಕ್ಷಾತೀತವಾಗಿ ಜನರ ಬೆಂಬಲ ದೊರೆತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ತವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿನ್ನೆಡೆ :
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ಸೋಲಿನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ.
2024ರ ಲೋಕಸಭಾ ಚುನಾವಣೆ ಗೆಲುವಿಗೆ ಸಿದ್ದರಾಮಯ್ಯ ಪಣತೊಟ್ಟಿದ್ದರು. ಪ್ರತಿಷ್ಠೆಯಾಗಿಯೂ ಸ್ವೀಕರಿಸಿದ್ದರು. ಆದರೆ, ಮತದಾರರು ಎನ್ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಆಶೀರ್ವಾದ ಮಾಡಿದ್ದಾರೆ.