ಮೈಸೂರು ವಿವಿ 105 ನೇ ಘಟಿಕೋತ್ಸವ : 31,689 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮೈಸೂರು : ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದ 105ನೇ ಘಟಿಕೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ವಿದ್ಯಾರ್ಥಿಗಳು ಪದವಿ ಸ್ವೀಕರಿಸಿ ಸಂಭ್ರಮಿಸಿದರು.
ಕ್ರಾಫರ್ಡ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾಜಿ ಸಂಸದ ಡಾ.ಎ.ಸಿ.ಷಣ್ಮುಗಂ, ಸಮಿ ಸಬಿನ್ಸಾ ಗ್ರೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಶಾಹೀನ್ ಮಜೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
2020ರಲ್ಲಿ ಘೋಷಣೆಯಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಈ ಬಾರಿ ಸ್ಪೀಕರಿಸಿದರು. ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ಸಾರಿಗೆ ಇಂಜಿನಿಯರ್ ಬಾಬು ಕೆ.ವೀರೇಗೌಡ ಗೈರು ಹಾಜರಾದರು.
ಮೈಸೂರು ವಿಶ್ವವಿದ್ಯಾಲಯದ 105ನೇ ಘಟಿಕೋತ್ಸವದಲ್ಲಿ ಈ ಸಲವೂ ಚಿನ್ನದ ಪದಕ ಬೇಟೆಯಲ್ಲಿ ವನಿತೆಯರು ಪಾರುಪತ್ಯ ಮೆರೆದರು. ಪ್ರತಿ ವರ್ಷವೂ ಮಹಿಳೆಯರು ಚಿನ್ನದ ಪದಕ ನಗದು ಬಹುಮಾನ ಗಳಿಸಿ ಮೇಲುಗೈ ಸಾಧಿಸುತ್ತಿದ್ದರು. ಅದು ಈ ವರ್ಷವೂ ಮುಂದುವರಿದಿದೆ. 31689 ಅಭ್ಯರ್ಥಿಗಳು ವಿವಿಧ ಪದವಿ ಸ್ವೀಕರಿಸಿದರು.
304 ವಿದ್ಯಾರ್ಥಿಗಳಿಗೆ ಪಿಎಚ್‌ಡಿ: ವಿಧ ವಿಷಯಗಳಲ್ಲಿ 304 ಅಭ್ಯರ್ಥಿಗಳಿಗೆ ಪಿ.ಎಚ್.ಡಿ ಪದವಿ ನೀಡಲಾಯಿತು. ಅವರಲ್ಲಿ 140(ಶೇ.40.05) ಮಹಿಳೆಯರು, 164 (ಶೇ.53.94) ಪುರುಷ ಅಭ್ಯರ್ಥಿಗಳಿದ್ದರು. ಕಲಾವಿಭಾಗದಲ್ಲಿ 111, ವಾಣಿಜ್ಯ ವಿಭಾಗದಲ್ಲಿ 68, ಶಿಕ್ಷಣದಲ್ಲಿ 14, ಕಾನೂನು 1, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 110 ಸೇರಿದಂತೆ ಒಟ್ಟು 304 ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು.
ಸಮಕುಲಾಧಿಪತಿಯೂ ಆದ ಡಾ.ಎಂ.ಸಿ.ಸುಧಾಕರ್ ಪದವಿ ಪ್ರದಾನ ಮಾಡಿದರು. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರಾಧ್ಯಾಪಕ ಡಾ.ಟಿ.ಪಿ.ಸಿಂಗ್ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ರಿಜಿಸ್ಟ್ರಾರ್ ಶೈಲಜ ಇದ್ದರು.
ರಾಜ್ಯಪಾಲರು ಗೈರು :
ಮೈಸೂರು ವಿವಿಯ 105ನೇ ಮತ್ತು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯದ 7,8,9 ಘಟಿಕೋತ್ಸವಗಳಲ್ಲಿ ಪಾಲ್ಗೊಂಡು ಪದವಿ ಪ್ರದಾನ ಮಾಡಬೇಕಿದ್ದ ಕರ್ನಾಟಕದ ರಾಜ್ಯಪಾಲರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಗೈರಾಗಿದ್ದರು. ಗೈರಾಗಿದ್ದಕ್ಕೆ ಕಾರಣ ತಿಳಿದುಬರಲಿಲ್ಲ.
ಮೈಸೂರು ವಿವಿ 2020ರಲ್ಲಿ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಸ್ವೀಕಾರ ಮಾಡಲು ಸಾಧ್ಯವಾಗಿರಲಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೊತೆ ಗೌರವ ಡಾಕ್ಟರೇಟ್ ಸ್ವೀಕಾರ ಮಾಡಿದ್ದು ಅಪಾರ ಸಂತಸ ತಂದಿದೆ. ಒಬ್ಬೊಬ್ಬ ವಿದ್ಯಾರ್ಥಿಗಳು 18, 16ಗೋಲ್ಡ್ ಮೆಡಲ್ ಪಡೆದಿದ್ದಾರೆ. ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಈ ಸಾಧನೆ ತುಂಬಾ ಸಂತಸ ತಂದಿದೆ.
-ಡಾ. ಸುಧಾಮೂರ್ತಿ, ಸಂಸ್ಥಾಪಕಿ, ಇನ್ಫೋಸಿಸ್ ಪ್ರತಿಷ್ಠಾನ.